
ನವದೆಹಲಿ, ಅಕ್ಟೋಬರ್ 24: ಭಾರತ ಆತುರಾತುರವಾಗಿ ಯಾವುದೇ ವ್ಯಾಪಾರ ಒಪ್ಪಂದಕ್ಕೆ (trade deal) ಸಹಿ ಹಾಕುವುದಿಲ್ಲ ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ (Piyush Goyal) ಪುನರುಚ್ಚರಿಸಿದ್ದಾರೆ. ಈ ಮೂಲಕ ಅಮೆರಿಕ, ಯೂರೋಪ್ ಇತ್ಯಾದಿ ಪಾಶ್ಚಿಮಾತ್ಯ ಶಕ್ತಿಗಳಿಗೆ ಭಾರತ ಮತ್ತೊಮ್ಮೆ ಸ್ಪಷ್ಟವಾದ ಮತ್ತು ಖಡಕ್ ಆದ ಮೆಸೇಜ್ ರವಾನಿಸಿದೆ. ಜರ್ಮನಿಯ ಬರ್ಲಿನ್ನಲ್ಲಿ ನಡೆಯುತ್ತಿರುವ ಗ್ಲೋಬಲ್ ಡೈಲಾಗ್ನಲ್ಲಿ ಮಾತನಾಡುತ್ತಿದ್ದ ಭಾರತದ ವಾಣಿಜ್ಯ ಸಚಿವರು, ತಮ್ಮ ದೇಶವು ಯಾವುದೇ ಒತ್ತಡಕ್ಕೆ ಮಣಿದು ಒಪ್ಪಂದ ಸಹಿ ಹಾಕುವುದಿಲ್ಲ ಎಂದಿದ್ದಾರೆ.
ಇತರ ದೇಶಗಳೊಂದಿಗೆ ಸಂಬಂಧ ಇರಿಸಿಕೊಳ್ಳಬೇಕು ಅಥವಾ ಇರಿಸಿಕೊಳ್ಳಬಾರದು ಎಂದು ಷರತ್ತುಗಳನ್ನು ವಿಧಿಸಿದರೆ ಅದನ್ನು ಭಾರತ ಒಪ್ಪುವುದಿಲ್ಲ. ಪರಸ್ಪರ ವಿಶ್ವಾಸದ ತಳಹದಿಯ ಮೇಲೆ ನಿಂತ ದೀರ್ಘಕಾಲದ ಸಹಭಾಗಿತ್ವವಾಗಿ ವ್ಯಾಪಾರವನ್ನು ನೋಡುತ್ತೇವೆ ಎಂದು ಪೀಯೂಶ್ ಗೋಯಲ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಕಳೆದ ಬಾರಿ ವಿಳಂಬವಾಗಿದ್ದ ಪಿಎಂ ಕಿಸಾನ್ ಹಣ ಈ ಬಾರಿ ಬೇಗ ಸಿಗುವ ನಿರೀಕ್ಷೆ; ಇಲ್ಲಿದೆ 21ನೇ ಕಂತಿನ ಬಿಡುಗಡೆ ದಿನಾಂಕ
ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾದಿಂದ ತೈಲ ಖರೀದಿಸಬೇಡಿ ಎಂದು ಯೂರೋಪಿಯನ್ ದೇಶಗಳು ಭಾರತದ ಮೇಲೆ ಒತ್ತಡ ಹಾಕುತ್ತಿವೆ. ಈ ಹಿನ್ನೆಲೆಯಲ್ಲಿ ಪೀಯೂಶ್ ಗೋಯಲ್ ಮೇಲಿನ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ರಷ್ಯಾ ದೇಶದಿಂದ ಬಹಳ ಕಡಿಮೆ ಬೆಲೆಗೆ ಭಾರತವು ತೈಲವನ್ನು ಖರೀದಿಸುತ್ತಿದೆ. ಆದರೆ, ಭಾರತದ ಈ ನಡೆಯಿಂದಾಗಿ ರಷ್ಯಾದ ಆದಾಯ ಮೂಲ ಸಿಕ್ಕಿದೆ. ಉಕ್ರೇನ್ ಮೇಲಿನ ಯುದ್ಧಕ್ಕೆ ಈ ಹಣವನ್ನು ರಷ್ಯಾ ಬಳಕೆ ಮಾಡಲು ಸಾಧ್ಯವಾಗುತ್ತಿದೆ ಎಂಬುದು ಅಮೆರಿಕ ಹಾಗೂ ಯೂರೋಪ್ ದೇಶಗಳ ಆರೋಪ.
ಇದೇ ಕಾರಣಕ್ಕೆ ಅಮೆರಿಕ ದೇಶವು ಭಾರತದ ಮೇಲೆ ಶೇ. 50ರಷ್ಟು ಟ್ಯಾರಿಫ್ ಹಾಕಿರುವುದು. ಆದರೆ, ಪಾಶ್ಚಿಮಾತ್ಯ ದೇಶಗಳ ದ್ವಂದ್ವ ನಿಲುವನ್ನು ಭಾರತ ಅನೇಕ ಬಾರಿ ಟೀಕಿಸಿದೆ. ರಷ್ಯಾದಿಂದ ಐರೋಪ್ಯ ದೇಶಗಳೂ ಕೂಡ ಆಮದು ಮಾಡಿಕೊಳ್ಳುತ್ತವೆ. ಆದರೆ, ಭಾರತಕ್ಕೆ ತಾಕೀತು ಮಾಡುತ್ತವೆ ಎಂದು ಪೀಯೂಶ್ ಗೋಯಲ್, ಜೈಶಂಕರ್ ಮೊದಲಾದವರು ವಿದೇಶಗಳಲ್ಲಿ ಹೋದಾಗೆಲ್ಲಾ ಎತ್ತಿಯಾಡಿರುವುದುಂಟು.
ಇದನ್ನೂ ಓದಿ: ಭಾರತದ ಜಿಡಿಪಿ ಈ ವರ್ಷ ಶೇ. 6.7-6.9ರಷ್ಟು ಬೆಳೆಯಬಹುದು: ಡುಲೋಟ್ ಅಂದಾಜು
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಕೂಡ ರಷ್ಯನ್ ತೈಲ ವಿಚಾರವಾಗಿ ಭಾರತದ ಮೇಲೆ ಬಾರಿ ಬಾರಿ ಒತ್ತಡ ಹಾಕುತ್ತಿದ್ದಾರೆ. ತಾನು ಪ್ರಧಾನಿ ಮೋದಿ ಜೊತೆ ಮಾತನಾಡಿದ್ದು, ರಷ್ಯನ್ ತೈಲ ಖರೀದಿ ನಿಲ್ಲಿಸುವುದಾಗಿ ಅವರು ತನಗೆ ಹೇಳಿದ್ಧಾರೆ ಎಂದು ಡೊನಾಲ್ಡ್ ಟ್ರಂಪ್ ಹೋದಲ್ಲಿ ಬಂದಲ್ಲೆಲ್ಲಾ ಹೇಳುತ್ತಿದ್ದಾರೆ. ಆದರೆ, ಭಾರತವು ಇದನ್ನು ಪುನರುಚ್ಚರಿಸಿಲ್ಲ. ರಷ್ಯನ್ ತೈಲ ಖರೀದಿಯನ್ನು ನಿಲ್ಲಿಸಲಾಗುತ್ತಿದೆ ಎಂದು ಭಾರತ ಅಧಿಕೃತವಾಗಿ ಎಲ್ಲಿಯೂ ಹೇಳಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ