ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ನಿರೀಕ್ಷೆ ಹೆಚ್ಚಿಸಿದ ವಿಶ್ವಬ್ಯಾಂಕ್; ಈ ವರ್ಷ ಶೇ. 6.5 ಜಿಡಿಪಿ ಹೆಚ್ಚುವ ಅಂದಾಜು
India's GDP growth projection by World Bank: 2025-26ರ ಹಣಕಾಸು ವರ್ಷಕ್ಕೆ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಮಾಡಿದ್ದ ಅಂದಾಜನ್ನು ವಿಶ್ವಬ್ಯಾಂಕ್ ಪರಿಷ್ಕರಿಸಿದೆ. ಈ ಹಿಂದೆ ಶೇ. 6.3ರಷ್ಟು ಜಿಡಿಪಿ ಬೆಳವಣಿಗೆ ನಿರೀಕ್ಷಿಸಿದ್ದ ಅದು, ಈಗ ಶೇ. 6.5ಕ್ಕೆ ನಿರೀಕ್ಷೆ ಹೆಚ್ಚಿಸಿದೆ. ಆದರೆ, 2026-27ರಲ್ಲಿ ಅಮೆರಿಕದ ಟ್ಯಾರಿಫ್ ಪರಿಣಾಮವಾಗಿ ಭಾರತದ ಆರ್ಥಿಕ ಬೆಳವಣಿಗೆ ತುಸು ಕಡಿಮೆಗೊಳ್ಳಬಹುದು ಎಂದಿದೆ.

ನವದೆಹಲಿ, ಅಕ್ಟೋಬರ್ 7: ಅಮೆರಿಕದ ಟ್ಯಾರಿಫ್ನಿಂದ ಭಾರತದ ಆರ್ಥಿಕತೆ (GDP) ಸಾಕಷ್ಟು ಹಿನ್ನಡೆ ಅನುಭವಿಸಬಹುದು ಎಂದು ಕೆಲ ಆರ್ಥಿಕ ತಜ್ಞರು ಅಂದಾಜು ಮಾಡಿದ್ದರು. ಆದರೆ, ಅದಕ್ಕೆ ವ್ಯತಿರಿಕ್ತವೆಂಬಂತೆ ಭಾರತದ ಜಿಡಿಪಿ ತನ್ನ ದೃಢ ಹೆಜ್ಜೆ ಮುಂದುವರಿಸುತ್ತಿದೆ. ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ನಿರೀಕ್ಷೆಗಳು ಹೆಚ್ಚುತ್ತಿವೆ. ವಿಶ್ವಬ್ಯಾಂಕ್ ಇದೀಗ ತನ್ನ ಅಂದಾಜನ್ನು ಪರಿಷ್ಕರಿಸಿದ್ದು, 2025-26ರಲ್ಲಿ ಭಾರತದ ಜಿಡಿಪಿ ಶೇ. 6.5ರಷ್ಟು ಬೆಳೆಯಬಹುದು ಎಂದು ಅಭಿಪ್ರಾಯಪಟ್ಟಿದೆ. ಅದರ ಹಿಂದಿನ ವರದಿಯಲ್ಲಿ ಮಾಡಲಾಗಿದ್ದ ಅಂದಾಜು ಪ್ರಕಾರ ಈ ಹಣಕಾಸು ವರ್ಷ ಶೇ. 6.3ರಷ್ಟು ಆರ್ಥಿಕತೆ ಬೆಳೆಯಬಹುದು ಎನ್ನಲಾಗಿತ್ತು.
ಭಾರತದ ಜಿಡಿಪಿ ನಿರೀಕ್ಷೆಮೀರಿ ಬೆಳೆಯಲಿರುವುದು ಹೇಗೆ?
ಟ್ರಂಪ್ ಟ್ಯಾರಿಫ್ ಹೊಡೆತದ ಹೊರತಾಗಿಯೂ ಭಾರತ ಅತಿವೇಗದ ಆರ್ಥಿಕತೆಯ ಮುನ್ನಡೆಯನ್ನು ಕಾಯ್ದುಕೊಳ್ಳಲು ಒಂದೆರಡು ಪ್ರಮುಖ ಕಾರಣಗಳಿವೆ. ಮೊದಲ ಪ್ರಮುಖ ಕಾರಣವೆಂದರೆ ಆಂತರಿಕವಾಗಿ ಪ್ರಬಲ ಅನುಭೋಗ ಮುಂದುವರಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆ ಗರಿಗೆದರಿರುವುದು ಇನ್ನೊಂದು ಕಾರಣ. ಹಾಗೆಯೇ, ಜಿಎಸ್ಟಿ ಸುಧಾರಣೆಗಳು ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ. ವಿಶ್ವಬ್ಯಾಂಕ್ ತನ್ನ ದಕ್ಷಿಣ ಏಷ್ಯನ್ ರಾಷ್ಟ್ರಗಳ ವರದಿಯಲ್ಲಿ ಈ ಅಂಶಗಳನ್ನು ತಿಳಿಸಿದೆ.
ಇದನ್ನೂ ಓದಿ: 20 ವರ್ಷದಲ್ಲಿ ಜೆಟ್ ಎಂಜಿನ್ ತಯಾರಿಸಲಾಗಲಿಲ್ಲ: ಚೀನಾ ಮತ್ತು ಭಾರತ ಹೋಲಿಸಿದ ಮೋಹನದಾಸ್ ಪೈ
‘ಆಂತರಿಕ ಪರಿಸ್ಥಿತಿ ನಿರೀಕ್ಷೆಗಿಂತ ಉತ್ತಮವಾಗಿದೆ. ಅದರಲ್ಲೂ ಮುಖ್ಯವಾಗಿ ಕೃಷಿ ಉತ್ಪಾದನೆ ಮತ್ತು ಗ್ರಾಮೀಣ ವೇತನ ಹೆಚ್ಚಳವು ಉತ್ತಮವಾಗಿದೆ. ಸರ್ಕಾರ ಜಾರಿಗೆ ತಂದಿರುವ ಜಿಎಸ್ಟಿ ಸುಧಾರಣೆಗಳಿಂದ ಟ್ಯಾಕ್ಸ್ ದರ ಕಡಿಮೆ ಆಗಿದೆ. ಇದು ಆರ್ಥಿಕ ಚಟುವಟಿಕೆಗೆ ಪೂರಕವಾಗುವ ನಿರೀಕ್ಷೆ ಇದೆ’ ಎಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ.
ಅಮೆರಿಕದ ಟ್ಯಾರಿಫ್ ಪರಿಣಾಮ ಭಾರತಕ್ಕೆ ಆಗೊಲ್ಲವಾ?
ಅಮೆರಿಕದ ಟ್ಯಾರಿಫ್ಗಳು ಭಾರತದ ಮೇಲೆ ಪರಿಣಾಮ ಬೀರುವುದರಲ್ಲಿ ಸಂಶಯ ಇಲ್ಲ. ಆದರೆ, ವರ್ಲ್ಡ್ ಬ್ಯಾಂಕ್ ಪ್ರಕಾರ ಈ ವರ್ಷಕ್ಕಿಂತ ಹೆಚ್ಚಾಗಿ ಮುಂದಿನ ಹಣಕಾಸು ವರ್ಷದಲ್ಲಿ (2026-27) ಭಾರತದ ಮೇಲೆ ಟ್ರಂಪ್ ಟ್ಯಾರಿಫ್ ಪರಿಣಾಮ ಹೆಚ್ಚಿರುತ್ತದೆ. ಹೀಗಾಗಿ, ಅದು ಆ ವರ್ಷಕ್ಕೆ ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಶೇ. 6.50ರಿಂದ ಶೇ. 6.30ಕ್ಕೆ ಇಳಿಸಿದೆ.
ಇದನ್ನೂ ಓದಿ: ಅಮೆರಿಕದ ಮೊದಲ ಲೈಫೈ ಇಂಟರ್ನೆಟ್ ಸಿಸ್ಟಂ ಅಳವಡಿಸಿದ ಕೀರ್ತಿ ಭಾರತೀಯ ಕಂಪನಿಯದ್ದು
ಅಚ್ಚರಿ ಮೂಡಿಸಿರುವ ಭಾರತದ ಜಿಡಿಪಿ ದರ
ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ಆದ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಭಾರತದ ಜಿಡಿಪಿ ಸೇ. 7.8ರಷ್ಟು ಹೆಚ್ಚಿದೆ. ಬಹಳಷ್ಟು ಜನರು ಜಿಡಿಪಿ ಈ ಅವಧಿಯಲ್ಲಿ ಶೇ. 6.50ರಿಂದ ಶೇ. 7ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಿದ್ದರು.
ಹಿಂದಿನ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 7.4ರಷ್ಟು ಹೆಚ್ಚಿತ್ತು. ಆರ್ಬಿಐ ಮಾಡಿರುವ ಅಂದಾಜು ಪ್ರಕಾರ 2025-26ರಲ್ಲಿ ಭಾರತದ ಜಿಡಿಪಿ ಶೇ. 6.8ರಷ್ಟು ಹೆಚ್ಚಬಹುದು ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




