ಪೋಸ್ಟ್ ಆಫೀಸ್ ರಾಷ್ಟ್ರೀಯ ಉಳಿತಾಯ ಪತ್ರದಲ್ಲಿ ಹೂಡಿಕೆ; ಲಕ್ಷ ರೂಗೆ 44,800 ರೂ ಲಾಭ
Post Office national savings certificate: ಅಂಚೆ ಕಚೇರಿಗಳಲ್ಲಿ ಸಿಗುವ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ನಲ್ಲಿ ಶೇ. 7.7ರಷ್ಟು ಬಡ್ಡಿ ನೀಡಲಾಗುತ್ತದೆ. ಇದು ವಾರ್ಷಿಕವಾಗಿ ಕಾಂಪೌಂಡಿಂಗ್ ಆಗುತ್ತದೆ. ಅಂದರೆ ವರ್ಷಕ್ಕೊಮ್ಮೆ ಬಡ್ಡಿಗೆ ಚಕ್ರಬಡ್ಡಿ ಸೇರ್ಪಡೆಯಾಗುತ್ತದೆ. ಬ್ಯಾಂಕುಗಳ ಎಫ್ಡಿಯಲ್ಲಿ ಪ್ರತೀ ಮೂರು ತಿಂಗಳಿಗೆ ಕಾಂಪೌಂಡ್ ಇಂಟರೆಸ್ಟ್ ಇರುತ್ತದೆ. ಆದರೆ, ಎನ್ಎಸ್ಸಿಯಲ್ಲಿ ಅಧಿಕ ಬಡ್ಡಿ ಇದೆ.

ಪೋಸ್ಟ್ ಆಫೀಸ್ನಲ್ಲಿ ನೀಡಲಾಗುವ ವಿವಿಧ ಸಣ್ಣ ಉಳಿತಾಯ ಯೋಜನೆಗಳಲ್ಲಿ ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (NSC- National Savings Certificate) ಪ್ರಮುಖವಾದುದು. ಇದು ಯಾರು ಬೇಕಾದರೂ ಹೂಡಿಕೆ ಮಾಡಬಹುದಾದ ನಿಶ್ಚಿತ ಠೇವಣಿ (Fixed Deposit) ಸ್ಕೀಮ್ ಇದು. ಪೋಸ್ಟ್ ಆಫೀಸ್ ಸ್ಕೀಮ್ಗಳಲ್ಲೇ ಅತಿಹೆಚ್ಚು ಬಡ್ಡಿ ನೀಡಲಾಗುವ ಸ್ಕೀಮ್ಗಳಲ್ಲಿ ಇದೂ ಒಂದು. ಹೆಚ್ಚಿನ ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರಿಗೆ ನೀಡಲಾಗುವ ಬಡ್ಡಿಗಿಂತ ಹೆಚ್ಚಿನ ಬಡ್ಡಿ ಎನ್ಎಸ್ಸಿಯಲ್ಲಿ ಸಿಗುತ್ತದೆ.
ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್ನಲ್ಲಿ ಹೂಡಿಕೆ ಹೇಗೆ?
ರಾಷ್ಟ್ರೀಯ ಉಳಿತಾಯ ಪತ್ರವನ್ನು ಯಾರು ಬೇಕಾದರೂ ತೆರೆಯಬಹುದು. ಯಾವುದೇ ಅಂಚೆ ಕಚೇರಿಗೆ ಹೋಗಿ ಎನ್ಎಸ್ಸಿ ಅಕೌಂಟ್ ತೆರೆಯಬಹುದು. ಇದು ಐದು ವರ್ಷದ ಠೇವಣಿ ಸ್ಕೀಮ್ ಆಗಿರುತ್ತದೆ. ಕನಿಷ್ಠ ಹೂಡಿಕೆ 1,000 ರೂ ಇದೆ. ಗರಿಷ್ಠ ಹೂಡಿಕೆಗೆ ಮಿತಿ ಇರುವುದಿಲ್ಲ. ಎಷ್ಟು ಬೇಕಾದರೂ ಹೂಡಿಕೆ ಮಾಡಲು ಅವಕಾಶ ಇದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ಪಿಪಿಎಫ್ ಸ್ಕೀಮ್ ಮೂಲಕ 15 ವರ್ಷದಲ್ಲಿ 40 ಲಕ್ಷ ರೂವರೆಗೆ ಆದಾಯ
ಎನ್ಎಸ್ಸಿ ಹೂಡಿಕೆಯಲ್ಲಿ ಕಾಂಪೌಂಡಿಂಗ್ ಬೆನಿಫಿಟ್; ಹೆಚ್ಚು ರಿಟರ್ನ್ಸ್
ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ನಲ್ಲಿ ಮಾಡಲಾಗುವ ಹೂಡಿಕೆಗೆ ವಾರ್ಷಿಕವಾಗಿ ಬಡ್ಡಿ ಜಮೆ ಆಗುತ್ತದೆ. ಈ ಬಡ್ಡಿಗೆ ಚಕ್ರಬಡ್ಡಿ ಸೇರ್ಪಡೆಯಾಗುತ್ತಾ ಹೋಗುತ್ತದೆ. ಅಂದರೆ, ಶೇಖರಣೆಯಾದ ಬಡ್ಡಿಯನ್ನು ಅಸಲು ಹಣಕ್ಕೆ ಸೇರ್ಪಡೆ ಮಾಡುವುದರಿಂದ ಹೆಚ್ಚು ಬಡ್ಡಿ ಸಿಗುತ್ತಾ ಹೋಗುತ್ತದೆ. ಇದು ಹೂಡಿಕೆಯ ಕಾಂಪೌಂಡಿಂಗ್ ಗುಣ.
ಉದಾಹರಣೆಗೆ, ನೀವು ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ನಲ್ಲಿ 1,00,000 ರೂ ಹೂಡಿಕೆ ಮಾಡುತ್ತೀರಿ ಎಂದಿಟ್ಟುಕೊಳ್ಳಿ. ಇದಕ್ಕೆ ವಾರ್ಷಿಕ ಶೇ. 7.7 ಬಡ್ಡಿ ನಿಗದಿ ಮಾಡಲಾಗಿದೆ. ಇದೇ ಬಡ್ಡಿದರ 5 ವರ್ಷವೂ ಇದ್ದಲ್ಲಿ ನಿಮ್ಮ 1 ಲಕ್ಷ ರೂ ಹೂಡಿಕೆಯು 1,44,880 ರೂ ಆಗುತ್ತದೆ.
ಇದನ್ನೂ ಓದಿ: ನಿಮ್ಮ ಸೇವಿಂಗ್ಸ್ ಅಕೌಂಟ್ ಮೇಲೆ ಐಟಿ ಕಣ್ಣು? ಈ ಟ್ರಾನ್ಸಾಕ್ಷನ್ಗಳನ್ನು ಮಾಡುವಾಗ ಹುಷಾರ್
ಎನ್ಎಸ್ಸಿಗಿಂತ ಬ್ಯಾಂಕ್ ಎಫ್ಡಿ ಹೇಗೆ ಭಿನ್ನ?
ಕಾಂಪೌಂಡಿಂಗ್ ಬೆನಿಫಿಟ್ನಲ್ಲಿ ಎನ್ಎಸ್ಸಿಗಿಂತ ಬ್ಯಾಂಕ್ ಎಫ್ಡಿ ಮೇಲುಗೈ ಹೊಂದಿದೆ. ಎನ್ಎಸ್ಸಿಯಲ್ಲಿ ವಾರ್ಷಿಕವಾಗಿ ಚಕ್ರಬಡ್ಡಿ ಸೇರ್ಪಡೆಯಾಗುತ್ತಿರುತ್ತದೆ. ಬ್ಯಾಂಕ್ ಎಫ್ಡಿಯಲ್ಲಾದರೆ ತ್ರೈಮಾಸಿಕವಾಗಿ ಚಕ್ರಬಡ್ಡಿ ಸೇರುತ್ತಿರುತ್ತದೆ. ಅಂದರೆ, ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ನಲ್ಲಿ ಚಕ್ರಬಡ್ಡಿ ಹೆಚ್ಚು ಸಿಗುತ್ತದೆ. ಎನ್ಎಸ್ಸಿಯಲ್ಲಿ ಒಂದು ಲಕ್ಷ ರೂ ಡೆಪಾಸಿಟ್ಗೆ ಐದು ವರ್ಷದಲ್ಲಿ 1,44,880 ರೂ ಸಿಕ್ಕರೆ, ಇದೇ ಶೇ. 7.7 ಬಡ್ಡಿದರ ಇರುವ ಬ್ಯಾಂಕ್ ಎಫ್ಡಿ 5 ವರ್ಷದಲ್ಲಿ ನೀಡುವ ರಿಟರ್ನ್ 1,46,740 ರೂ.
ಎನ್ಎಸ್ಸಿಯದ್ದು ವಾರ್ಷಿಕ ಲಾಭ ಶೇ. 7.7 ಇದ್ದರೆ, ಇದೇ ಬಡ್ಡಿದರದ ಬ್ಯಾಂಕ್ ಎಫ್ಡಿಯ ವಾರ್ಷಿಕ ಲಾಭ ಅಥವಾ ಯಿಲ್ಡ್ ಶೇ. 8 ಆಗಿರುತ್ತದೆ. ಆದರೆ, ಬ್ಯಾಂಕ್ ಎಫ್ಡಿಯಲ್ಲಿ ನಿಮಗೆ ಸಿಗುವ ರಿಟರ್ನ್ಗೆ ಟಿಡಿಎಸ್ ಕಡಿತ ಮಾಡಲಾಗುತ್ತದೆ. ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ನಲ್ಲಿ ಮಾಡುವ ಹೂಡಿಕೆಗೆ ಟ್ಯಾಕ್ಸ್ ಬೆನಿಫಿಟ್ ಸಿಗುತ್ತದೆ. ಇದೂ ಕೂಡ ಗಮನಾರ್ಹ ಸಂಗತಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




