ಕಳೆದ ಬಾರಿ ವಿಳಂಬವಾಗಿದ್ದ ಪಿಎಂ ಕಿಸಾನ್ ಹಣ ಈ ಬಾರಿ ಬೇಗ ಸಿಗುವ ನಿರೀಕ್ಷೆ; ಇಲ್ಲಿದೆ 21ನೇ ಕಂತಿನ ಬಿಡುಗಡೆ ದಿನಾಂಕ
PM Kisan scheme 21st installment release date: ಪಿಎಂ ಕಿಸಾನ್ ಯೋಜನೆಯಲ್ಲಿ ಇಲ್ಲಿಯವರೆಗೆ 20 ಕಂತುಗಳ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈಗ 21ನೇ ಕಂತಿನ ಬಿಡುಗಡೆಗೆ ನಿರೀಕ್ಷೆ ಮಾಡಲಾಗುತ್ತಿದೆ. ಆಗಸ್ಟ್ನಲ್ಲಿ 20ನೇ ಕಂತು ಬಿಡುಗಡೆ ಆಗಿತ್ತು. ಈ ತಿಂಗಳೊಳಗೆಯೇ 21ನೇ ಕಂತು ಬಿಡುಗಡೆ ಆಗುವ ಸಾಧ್ಯತೆ ಇಲ್ಲದಿಲ್ಲ. 10 ಕೋಟಿ ರೈತರಿಗೆ ಈ ಬಾರಿ ಪಿಎಂ ಕಿಸಾನ್ ಹಣ ಸಿಗಬಹುದು.

ನವದೆಹಲಿ, ಅಕ್ಟೋಬರ್ 23: ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan scheme) ಯೋಜನೆ ಅಡಿ ಸರ್ಕಾರ ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ರೂ ನೀಡುತ್ತದೆ. ಪ್ರತೀ ಕಂತಿನಲ್ಲೂ 2,000 ರೂ ಹಣವನ್ನು ರೈತರ (Farmer) ಖಾತೆಗಳಿಗೆ ನೇರವಾಗಿ ಹಾಕಲಾಗುತ್ತದೆ. 2019ರಲ್ಲಿ ಆರಂಭವಾದ ಈ ಯೋಜನೆಯಲ್ಲಿ ಇಲ್ಲಿಯವರೆಗೆ 20 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ. ಈಗ 9 ಕೋಟಿಗೂ ಅಧಿಕ ಫಲಾನುಭವಿ ರೈತರು 21ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ.
ಕಳೆದ ಬಾರಿಯ ಪಿಎಂ ಕಿಸಾನ್ ಕಂತಿನ ಹಣ (20ನೇ ಕಂತು) ತಡವಾಗಿ ಬಿಡುಗಡೆ ಆಗಿತ್ತು. ಜೂನ್ನಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇತ್ತಾದರೂ ಬಂದಿದ್ದು ಆಗಸ್ಟ್ ತಿಂಗಳಲ್ಲಿ. 2.4 ಕೋಟಿ ಮಹಿಳಾ ರೈತರೂ ಒಳಗೊಂಡಂತೆ 9.8 ಕೋಟಿ ರೈತರಿಗೆ 2,000 ರೂ ಹಣ ಸಿಕ್ಕಿತ್ತು. ಈಗ 21ನೇ ಕಂತಿನ ಹಣ ಈ ತಿಂಗಳೇ ಬರುವ ಸಾಧ್ಯತೆ ಇದೆ. ಅಕಸ್ಮಾತ್ ಅಕ್ಟೋಬರ್ನಲ್ಲಿ ಆಗಲಿಲ್ಲವೆಂದರೂ ಮುಂದಿನ ತಿಂಗಳಾದ ನವೆಂಬರ್ನಲ್ಲಿ 21ನೇ ಕಂತು ಬಿಡುಗಡೆ ಆಗುವುದು ಬಹುತೇಕ ನಿಶ್ಚಿತ ಎನ್ನಲಾಗಿದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ಪಿಪಿಎಫ್ ಸ್ಕೀಮ್ ಮೂಲಕ 15 ವರ್ಷದಲ್ಲಿ 40 ಲಕ್ಷ ರೂವರೆಗೆ ಆದಾಯ
ಪಿಎಂ ಕಿಸಾನ್ ಯೋಜನೆಯ ಲಾಭವೇನು?
ಪಿಎಂ ಕಿಸಾನ್ ಯೋಜನೆಯನ್ನು ರೈತರ ಕೃಷಿ ಕಾರ್ಯಗಳಿಗೆ ನೆರವಾಗಲೆಂದು ರೂಪಿಸಲಾಗಿದೆ. ವ್ಯವಸಾಯಕ್ಕೆ ಅನುಕೂಲವಾಗಲೆಂದು ಪ್ರತೀ ನಾಲ್ಕು ತಿಂಗಳಿಗೆ ಸರ್ಕಾರವು ರೈತರಿಗೆ 2,000 ರೂ ಸಹಾಯಧನವಾಗಿ ನೀಡುವುದೇ ಈ ಯೋಜನೆಯ ಉದ್ದೇಶ.
ವರ್ಷಕ್ಕೆ ಒಟ್ಟು 6,000 ರೂ ಹಣವು ರೈತರಿಗೆ ಸಿಗುತ್ತದೆ. ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್, ಮತ್ತು ಡಿಸೆಂಬರ್-ಮಾರ್ಚ್ ಈ ಅವಧಿಗಳಲ್ಲಿ ಕಂತಿನ ಹಣ ಬಿಡುಗಡೆ ಆಗುತ್ತದೆ.
ಇದನ್ನೂ ಓದಿ: ಅಕ್ಟೋಬರ್ನಲ್ಲಿ ಅತಿಹೆಚ್ಚು ಫಿಕ್ಸೆಡ್ ಡೆಪಾಸಿಟ್ ರೇಟ್ ಕೊಡುವ ಬ್ಯಾಂಕುಗಳು
ಪಿಎಂ ಕಿಸಾನ್ ಯೋಜನೆಗೆ ಯಾರು ಅರ್ಹರು?
ಪಿಎಂ ಕಿಸಾನ್ ಯೋಜನೆಯಲ್ಲಿ ಯಾವ ರೈತರು ಬೇಕಾದರೂ ನೊಂದಾಯಿಸಿಕೊಳ್ಳಬಹುದು. ಆದರೆ, ಅವರ ಹೆಸರಿನಲ್ಲಿ ಕೃಷಿ ಜಮೀನು ಇರಬೇಕು. ಐಟಿಆರ್ ಸಲ್ಲಿಸುತ್ತಿರುವವರು, ವೈದ್ಯರು, ಎಂಜಿನಿಯರ್ ಇತ್ಯಾದಿ ವೃತ್ತಿಪರರು, ಸರ್ಕಾರಿ ಉದ್ಯೋಗಿಗಳು, ಪಿಂಚಣಿದಾರರು, ಜನಪ್ರತಿನಿಧಿಗಳು ಇತ್ಯಾದಿ ಆಗಿರುವವರು ಕೃಷಿ ಭೂಮಿ ಹೊಂದಿದ್ದರೂ ಸಹ ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿರುವುದಿಲ್ಲ.
ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿಕೊಳ್ಳುವುದು ಇತ್ಯಾದಿ ಅಗತ್ಯ ಮಾಹಿತಿ ವೀಕ್ಷಿಸಲು ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: pmkisan.gov.in/
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




