75 ವರ್ಷದಲ್ಲಿ 2,730; 5 ವರ್ಷದಲ್ಲೇ 2,000; ಭಾರತದ ತಲಾದಾಯ ದ್ವಿಗುಣಗೊಳ್ಳಲಿದೆ ಎಂದ ನಿರ್ಮಲಾ ಸೀತಾರಾಮನ್

Per capita income to India to double in 5 years: ಭಾರತ ಐದನೇ ಅತಿದೊಡ್ಡ ಆರ್ಥಿಕತೆಯಾದರೂ ತಲಾದಾಯದಲ್ಲಿ ಬಹಳ ಹಿಂದುಳಿದಿದೆ. ಮುಂಬರುವ ದಿನಗಳಲ್ಲಿ ಭಾರತದ ತಲಾದಾಯ ಗಣನೀಯವಾಗಿ ಹೆಚ್ಚಲಿದೆ ಎಂದು ಸರ್ಕಾರ ಹೇಳುತ್ತಿದೆ. 2,730 ಡಾಲರ್ ಮಟ್ಟದ ತಲಾದಾಯ ಪಡೆಯಲು ಭಾರತಕ್ಕೆ 75 ವರ್ಷ ಬೇಕಾಯಿತು. ಇನ್ನೈದು ವರ್ಷದಲ್ಲೇ 2,000 ಡಾಲರ್ ತಲಾದಾಯ ಹೆಚ್ಚಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

75 ವರ್ಷದಲ್ಲಿ 2,730; 5 ವರ್ಷದಲ್ಲೇ 2,000; ಭಾರತದ ತಲಾದಾಯ ದ್ವಿಗುಣಗೊಳ್ಳಲಿದೆ ಎಂದ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Follow us
|

Updated on: Oct 04, 2024 | 3:25 PM

ನವದೆಹಲಿ, ಅಕ್ಟೋಬರ್ 4: ಭಾರತದ ಜಿಡಿಪಿ ತಲಾದಾಯ ಇನ್ನೈದು ವರ್ಷದಲ್ಲಿ ಬಹುತೇಕ ದ್ವಿಗುಣಗೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಶದ ರಾಜಧಾನಿ ನಗರಿಯಲ್ಲಿ ನಡೆದ ಕೌಟಿಲ್ಯ ಆರ್ಥಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಚಿವೆ, ಮುಂಬರುವ ದಶಕಗಳಲ್ಲಿ ಸರ್ಕಾರದ ರಚನಾತ್ಮಕ ಸುಧಾರಣೆಗಳ ಪರಿಣಾಮವಾಗಿ ಸಾಮಾನ್ಯ ವ್ಯಕ್ತಿಯ ಜೀವನ ಮಟ್ಟದಲ್ಲಿ ಬಹಳಷ್ಟು ಸುಧಾರಣೆಗಳನ್ನು ಕಾಣಬಹುದು ಎಂದಿದ್ದಾರೆ. ಭಾರತ 2,730 ಡಾಲರ್ ತಲಾದಾಯ ಮಟ್ಟ ತಲುಪಲು 75 ವರ್ಷ ಬೇಕಾಯಿತು. ಇನ್ನೈದೇ ವರ್ಷದಲ್ಲಿ ತಲಾದಾಯ ಮತ್ತಷ್ಟು 2,000 ಡಾಲರ್ ಏರಿಕೆ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದ ಭಾರತ ಕೇವಲ ಐದು ವರ್ಷದಲ್ಲಿ ಐದನೇ ಸ್ಥಾನಕ್ಕೆ ಏರಿದೆ. ಇದು ಭಾರತ ಸಾಧಿಸಿದ ಆರ್ಥಿಕ ಪ್ರಗತಿಯ ಸಂಕೇತವಾಗಿದೆ. 2,730 ಡಾಲರ್​ಗಳ ತಲಾದಾಯ ಮಟ್ಟ ತಲುಪಲು ನಮಗೆ 75 ವರ್ಷ ಬೇಕಾಯಿತು. ಐಎಂಎಫ್ ಅಂದಾಜು ಪ್ರಕಾರ ಮುಂದಿನ ಐದು ವರ್ಷದಲ್ಲಿ ತಲಾದಾಯ 2,000 ಡಾಲರ್​ನಷ್ಟು ಏರಲಿದೆ. ಮುಂಬರುವ ದಶಕ ಭಾರತದ ಯುಗವಾಗಲಿದೆ ಎಂದಿದ್ದಾರೆ ನಿರ್ಮಲಾ ಸೀತಾರಾಮನ್.

ಇದನ್ನೂ ಓದಿ: ಹೊತ್ತಿ ಉರಿಯುವ ಭೀತಿಯಲ್ಲಿ ಮಧ್ಯಪ್ರಾಚ್ಯ; ಭಾರತದ ಆರ್ಥಿಕತೆಯ ಮೇಲೇನು ಪರಿಣಾಮಗಳು?

ಭಾರತದಲ್ಲಿ ಅಸಮಾನತೆ ಕಡಿಮೆ ಆಗುತ್ತಿರುವ ಜೊತೆಜೊತೆಗೆ ತಲಾದಾಯವೂ ಏರಿಕೆ ಆಗುತ್ತಿರುವುದು ಗಮನಾರ್ಹ. ಗ್ರಾಮೀಣ ಭಾಗದಲ್ಲಿ ಆದಾಯ ಅಸಮಾನತೆ ಸೂಚಿ 0.283ರಿಂದ 0.266ಕ್ಕೆ ಇಳಿದಿದೆ. ನಗರ ಭಾಗದಲ್ಲಿ 0.363ರಿಂದ 0.314ಕ್ಕೆ ಇಳಿದಿದೆ ಎಂದು ಕೇಂದ್ರ ಹಣಕಾಸು ಸಚಿವೆ ತಿಳಿಸಿದ್ದಾರೆ.

‘ಕಳೆದ ಹತ್ತು ವರ್ಷಗಳಲ್ಲಿ ಆಗಿರುವ ಆರ್ಥಿಕ ಮತ್ತು ರಚನಾತ್ಮಕ ಕ್ರಮಗಳ ಪರಿಣಾಮವಾಗಿ ಈ ಸುಧಾರಣೆಗಳು ಮುಂದುವರಿಯಬಹುದು’ ಎಂದು ನಿರ್ಮಲಾ ಸೀತಾರಾಮನ್ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

2047ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷವಾಗುತ್ತದೆ. ಹೊಸ ಭಾರತದ ಯುಗದಲ್ಲಿರುವ ಪ್ರಮುಖ ಅಂಶಗಳು ಮುಂದುವರಿದ ದೇಶಗಳಿಗೆ ಸಾಮ್ಯತೆ ಹೊಂದಿರುತ್ತವೆ ಎಂದು ಅವರು ಆಶಿಸಿದ್ದಾರೆ.

ಇದನ್ನೂ ಓದಿ: BSNL 4G Offer: ಬಿಎಸ್ಸೆನ್ನೆಲ್​ನಿಂದ 24 ಜಿಬಿ ಡಾಟಾ ಉಚಿತ; 25ನೇ ಸಂಸ್ಥಾಪನಾ ವರ್ಷದ ನಿಮಿತ್ತ ಗ್ರಾಹಕರು ಈ ಫ್ರೀ ಡಾಟಾ ಆಫರ್ ಪಡೆಯುವುದು ಹೇಗೆ?

ಹಣಕಾಸು ಸಂಸ್ಥೆಗಳ ಸ್ಥಿತಿ ಉತ್ತಮ

ದೇಶದ ಹಣಕಾಸು ವ್ಯವಸ್ಥೆ ಬಲಿಷ್ಠವಾಗಿದೆ. ಬಂಡವಾಳ ಇಳಿಯುತ್ತಿಲ್ಲ. ಆದಾಯ ಹೆಚ್ಚುತ್ತಿದೆ. ಕೆಟ್ಟ ಸಾಲ (ಎನ್​ಪಿಎ) ಪ್ರಮಾಣ ಬಹಳಷ್ಟು ಕಡಿಮೆ ಇದೆ. ಬ್ಯಾಂಕುಗಳ ಬಳಿ ಈಗ ಸಾಲ ವಸೂಲಿ ಮಾಡುವ ಸಮರ್ಪಕ ವ್ಯವಸ್ಥೆಯ ಬಲ ಇದೆ. ಈ ಹಣಕಾಸು ವ್ಯವಸ್ಥೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತಮ್ಮ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ