ಭಾರತದಿಂದ ಹೊಸ ರಫ್ತು ಮೈಲಿಗಲ್ಲು; ಆಮದು ಹೆಚ್ಚಳವೂ ಶುಭಸೂಚಕವಾ? ಸಚಿವರು ಬಿಚ್ಚಿಟ್ಟ ಸತ್ಯ ಇದು
India's exports and imports: 2024-25ರ ಹಣಕಾಸು ವರ್ಷದಲ್ಲಿ ಭಾರತದಿಂದ ರಫ್ತು 800 ಬಿಲಿಯನ್ ಡಾಲರ್ ಗಡಿ ದಾಟುವ ನಿರೀಕ್ಷೆ ಇದೆ. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಮೈಲಿಗಲ್ಲು ಮುಟ್ಟಲಾಗುತ್ತದೆ. ಈ ವರ್ಷ ಕೃಷಿ ಉತ್ಪಾದನೆಯೂ ಗಣನೀಯವಾಗಿ ಏರಿಕೆ ಆಗುವ ಸಂಭವ ಇದೆ. ಮತ್ತೊಂದು ಕುತೂಹಲಕಾರಿ ಸಂಗತಿ ಎಂದರೆ, ರಫ್ತು ಜೊತೆಗೆ ಆಮದು ಕೂಡ ಹೆಚ್ಚಿದೆ. ಆಮದು ಹೆಚ್ಚಳವು ಆರ್ಥಿಕತೆ ಚುರುಕಾಗಿರುವುದರ ಸಂಕೇತ ಎಂದು ವಿಶ್ಲೇಷಿಸಲಾಗಿದೆ.

ನವದೆಹಲಿ, ಫೆಬ್ರುವರಿ 9: ಭಾರತದಿಂದ ಆಗುತ್ತಿರುವ ರಫ್ತು ಗಣನೀಯವಾಗಿ ಹೆಚ್ಚುತ್ತಿದೆ. 2024-25ರ ಹಣಕಾಸು ವರ್ಷದಲ್ಲಿ ಭಾರತ ಹೊಸ ರಫ್ತು ದಾಖಲೆ ಮತ್ತು ಮೈಲಿಗಲ್ಲು ಸೃಷ್ಟಿಸುವ ನಿರೀಕ್ಷೆ ಇದೆ. ವಾಣಿಜ್ಯ ಮತ್ತು ಉದ್ಯಮ ಸಚಿವ ಪಿಯೂಶ್ ಗೋಯಲ್ ನೀಡಿರುವ ಮಾಹಿತಿ ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ರಫ್ತು ಮೌಲ್ಯ 800 ಬಿಲಿಯನ್ ಡಾಲರ್ ದಾಟುವ ಸಾಧ್ಯತೆ ಇದೆ. ಇದೇನಾದರೂ ನೆರವೇರಿದಲ್ಲಿ ಭಾರತದ ಮಟ್ಟಿಗೆ ಹೊಸ ದಾಖಲೆಯಾಗಲಿದೆ. ಈ ಹಿಂದೆ ಒಂದು ವರ್ಷದಲ್ಲಿ ಯಾವಾಗಲೂ ಕೂಡ ಇಷ್ಟು ಪ್ರಮಾಣದಲ್ಲಿ ರಫ್ತು ಆಗಿದ್ದಿಲ್ಲ.
ಕಳೆದ ನಾಲ್ಕು ವರ್ಷದಲ್ಲಿ ಭಾರತದಿಂದ ರಫ್ತು ಭಾರೀ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಇದು ಈ ವರ್ಷವೂ ಮುಂದುವರಿಯಬಹುದು. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ರಫ್ತು 800 ಬಿಲಿಯನ್ ಡಾಲರ್ ದಾಟಲಿದೆ ಎಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಪೀಯೂಶ್ ಗೋಯಲ್ ಮಾಹಿತಿ ನೀಡಿದ್ದಾರೆ.
ಭಾರತದ ರಫ್ತು ಇಳಿಮುಖವಾಗುತ್ತಿದೆ ಎನ್ನುವ ಅಭಿಪ್ರಾಯವನ್ನು ಸಚಿವರು ಇದೇ ವೇಳೆ ತಳ್ಳಿಹಾಕಿದ್ದಾರೆ. ಆದರೆ, ರಫ್ತು ಹೆಚ್ಚಳದ ಜೊತೆಗೆ ಆಮದು ಹೆಚ್ಚಳವೂ ಆಗುತ್ತಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಆದರೆ ಆಮದು ಪ್ರಮಾಣ ಹೆಚ್ಚಾಗಿರುವುದು ಆರ್ಥಿಕ ಚಟುವಟಿಕೆ ಚುರುಕುಗೊಂಡಿರುವುದಕ್ಕೆ ಸಾಕ್ಷ್ಯ ಎಂದೂ ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ: ಇನ್ನೈದು ವರ್ಷದಲ್ಲಿ ಭಾರತೀಯ ಸೆಮಿಕಂಡಕ್ಟರ್ ಮಾರುಕಟ್ಟೆಯ ಗಾತ್ರ 9 ಲಕ್ಷ ಕೋಟಿ ರೂ ದಾಟುವ ಸಾಧ್ಯತೆ
‘ಆಂತರಿಕವಾಗಿ ಕೊರತೆ ಹೆಚ್ಚಾದಾಗ ಮತ್ತು ಬೇಡಿಕೆ ಹೆಚ್ಚಾದಾಗ ಕೆಲ ಆಮದುಗಳು ಅನಿವಾರ್ಯ. ಈ ಆಮದು ಹೆಚ್ಚಳವು ಆರ್ಥಿಕ ಬೆಳವಣಿಗೆಗೆ ಶುಭ ಸೂಚಕವಾಗಿದೆ. ಆಂತರಿಕ ಅನುಭೋಗ ಹೆಚ್ಚಾಗಿರುವುದರಿಂದ ಆಮದು ಹೆಚ್ಚಾಗಿದೆ. ಪೆಟ್ರೋಲಿಯಂ ಉತ್ಪನ್ನ, ಬೇಳೆಕಾಳು, ಅಡುಗೆ ಎಣ್ಣೆ ಇತ್ಯಾದಿ ವಸ್ತುಗಳು ಹೆಚ್ಚಾಗಿ ಆಮದಾಗಿವೆ’ ಎನ್ನುವ ಮಾಹಿತಿಯನ್ನು ಸಚಿವ ಗೋಯಲ್ ತಿಳಿಸಿದ್ದಾರೆ.
2024-25ರ ವರ್ಷಕ್ಕೆ ಅಂದಾಜು ಆಹಾರ ಉತ್ಪಾದನೆಯ ವಿವರ
ಈ ವರ್ಷ (2024-25) ತರಕಾರಿ ಸೇರಿದಂತೆ ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಿನ ಮಟ್ಟದಲ್ಲಿ ಇರಬಹುದು ಎಂದು ಸರ್ಕಾರ ನಿರೀಕ್ಷಿಸಿದೆ. 24.27 ಮಿಲಿಯನ್ ಟನ್ ಇದ್ದ ಈರುಳ್ಳಿ ಉತ್ಪಾದನೆ 28.87 ಮಿಲಿಯನ್ ಟನ್ಗೆ ಏರಬಹುದು. ಟೊಮೆಟೋ ಮತ್ತು ಆಲೂಗಡ್ಡೆ ಉತ್ಪಾದನೆ ಕ್ರಮವಾಗಿ 21.55 ಮತ್ತು 29.57 ಮಿಲಿಯನ್ ಟನ್ಗಳಷ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಇನ್ನೈದು ವರ್ಷದಲ್ಲಿ ಭಾರತೀಯ ಸೆಮಿಕಂಡಕ್ಟರ್ ಮಾರುಕಟ್ಟೆಯ ಗಾತ್ರ 9 ಲಕ್ಷ ಕೋಟಿ ರೂ ದಾಟುವ ಸಾಧ್ಯತೆ
ಒಟ್ಟಾರೆ ಹಣ್ಣು ಉತ್ಪಾದನೆ 113.22 ಮಿಲಿಯನ್ ಟನ್ಗಳಷ್ಟಿರಬಹುದು. ಮಸಾಲೆ ಪದಾರ್ಥಗಳ ಉತ್ಪಾದನೆ 11.99 ಮಿಲಿಯನ್ ಟನ್, ಒಟ್ಟು ತೋಟಗಾರಿಕೆ ಉತ್ಪಾದನೆ 362 ಮಿಲಿಯನ್ ಟನ್ಗಳಷ್ಟಾಗಬಹುದು ಎನ್ನುವ ಮಾಹಿತಿ ತಿಳಿದುಬಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ