ನವದೆಹಲಿ, ಅಕ್ಟೋಬರ್ 6: ಭಾರತದ ವಿದೇಶ ವಿನಿಮಯ ಮೀಸಲು ನಿಧಿಯ ಓಟ ಹೊಸ ಮೈಲಿಗಲ್ಲು ಮುಟ್ಟಿದೆ. ಫಾರೆಕ್ಸ್ ರಿಸರ್ವ್ಸ್ 700 ಬಿಲಿಯನ್ ಡಾಲರ್ ಗಡಿ ದಾಟಿದೆ. ಆರ್ಬಿಐ ಮೊನ್ನೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಸೆಪ್ಟೆಂಬರ್ 27ರಂದು ಫಾರೆಕ್ಸ್ ರಿಸರ್ವ್ಸ್ 704.89 ಬಿಲಿಯನ್ ಡಾಲರ್ ಆಗಿದೆ. ಆ ಒಂದು ವಾರದಲ್ಲೇ ಬರೋಬ್ಬರಿ 12.6 ಬಿಲಿಯನ್ ಡಾಲರ್ನಷ್ಟು ನಿಧಿ ಹೆಚ್ಚಳವಾಗಿದೆ. ಕಳೆದ ಒಂದು ವರ್ಷದಲ್ಲೇ ಒಂದು ವಾರದಲ್ಲಿ ಕಂಡ ಅತಿದೊಡ್ಡ ಏರಿಕೆ ಇದಾಗಿದೆ. ಈ ವರ್ಷ ಫಾರೆಕ್ಸ್ ರಿಸರ್ವ್ಸ್ನಲ್ಲಿ ಇದೂವರೆಗೂ 87 ಬಿಲಿಯನ್ ಡಾಲರ್ಗೂ ಅಧಿಕ ಮೊತ್ತದಷ್ಟು ಹೆಚ್ಚಳವಾಗಿದೆ. 2023ರಲ್ಲಿ ಇಡೀ ವರ್ಷದಲ್ಲಿ 62 ಬಿಲಿಯನ್ ಡಾಲರ್ ಏರಿಕೆ ಆಗಿತ್ತು.
ಸೆಪ್ಟೆಂಬರ್ 27ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ನಲ್ಲಿ ಆದ 12 ಬಿಲಿಯನ್ ಡಾಲರ್ ಏರಿಕೆಯಲ್ಲಿ 7.8 ಬಿಲಿಯನ್ ಡಾಲರ್ನಷ್ಟು ಮೌಲ್ಯಗಳಿಕೆಯೇ ಇದೆ. ಅಮೆರಿಕದ ಟ್ರೆಷರಿ ಯೀಲ್ಡ್ ಇಳಿಕೆಯಾಗಿರುವುದು, ಡಾಲರ್ ದುರ್ಬಲಗೊಂಡಿರುವುದು ಮತ್ತು ಚಿನ್ನದ ಬೆಲೆ ಏರಿರುವುದು ಇದಕ್ಕೆ ಕಾರಣ. ಹಾಗೆಯೇ, ಆ ವಾರ ಆರ್ಬಿಐ 4.8 ಬಿಲಿಯನ್ ಡಾಲರ್ ಮೌಲ್ಯದ ಡಾಲರ್ ಕರೆನ್ಸಿಯನ್ನು ಖರೀದಿಸಿದೆ. ಇದರಿಂದಾಗಿ ವಿದೇಶ ವಿನಿಮಯ ಮೀಸಲು ನಿಧಿಯಲ್ಲಿ ಗಣನೀಯ ಹೆಚ್ಚಳವಾಗಿದೆ.
ಇದನ್ನೂ ಓದಿ: 75 ವರ್ಷದಲ್ಲಿ 2,730; 5 ವರ್ಷದಲ್ಲೇ 2,000; ಭಾರತದ ತಲಾದಾಯ ದ್ವಿಗುಣಗೊಳ್ಳಲಿದೆ ಎಂದ ನಿರ್ಮಲಾ ಸೀತಾರಾಮನ್
ಭಾರತವು 700 ಬಿಲಿಯನ್ ಡಾಲರ್ ಮೊತ್ತದ ಫಾರೆಕ್ಸ್ ರಿಸರ್ವ್ಸ್ ಹೊಂದಿದೆ. ಈ ಮೈಲಿಗಲ್ಲು ಮುಟ್ಟಿದ ವಿಶ್ವದ ನಾಲ್ಕನೇ ದೇಶವಾಗಿದೆ. ಚೀನಾ, ಜಪಾನ್ ಮತ್ತು ಸ್ವಿಟ್ಜರ್ಲ್ಯಾಂಡ್ ದೇಶಗಳ ಸೆಂಟ್ರಲ್ ಬ್ಯಾಂಕ್ಗಳು ಮಾತ್ರವೇ ಹೆಚ್ಚು ಫಾರೆಕ್ಸ್ ರಿಸರ್ವ್ಸ್ ಆಸ್ತಿ ಹೊಂದಿರುವುದು.
ಚೀನಾ ಬಳಿ 3.2 ಟ್ರಿಲಿಯನ್ ಡಾಲರ್, ಜಪಾನ್ ಬಳಿ 1.2 ಟ್ರಿಲಿಯನ್ ಡಾಲರ್, ಮತ್ತು ಸ್ವಿಟ್ಜರ್ಲ್ಯಾಂಡ್ ಬಳಿ 802 ಬಿಲಿಯನ್ ಡಾಲರ್ನಷ್ಟು ಫಾರೆಕ್ಸ್ ರಿಸರ್ವ್ಸ್ ಇದೆ. ರಷ್ಯಾ ಕೂಡ ಕ್ರಮೇಣವಾಗಿ ಫಾರೆಕ್ಸ್ ರಿಸರ್ವ್ಸ್ ನಿಧಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಅದರ ಬಳಿ 625 ಬಿಲಿಯನ್ ಡಾಲರ್ನಷ್ಟು ನಿಧಿ ಇದೆ.
ಫಾರೆಕ್ಸ್ ರಿಸರ್ವ್ಸ್ನಲ್ಲಿ ಹೆಚ್ಚಿನ ಆಸ್ತಿ ಇದ್ದರೆ ಆಮದು ರಫ್ತು ವ್ಯವಹಾರ ಸುಗಮಗೊಳ್ಳುತ್ತದೆ. ಕರೆನ್ಸಿ ಮೌಲ್ಯದ ಬಗ್ಗೆ ಸೆಂಟ್ರಲ್ ಬ್ಯಾಂಕ್ ಹೆಚ್ಚು ನಿಯಂತ್ರಣ ಸಾಧಿಸಬಹುದು. ದೊಡ್ಡ ಪ್ರಮಾಣದ ಆಮದನ್ನು ತಡೆದುಕೊಳ್ಳುವ ಶಕ್ತಿ ಸಿಗುತ್ತದೆ.
ಇದನ್ನೂ ಓದಿ: ಹೊತ್ತಿ ಉರಿಯುವ ಭೀತಿಯಲ್ಲಿ ಮಧ್ಯಪ್ರಾಚ್ಯ; ಭಾರತದ ಆರ್ಥಿಕತೆಯ ಮೇಲೇನು ಪರಿಣಾಮಗಳು?
2013ರಲ್ಲಿ ಭಾರತದ ಸ್ಥೂಲ ಆರ್ಥಿಕತೆಯ ಅಂಶಗಳು ದುರ್ಬಲಗೊಂಡ ಸಂದರ್ಭದಲ್ಲಿ ವಿದೇಶೀ ಹೂಡಿಕೆದಾರರು ಭಾರತದಿಂದ ಕಾಲ್ತೆಗೆದಿದ್ದರು. ಅಂಥ ಸಂದರ್ಭಕ್ಕೆ ಮುಂಜಾಗ್ರತೆಯಾಗಿ ಫಾರೆಕ್ಸ್ ರಿಸರ್ವ್ಸ್ ಅನ್ನು ಬಲಪಡಿಸಲು ಆರ್ಬಿಐ ನಿರ್ಧರಿಸಿತು. ಆಗನಿಂದಲೂ ಫಾರೆಕ್ಸ್ ರಿಸರ್ವ್ಸ್ ಅನ್ನು ಹೆಚ್ಚಿಸುವತ್ತ ಸೆಂಟ್ರಲ್ ಬ್ಯಾಂಕ್ ಗಮನ ಹರಿಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ