ಉಕ್ಕು ಮತ್ತು ಅಲೂಮಿನಿಯಮ್ ಮೇಲೆ ಅಮೆರಿಕದಿಂದ ಶೇ. 25 ಆಮದು ಸುಂಕ ಹೇರಿಕೆ; ಭಾರತಕ್ಕೆ ಏನು ಪರಿಣಾಮ? ಇಲ್ಲಿದೆ ಡೀಟೇಲ್ಸ್
USA to impose tariff on Steel and Aluminium imports: ಎಲ್ಲಾ ಸ್ಟೀಲ್ ಮತ್ತು ಅಲೂಮಿನಿಯಂ ಉತ್ಪನ್ನಗಳ ಮೇಲೆ ಅಮೆರಿಕ ಶೇ. 25ರಷ್ಟು ಆಮದು ಸುಂಕ ವಿಧಿಸುತ್ತದೆ ಎಂದು ಆ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಅಮೆರಿಕದ ಮೇಲೆ ಬೇರೆ ದೇಶಗಳು ತೆರಿಗೆ ಹಾಕಿದರೆ, ತಾವೂ ಅಷ್ಟೇ ತೆರಿಗೆ ಹಾಕುವುದಾಗಿ ಡೊನಾಲ್ಡ್ ಟ್ರಂಪ್ ಸಾಕಷ್ಟು ಬಾರಿ ಸ್ಪಷ್ಟಪಡಿಸಿದ್ದಾರೆ. ಅಮೆರಿಕಕ್ಕೆ ಅತಿಹೆಚ್ಚು ಉಕ್ಕು ಸರಬರಾಜು ಮಾಡುವುದು ಕೆನಡಾ, ಮೆಕ್ಸಿಕೋ, ಬ್ರೆಜಿಲ್ ದೇಶಗಳು. ಇವುಗಳ ಮೇಲೆ ಪರಿಣಾಮ ಉಂಟಾಗಬಹುದು.

ನವದೆಹಲಿ, ಫೆಬ್ರುವರಿ 10: ಏಟಿಗೆ ಏಟು ಎನ್ನುವ ನೀತಿಗೆ ಕಟ್ಟುಬಿದ್ದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಲ್ಲಾ ಉಕ್ಕು ಮತ್ತು ಅಲೂಮಿನಿಯಮ್ ಆಮದುಗಳ ಮೇಲೆ ಶೇ. 25 ಸುಂಕ ವಿಧಿಸುತ್ತಿರುವುದಾಗಿ ಹೇಳಿದ್ದಾರೆ. ಈಗ ಇರುವ ಸುಂಕಗಳ ಜೊತೆಗೆ ಹೆಚ್ಚುವರಿಯಾಗಿ ಶೇ. 25ರಷ್ಟು ಆಮದು ಸುಂಕ ಹಾಕಲಾಗುತ್ತದಾ ಎಂಬುದು ಸ್ಪಷ್ಟವಾಗಿಲ್ಲ. ‘ಅಮೆರಿಕಕ್ಕೆ ಬರುತ್ತಿರುವ ಯಾವುದೇ ಉಕ್ಕಿಗೆ ಶೇ. 25ರಷ್ಟು ಆಮದು ಸುಂಕ ತೆರಬೇಕಾಗುತ್ತದೆ’ ಎಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಟ್ರಂಪ್ ತಿಳಿಸಿದ್ದಾರೆ.
ಬೇರೆ ದೇಶಗಳು ಅಮೆರಿಕದ ಉತ್ಪನ್ನಗಳ ಮೇಲೆ ಎಷ್ಟು ತೆರಿಗೆ ಹಾಕುತ್ತವೋ, ತಾವೂ ಕೂಡ ಆ ದೇಶಗಳ ಉತ್ಪನ್ನಗಳ ಮೇಲೆ ಅಷ್ಟೇ ತೆರಿಗೆ ಹಾಕುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳುತ್ತಾ ಬಂದಿದ್ದಾರೆ. ನಾಳೆ ಅಥವಾ ನಾಳಿದ್ದು (ಫೆ. 12) ಅಮೆರಿಕ ಅಧ್ಯಕ್ಷರು ಪ್ರತ್ಯೇಕ ಸುದ್ದಿಗೋಷ್ಠಿ ಕರೆದು ಆಮದು ಸುಂಕಗಳ ಕುರಿತು ಮಾತನಾಡಲಿದ್ದಾರೆ. 2017ರಲ್ಲಿ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಾದಾಗಲೂ ಡೊನಾಲ್ಡ್ ಟ್ರಂಪ್ ಅವರು ಆಮದು ಸುಂಕ ವಿಧಿಸುವ ನೀತಿ ಅನುಸರಿಸಿದ್ದರು.
ಇದನ್ನೂ ಓದಿ: ಭಾರತದಿಂದ ಹೊಸ ರಫ್ತು ಮೈಲಿಗಲ್ಲು; ಆಮದು ಹೆಚ್ಚಳವೂ ಶುಭಸೂಚಕವಾ? ಸಚಿವರು ಬಿಚ್ಚಿಟ್ಟ ಸತ್ಯ ಇದು
ಉಕ್ಕು, ಅಲೂಮಿನಿಯಂಗೆ ಆಮದು ಸುಂಕ ವಿಧಿಸುವುದರಿಂದ ಭಾರತಕ್ಕೆ ಹಿನ್ನಡೆಯಾ?
ಅಮೆರಿಕಕ್ಕೆ ಹಲವು ದೇಶಗಳು ಉಕ್ಕು ಮತ್ತು ಅಲೂಮಿನಿಯಮ್ ಉತ್ಪನ್ನಗಳನ್ನು ಸರಬರಾಜು ಮಾಡುತ್ತವೆ. ಕೆನಡಾ, ಬ್ರೆಜಿಲ್, ಮೆಕ್ಸಿಕೋ, ದಕ್ಷಿಣ ಕೊರಿಯಾ ಮತ್ತು ವಿಯೆಟ್ನಾಂ ದೇಶಗಳಿಂದ ಅತಿಹೆಚ್ಚು ಸ್ಟೀಲ್ ಮತ್ತು ಅಲೂಮಿನಿಯಂ ಉತ್ಪನ್ನಗಳು ಅಮೆರಿಕಕ್ಕೆ ರಫ್ತಾಗುತ್ತವೆ. ಈ ಪೈಕಿ ಶೇ. 75ಕ್ಕೂ ಹೆಚ್ಚು ಪಾಲು ಕೆನಡಾದ್ದಾಗಿದೆ.
ಈಗ ಟ್ರಂಪ್ ಅವರು ಆಮದು ಸುಂಕ ವಿಧಿಸುವುದರಿಂದ ಕೆನಡಾಗೆ ಅತಿಹೆಚ್ಚು ಪರಿಣಾಮವಾಗುತ್ತದೆ. ಬ್ರೆಜಿಲ್, ಮೆಕ್ಸಿಕೋಗೂ ಪರಿಣಾಮ ಉಂಟಾಗುತ್ತದೆ.
ಭಾರತೀಯ ಕಂಪನಿಗಳಿಂದ ಅಮೆರಿಕಕ್ಕೆ ಉಕ್ಕು ಮತ್ತು ಅಲೂಮಿನಿಯಂ ಉತ್ಪನ್ನಗಳ ರಫ್ತಾಗುವುದು ಕಡಿಮೆ. ಇಟಲಿ, ನೇಪಾಳ ಮತ್ತು ಬೆಲ್ಜಿಯಂ ದೇಶಗಳು ಭಾರತೀಯ ಉಕ್ಕು ಉತ್ಪನ್ನಗಳಿಗೆ ದೊಡ್ಡ ಮಾರುಕಟ್ಟೆ ಎನಿಸಿವೆ. ಟಾಟಾ ಸ್ಟೀಲ್, ಜೆಎಸ್ಡಬ್ಲ್ಯೂ ಸ್ಟೀಲ್, ಸ್ಟೀಲ್ ಅಥಾರಿಟಿ (ಎಸ್ಎಐಎಲ್), ಇವು ಭಾರತದ ಪ್ರಮುಖ ಉಕ್ಕು ಉತ್ಪಾದಕ ಸಂಸ್ಥೆಗಳಾಗಿವೆ.
ಇದನ್ನೂ ಓದಿ: ಉಕ್ರೇನ್ ಯುದ್ಧದ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಜತೆ ಮಾತನಾಡಿದ್ದೇನೆ: ಡೊನಾಲ್ಡ್ ಟ್ರಂಪ್
ಆದರೆ, ಅಲೂಮಿನಿಯಮ್ ಉತ್ಪನ್ನಗಳ ವಿಚಾರದಲ್ಲಿ ಭಾರತೀಯ ಕಂಪನಿಗಳು ಅಮೆರಿಕಕ್ಕೆ ಹೆಚ್ಚು ರಫ್ತು ಮಾಡುತ್ತವೆ. ಈ ಕ್ಷೇತ್ರದಲ್ಲಿ ಭಾರತಕ್ಕೆ ಹಿನ್ನಡೆಯಾಗಬಹುದು. ಹಿಂಡಾಲ್ಕೊ, ವೇದಾಂತ, ಇಂಡಿಯಾ ಫಾಯಿಲ್ಸ್, ಜಿಂದಾಲ್ ಮೊದಲಾದ ಸಂಸ್ಥೆಗಳು ಅಲೂಮಿನಿಯಂ ಉತ್ಪಾದನೆಯಲ್ಲಿ ತೊಡಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




