ಭಾರತದಲ್ಲಿ ಸ್ಮಾರ್ಟ್ಫೋನ್ ರಫ್ತು ಕ್ರಾಂತಿ; ಅಂದು 167ನೇ ಸ್ಥಾನ, ಇಂದು 2ನೇ ಸ್ಥಾನ; ಮುಂಚೂಣಿಯಲ್ಲಿ ಐಫೋನ್
Smartphone exports from India: ಭಾರತದಲ್ಲಿ ಈ ಹಣಕಾಸು ವರ್ಷದಲ್ಲಿ ಮೊದಲ ಹತ್ತು ತಿಂಗಳಲ್ಲಿ ಐಫೋನ್ಗಳ ರಫ್ತು ಮೌಲ್ಯ 1 ಲಕ್ಷ ಕೋಟಿ ರೂ ಗಡಿ ದಾಟಿದೆ. ಯಾವುದೇ ಹಣಕಾಸು ವರ್ಷದಲ್ಲಿ, ಇಡೀ ಒಂದು ವರ್ಷದಲ್ಲಿ 1 ಲಕ್ಷ ಕೋಟಿ ರೂನಷ್ಟು ಐಫೋನ್ ರಫ್ತಾಗಿರಲಿಲ್ಲ. 2014-15ರಲ್ಲಿ ಭಾರತದಲ್ಲಿ ಅತಿಹೆಚ್ಚು ರಫ್ತಾದ ಉತ್ಪನ್ನಗಳ ಪಟ್ಟಿಯಲ್ಲಿ ಸ್ಮಾರ್ಟ್ಫೋನ್ ಸ್ಥಾನ 167ರಲ್ಲಿತ್ತು. ಈಗ ಅತಿಹೆಚ್ಚು ರಫ್ತಾಗುವ ಉತ್ಪನ್ನಗಳಲ್ಲಿ ಸ್ಮಾರ್ಟ್ಫೋನ್ 2ನೇ ಸ್ಥಾನದಲ್ಲಿದೆ.

ನವದೆಹಲಿ, ಫೆಬ್ರುವರಿ 10: ಭಾರತದಲ್ಲಿ ಆ್ಯಪಲ್ ಕಂಪನಿಯ ಐಫೋನ್ಗಳ ತಯಾರಿಕೆ ಕಾರ್ಯ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೆಲ ವರ್ಷಗಳ ಹಿಂದಿನವರೆಗೂ ಚೀನಾದಲ್ಲಿ ಬಹುತೇಕ ಐಫೋನ್ ತಯಾರಿಕೆ ನಡೆಯುತ್ತಿತ್ತು. ಈಗ ಭಾರತದಲ್ಲಿ ಉತ್ಪಾದನೆ ಹೆಚ್ಚಿಸಲಾಗುತ್ತಿದೆ. ಭಾರತದಲ್ಲಿ ತಯಾರಾದ ಐಫೋನ್ಗಳನ್ನು ವಿಶ್ವದ ಹಲವು ದೇಶಗಳಿಗೆ ರಫ್ತು ಕೂಡ ಮಾಡಲಾಗುತ್ತಿದೆ. 2024-25ರ ಹಣಕಾಸು ವರ್ಷದ ಮೊದಲ ಹತ್ತು ತಿಂಗಳಲ್ಲೇ ಒಂದು ಲಕ್ಷ ಕೋಟಿ ರೂ ಮೌಲ್ಯದ ಐಫೋನ್ಗಳನ್ನು ರಫ್ತು ಮಾಡಲಾಗಿದೆ. ಯಾವುದೇ ಹಣಕಾಸು ವರ್ಷದಲ್ಲೂ ಐಫೋನ್ ರಫ್ತು ಈ ಮೈಲಿಗಲ್ಲು ಮುಟ್ಟಿರಲಿಲ್ಲ.
2025ರ ಜನವರಿಯ ಒಂದೇ ತಿಂಗಳಲ್ಲಿ 19,000 ಕೋಟಿ ರೂ ಮೌಲ್ಯದ ಐಫೋನ್ಗಳ ರಫ್ತಾಗಿತ್ತು. ಇದೂ ಕೂಡ ಹೊಸ ದಾಖಲೆಯಾಗಿದೆ. 2024ರ ಡಿಸೆಂಬರ್ನಲ್ಲಿ 14,000 ಕೋಟಿ ರೂ ಮೌಲ್ಯದ ಐಫೋನ್ಗಳ ರಫ್ತಾಗಿದ್ದ ದಾಖಲೆಯನ್ನು ಜನವರಿಯಲ್ಲಿ ಮುರಿದುಹಾಕಲಾಗಿದೆ.
ಇದನ್ನೂ ಓದಿ: ಇನ್ನೈದು ವರ್ಷದಲ್ಲಿ ಭಾರತೀಯ ಸೆಮಿಕಂಡಕ್ಟರ್ ಮಾರುಕಟ್ಟೆಯ ಗಾತ್ರ 9 ಲಕ್ಷ ಕೋಟಿ ರೂ ದಾಟುವ ಸಾಧ್ಯತೆ
ಭಾರತದಲ್ಲಿ ಫಾಕ್ಸ್ಕಾನ್, ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಪೆಗಾಟ್ರಾನ್ ಕಂಪನಿಗಳು ಐಫೋನ್ಗಳನ್ನು ಅಸೆಂಬಲ್ ಮಾಡಿಕೊಡುತ್ತವೆ. ಐಫೋನ್16 ಫೋನ್ಗಳನ್ನೂ ಭಾರತದಲ್ಲೇ ತಯಾರಿಸಲಾಗುತ್ತಿದೆ. ಐಫೋನ್ಗಳ ತಯಾರಿಕೆಗೆ ಬೇಕಾದ ಬಿಡಿಭಾಗಗಳ ಕಂಪನಿಗಳೂ ಕೂಡ ಭಾರತದಲ್ಲೇ ಘಟಕಗಳನ್ನು ಸ್ಥಾಪಿಸುತ್ತಿರುವುದು ಮತ್ತು ಪ್ರಮುಖ ಕಾಂಪೊನೆಂಟ್ಗಳನ್ನು ಭಾರತದಿಂದಲೇ ತರಿಸಿಕೊಳ್ಳುತ್ತಿರುವುದು, ಭಾರತದಲ್ಲಿ ಐಫೋನ್ಗಳ ತಯಾರಿಕೆಯ ಕಾರ್ಯವನ್ನು ಮತ್ತಷ್ಟು ಬಲಗೊಳಿಸಿದೆ.
ಸರ್ಕಾರದಿಂದ ನಡೆಸಲಾಗುತ್ತಿರುವ ಪಿಎಲ್ಐ ಸ್ಕೀಮ್ ಕೂಡ ಐಫೋನ್ ತಯಾರಿಕೆಗೆ ಪುಷ್ಟಿ ನೀಡಿದೆ. ಐಫೋನ್ ದೆಸೆಯಿಂದ ಭಾರತವು ಜಾಗತಿಕ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ.
ಇದನ್ನೂ ಓದಿ: ಭಾರತದಿಂದ ಹೊಸ ರಫ್ತು ಮೈಲಿಗಲ್ಲು; ಆಮದು ಹೆಚ್ಚಳವೂ ಶುಭಸೂಚಕವಾ? ಸಚಿವರು ಬಿಚ್ಚಿಟ್ಟ ಸತ್ಯ ಇದು
ಸ್ಮಾರ್ಟ್ಫೋನ್ ರಫ್ತು: 167ನೇ ಸ್ಥಾನದಿಂದ 2ನೇ ಸ್ಥಾನಕ್ಕೆ
ಭಾರತದಲ್ಲಿ ಈ ಹಣಕಾಸು ವರ್ಷ (2024-25) 2.25 ಲಕ್ಷ ಕೋಟಿ ರೂ ಮೌಲ್ಯದ ಸ್ಮಾರ್ಟ್ಫೋನ್ಗಳ ಉತ್ಪಾದನೆ ಆಗುವ ನಿರೀಕ್ಷೆ ಇದೆ. ಇದೂ ಕೂಡ ಹೊಸ ದಾಖಲೆಯಾಗಲಿದೆ. ಸ್ಮಾರ್ಟ್ಫೋನ್ಗಳ ರಫ್ತಿನಲ್ಲಿ ಭಾರತ ಕಳೆದ 10 ವರ್ಷದಲ್ಲಿ ಗಣನೀಯವಾಗಿ ಬೆಳವಣಿಗೆ ಕಂಡಿದೆ. 2014-15ರ ಹಣಕಾಸು ವರ್ಷದಲ್ಲಿ ಭಾರತದಿಂದ ಅತಿಹೆಚ್ಚು ರಫ್ತಾಗುವ ಉತ್ಪನ್ನಗಳಲ್ಲಿ ಸ್ಮಾರ್ಟ್ಫೋನ್ 167ನೇ ಸ್ಥಾನದಲ್ಲಿತ್ತು. ಈಗ ಅದು 2ನೇ ಸ್ಥಾನದಲ್ಲಿದೆ. ಒಂದು ದಶಕದ ಅಂತರದಲ್ಲಿ ಯಾವುದೇ ಉತ್ಪನ್ನದ ರಫ್ತು ಈ ಪರಿ ಹೆಚ್ಚಳ ಆಗಿದ್ದ ಉದಾಹರಣೆಯೇ ಇಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ