ವಿಶ್ವದ ಅತ್ಯುತ್ತಮ ಕನ್ಸೂಮರ್ ಬ್ಯಾಂಕ್, ಭಾರತದ ಅತ್ಯುತ್ತಮ ಬ್ಯಾಂಕ್; ಎಸ್ಬಿಐಗೆ ಎರಡು ಪ್ರಶಸ್ತಿ
SBI gets World's best consumer bank and India's best bank awards: ಗ್ಲೋಬಲ್ ಫೈನಾನ್ಸ್ ಸಂಸ್ಥೆ ಭಾರತದ ಎಸ್ಬಿಐ ಬ್ಯಾಂಕ್ಗೆ ಎರಡು ಪ್ರಶಸ್ತಿಗಳನ್ನು ನೀಡಿದೆ. ವಿಶ್ವದ ಅತ್ಯುತ್ತಮ ಕನ್ಸೂಮರ್ ಬ್ಯಾಂಕ್ ಮತ್ತು ಭಾರತದ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿಗಳು ಎಸ್ಬಿಐಗೆ ಸಂದಾಯವಾಗಿವೆ. ದೇಶದಲ್ಲಿ 52 ಕೋಟಿ ಗ್ರಾಹಕರನ್ನು ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಅತಿದೊಡ್ಡ ಬ್ಯಾಂಕ್ ಎನಿಸಿದೆ.

ನವದೆಹಲಿ, ಅಕ್ಟೋಬರ್ 23: ಭಾರತದ ನಂಬರ್ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಎನಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ (SBI) ಎರಡು ಪ್ರಶಸ್ತಿಗಳು ಸಿಕ್ಕಿವೆ. ಅಮೆರಿಕ ಮೂಲದ ಗ್ಲೋಬಲ್ ಫೈನಾನ್ಸ್ ಸಂಸ್ಥೆಯಿಂದ ಎಸ್ಬಿಐಗೆ ಎರಡು ಪ್ರಶಸ್ತಿಗಳ ಗೌರವ ಸಿಕ್ಕಿದೆ. 2025ರಲ್ಲಿ ವಿಶ್ವದ ಅತ್ಯುತ್ತಮ ಕನ್ಸೂಮರ್ ಬ್ಯಾಂಕ್ ಪ್ರಶಸ್ತಿ (World’s Best Consumer Bank), ಹಾಗೂ ಭಾರತದಲ್ಲಿ ಅತ್ಯುತ್ತಮ ಬ್ಯಾಂಕ್ (Best Bank in India) ಎನ್ನುವ ಪ್ರಶಸ್ತಿಗಳು ಎಸ್ಬಿಐಗೆ ದೊರಕಿವೆ. ವಿಶ್ವಬ್ಯಾಂಕ್ ಮತ್ತು ಐಎಂಎಫ್ನ ವಾರ್ಷಿಕ ಸಭೆಗಳಲ್ಲಿ ಈ ಅವಾರ್ಡ್ ನೀಡಲಾಗಿದೆ.
ಬಹಳ ಜನರು ಮೂಗು ಮುರಿಯುವ ಪಬ್ಲಿಕ್ ಸೆಕ್ಟರ್ನ ಬ್ಯಾಂಕ್ವೊಂದು ವಿಶ್ವ ಮಟ್ಟದಲ್ಲಿ ಛಾಪು ಮೂಡಿಸಿರುವುದು ಸಾಧಾರಣ ಸಂಗತಿ ಅಲ್ಲ. ಈ ಪ್ರಶಸ್ತಿಗೆ ಎಸ್ಬಿಐ ಪ್ರತಿಕ್ರಿಯಿಸಿದ್ದು, ಗ್ರಾಹಕರ ಸೇವೆಯಲ್ಲಿ ತಮ್ಮ ಬ್ಯಾಂಕ್ ತೋರಿರುವ ಬದ್ಧತೆಗೆ ಸಿಕ್ಕ ಮಾನ್ಯತೆ ಇದಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ಅಕ್ಟೋಬರ್ನಲ್ಲಿ ಅತಿಹೆಚ್ಚು ಫಿಕ್ಸೆಡ್ ಡೆಪಾಸಿಟ್ ರೇಟ್ ಕೊಡುವ ಬ್ಯಾಂಕುಗಳು
ವಿಶ್ವದ ದರ್ಜೆಯ ಬ್ಯಾಂಕಿಂಗ್ ಅನುಭವಗಳನ್ನು ಎಸ್ಬಿಐ ತನ್ನ ವ್ಯಾಪಕ ಪ್ರಮಾಣದ ಗ್ರಾಹಕರ ಸೇವೆಗೆ ಬಳಸಿಕೊಳ್ಳುತ್ತಿದೆ. ತಂತ್ರಜ್ಞಾನ ಮುನ್ನಡೆಯನ್ನೂ ಉಳಿಸಿಕೊಂಡು ದೇಶ ಎಲ್ಲಾ ರೀತಿಯ ಪ್ರದೇಶಗಳಲ್ಲಿ ಸೇವೆಗಳನ್ನು ವಿಸ್ತರಿಸುತ್ತಿದೆ. ಎಸ್ಬಿಐ ಈ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
52 ಕೋಟಿ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆ ನೀಡುವುದು, ದಿನಕ್ಕೆ 65,000 ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುತ್ತಿರುವುದು, ಇದಕ್ಕೆ ತಂತ್ರಜ್ಞಾನ ಮತ್ತು ಡಿಜಿಟಲೀಕರಣದಲ್ಲಿ ಸಾಕಷ್ಟು ಹೂಡಿಕೆಯ ಅಗತ್ಯ ಇದೆ. ಎಸ್ಬಿಐನ ಮೊಬೈಲ್ ಆ್ಯಪ್ ಅನ್ನು 10 ಕೋಟಿ ಗ್ರಾಹಕರು ಬಳಸುತ್ತಾರೆ. ನಿತ್ಯವೂ ಸಕ್ರಿಯವಾಗಿ ಮೊಬೈಲ್ ಆ್ಯಪ್ ಬಳಸುವ ಗ್ರಾಹಕರ ಸಂಖ್ಯೆ ಒಂದು ಕೋಟಿ ಇದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಛೇರ್ಮನ್ ಸಿಎಸ್ ಸೆಟ್ಟಿ ತಿಳಿಸಿದ್ದಾರೆ.
ಇದನ್ನೂ ಓದಿ: ಆರು ಲಕ್ಷ ಕೋಟಿ ರೂ..! ಈ ಬಾರಿಯ ದೀಪಾವಳಿ ಸೇಲ್ಸ್ ಹೊಸ ದಾಖಲೆ
ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಪೀಯೂಶ್ ಗೋಯಲ್ ಅವರು ಎರಡು ಪ್ರಶಸ್ತಿ ಪಡೆದ ಎಸ್ಬಿಐಗೆ ಅಭಿನಂದನೆ ಸಲ್ಲಿಸಿದ್ದಾರೆ. ಭಾರತದ ಪ್ರಗತಿಗೆ ಎಸ್ಬಿಐ ಕೊಡುಗೆ ನೀಡುತ್ತಿದೆ ಎಂದು ಗೋಯಲ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




