ನವದೆಹಲಿ, ಜನವರಿ 1: ಉತ್ತರಪ್ರದೇಶದ ಪ್ರಯಾಗ್ರಾಜ್ (ಅಲಹಾಬಾದ್) ನಗರದಲ್ಲಿ ನಡೆಯಲಿರುವ 2025ರ ಮಹಾಕುಂಭ ಮೇಳದಲ್ಲಿ 3,000 ವಿಶೇಷ ರೈಲುಗಳು ಸಂಚರಿಸಲಿವೆ. ಈ ಪೈಕಿ 560 ಟ್ರೈನುಗಳು ರಿಂಗ್ ರೈಲ್ನಲ್ಲಿ ಕಾರ್ಯಾಚರಿಸಲಿವೆ. ಪ್ರಯಾಗ್ರಾಜ್ ಜಂಕ್ಷನ್, ಸುಬೇದಾರ್ಗಂಜ್, ನೈನಿ, ಪ್ರಯಾಗ್ರಾಜ್ ಛಿಯೋಕಿ, ಪ್ರಯಾಗ್ ಜಂಕ್ಷನ್, ಫಫಮಾವು (Phaphamau), ಪ್ರಯಾಗ್ರಾಜ್ ರಾಮಬಾಗ್, ಪ್ರಯಾಗ್ರಾಜ್ ಸಂಗಮ್ ಮತ್ತು ಝುನ್ಸಿ ಈ ಒಂಬತ್ತು ರೈಲ್ವೆ ನಿಲ್ದಾಣಗಳಲ್ಲಿ ಒಟ್ಟು 560 ಟಿಕೆಟಿಂಗ್ ಪಾಯಿಂಟ್ಗಳನ್ನು ನಿರ್ಮಿಸಲಾಗುತ್ತಿದೆ ಎನ್ನುವ ಮಾಹಿತಿ ಮಾಧ್ಯಮಗಳಿಗೆ ಲಭಿಸಿದೆ.
ಈ ಟಿಕೆಟ್ ಕೌಂಟರ್ಗಳಲ್ಲಿ ಪ್ರತೀ ದಿನ ಹತ್ತು ಲಕ್ಷ ಟಿಕೆಟ್ಗಳನ್ನು ವಿತರಿಸಲಾಗುತ್ತದೆ. 15 ದಿನ ಮುಂಚಿತವಾಗಿ ಟಿಕೆಟ್ ಬುಕ್ ಮಾಡಲು ಅವಕಾಶ ನೀಡಲಾಗುತ್ತಿದೆ. ರೈಲ್ವೆ ಇಲಾಖೆ ಒಟ್ಟಾರೆ 10,000ಕ್ಕೂ ಅಧಿಕ ರೆಗ್ಯುಲರ್ ಟ್ರೈನುಗಳನ್ನು ಮಹಾಕುಂಭಕ್ಕೆ ವ್ಯವಸ್ಥೆ ಮಾಡಿದೆ. 3,000ಕ್ಕೂ ಅಧಿಕ ಸ್ಪೆಷಲ್ ಟ್ರೈನುಗಳು ಸಂಚರಿಸಲಿವೆ. ಈ ವಿಶೇಷ ಟ್ರೈನುಗಳ ಪೈಕಿ 1,800 ಟ್ರೈನುಗಳು ಅಲ್ಪ ದೂರಕ್ಕೆ ಸೀಮಿತವಾಗಿರುತ್ತವೆ. 700 ಟ್ರೈನುಗಳು ದೂರದ ಸ್ಥಳಗಳಿಗೆ ನಿಯೋಜಿತವಾಗಿವೆ. 560 ಟ್ರೈನುಗಳು ರಿಂಗ್ ರೈಲ್ನಲ್ಲಿ ಸಂಚರಿಸಲಿವೆ.
ಇದನ್ನೂ ಓದಿ: 2024ರಲ್ಲಿ ಜಾಗತಿಕ ಆರ್ಥಿಕ ನಾಯಕತ್ವದ ನೀಲನಕ್ಷೆ ಹಾಕಿದ ಭಾರತ
ಈ ವರ್ಷ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭ ಮೇಳ ಬಹಳ ವಿಶೇಷವಾದುದು. ಇಲ್ಲಿ ಪ್ರತೀ 12 ವರ್ಷಗಳಿಗೊಮ್ಮೆ ಪೂರ್ಣ ಕುಂಭ ಮೇಳ ನಡೆಯುತ್ತದೆ. ಈ ರೀತಿ 12 ಪೂರ್ಣ ಕುಂಭ ಮೇಳಗಳಾದಾಗ ಮಹಾಕುಂಭ ನಡೆಯುತ್ತದೆ. ಅಂದರೆ, ಪ್ರತೀ 144 ವರ್ಷಗಳಿಗೊಮ್ಮೆ ಮಹಾಕುಂಭ ನಡೆಯುತ್ತದೆ. ಹೆಚ್ಚೂಕಡಿಮೆ ಒಂದೂವರೆ ಶತಮಾನದ ಬಳಿಕ ಈ ಕುಂಭ ಮೇಳವು ಪ್ರಯಾಗ್ರಾಜ್ನಲ್ಲಿ ನಡೆಯುತ್ತಿದೆ. 2025ರ ಜನವರಿ 13ರಿಂದ ಫೆಬ್ರುವರಿ 26ರವರೆಗೆ 45 ದಿನಗಳವರೆಗೆ ಮಹಾಕುಂಭ ಇರಲಿದೆ. ಕೋಟಿಗಟ್ಟಲೆ ಜನರು ಈ ಮಹಾಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ರೈಲ್ವೆ ಕನೆಕ್ಟಿವಿಟಿ ಹೆಚ್ಚಿಸಲಾಗುತ್ತಿದೆ. ಉಧಮ್ಪುರ್ ಶ್ರೀನಗರ್ ಬಾರಾಮುಲ್ಲಾ ರೈಲ್ ಲಿಂಕ್ ಪ್ರಾಜೆಕ್ಟ್ ಅನ್ನು ಇತ್ತೀಚೆಗೆ ಪೂರ್ಣಗೊಳಿಸಲಾಗಿದೆ. ಕೆಲ ಮಾರ್ಗಗಳಲ್ಲಿ ಪ್ರಾಯೋಗಿಕವಾಗಿ ಟ್ರೈನುಗಳ ಸಂಚಾರ ನಡೆಸಲಾಗುತ್ತಿದೆ.
ಇದನ್ನೂ ಓದಿ: ಹತ್ತು ವರ್ಷದಲ್ಲಿ ರಕ್ಷಣಾ ವಲಯದ ರಫ್ತಿನಲ್ಲಿ ಹತ್ತು ಪಟ್ಟು ಹೆಚ್ಚಳ; ರಾಜನಾಥ್ ಸಿಂಗ್ ಪ್ರಶಂಸೆ
ಭಾರತೀಯ ರೈಲ್ವೇಸ್ ಸಂಸ್ಥೆಯು ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ರೈಲು ವಿಭಾಗವನ್ನು ತೆರೆಯಲು ಯೋಜಿಸಿದೆ. ಕಾಶ್ಮೀರದ ರೈಲ್ವೆ ಯೋಜನೆಗಳ ಆಡಳಿತಾತ್ಮಕ ನಿಯಂತ್ರಣವು ಸದ್ಯ ಉತ್ತರ ರೈಲ್ವೆಯ ಫಿರೋಜ್ಪುರ್ ಡಿವಿಶನ್ ಅಡಿಯಲ್ಲಿ ಬರುತ್ತಿದೆ. ಈಗ ಜಮ್ಮು ರೈಲ್ವೆ ಡಿವಿಶನ್ ಸ್ಥಾಪನೆಯಿಂದ ಕಣಿವೆ ರಾಜ್ಯದ ರೈಲ್ವೆ ಯೋಜನೆಗಳು ಇನ್ನಷ್ಟು ಸಮರ್ಪಕವಾಗಿ ಜಾರಿಯಾಗಲು ಸಾಧ್ಯವಾಗುತ್ತದೆ. ಜಮ್ಮುವಿನಲ್ಲಿ ರೈಲ್ವೆ ಡಿವಿಶನ್ ಸ್ಥಾಪನೆಯಾದರೆ ಅದು ಭಾರತೀಯ ರೈಲ್ವೆಯ 69ನೇ ವಿಭಾಗವಾಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ