ಭಾರತದ ಜಿಡಿಪಿ ಈ ವರ್ಷ ಶೇ. 6.7-6.9ರಷ್ಟು ಬೆಳೆಯಬಹುದು: ಡುಲೋಟ್ ಅಂದಾಜು

Deloitte India report on India's GDP growth: ಭಾರತದ ಆರ್ಥಿಕತೆ ಈ ವರ್ಷ ಶೇ. 6.8ರಷ್ಟು ಬೆಳವಣಿಗೆ ಹೊಂದಬಹುದು ಎಂದು ಡುಲೋಟ್ ಇಂಡಿಯಾದ ಹೊಸ ವರದಿಯಲ್ಲಿ ಹೇಳಲಾಗಿದೆ. ಇಂಡಿಯಾ ಎಕನಾಮಿಕ್ ಔಟ್​ಲುಕ್ ವರದಿ ಪ್ರಕಾರ 2025-26ರಲ್ಲಿ ಭಾರತದ ಆರ್ಥಿಕ ವೃದ್ಧಿ ದರ ಶೇ. 6.7ರಿಂದ ಶೇ. 6.9ರ ಶ್ರೇಣಿಯಲ್ಲಿರಬಹುದು. ಆರ್​ಬಿಐ ಮಾಡಿದ್ದ ಅಂದಾಜು ಪ್ರಕಾರವೂ ಈ ವರ್ಷ ಭಾರತದ ಜಿಡಿಪಿ ಶೇ 6.8ರಷ್ಟು ಹೆಚ್ಚಬಹುದು.

ಭಾರತದ ಜಿಡಿಪಿ ಈ ವರ್ಷ ಶೇ. 6.7-6.9ರಷ್ಟು ಬೆಳೆಯಬಹುದು: ಡುಲೋಟ್ ಅಂದಾಜು
ಜಿಡಿಪಿ

Updated on: Oct 23, 2025 | 6:50 PM

ನವದೆಹಲಿ, ಅಕ್ಟೋಬರ್ 23: ಭಾರತದ ಆರ್ಥಿಕತೆ ಈ ವರ್ಷವೂ ಉತ್ತಮ ರೀತಿಯಲ್ಲಿ ಬೆಳೆಯುತ್ತದೆ ಎಂದು ಬಹಳಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಈ ಸಾಲಿಗೆ ಡುಲೋಟ್ ಇಂಡಿಯಾ (Deloitte India) ಸೇರಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಭಾರತದ ಜಿಡಿಪಿ (GDP) ಶೇ. 6.7ರಿಂದ ಶೇ. 6.9ರಷ್ಟು ಬೆಳೆಯಬಹುದು ಎಂದು ಡುಲೋಟ್ ಇಂಡಿಯಾ ಅಂದಾಜು ಮಾಡಿದೆ. ಅಮೆರಿಕದ ಸುಂಕಗಳ ಹೊರತಾಗಿಯೂ ಭಾರತ ಈ ಮಟ್ಟದ ಬೆಳವಣಿಗೆ ಕಾಯ್ದುಕೊಂಡು ಹೋಗುತ್ತಿರುವುದು ಗಮನಾರ್ಹ.

ಡುಲೋಟ್​ನ ‘ಇಂಡಿಯಾ ಎಕನಾಮಿಕ್ ಔಟ್​ಲುಕ್’ ವರದಿಯಲ್ಲಿ ಈ ಅಂದಾಉ ಮಾಡಲಾಗಿದೆ. ಈ ವರದಿ ಪ್ರಕಾರ ಭಾರತದ ಜಿಡಿಪಿ ಬೆಳವಣಿಗೆ 2025-26ರಲ್ಲಿ ಶೇ. 6.7 ಮತ್ತು ಶೇ. 6.9ರ ಮಧ್ಯೆ ಇರಬಹುದು. ಶೇ. 6.8ರ ಸರಾಸರಿಯಲ್ಲಿ ಬೆಳೆಯಬಹುದು. ಇದೇ ಸಂಸ್ಥೆ ತನ್ನ ಹಿಂದಿನ ವರದಿಯಲ್ಲಿ ಮಾಡಿದುದಕ್ಕಿಂತ 30 ಮೂಲಾಂಕಗಳಷ್ಟು ಹೆಚ್ಚು ಬೆಳವಣಿಗೆ ಹೊಂದಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಸೌದಿಯಲ್ಲಿ ಕರಾಳ ‘ಕಫಾಲ’ಕ್ಕೆ ತೆರೆ; ಜೀತದಿಂದ ಲಕ್ಷಾಂತರ ಭಾರತೀಯರು ಮುಕ್ತ; ಏನಿದು ಕಫಾಲ ಸಿಸ್ಟಂ?

ಆರ್​​ಬಿಐ ಕೂಡ ಭಾರತದ ಆರ್ಥಿಕತೆ ಈ ಹಣಕಾಸು ವರ್ಷ ಶೇ. 6.8ರಷ್ಟು ಹೆಚ್ಚಬಹುದು ಎಂದು ನಿರೀಕ್ಷಿಸಿದೆ. ವಿಶ್ವ ಬ್ಯಾಂಕ್, ಐಎಂಎಫ್ ಮೊದಲಾದ ಅಂತಾರಾಷ್ಟ್ರೀಯ ಸಂಸ್ಥೆಗಳೂ ಕೂಡ ಭಾರತದ ಜಿಡಿಪಿ ಬೆಳವಣಿಗೆ ಬಗ್ಗೆ ತಮ್ಮ ನಿರೀಕ್ಷೆಗಳನ್ನು ಹೆಚ್ಚಿಸಿವೆ.

ಐಎಂಎಫ್​ನ ಇತ್ತೀಚಿನ ವರದಿಯಲ್ಲಿ ಜಿಡಿಪಿ ಶೇ 6.6ರಷ್ಟು ವೃದ್ಧಿಸಬಹುದು ಎಂದು ಹೇಳಲಾಗಿದೆ. ಇದೇ ಐಎಂಎಫ್ ತನ್ನ ಹಿಂದಿನ ವರದಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ. 6.4ರಷ್ಟು ಏರಬಹುದು ಎಂದು ಹೇಳಿತ್ತು. ಈಗ ತನ್ನ ಅಭಿಪ್ರಾಯ ಪರಿಷ್ಕರಿಸಿದ್ದು, ಭಾರತ ಹೆಚ್ಚಿನ ಆರ್ಥಿಕ ಬೆಳವಣಿಗೆ ಹೊಂದುವ ಸಾಧ್ಯತೆಯನ್ನು ತೆರೆದಿಟ್ಟಿದೆ.

ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಐಎಂಎಫ್​ನಿಂದಲೂ ನಿರೀಕ್ಷೆ ಹೆಚ್ಚಳ; ಶೇ. 6.4ರಿಂದ ಶೇ. 6.6ಕ್ಕೆ ಅಂದಾಜು ಪರಿಷ್ಕರಣೆ

ಇನ್ನು, ವಿಶ್ವ ಬ್ಯಾಂಕ್ ಕೂಡ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ತನ್ನ ಅಂದಾಜನ್ನು ಶೇ. 6.3ರಿಂದ ಶೇ. 6.5ಕ್ಕೆ ಹೆಚ್ಚಿಸಿದೆ. ಹೆಚ್ಚಿನ ಸಂಸ್ಥೆಗಳು ಮತ್ತು ಆರ್ಥಿಕ ತಜ್ಞರು ಮಾಡಿರುವ ಅಂದಾಜು ಪ್ರಕಾರ ಭಾರತದ ಆರ್ಥಿಕ ಬೆಳವಣಿಗೆ ಈ ವರ್ಷ ಶೇ. 6.3ರಿಂದ ಶೇ. 6.9ರ ಶ್ರೇಣಿಯಲ್ಲಿ ಇರುವ ಸಾಧ್ಯತೆ ಇದೆ. ಈ ವರ್ಷದ ಮೊದಲ ಕ್ವಾರ್ಟರ್ ಆದ ಏಪ್ರಿಲ್​ನಿಂದ ಜೂನ್​ವರೆಗಿನ ಮೂರು ತಿಂಗಳಲ್ಲಿ ಭಾರತದ ಆರ್ಥಿಕತೆ ಶೇ. 7.8ರ ದರದಲ್ಲಿ ಬೆಳೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ