ನವದೆಹಲಿ, ಆಗಸ್ಟ್ 26: ಕೆಲವೇ ಸ್ನೇಹ ರಾಷ್ಟ್ರಗಳಿಗೆ ಸೀಮಿತ ರೀತಿಯಲ್ಲಿ ಆಗುತ್ತಿದ್ದ ಡಿಫೆನ್ಸ್ ರಫ್ತು ಕಳೆದ 10 ವರ್ಷದಲ್ಲಿ ಸಿಕ್ಕಾಪಟ್ಟೆ ಏರಿದೆ. 2014ರಿಂದೀಚೆ ಬೇರೆ ಬೇರೆ ದೇಶಗಳಿಗೆ ಯುದ್ಧಾಸ್ತ್ರ ಸೇರಿದಂತೆ ರಕ್ಷಣಾ ಸಾಮಗ್ರಿಗಳ ರಫ್ತು 30 ಪಟ್ಟು ಹೆಚ್ಚಾಗಿರುವುದು ತಿಳಿದುಬಂದಿದೆ. ದಿ ಪ್ರಿಂಟ್ ಡಿಜಿಟಲ್ ತಾಣದಲ್ಲಿ ಸ್ನೇಹೇಶ್ ಅಲೆಕ್ ಫಿಲಿಪ್ ಬರೆದಿರುವ ವರದಿ ಪ್ರಕಾರ ಭಾರತದ ರಕ್ಷಣಾ ಉದ್ಯಮ 90ಕ್ಕೂ ಹೆಚ್ಚು ದೇಶಗಳಿಗೆ ಪೂರೈಕೆ ಮಾಡುತ್ತಿದೆ. ಸರ್ಕಾರ ಪರವಾನಿಗೆ ವ್ಯವಸ್ಥೆಯನ್ನು ಸರಳಗೊಳಿಸಿದ ಪರಿಣಾಮ ಹೆಚ್ಚೆಚ್ಚು ಕಂಪನಿಗಳು ಡಿಫೆನ್ಸ್ ಉದ್ಯಮಕ್ಕೆ ಬರುತ್ತಿವೆ. ಹಿಂದೆಲ್ಲಾ ಕಷ್ಟಸಾಧ್ಯವಾಗುತ್ತಿದ್ದ ಅಪಾಯಕಾರಿ ಯುದ್ಧಾಸ್ತ್ರಗಳನ್ನು ಹಲವು ಕಂಪನಿಗಳು ತಯಾರಿಸಿ ವಿದೇಶಗಳಿಗೆ ರಫ್ತು ಮಾಡುತ್ತಿವೆ.
2023-24ರಲ್ಲಿ ರಕ್ಷಣಾ ಕ್ಷೇತ್ರದಿಂದ ರಫ್ತು ಪ್ರಮಾಣ ದಾಖಲೆಯ 21,083 ಕೋಟಿ ರೂ ಆಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಅದು 15,920 ಕೋಟಿ ರೂ ಇತ್ತು. ಒಂದೇ ವರ್ಷದಲ್ಲಿ ಶೇ. 32ರಷ್ಟು ರಫ್ತು ಹೆಚ್ಚಳ ಆಗಿದೆ. ಕುತೂಹಲ ಎಂದರೆ 2020ರಲ್ಲಿ ಕೇಂದ್ರ ಸರ್ಕಾರ ಐದು ಕೆಲ ವರ್ಷದೊಳಗೆ ಒಂದು ವರ್ಷದಲ್ಲಿ ಡಿಫೆನ್ಸ್ ಎಕ್ಸ್ಪೋರ್ಟ್ 35,000 ಕೋಟಿ ರೂ ಆಗಬೇಕು ಎಂದು ಗುರಿ ಇಟ್ಟಿದ್ದರು. ಈಗ 21,083 ಕೋಟಿ ರೂ ಮಟ್ಟ ತಲುಪಲಾಗಿದೆ. ಇನ್ನೆರಡು ವರ್ಷದೊಳಗೆ ಆ ಗುರಿ ಮುಟ್ಟುವುದು ಕಷ್ಟವೇನಲ್ಲ.
ಭಾರತದ ಅರ್ಧದಷ್ಟು ಡಿಫೆನ್ಸ್ ರಫ್ತು ಅಮೆರಿಕಕ್ಕೆ ಹೋಗುತ್ತದೆ. ಇದಕ್ಕೆ ಕಾರಣ, ಅಮೆರಿಕದ ಡಿಫೆನ್ಸ್ ಸಿಸ್ಟಂ ಜಾಗತಿಕವಾಗಿ ವಿವಿಧ ದೇಶಗಳಿಂದ ಬೇರೆ ಬೇರೆ ಕಂಪನಿಗಳಿಂದ ಬಿಡಿಭಾಗಗಳನ್ನು ತರಿಸಿಕೊಳ್ಳುತ್ತದೆ. ಈ ಮೂಲಕ ತನ್ನದೇ ಆದ ಗ್ಲೋಬಲ್ ಸಪ್ಲೈ ಚೈನ್ ಜಾಲ ನಿರ್ಮಿಸಿದೆ. ಈ ಜಾಲದಲ್ಲಿ ಭಾರತವೂ ಇದೆ. ಅಮೆರಿಕದ ವಿವಿಧ ಕಂಪನಿಗಳು ಭಾರತೀಯ ಕಂಪನಿಗಳಿಂದ ಕೆಲ ನಿರ್ದಿಷ್ಟ ಬಿಡಿಭಾಗಗಳನ್ನು ಪಡೆಯುತ್ತವೆ. ಅಂತೆಯೇ, ಭಾರತಕ್ಕೂ ಒಳ್ಳೆಯ ಬಿಸಿನೆಸ್ ಸಿಕ್ಕಂತಾಗುತ್ತದೆ.
ಇದನ್ನೂ ಓದಿ: ಏಕೀಕೃತ ಪೆನ್ಷನ್ ಸ್ಕೀಮ್; ಯಾವಾಗಿಂದ ಜಾರಿ? 2004ಕ್ಕೆ ಮುಂಚೆ ಇದ್ದ ಒಪಿಎಸ್ಗಿಂತ ಇದು ಎಷ್ಟು ಭಿನ್ನ?
ಅಮೆರಿಕ ಬಿಟ್ಟರೆ ಮಯನ್ಮಾರ್ ಭಾರತದಿಂದ ಅತಿಹೆಚ್ಚು ರಕ್ಷಣಾ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದು. ಇಸ್ರೇಲ್, ಆರ್ಮೇನಿಯಾ, ಫಿಲಿಪ್ಪೈನ್ಸ್, ಹಲವು ಆಫ್ರಿಕನ್ ದೇಶಗಳಿಗೆ ಭಾರತ ರಫ್ತು ಮಾಡುತ್ತದೆ.
ಫಿಲಿಪ್ಪೈನ್ಸ್ನೊಂದಿಗೆ ಬ್ರಹ್ಮೋಸ್ ಕ್ಷಿಪಣಿ ಸರಬರಾಜಿಗೆ ಭಾರತ ಒಪ್ಪಂದ ಮಾಡಿಕೊಂಡಿದೆ. ಆರ್ಮೇನಿಯಾಗೆ ಏರ್ ಡಿಫೆನ್ಸ್ ಸಿಸ್ಟಂ, ಆರ್ಟಿಲರಿ ಗನ್ಗಳ ಸರಬರಾಜು ಮಾಡುತ್ತಿದೆ.
ಮದ್ದುಗುಂಡುಗಳು, ಸ್ನೈಪರ್ ರೈಫಲ್ ಇತ್ಯಾದಿ ಸಣ್ಣ ಶಸ್ತ್ರಗಳು, ಬುಲೆಟ್ ಪ್ರೂಫ್ ಕವಚ, ಹೆಲ್ಮೆಟ್, ಎಲೆಕ್ಟ್ರಾನಿಕ್ ವಸ್ತು, ಸಶಸ್ತ್ರ ವಾಹನಗಳು, ಹಗುರವಾದ ಟಾರ್ಪೆಡೋ, ಸಿಮುಲೇಟರ್, ಡ್ರೋನ್, ವೇಗವಾಗಿ ದಾಳಿ ಮಾಡಬಲ್ಲ ಹಡಗುಗಳು ಇತ್ಯಾದಿ ಶಸ್ತ್ರಾಸ್ತ್ರ, ಯುದ್ಧೋಪಕರಣಗಳನ್ನು ಭಾರತ ರಫ್ತು ಮಾಡುತ್ತದೆ. ಸರ್ಕಾರಿ ಸ್ವಾಮ್ಯದ ಕಂಪನಿಗಳು ಮತ್ತು ಖಾಸಗಿ ಕಂಪನಿಗಳ ರಫ್ತು ಇದರಲ್ಲಿದೆ.
ಭಾರತದ ರಕ್ಷಣಾ ಉದ್ಯಮದಲ್ಲಿ ಈಗ ಖಾಸಗಿ ಕಂಪನಿಗಳ ಭರಾಟೆ ಹೆಚ್ಚಾಗುತ್ತಿದೆ. ಕಲ್ಯಾಣಿ ಗ್ರೂಪ್ ಜೊತೆಗೆ ಟಾಟಾ ಗ್ರೂಪ್, ರಿಲಾಯನ್ಸ್, ಮಹೀಂದ್ರ ಗ್ರೂಪ್ ಸಂಸ್ಥೆಗಳು ದೊಡ್ಡ ಸದ್ದು ಮಾಡುತ್ತಿವೆ. ಆದರೆ, ಖಾಸಗಿ ವಲಯದಲ್ಲಿ ಅತಿಹೆಚ್ಚು ರಕ್ಷಣಾ ವಸ್ತುಗಳನ್ನು ರಫ್ತು ಮಾಡುತ್ತಿರುವುದು ಬೆಂಗಳೂರಿನ ಇಂಡೋ ಎಂಐಎಂ ಕಂಪನಿ. ಇದು ಮೆಟಲ್ ಇಂಜೆಕ್ಷನ್ ಮೋಲ್ಡಿಂಗ್ (ಎಂಐಎಂ) ಇತ್ಯಾದಿ ಪ್ರಿಸಿಶನ್ ಎಂಜಿನಿಯರಿಂಗ್ ವಸ್ತುಗಳನ್ನು ರಫ್ತು ಮಾಡುತ್ತದೆ. ಅಮೆರಿಕ, ಯೂರೋಪ್, ಏಷ್ಯಾದ 50ಕ್ಕೂ ಹೆಚ್ಚು ದೇಶಗಳಿಗೆ ಇದು ರಫ್ತು ಮಾಡುತ್ತದೆ.
ಇದನ್ನೂ ಓದಿ: ಜೊಮಾಟೊದಲ್ಲಿ ಹೊಸ ಫೀಚರ್; ಆರ್ಡರ್ ಶೆಡ್ಯೂಲ್ ಮಾಡಿ; ಎರಡು ದಿನದವರೆಗೆ ಅವಕಾಶ
ಬೆಂಗಳೂರಿನ ಇನ್ನೂ ಹಲವು ಕಂಪನಿಗಳು ರಕ್ಷಣಾ ಉದ್ಯಮದಲ್ಲಿ ಹೆಸರುವಾಸಿಯಾಗಿವೆ. ಬೆಂಗಳೂರಿನ ಎಚ್ಎಎಲ್, ಬಿಇಎಲ್, ಬಿಎಚ್ಇಎಲ್ ಸಂಸ್ಥೆಗಳು ಈ ಕ್ಷೇತ್ರದಲ್ಲಿ ದಿಗ್ಗಜರೆನಿಸಿವೆ. ಬೆಂಗಳೂರಿನ ಖಾಸಗಿ ಕಂಪನಿಗಳು ಹಿಂದೆ ಬಿದ್ದಿಲ್ಲ. ಇಂಡೋ ಎಂಐಎಂ ಜೊತೆ ಡೈನಾಮ್ಯಾಟಿಕ್ ಟೆಕ್ನಾಲಜೀಸ್, ರೋಸೆಲ್ ಟೆಕ್ಸಿಸ್, ಸ್ಯಾಸ್ಮೋಸ್ ಎಚ್ಇಟಿ ಟೆಕ್ನಾಲಜೀಸ್ ಮೊದಲಾದ ಸಂಸ್ಥೆಗಳು ಜಗತ್ತಿನ ದೊಡ್ಡ ದೊಡ್ಡ ಡಿಫೆನ್ಸ್ ಕಂಪನಿಗಳಿಗೆ ಕೆಲ ಬಿಡಿಭಾಗಗಳನ್ನು ಪೂರೈಸುತ್ತವೆ.
ಚಿನೂಕ್ ಹೆಲಿಕಾಪ್ಟರ್, ಎಫ್-15 ಜೆಟ್, ವಿ-22 ಆಸ್ಪ್ರೇ ಮೊದಲಾದ ಸಮರ ವಾಹನಗಳಿಗೆ ಬೇರೆ ಬೇರೆ ಬಿಡಿಭಾಗಗಳು ಭಾರತೀಯ ಕಂಪನಿಗಳಿಂದ ಸರಬರಾಜಾಗುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ