ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಐಎಂಎಫ್ನಿಂದಲೂ ನಿರೀಕ್ಷೆ ಹೆಚ್ಚಳ; ಶೇ. 6.4ರಿಂದ ಶೇ. 6.6ಕ್ಕೆ ಅಂದಾಜು ಪರಿಷ್ಕರಣೆ
IMF expects Indian economy to perform better this year: ಜುಲೈ ತಿಂಗಳಲ್ಲಿ ಪ್ರಕಟವಾದ ಐಎಂಎಫ್ನ ವರ್ಲ್ಡ್ ಎಕನಾಮಿಕ್ ಔಟ್ಲುಕ್ ವರದಿಯಲ್ಲಿ ಭಾರತದ ಜಿಡಿಪಿ ಶೇ. 6.4ರಷ್ಟು ಹೆಚ್ಚಬಹುದು ಎಂದಿತ್ತು. ಈಗ ಪ್ರಕಟವಾಗಿರುವ ವರದಿಯಲ್ಲಿ ಈ ಅಭಿಪ್ರಾಯ ಬದಲಾಗಿದೆ. ಭಾರತದ ಆರ್ಥಿಕ ಬೆಳವಣಿ ದರ ಶೇ 6.6 ಇರಬಹುದು ಎಂದಿದೆ. ವಿಶ್ವಬ್ಯಾಂಕ್ ಕೂಡ ಇತ್ತೀಚೆಗೆ ತನ್ನ ಅನಿಸಿಕೆ ಬದಲಿಸಿ, ಭಾರತದ ಜಿಡಿಪಿ ದರ ಶೇ. 6.5 ಇರಬಹುದು ಎಂದಿತ್ತು.

ನವದೆಹಲಿ, ಅಕ್ಟೋಬರ್ 15: ಅಮೆರಿಕದ ಟ್ಯಾರಿಫ್ ಒತ್ತಡದ ನಡುವೆಯೂ ಭಾರತದ ಮುಂದಿನ ಆರ್ಥಿಕ ಬೆಳವಣಿಗೆಯ ದಾರಿ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ಹೆಚ್ಚು ಆತ್ಮವಿಶ್ವಾಸ ಹೊಂದಿವೆ. ಇತ್ತೀಚೆಗಷ್ಟೇ ವಿಶ್ವಬ್ಯಾಂಕ್ ಭಾರತ ಈ ಹಣಕಾಸು ವರ್ಷ ಶೇ. 6.5ರಷ್ಟು ಜಿಡಿಪಿ ಹೆಚ್ಚಳ ಕಾಣಬಹುದು ಎಂದು ಹೇಳಿತ್ತು. ಇದೀಗ ಅಂತಾರಾಷ್ಟ್ರೀಯ ಹಣಕಾಸು ನಿಧಿ, ಐಎಂಎಫ್ (IMF) ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭಾರತದ ಆರ್ಥಿಕ ಬೆಳವಣಿಗೆ (GDP rate) ಶೇ. 6.6ರಷ್ಟು ದಾಖಲಾಗಬಹುದು ಎಂದು ಹೇಳಿದೆ.
ವಿಶ್ವಬ್ಯಾಂಕ್ ಮತ್ತು ಐಎಂಎಫ್ ಎರಡೂ ಕೂಡ ತಮ್ಮ ಹಿಂದಿನ ವರದಿಗಳಲ್ಲಿ ಕ್ರಮವಾಗಿ ಶೇ. 6.3 ಮತ್ತು ಶೇ. 6.4 ಬೆಳವಣಿಗೆ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದವು. ಇದೀಗ ಈ ಎರಡೂ ಸಂಘಟನೆಗಳು ತಮ್ಮ ಅಭಿಪ್ರಾಯವನ್ನು ಬದಲಿಸಿ 20 ಮೂಲಾಂಕಗಳಷ್ಟು ನಿರೀಕ್ಷೆ ಹೆಚ್ಚಿಸಿವೆ.
ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ನಿರೀಕ್ಷೆ ಹೆಚ್ಚಿಸಿದ ವಿಶ್ವಬ್ಯಾಂಕ್; ಈ ವರ್ಷ ಶೇ. 6.5 ಜಿಡಿಪಿ ಹೆಚ್ಚುವ ಅಂದಾಜು
ಕುತೂಹಲ ಸಂಗತಿ ಎಂದರೆ ಐಎಂಎಫ್ ನೀಡಿರುವ ಪ್ರೊಜೆಕ್ಷನ್ ಪ್ರಕಾರ ಜಾಗತಿಕ ಆರ್ಥಿಕತೆ ಮಂದಗೊಳ್ಳಲಿದೆ. 2024ರಲ್ಲಿ ಶೇ. 3.3 ಮತ್ತು 2025ರಲ್ಲಿ ಶೇ. 3.2ರಷ್ಟು, ಮತ್ತು 2026ರಲ್ಲಿ ಶೇ. 3.1ರಷ್ಟು ಗ್ಲೋಬಲ್ ಎಕನಾಮಿ ಬೆಳೆಯಬಹುದು ಎಂದು ಅಂದಾಜು ಮಾಡಿದೆ. ಆದಾಗ್ಯೂ ಭಾರತದ ಬಗ್ಗೆ ಅದು ನಿರೀಕ್ಷೆ ಹೆಚ್ಚಿಸಿರುವುದು ಗಮನಾರ್ಹ ಸಂಗತಿ.
IMF Growth Projections for 2025 🇺🇸 US: 2.0% 🇩🇪 Germany: 0.2% 🇫🇷 France: 0.7% 🇪🇸 Spain: 2.9% 🇬🇧 UK: 1.3% 🇨🇳 China: 4.8% 🇯🇵 Japan: 1.1% 🇮🇳 India: 6.6% 🇷🇺 Russia: 0.6% 🇧🇷 Brazil: 2.4% 🇸🇦 Saudi Arabia: 4.0% 🇳🇬 Nigeria: 3.9% https://t.co/bbUb7LaE1v pic.twitter.com/pmeQ51geOW
— IMF (@IMFNews) October 14, 2025
2025-26ರ ಮೊದಲ ಕ್ವಾರ್ಟರ್ ಆದ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಭಾರತದ ಜಿಡಿಪಿ ಶೇ. 7.8ರಷ್ಟು ಹೆಚ್ಚಾಗಿತ್ತು. ಖಾಸಗಿ ಅನುಭೋಗದಲ್ಲಿ ಆದ ಗಣನೀಯ ಹೆಚ್ಚಳ; ಸರ್ವಿಸ್ ಸೆಕ್ಟರ್ನಲ್ಲಿ ಅದ್ಭುತ ಪ್ರಗತಿ ಇವೇ ಮುಂತಾದ ಕೆಲ ಸಂಗತಿಗಳು ಮೊದಲ ಕ್ವಾರ್ಟರ್ನಲ್ಲಿ ಭಾರತದ ಬೆಳವಣಿಗೆಗೆ ಪುಷ್ಟಿ ಕೊಟ್ಟಿದ್ದವು. ಅಮೆರಿಕದ ಟ್ಯಾರಿಫ್ ಸಂಕಷ್ಟದ ನಡುವೆಯೂ ಜಿಡಿಪಿ ಅಮೋಘವಾಗಿ ಹೆಚ್ಚಾಗಿತ್ತು. ಹಿಂದಿನ ಐದು ಕ್ವಾರ್ಟರ್ಗಳಲ್ಲೇ ಗರಿಷ್ಠ ಮಟ್ಟದ ಏರಿಕೆ ಪಡೆದಿತ್ತು ಎಂಬುದು ಗಮನಿಸಬೇಕಾದ ಅಂಶ.
ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆ ವೇಗ ಕನಿಷ್ಠ ಹಂತ ಮುಟ್ಟಿರಬಹುದು; ಇನ್ನೇನಿದ್ದರೂ ಮೇಲೇರುವ ಸಮಯ: ಎಚ್ಎಸ್ಬಿಸಿ ಎಂಎಫ್ ವರದಿ
ಐಎಂಎಫ್ ಅಂದಾಜು ಪ್ರಕಾರ ಭಾರತ 2025-26ರಲ್ಲಿ ಶೇ. 6.6ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಲು ಯಶಸ್ವಿಯಾದರೆ ನಿಜಕ್ಕೂ ತೃಪ್ತಿಕರ ಎನಿಸಬಹುದು. ಕಳೆದ ಕೆಲ ವರ್ಷಗಳಿಂದಲೂ ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಅತೀ ವೇಗದ ಬೆಳವಣಿಗೆ ಹೊಂದುತ್ತಾ ಬಂದಿರುವ ಭಾರತ, ಅದೇ ಹಾದಿಯಲ್ಲಿ ಮುಂದುವರಿಯಲಿದೆ.
ಐಎಂಎಫ್ ವರದಿಯಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ, ಮುಂದಿನ ಹಣಕಾಸು ವರ್ಷದಲ್ಲಿ (2026-27) ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ನಿರೀಕ್ಷೆ ತಗ್ಗಿಸಲಾಗಿದೆ. ಆ ವರ್ಷ ಜಿಡಿಪಿ ಹೆಚ್ಚಳ ಶೇ. 6.2ಕ್ಕೆ ಸೀಮಿತಗೊಳ್ಳಬಹುದು ಎಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:45 am, Wed, 15 October 25




