ಪ್ರಚಂಡ ವೇಗದಲ್ಲಿ ಹೆಚ್ಚುತ್ತಿರುವ ಭಾರತದ ಎಲೆಕ್ಟ್ರಾನಿಕ್ಸ್ ರಫ್ತು; ಪೆಟ್ರೋಲಿಯಂ ಉತ್ಪನ್ನಗಳನ್ನೂ ಹಿಂದಿಕ್ಕುತ್ತಿದೆ ಎಲೆಕ್ಟ್ರಾನಿಕ್ಸ್ ಎಕ್ಸ್​ಪೋರ್ಟ್

India's electronics exports rising swiftly: ಭಾರತದಿಂದ ಅತಿಹೆಚ್ಚು ರಫ್ತು ಮಾಡುವ ಸೆಕ್ಟರ್​ಗಳ ಪೈಕಿ ಎಲೆಕ್ಟ್ರಾನಿಕ್ಸ್ 3ನೇ ಸ್ಥಾನಕ್ಕೇರಿದೆ. 2021-22ರಲ್ಲಿ ರಫ್ತಿನಲ್ಲಿ 7ನೇ ಸ್ಥಾನದಲ್ಲಿದ್ದ ಎಲೆಕ್ಟ್ರಾನಿಕ್ಸ್ ಸೆಕ್ಟರ್ 3ನೇ ಸ್ಥಾನಕ್ಕೆ ಏರಿರುವುದು ಗಮನಾರ್ಹ. ಈ ಹಣಕಾಸು ವರ್ಷದಲ್ಲೇ ಈ ಸೆಕ್ಟರ್ ರಫ್ತು ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರುವ ನಿರೀಕ್ಷೆ ಇದೆ.

ಪ್ರಚಂಡ ವೇಗದಲ್ಲಿ ಹೆಚ್ಚುತ್ತಿರುವ ಭಾರತದ ಎಲೆಕ್ಟ್ರಾನಿಕ್ಸ್ ರಫ್ತು; ಪೆಟ್ರೋಲಿಯಂ ಉತ್ಪನ್ನಗಳನ್ನೂ ಹಿಂದಿಕ್ಕುತ್ತಿದೆ ಎಲೆಕ್ಟ್ರಾನಿಕ್ಸ್ ಎಕ್ಸ್​ಪೋರ್ಟ್
ಎಲೆಕ್ಟ್ರಾನಿಕ್ಸ್

Updated on: Oct 27, 2025 | 3:57 PM

ನವದೆಹಲಿ, ಅಕ್ಟೋಬರ್ 27: ಭಾರತದ ಎಲೆಕ್ಟ್ರಾನಿಕ್ಸ್ ರಫ್ತು (electronics exports) ಬಹಳ ವೇಗದಲ್ಲಿ ಹೆಚ್ಚುತ್ತಿದೆ. ನಾಲ್ಕು ವರ್ಷಗಳ ಹಿಂದೆ ಅತಿಹೆಚ್ಚು ರಫ್ತಾದ ವಿಭಾಗದಲ್ಲಿ ಏಳನೇ ಸ್ಥಾನದಲ್ಲಿದ್ದ ಎಲೆಕ್ಟ್ರಾನಿಕ್ಸ್ ಸೆಕ್ಟರ್ ಇದೀಗ ಮೂರನೇ ಸ್ಥಾನಕ್ಕೆ ಏರಿದೆ. ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಭಾರತದ ಎಲೆಕ್ಟ್ರಾನಿಕ್ಸ್ ರಫ್ತು ಈ ಹಣಕಾಸು ವರ್ಷದೊಳಗೆ ಎರಡನೇ ಸ್ಥಾನಕ್ಕೆ ಏರುವ ಸಾಧ್ಯತೆ ಕಾಣುತ್ತಿದೆ.

ಪೆಟ್ರೋಲಿಯಂ ಸೆಕ್ಟರ್ ಭಾರತದ ಎರಡನೇ ಅತಿಹೆಚ್ಚು ರಫ್ತು ಕೊಡುಗೆ ನೀಡುತ್ತಾ ಬಂದಿದೆ. ಮೊದಲನೆಯ ಸ್ಥಾನ ಎಂಜಿನಿಯರಿಂಗ್ ಉಪಕರಣಗಳ ರಫ್ತು. ಭಾರತ ಬಹಳ ಹೆಚ್ಚು ಕಚ್ಛಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆಯಾದರೂ ಅದನ್ನು ಸಂಸ್ಕರಿಸಿ ವಿವಿಧ ಪೆಟ್ರೋಲಿಯಂ ಉತ್ಪನ್ನಗಳಾಗಿ ಪರಿವರ್ತಿಸಿ ಬೇರೆ ಬೇರೆ ದೇಶಗಳಿಗೆ ರಫ್ತು ಮಾಡುತ್ತದೆ. ಇದೀಗ ಅಮೆರಿಕದ ಒತ್ತಡದಿಂದಾಗಿ ರಷ್ಯನ್ ತೈಲ ಆಮದನ್ನು ಭಾರತ ಕಡಿಮೆ ಮಾಡುತ್ತಿದೆ. ಹೀಗಾಗಿ, ಭಾರತದ ಪೆಟ್ರೋಲಿಯಂ ರಫ್ತು ಕೂಡ ತುಸು ಕಡಿಮೆ ಆಗಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ಭಾರತದ ದೂರಗಾಮಿ ಯೋಜನೆ; 5ಜಿಗಿಂತ 1,000 ಪಟ್ಟು ಹೆಚ್ಚು ವೇಗದ ಇಂಟರ್ನೆಟ್ ನೀಡುವ 6ಜಿ ಅಭಿವೃದ್ಧಿಗೆ ಹೆಜ್ಜೆ

ಇದೇ ವೇಳೆ, ಐಫೋನ್ ಇತ್ಯಾದಿ ಎಲೆಕ್ಟ್ರಾನಿಕ್ಸ್ ವಸ್ತುಗಳ ರಫ್ತು ಕೂಡ ಗಣನೀಯವಾಗಿ ಹೆಚ್ಚುತ್ತಿದೆ. 2025-26ರ ಹಣಕಾಸು ವರ್ಷ ಮುಗಿಯುವ ವೇಳೆಗೆ ಭಾರತದ ಎಲೆಕ್ಟ್ರಾನಿಕ್ಸ್ ರಫ್ತು ಪೆಟ್ರೋಲಿಯಂ ಅನ್ನೂ ಮೀರಿಸುವ ಅಂದಾಜಿದೆ.

2021-22ರಲ್ಲಿ ಹೀಗಿತ್ತು ಭಾರತದ ವಿವಿಧ ಸೆಕ್ಟರ್​ಗಳ ರಫ್ತು ಶ್ರೇಯಾಂಕ

  1. ಎಂಜಿನಿಯರಿಂಗ್ ಉಪಕರಣಗಳು
  2. ಪೆಟ್ರೋಲಿಯಂ ಉತ್ಪನ್ನಗಳು
  3. ಆಭರಣಗಳು
  4. ರಾಸಾಯನಿಕ ಉತ್ಪನ್ನಗಳು
  5. ಔಷಧಗಳು
  6. ಸಿದ್ಧ ಉಡುಪುಗಳು
  7. ಎಲೆಕ್ಟ್ರಾನಿಕ್ಸ್ ವಸ್ತುಗಳು

2025-26ರಲ್ಲಿ ಟಾಪ್-3 ರಫ್ತು

  1. ಎಂಜಿನಿಯರಿಂಗ್ ಉತ್ಪನ್ನಗಳು
  2. ಪೆಟ್ರೋಲಿಯಂ ಉತ್ಪನ್ನಗಳು
  3. ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು

ಇದನ್ನೂ ಓದಿ: ಭಾರತದಿಂದ 7nm ಚಿಪ್ ಯೋಜನೆ; ಇದಾಗಲಿದೆ ಗೇಮ್ ಚೇಂಜರ್; ಯಾಕೆ ಈ ಚಿಪ್ ಮಹತ್ವದ್ದು ಗೊತ್ತಾ?

ಎಂಜಿನಿಯರಿಂಗ್ ಉತ್ಪನ್ನಗಳ ರಫ್ತು ಈ ವರ್ಷ (2025-26) ಶೇ. 5.35ರಷ್ಟು ಹೆಚ್ಚಳಗೊಂಡು 59.3 ಬಿಲಿಯನ್ ಡಾಲರ್ ಮೊತ್ತ ಮುಟ್ಟಿದೆ. ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಶೇ. 16.4ರಷ್ಟು ಕಡಿಮೆಗೊಂಡಿವೆ. ಇನ್ನು ಎಲೆಕ್ಟ್ರಾನಿಕ್ಸ್ ರಫ್ತು ಮೂರು ವರ್ಷಗಳ ಹಿಂದೆ (2022-23) 23.5 ಬಿಲಿಯನ್ ಡಾಲರ್ ಇದ್ದದ್ದು 2024-25ರಲ್ಲಿ 38.5 ಬಿಲಿಯನ್ ಡಾಲರ್​ಗೆ ಏರಿದೆ. ಈ ಹಣಕಾಸು ವರ್ಷದಲ್ಲಿ ಇದು 2023ರದಕ್ಕಿಂತ ಎರಡು ಪಟ್ಟು ಹೆಚ್ಚುವ ನಿರೀಕ್ಷೆ ಇದೆ. ಇದು ಆದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಮೀರಿಸಿ ಎರಡನೇ ಸ್ಥಾನ ಅಲಂಕರಿಸಲಿದೆ ಎಲೆಕ್ಟ್ರಾನಿಕ್ಸ್ ರಫ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ