ಇನ್ನೈದು ವರ್ಷದಲ್ಲಿ ಭಾರತೀಯ ಸೆಮಿಕಂಡಕ್ಟರ್ ಮಾರುಕಟ್ಟೆಯ ಗಾತ್ರ 9 ಲಕ್ಷ ಕೋಟಿ ರೂ ದಾಟುವ ಸಾಧ್ಯತೆ
Indian semiconductor market size: 2024ರಲ್ಲಿ 4.5 ಟ್ರಿಲಿಯನ್ ರುನಷ್ಟಿರುವ ಭಾರತೀಯ ಸೆಮಿಕಂಡಕ್ಟರ್ ಉದ್ಯಮ, 2030ರಲ್ಲಿ 9 ಟ್ರಿಲಿಯನ್ ರುಪಾಯಿ ಗಾತ್ರದ್ದಾಗುವ ನಿರೀಕ್ಷೆ ಇದೆ. ಇನ್ನೈದು ವರ್ಷದಲ್ಲಿ ಇದರ ಮಾರುಕಟ್ಟೆ ಗಾತ್ರ ಡಬಲ್ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಉದ್ಯಮಗಳ ಸಂಘಟನೆಯಾದ ಐಇಎಸ್ಎ ಹೇಳಿದೆ. ಮೊಬೈಲ್ ಹ್ಯಾಂಡ್ಸೆಟ್, ಐಟಿ, ಮತ್ತು ಇಂಡಸ್ಟ್ರಿಯಲ್ ಅಪ್ಲಿಕೇಶನ್ಗಳಿಂದ ಸೆಮಿಕಂಡಕ್ಟರ್ ಉದ್ಯಮಕ್ಕೆ ಹೆಚ್ಚಿನ ವರಮಾನ ಬರಲಿದೆ ಎಂದು ಹೇಳಲಾಗುತ್ತಿದೆ.

ನವದೆಹಲಿ, ಫೆಬ್ರುವರಿ 9: ಭಾರತದಲ್ಲಿ ಸೆಮಿಕಂಡಕ್ಟರ್ ಉದ್ಯಮ ಬಹಳ ವೇಗದಲ್ಲಿ ಬೆಳವಣಿಗೆ ಹೊಂದುತ್ತಿದೆ. ಇಂಡಿಯಾ ಎಲೆಕ್ಟ್ರಾನಿಕ್ಸ್ ಅಂಡ್ ಸೆಮಿಕಂಡಕ್ಟರ್ ಅಸೋಸಿಯೇಶನ್ (ಐಇಎಸ್ಎ) ಬಿಡುಗಡೆ ಮಾಡಿದ ವರದಿ ಪ್ರಕಾರ ದೇಶದ ಸೆಮಿಕಂಡಕ್ಟರ್ ಮಾರುಕಟ್ಟೆಯ ಗಾತ್ರ ಇನ್ನೈದು ವರ್ಷದಲ್ಲಿ ದ್ವಿಗುಣಗೊಳ್ಳಲಿದೆ. 2024ರಲ್ಲಿ ಸೆಮಿಕಂಡಕ್ಟರ್ ಮಾರುಕಟ್ಟೆ ಗಾತ್ರ 52 ಬಿಲಿಯನ್ ಡಾಲರ್ನಷ್ಟಿದೆ. ಅಂದರೆ ನಾಲ್ಕೂವರೆ ಶತಕೋಟಿ ರೂನಷ್ಟು ಗಾತ್ರದ್ದಿದೆ. 2030ರಲ್ಲಿ ಇದು 103.4 ಟ್ರಿಲಿಯನ್ ಡಾಲರ್ (9 ಲಕ್ಷ ಕೋಟಿ ರೂ) ಆಗಬಹುದು ಎಂದು ಅಂದಾಜು ಮಾಡಲಾಗಿದೆ.
ಮೊಬೈಲ್ ಹ್ಯಾಂಡ್ಸೆಟ್ಗಳು, ಮಾಹಿತಿ ತಂತ್ರಜ್ಞಾನ, ಟೆಲಿಕಮ್ಯೂನಿಕೇಶನ್ಸ್, ಕನ್ಸೂಮರ್ ಎಲೆಕ್ಟ್ರಾನಿಕ್ಸ್, ಆಟೊಮೋಟಿವ್, ಏರೋಸ್ಪೇಸ್, ರಕ್ಷಣಾ ಕ್ಷೇತ್ರಗಳು ಉತ್ತಮ ಬೆಳವಣಿಗೆ ಹೊಂದಲಿರುವುದು ಸೆಮಿಕಂಡಕ್ಟರ್ ಮಾರುಕಟ್ಟೆಯನ್ನು ಬಲಗೊಳಿಸಲಿದೆ. ಈ ಸೆಕ್ಟರ್ಗಳಲ್ಲಿ ತಯಾರಾಗುವ ಉತ್ಪನ್ನಗಳಿಗೆ ಸೆಮಿಕಂಡಕ್ಟರ್ ಬಳಕೆ ಹೆಚ್ಚು ಇರುತ್ತದೆ. ಅದರಲ್ಲೂ ಮೊಬೈಲ್ ಹ್ಯಾಂಡ್ಸೆಟ್ಗಳು, ಐಟಿ ಮತ್ತು ಔದ್ಯಮಿಕ ಅಪ್ಲಿಕೇಶನ್ಗಳೇ ಸೆಮಿಕಂಡಕ್ಟರ್ ಉದ್ಯಮದ ಶೇ. 70ರಷ್ಟು ಆದಾಯಕ್ಕೆ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಹೊಸ ಆದಾಯ ತೆರಿಗೆ ಮಸೂದೆ ಯಾವಾಗ ಬರುತ್ತದೆ? ಏನಿದೆ ಅದರಲ್ಲಿ? ಇಲ್ಲಿದೆ ಡೀಟೇಲ್ಸ್
ಸಂಶೋಧನೆ ಮತ್ತು ನಾವೀನ್ಯತೆಗೆ ಒತ್ತು ಕೊಡುತ್ತಿರುವುದರ ಫಲ…
ಸ್ಮಾರ್ಟ್ಫೋನ್, ಶ್ರವಣ ಸಾಧನ (hearables), ಗ್ರಾಹಕ ಬಳಕೆ ವಸ್ತುಗಳು (Consumer durables), ರೂಟರ್ಗಳು ಇತ್ಯಾದಿ ಹೆಚ್ಚು ಆದ್ಯತೆಯ ಉತ್ಪನ್ನಗಳನ್ನು ಗಮನದಲ್ಲಿರಿಸಿಕೊಂಡು ಆರ್ ಅಂಡ್ ಡಿಗೆ ಒತ್ತುಕೊಡಲಾಗುತ್ತಿದೆ. ಇದು ಈ ಉದ್ಯಮ ಬೆಳವಣಿಗೆಗೆ ಕಾರಣವಾಗಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ಸೆಮಿಕಂಡಕ್ಟರ್ ಫ್ಯಾಬ್ ಘಟಕಗಳು, ಅಸೆಂಬ್ಲಿಂಗ್ ಯೂನಿಟ್ಗಳ (OSAT) ಅಭಿವೃದ್ಧಿ ಗುರಿ ಇಟ್ಟುಕೊಂಡು ಸರ್ಕಾರ ಇನ್ಸೆಂಟಿವ್ ಸ್ಕೀಮ್ ನಡೆಸುತ್ತಿದೆ. ಇದರ ಜೊತೆಗೆ ಆರ್ ಅಂಡ್ ಡಿಗೆ ಹೂಡಿಕೆಗಳು ಹೆಚ್ಚಿವೆ. ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಸಂಘಟನೆಯ ಸದಸ್ಯ ಕಂಪನಿಗಳು ಕಳೆದ ವರ್ಷ 21 ಬಿಲಿಯನ್ ಡಾಲರ್ಗೂ ಹೆಚ್ಚಿನ ಮೊತ್ತದ ಹೂಡಿಕೆಗೆ ಬದ್ಧವಾಗಿವೆ ಎಂದು ಈ ಸಂಘಟನೆಯ ಅಧ್ಯಕ್ಷ ಅಶೋಕ್ ಚಂದಕ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಸೈಬರ್ ವಂಚನೆ ತಡೆಯಲು ಆರ್ಬಿಐ ಕ್ರಮ; ಬ್ಯಾಂಕುಗಳಿಗೆ ಬೇರೆ ಡೊಮೇನ್, ಅಂತಾರಾಷ್ಟ್ರೀಯ ಪಾವತಿಗೆ ಹೆಚ್ಚುವರಿ ಸೆಕ್ಯುರಿಟಿ
ಇದೇ ವೇಳೆ, ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ನಲ್ಲಿ ಸ್ಥಳೀಯ ಮೌಲ್ಯ ವರ್ಧನೆಗೂ ಸರ್ಕಾರ ಆದ್ಯತೆ ಕೊಡಬೇಕು. 2030ರಷ್ಟರಲ್ಲಿ ಸ್ಥಳೀಯ ಮೌಲ್ಯ ವರ್ಧನೆ ಶೇ. 40ರಷ್ಟಾಗುವಂತಾಗಬೇಕು ಎಂದು ಈ ವರದಿಯಲ್ಲಿ ಸಲಹೆ ನೀಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ