ದೇಶದ ಆರ್ಥಿಕ ಗಾತ್ರಕ್ಕೆ ಸಮನಾಗಿದೆ ಭಾರತೀಯರ ಬಳಿ ಇರುವ ಚಿನ್ನದ ಮೌಲ್ಯ
Indian households have gold of worth 3.8 trillion USD: ಭಾರತೀಯ ಮನೆಗಳಲ್ಲಿ ಇಟ್ಟುಕೊಂಡಿರುವ ಒಟ್ಟೂ ಚಿನ್ನದ ಮೌಲ್ಯ 3.8 ಟ್ರಿಲಿಯನ್ ಡಾಲರ್ ಎನ್ನಲಾಗಿದೆ. ಇದು ಭಾರತದ ಜಿಡಿಪಿಯ ಶೇ. 88.9ರಷ್ಟಾಗುತ್ತದೆ. ಮಾರ್ಗನ್ ಸ್ಟಾನ್ಲೀ ಬಿಡುಗಡೆ ಮಾಡಿದ ವರದಿಯಲ್ಲಿ ಈ ಮಾಹಿತಿ ಇದೆ. ಭಾರತೀಯರ ಉಳಿತಾಯ ಸಂಪತ್ತಿನಲ್ಲಿ ಈಕ್ವಿಟಿ ಪಾಲು ಹೆಚ್ಚುತ್ತಿದ್ದು, ಎಫ್ಡಿ ಪಾಲು ಕಡಿಮೆಯಾಗುತ್ತಿದೆ.

ನವದೆಹಲಿ, ಅಕ್ಟೋಬರ್ 12: ಜನರು ಅತಿಹೆಚ್ಚು ಚಿನ್ನ (gold) ಇಟ್ಟುಕೊಂಡಿರುವ ಟಾಪ್-2 ದೇಶಗಳೆಂದರೆ ಅದು ಚೀನಾ ಮತ್ತು ಭಾರತ. ಭಾರತೀಯರಿಗೆ ಚಿನ್ನ ಎಂದರೆ ಕಷ್ಟಕಾಲಕ್ಕೆ ಆಗುವ ಅಮೂಲ್ಯ ವಸ್ತು ಮತ್ತು ಅಲಂಕಾರಕ್ಕೆ ಬೇಕಾಗುವ ವಸ್ತು. ಹೀಗಾಗಿ, ಭಾರತದಲ್ಲಿ ಚಿನ್ನ ಹೆಚ್ಚು ಸೇಲ್ ಆಗುತ್ತದೆ. ಭಾರತೀಯರು ಮತ್ತು ಅವರ ಮನೆಗಳಲ್ಲಿ (Indian households) ಸಾಕಷ್ಟು ಚಿನ್ನ ಇರುತ್ತದೆ. ಮಾರ್ಗನ್ ಸ್ಟಾನ್ಲೀ ಎನ್ನುವ ಹಣಕಾಸು ಸಂಸ್ಥೆ ಬಿಡುಗಡೆ ಮಾಡಿದ ವರದಿಯೊಂದರ ಪ್ರಕಾರ ಭಾರತೀಯ ಮನೆಗಳಲ್ಲಿ ಇರುವ ಚಿನ್ನದ ಒಟ್ಟು ಮೌಲ್ಯ 3.8 ಟ್ರಿಲಿಯನ್ ಡಾಲರ್ ಎನ್ನಲಾಗಿದೆ.
3.8 ಟ್ರಿಲಿಯನ್ ಡಾಲರ್ ಎಂದರೆ ಅದು ಭಾರತದ ಈಗಿನ ಜಿಡಿಪಿಯ ಶೇ. 88.8ರಷ್ಟಾಗಬಹುದು. ಬಹುತೇಕ ಜಿಡಿಪಿಗೆ ಸಮವಾಗಿದೆ ಭಾರತೀಯರ ಚಿನ್ನ. ಪರೋಕ್ಷ ಮತ್ತು ನೇರ ತೆರಿಗೆಗಳೆನಿಸಿದ ಜಿಎಸ್ಟಿ ಮತ್ತು ಆದಾಯ ತೆರಿಗೆಯಲ್ಲಿ ಸರ್ಕಾರ ಗಣನೀಯವಾಗಿ ಕಡಿತಗೊಳಿಸಿರುವುದು ಜನರಿಗೆ ಹೆಚ್ಚು ಸೇವಿಂಗ್ಸ್ ಸಿಕ್ಕಂತಾಗಿದೆ. ಇದರಿಂದ ಚಿನ್ನದ ಖರೀದಿಗೆ ಹೆಚ್ಚು ಪುಷ್ಟಿ ಸಿಕ್ಕಿರಬಹುದು ಎಂಬುದು ಮಾರ್ಗನ್ ಸ್ಟಾನ್ಲೀ ವರದಿಯಲ್ಲಿ ನೀಡಲಾಗಿರುವ ಅಭಿಪ್ರಾಯ.
ಇದನ್ನೂ ಓದಿ: ಜಿಡಿಪಿ ಸಾಲ ಅನುಪಾತ 10 ವರ್ಷದಲ್ಲಿ ಶೇ. 81ರಿಂದ 71ಕ್ಕೆ ಇಳಿಕೆ: ಕೇರ್ಎಡ್ಜ್ ರೇಟಿಂಗ್ಸ್ ವರದಿ
ಭಾರತೀಯ ಮನೆಗಳಲ್ಲಿ ಮಾತ್ರವಲ್ಲ, ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಚಿನ್ನದ ಸಂಗ್ರಹವನ್ನು ಸತತವಾಗಿ ಹೆಚ್ಚಿಸುತ್ತಿದೆ. 2024ರಿಂದ ಈಚೆ ಆರ್ಬಿಐ 75 ಟನ್ಗಳಷ್ಟು ಚಿನ್ನವನ್ನು ಖರೀದಿ ಮಾಡಿ ಇಟ್ಟುಕೊಂಡಿದೆ. ಅದರ ವಿದೇಶೀ ವಿನಿಮಯ ಮೀಸಲು ನಿಧಿಯಲ್ಲಿ ಇರುವ ಚಿನ್ನದ ಸಂಗ್ರಹ ಒಟ್ಟು 880 ಟನ್ಗಳಿಗೆ ಏರಿದಂತಾಗಿದೆ. ಫಾರೆಕ್ಸ್ ರಿಸರ್ವ್ಸ್ನಲ್ಲಿ ಶೇ. 14ರಷ್ಟು ಪಾಲು ಚಿನ್ನವೇ ಇದೆ.
ಜನರ ಉಳಿತಾಯದಲ್ಲಿ ಠೇವಣಿ ಇಳಿಕೆ, ಷೇರು ಏರಿಕೆ
ಮಾರ್ಗನ್ ಸ್ಟಾನ್ಲೀ ವರದಿಯಲ್ಲಿ ಮತ್ತೊಂದು ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ. 2024-25ರ ವರ್ಷದಲ್ಲಿ ಭಾರತೀಯ ಗೃಹ ಉಳಿತಾಯದಲ್ಲಿ ಈಕ್ವಿಟಿ ಅಥವಾ ಷೇರುಗಳಲ್ಲಿ ಹೂಡಿಕೆ ಆಗಿರುವುದು ಶೇ. 15.1ರಷ್ಟು. ಹಿಂದಿನ ವರ್ಷದಲ್ಲಿ ಇದು ಶೇ. 8.7 ಮಾತ್ರವೇ ಇತ್ತು. ಒಂದು ವರ್ಷದಲ್ಲಿ ಬಹುತೇಕ ಎರಡು ಪಟ್ಟು ಹೆಚ್ಚು ಆಗಿರುವುದು ಜನರು ಈಕ್ವಿಟಿಗಳಿಗೆ ಆಕರ್ಷಿತವಾಗುತ್ತಿರುವುದನ್ನು ತೋರಿಸುತ್ತದೆ.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ರದ್ದುಗೊಳಿಸಿದರೆ ಪರಿಣಾಮಗಳೇನು? ಕ್ರೆಡಿಟ್ ಸ್ಕೋರ್ ಕಡಿಮೆಗೊಳ್ಳುತ್ತಾ? ಇಲ್ಲಿದೆ ಮಾಹಿತಿ
ಇದೇ ವೇಳೆ, ಜನಸಾಮಾನ್ಯರ ಸಾಂಪ್ರದಾಯಿಕ ಹೂಡಿಕೆ ಯಂತ್ರವಾಗಿರುವ ಫಿಕ್ಸೆಡ್ ಡೆಪಾಸಿಟ್ಗಳಲ್ಲಿ ಹೂಡಿಕೆ ಕಡಿಮೆ ಆಗುತ್ತಿರುವ ಟ್ರೆಂಡ್ ಕಾಣುತ್ತಿದೆ. ಭಾರತೀಯ ಮನೆಗಳ ಉಳಿತಾಯದಲ್ಲಿ ಠೇವಣಿಗಳ ಪಾಲು 2023-24ರಲ್ಲಿ ಶೇ. 40ರಷ್ಟು ಇತ್ತು. 2024-25ರಲ್ಲಿ ಅದು ಶೇ. 35ಕ್ಕೆ ಇಳಿದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




