ಹೈಬಾಕ್ಸ್ ಸ್ಕ್ಯಾಮ್; ದಿನಕ್ಕೆ 5 ಪರ್ಸೆಂಟ್ ಆಮಿಷಕ್ಕೆ ಮರುಳಾದ ಜನರು; ತನಿಖೆ ಎದುರಿಸುತ್ತಿರುವ ಫೋನ್​ಪೇ, ಈಸ್​ಬಜ್

|

Updated on: Oct 04, 2024 | 4:57 PM

Hibox scam, police probe roles of phonepe, easebuzz: ದಿನಕ್ಕೆ ಶೇ. 1ರಿಂದ 5ರ ಶ್ರೇಣಿಯಲ್ಲಿ ಬಡ್ಡಿ ಕೊಡುವುದಾಗಿ ಆಮಿಷವೊಡ್ಡಿ ಹೂಡಿಕೆ ಪಡೆದು ವಂಚಿಸಿರುವ ಆರೋಪ ಹೈಬಾಕ್ಸ್ ಮೊಬೈಲ್ ಆ್ಯಪ್ ಮೇಲೆ ಬಂದಿದೆ. ಸುಮಾರು 30,000 ಜನರು ಇದರಲ್ಲಿ ಹೂಡಿಕೆ ಮಾಡಿದ್ದು 500 ಕೋಟಿ ರೂ ಮೊತ್ತದ ಹಗರಣವಾಗಿದೆ. ಈ ಸ್ಕ್ಯಾಮ್​ನಲ್ಲಿ ಪೇಮೆಂಟ್ ಪ್ಲಾಟ್​ಫಾರ್ಮ್​ಗಳಾದ ಫೋನ್​ಪೇ, ಈಸ್​ಬಜ್ ಪಾತ್ರವಿದೆಯಾ ಎಂದು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹೈಬಾಕ್ಸ್ ಸ್ಕ್ಯಾಮ್; ದಿನಕ್ಕೆ 5 ಪರ್ಸೆಂಟ್ ಆಮಿಷಕ್ಕೆ ಮರುಳಾದ ಜನರು; ತನಿಖೆ ಎದುರಿಸುತ್ತಿರುವ ಫೋನ್​ಪೇ, ಈಸ್​ಬಜ್
ಹೈಬಾಕ್ಸ್ ಸ್ಕ್ಯಾಮ್
Follow us on

ನವದೆಹಲಿ, ಅಕ್ಟೋಬರ್ 4: ಅತಿಯಾದ ಲಾಭದ ಆಸೆಗೆ ಬಿದ್ದು ಜನರು ಹಣ ಕಳೆದುಕೊಳ್ಳುವ ಘಟನೆಗಳು ಮೊದಲಿಂದಲೂ ಜರುಗುತ್ತಲೇ ಇವೆ. ಬಹಳಷ್ಟು ಹಗರಣಗಳು ಸಾಲು ಸಾಲಾಗಿ ಬೆಳಕಿಗೆ ಬರುತ್ತಿದ್ದರೂ ಜನರು ಹೊಸ ಸ್ಕ್ಯಾಮ್​ಗೆ ಸಿಕ್ಕಿಬೀಳುವುದು ಮುಂದುವರಿದೇ ಇದೆ. ಇದೀಗ ಐಬಾಕ್ಸ್ ಸ್ಕ್ಯಾಮ್ ಸದ್ದು ಮಾಡುತ್ತಿದೆ. ದೆಹಲಿ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ. ಅತಿಯಾದ ಬಡ್ಡಿಯಾಸೆಗೆ ಸಿಕ್ಕು ಬಹಳಷ್ಟು ಹೂಡಿಕೆದಾರರ ಹಣ ಸಿಲುಕಿಕೊಂಡಿದೆ. 500 ಕೋಟಿ ರೂ ಮೊತ್ತದ ಹೈಬಾಕ್ಸ್ ಸ್ಕ್ಯಾಮ್​ನಲ್ಲಿ ಫೋನ್​ಪೇ, ಈಸ್​ಬಜ್ ಪ್ಲಾಟ್​ಫಾರ್ಮ್​ಗಳ ಪಾತ್ರ ಇದೆಯಾ ಎಂದು ಸೈಬರ್ ಕ್ರೈಮ್ ಯೂನಿಟ್​ನ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ವರದಿ ಪ್ರಕಾರ ಹೈಬಾಕ್ಸ್ ಮೊಬೈಲ್ ಆ್ಯಪ್​ನಲ್ಲಿ ಹೂಡಿಕೆ ಮಾಡುವ ಹಣಕ್ಕೆ ದಿನಕ್ಕೆ ಶೇ. 1ರಿಂದ 5ರಷ್ಟು ಬಡ್ಡಿ ನೀಡುವ ಆಫರ್ ನೀಡಲಾಗಿತ್ತು. ಅಂದರೆ ತಿಂಗಳಿಗೆ ಶೇ. 30ರಿಂದ ಶೇ 150ರಷ್ಟು ಬಡ್ಡಿ ಎಂದರೆ ತೀರಾ ಅಸಹಜ ರಿಟರ್ನ್ಸ್. 30,000 ಜನರು ಇದರಲ್ಲಿ ಹೂಡಿಕೆ ಮಾಡಿರುವುದು ತಿಳಿದುಬಂದಿದೆ. ಇಲ್ಲಿಯವರೆಗೆ 127 ದೂರುಗಳು ಈ ಸ್ಕ್ಯಾಮ್​ನಲ್ಲಿ ದಾಖಲಾಗಿವೆ.

ಫೋನ್​ಪೇ ಪಾತ್ರ ಏನು?

ಹೈಬಾಕ್ಸ್ ಮೊಬೈಲ್ ಆ್ಯಪ್ ಮೂಲಕ ಜನರನ್ನು ಹೂಡಿಕೆಗೆ ಸೆಳೆಯುತ್ತಿತ್ತು. ಇದಕ್ಕೆ ಹಣ ಪಾವತಿಗೆ ಫೋನ್​ಪೇ ಮತ್ತು ಈಸ್​ಬಜ್ ಪ್ಲಾಟ್​ಫಾರ್ಮ್ ಬಳಕೆ ಮಾಡಲಾಗುತ್ತಿತ್ತು. ಈ ಅಸಹಜ ಲಾಭದ ಆಫರ್ ಮಾಡುವ ಕಂಪನಿ ಬಗ್ಗೆ ಎಚ್ಚರಹಿಸಲು ಫೋನ್​ಪೇ ಮತ್ತು ಈಸ್​ಬಜ್ ನಿರ್ಲಕ್ಷ್ಯ ತೋರಿತಾ ಎಂಬುದನ್ನು ಕಂಡು ಹಿಡಿಯಲು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: 75 ವರ್ಷದಲ್ಲಿ 2,730; 5 ವರ್ಷದಲ್ಲೇ 2,000; ಭಾರತದ ತಲಾದಾಯ ದ್ವಿಗುಣಗೊಳ್ಳಲಿದೆ ಎಂದ ನಿರ್ಮಲಾ ಸೀತಾರಾಮನ್

ತಾಂತ್ರಿಕವಾಗಿ ನೋಡುವುದಾದರೆ, ಮರ್ಚಂಟ್ ಅಕೌಂಟ್ ತೆರೆಯಲು ಆರ್​ಬಿಐನ ಮಾರ್ಗಸೂಚಿಗಳಿವೆ. ಈ ನಿಯಮ ಉಲ್ಲಂಘಿಸಿ ಹೈಬಾಕ್ಸ್​ಗೆ ಮರ್ಚಂಟ್ ಅಕೌಂಟ್ ತೆರೆಯಲಾಗಿದೆಯಾ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಒಂದು ವೇಳೆ, ಆರ್​ಬಿಐ ಗೈಡ್​ಲೈನ್ಸ್ ಅನ್ನು ಧಿಕ್ಕರಿಸಿದ್ದಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಆದ ಗತಿ ಫೋನ್​ಪೇ, ಈಸ್​ಬಜ್​ಗೂ ಆಗುವ ಸಾಧ್ಯತೆ ಇಲ್ಲದಿಲ್ಲ.

ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ಗಳ ಪಾತ್ರ….

ಎಲ್ವಿಶ್ ಯಾದವ್, ಭಾರ್ತಿ ಸಿಂಗ್, ಸೌರವ್ ಜೋಷಿ, ಅಭಿಷೇಕ್ ಮಲ್ಹನ್, ಪೂರವ್ ಝಾ, ಹರ್ಷ್ ಲಿಂಬಚಿಯಾ, ಲಕ್ಷಯ್ ಚೌಧರಿ, ಆದರ್ಶ್ ಸಿಂಗ್, ಅಮಿತ್, ದಿಲ್​ರಾಜ್ ಸಿಂಗ್ ರಾವತ್ ಮೊದಲಾದ ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ಗಳು ಮತ್ತು ಯೂಟ್ಯೂಬರ್​​ಗಳು ಪ್ರತ್ಯಕವಾಗಿ ಮತ್ತು ಪರೋಕ್ಷವಾಗಿ ಹೈಬಾಕ್ಸ್ ಆ್ಯಪ್ ಅನ್ನು ಪ್ರಚಾರ ಮಾಡಿದ್ದರು. ಈ 500 ಕೋಟಿ ಹಗರಣದಲ್ಲಿ ಅವರು ದುರುದ್ದೇಶಪೂರ್ವಕವಾಗಿ ಭಾಗಿಯಾಗಿದ್ದಾರಾ ಎಂಬುದನ್ನು ನೋಡಲಾಗುತ್ತಿದೆ. ಈ ಸೆಲಬ್ರಿಟಿಗಳಿಗೆ ಪೊಲೀಸರು ನೋಟೀಸ್ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಸೇರಿ ಇನ್ನೂ 4 ಕಡೆ ಹೊಸ ಆ್ಯಪಲ್ ಸ್ಟೋರ್ಸ್; ಐಫೋನ್ 16 ಪ್ರೋ ಫೋನ್​ಗಳೂ ಭಾರತದಲ್ಲೇ ತಯಾರಿಕೆ

ಅಷ್ಟೇ ಅಲ್ಲದೇ, ಈ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿವೆ ಎನ್ನಲಾದ ಸುಮಾರು 20 ಸಂಸ್ಥೆಗಳ ಮೇಲೆ ತನಿಖಾಧಿಕಾರಿಗಳ ಕಣ್ಣು ನೆಟ್ಟಿದೆ.

ಇಲ್ಲಿಯವರೆಗೆ 127 ದೂರುಗಳು ಸಲ್ಲಿಕೆ ಆಗಿವೆ. ಪೊಲೀಸರು ಈ ಹಗರಣದ ಕಿಂಗ್​ಪಿನ್ ಎನ್ನಲಾದ ಶಿವರಾಮ್ ಎಂಬಾತನನ್ನು ಬಂಧಿಸಿದ್ದಾರೆ. ಆತನ ನಾಲ್ಕು ಬೇರೆ ಬೇರೆ ಅಕೌಂಟ್​ಗಳಿಂದ 18 ಕೋಟಿ ರೂ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ