ನವದೆಹಲಿ: ಭಾರತದ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ (Indian Stock Markets) ಮೇ 18, ಗುರುವಾರದಂದು ಉತ್ತಮ ಆರಂಭ ಪಡೆದಿವೆ. ಕಳೆದ ಎರಡು ದಿನಗಳ ಕಾಲ ನಕರಾತ್ಮಕ ವಹಿವಾಟುಗಳನ್ನು ಕಂಡಿದ್ದ ಷೇರುಪೇಟೆಗಳಲ್ಲಿ ವ್ಯವಹಾರ ಇಂದು ಗರಿಗೆದರಿದೆ. ಬಿಎಸ್ಇ ಸೆನ್ಸೆಕ್ಸ್ ಗುರುವಾರ ಬೆಳಗಿನ ವಹಿವಾಟಿನಲ್ಲಿ 400 ಅಂಕಗಳಷ್ಟು ಹೆಚ್ಚಳ ಕಂಡು 62,000 ಅಂಕಗಳ ಮಟ್ಟಸ ಸಮೀಪಕ್ಕೆ ಏರಿದೆ. ಇನ್ನು, ನಿಫ್ಟಿ50 ಸೂಚ್ಯಂಕ ಹೆಚ್ಚೂಕಡಿಮೆ 100 ಅಂಕಗಳಷ್ಟು ಮೇಲೇರಿ 18,277 ಅಂಕಗಳ ಮಟ್ಟದಲ್ಲಿದೆ.
ಬ್ಯಾಂಕಿಂಗ್ ಕ್ಷೇತ್ರದ ಕಂಪನಿಗಳ ಷೇರುಗಳಿಗೆ ಹೆಚ್ಚು ಬೇಡಿಕೆ ಬಂದಿದೆ. ಆ್ಯಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ, ಬಜಾಜ್ ಫೈನ್ಸರ್ವ್ ಷೇರುಗಳು ಒಳ್ಳೆಯ ಬೆಲೆಗೆ ಬಿಕರಿಯಾಗುತ್ತಿವೆ. ಅಲ್ಟ್ರಾಟೆಕ್ ಸಿಮೆಂಟ್, ಇನ್ಫೋಸಿಸ್, ನೆಸ್ಲೆ ಮತ್ತಿತರ ಷೇರುಗಳಿಗೂ ಉತ್ತಮ ಬೇಡಿಕೆ ಇದೆ. ವರ್ಲ್ಪೂಲ್ ಇಂಡಿಯಾ, ಜಿಂದಾಲ್ ಸ್ಟೈನ್ಲೆಸ್ ಮೊದಲಾದವುಗಳೂ ಗಮನ ಸೆಳೆದಿವೆ. ಟೈಟಾನ್, ಮಹೀಂದ್ರ ಅಂಡ್ ಮಹೀಂದ್ರ ಕಂಪನಿಯ ಷೇರುಗಳ ಬೆಲೆ ತುಸು ಕುಗ್ಗಿರುವುದು ಬಿಟ್ಟರೆ ಒಟ್ಟಾರೆಯಾಗಿ ಷೇರುಪೇಟೆ ಗುರುವಾರ ಝಗಮಗಿಸುತ್ತಿದೆ.
ಭಾರತದ ಷೇರು ಮಾರುಕಟ್ಟೆಗೆ ಇಂದು ಶುಭಫಲ ಸಿಗಲು ಕಾರಣವಾಗಿದ್ದು ಗ್ಲೋಬಲ್ ಮೂಡ್. ಇದಕ್ಕೆ ಕಾರಣ ಅಮೆರಿಕ ಸರ್ಕಾರ ತೆಗೆದುಕೊಳ್ಳುತ್ತಿರುವ ಒಂದು ಹೆಜ್ಜೆ. ಅಮೆರಿಕದ ಡೆಟ್ ಸೀಲಿಂಗ್ ಅನ್ನು ಹೆಚ್ಚಿಸುವ ಸಂಬಂಧ ಅಲ್ಲಿನ ಅಧ್ಯಕ್ಷ ಜೋ ಬೈಡನ್ ಹೆಜ್ಜೆ ಇಡುತ್ತಿದ್ದಾರೆ. ಇದರಿಂದಾಗಿ ಅಮೆರಿಕದ ಷೇರು ಮಾರುಕಟ್ಟೆಗಳು ಗರಿಗೆದರಿವೆ. ನಿನ್ನೆ ಅಲ್ಲಿನ ನಾಸ್ಡಾಕ್, ಡೋ ಜೋನ್ಸ್ ಮತ್ತು ಎಸ್ ಅಂಡ್ ಪಿ ಸೂಚ್ಯಂಕಗಳು ಶೇ. 1ಕ್ಕಿಂತ ಹೆಚ್ಚು ಮಟ್ಟಕ್ಕೆ ಏರಿವೆ. ಅದರ ಫಲವಾಗಿ ಏಷ್ಯಾದ ಪ್ರಮುಖ ಷೇರುಪೇಟೆಗಳಾದ ನಿಕ್ಕೀ, ಹ್ಯಾಂಗ್ ಸೆಂಗ್, ಸ್ಟ್ರೇಟ್ ಟೈಮ್ಸ್, ಕೋಸ್ಪಿ ಇತ್ಯಾದಿಗಳಲ್ಲೂ ಹೂಡಿಕೆದಾರರು ಸಾವಧಾನವಾಗಿ ಖರೀದಿ ಮಾಡಿದ್ದಾರೆ. ಈ ಒಟ್ಟಾರೆ ಒಳ್ಳೆಯ ಮೂಡು ಇಂದು ಗುರುವಾರ ಭಾರತದ ಷೇರುಪೇಟೆಗೂ ತಾಕಿದೆ.