
ನವದೆಹಲಿ, ನವೆಂಬರ್ 3: ಅಮೆರಿಕ ಟ್ಯಾರಿಫ್ ವಿಧಿಸಿದ ಬಳಿಕ ಭಾರತದ ರಫ್ತು ಗಣನೀಯವಾಗಿ ಕಡಿಮೆ ಆಗುತ್ತಿದೆ. ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (ಜಿಟಿಆರ್ಐ) ಬಿಡುಗಡೆ ಮಾಡಿದ ದತ್ತಾಂಶವು ಇದಕ್ಕೆ ಇಂಬು ಕೊಡುತ್ತಿದೆ. ಇದರ ವರದಿ ಪ್ರಕಾರ 2025ರ ಮೇ ತಿಂಗಳಿಂದ ಸೆಪ್ಟೆಂಬರ್ವರೆಗೂ ಅಮೆರಿಕಕ್ಕೆ ಆದ ಭಾರತದ ರಫ್ತಿನಲ್ಲಿ (India’s exports to US) ಶೇ. 37.5ರಷ್ಟು ಇಳಿಕೆ ಆಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಟ್ಯಾರಿಫ್ ಹಾಕಲು ಶುರು ಮಾಡಿದ್ದು ಅದೇ ಅವಧಿಯಲ್ಲೇ. ಹೀಗಾಗಿ, ಆಮದು ಸುಂಕಕ್ಕೂ ಭಾರತದ ರಫ್ತು ಇಳಿಕೆಗೂ ನೇರ ಸಂಬಂಧ ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಶೇ. 37ರಷ್ಟು ರಫ್ತು ಇಳಿಕೆಯು ಭಾರತಕ್ಕೆ ಇತ್ತೀಚಿನ ವರ್ಷಗಳಲ್ಲಿ ಎಂದೂ ಆಗಿರಲಿಲ್ಲ. ಭಾರತದ ಹೆಚ್ಚಿನ ರಫ್ತು ಅಮೆರಿಕಕ್ಕೆ ಹೋಗುತ್ತದೆ. ಹೀಗಾಗಿ, ಅಮೆರಿಕದ ಸುಂಕ ಕ್ರಮವು ಭಾರತದ ಮೇಲೆ ಪರಿಣಾಮ ಬೀರುತ್ತಿದೆ. ಏಪ್ರಿಲ್ ತಿಂಗಳಲ್ಲಿ ಅಮೆರಿಕ ಶೇ 10ರಷ್ಟು ಟ್ಯಾರಿಫ್ ವಿಧಿಸಿತು. ಆಗಸ್ಟ್ನಲ್ಲಿ ಇದು ಶೇ. 25ಕ್ಕೆ ಏರಿತು. ನಂತರ ಅದೇ ಆಗಸ್ಟ್ ಕೊನೆಯಲ್ಲಿ ಟ್ಯಾರಿಫ್ ಶೇ. 50ಕ್ಕೆ ಏರಿತು. ಇದರ ಪರಿಣಾಮವಾಗಿ ಐದು ತಿಂಗಳಲ್ಲಿ ಭಾರತದ ರಫ್ತು 8.8 ಬಿಲಿಯನ್ ಡಾಲರ್ ಇದ್ದದ್ದು 5.5 ಬಿಲಿಯನ್ ಡಾಲರ್ಗೆ ಕುಸಿದಿದೆ.
ಇದನ್ನೂ ಓದಿ: ಒಂದು ತಿಂಗಳಲ್ಲಿ 2,070 ಕೋಟಿ, ಒಂದು ದಿನದಲ್ಲಿ 75 ಕೋಟಿ ಯುಪಿಐ ವಹಿವಾಟುಗಳು; ಇದು ಹೊಸ ದಾಖಲೆ
ಅಮೆರಿಕವು ಕೆಲ ಸರಕುಗಳಿಗೆ ಟ್ಯಾರಿಫ್ನಿಂದ ವಿನಾಯಿತಿ ಕೊಟ್ಟಿದೆ. ಅದರಲ್ಲಿ ಸ್ಮಾರ್ಟ್ಫೋನ್, ಫಾರ್ಮಾ ಸರಕುಗಳೂ ಸೇರಿವೆ. ಕುತೂಹಲ ಎಂದರೆ ಭಾರತದ ಈ ಎರಡು ಸೆಕ್ಟರ್ಗಳು ಮೇ ತಿಂಗಳಿಂದ ರಫ್ತಿನಲ್ಲಿ ತೀವ್ರ ಕುಸಿತ ಕಂಡಿವೆ. 2024ರ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ ಶೇ. 197ರಷ್ಟು ಹೆಚ್ಚಿದ್ದ ಭಾರತದ ಸ್ಮಾರ್ಟ್ಫೋನ್ ರಫ್ತು ಈ ವರ್ಷ ಇದೇ ಅವಧಿಯಲ್ಲಿ ಶೇ. 58ರಷ್ಟು ಕುಸಿದಿದೆ ಎಂದು ಹೇಳಲಾಗಿದೆ.
2025ರ ಮೇ ತಿಂಗಳಲ್ಲಿ ಸ್ಮಾರ್ಟ್ಫೋನ್ ರಫ್ತು 2.29 ಬಿಲಿಯನ್ ಡಾಲರ್ನಷ್ಟು ಇತ್ತು. ಇದು 2025ರ ಮೇ ತಿಂಗಳಲ್ಲಿ 884.6 ಮಿಲಿಯನ್ ಡಾಲರ್ಗೆ ಇಳಿದಿದೆ. ಮೇ ತಿಂಗಳ ನಂತರ ಹಂತ ಹಂತವಾಗಿ ರಫ್ತು ಪ್ರಮಾಣ ಇಳಿಕೆ ಆಗುತ್ತಿದೆ. ಅಮೆರಿಕದ ಟ್ಯಾರಿಫ್ ನಿರ್ಬಂಧಗಳು ಇಲ್ಲದಿದ್ದರೂ ಇವುಗಳ ರಫ್ತು ಹೇಗೆ ಕಡಿಮೆ ಆಯಿತು ಎಂಬುದೇ ಸೋಜಿಗದ ಸಂಗತಿ.
ಇದನ್ನೂ ಓದಿ: ಅಕ್ಟೋಬರ್ನಲ್ಲಿ 1.96 ಲಕ್ಷ ಕೋಟಿ ರೂ ಜಿಎಸ್ಟಿ ಸಂಗ್ರಹ; ರೀಫಂಡ್ಗಳಲ್ಲಿ ಶೇ. 39ರಷ್ಟು ಏರಿಕೆ
ಸ್ಮಾರ್ಟ್ಫೋನ್ ರೀತಿ ಭಾರತದ ಫಾರ್ಮಾ ಸರಕುಗಳ ರಫ್ತು ಕೂಡ ಶೇ. 15.7ರಷ್ಟು ಕುಸಿತ ಕಂಡಿದೆ. 745.6 ಮಿಲಿಯನ್ ಡಾಲರ್ನಷ್ಟು ಆಗುತ್ತಿದ್ದ ರಫ್ತು 628.3 ಮಿಲಿಯನ್ ಡಾಲರ್ಗೆ ಇಳಿದಿದೆ.
ಹಾಗೆಯೇ ಔದ್ಯಮಿಕ ಲೋಹಗಳು, ವಾಹನ ಬಿಡಿಭಾಗಗಳು, ಕಬ್ಬಿಣ, ಉಕ್ಕು, ಜವಳಿ, ಆಭರಣ, ರಾಸಾಯನಿಕ, ಕೃಷಿ ಆಹಾರ, ಯಂತ್ರೋಪಕರಣ ಇತ್ಯಾದಿಗಳ ರಫ್ತಿನಲ್ಲೂ ಇಳಿಮುಖವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ