ಅಪೌಷ್ಟಿಕತೆಯಿಂದ ಬೊಜ್ಜಿನತ್ತ ಭಾರತದ ಆರೋಗ್ಯ ಸಮಸ್ಯೆ: ಒಂದೇ ಕುಟುಂಬದಲ್ಲಿ ಎರಡು ತಲೆಮಾರಿನ ಎರಡು ಸವಾಲುಗಳು

Santosh Nair's article in 'Your India' series:ಭಾರತವು ಅಪೌಷ್ಟಿಕತೆಯಿಂದ ಬೊಜ್ಜಿನತ್ತ ಸಾಗುತ್ತಿದ್ದು, ಇದು ಆರೋಗ್ಯ ಕ್ಷೇತ್ರದಲ್ಲಿ ಹೊಸ ಸವಾಲು ಸೃಷ್ಟಿಸಿದೆ. ಒಂದೇ ಕುಟುಂಬದಲ್ಲಿ ಹಿರಿಯರು ಅಪೌಷ್ಟಿಕತೆ ಎದುರಿಸಿದರೆ, ಕಿರಿಯರು ಮಧುಮೇಹ ಮತ್ತು ಬೊಜ್ಜಿನಿಂದ ಬಳಲುತ್ತಿದ್ದಾರೆ. ರಾಷ್ಟ್ರೀಯ ಸಮೀಕ್ಷೆಗಳು ಅಪೌಷ್ಟಿಕತೆ ಕಡಿಮೆಯಾಗಿದ್ದರೂ, ಅತಿಯಾದ ತೂಕ ಹೆಚ್ಚಿರುವುದನ್ನು ತೋರಿಸುತ್ತವೆ. ಇದು ಬದಲಾದ ಜೀವನಶೈಲಿ ಮತ್ತು ಸಂಸ್ಕರಿಸಿದ ಆಹಾರಗಳ ಬಳಕೆಯ ಪರಿಣಾಮ.

ಅಪೌಷ್ಟಿಕತೆಯಿಂದ ಬೊಜ್ಜಿನತ್ತ ಭಾರತದ ಆರೋಗ್ಯ ಸಮಸ್ಯೆ: ಒಂದೇ ಕುಟುಂಬದಲ್ಲಿ ಎರಡು ತಲೆಮಾರಿನ ಎರಡು ಸವಾಲುಗಳು
ಒಬೆಸಿಟಿ
Image Credit source: Getty Images
Edited By:

Updated on: Oct 20, 2026 | 9:46 AM

ಒಂದು ಅಜ್ಜಿಗೆ ತಮ್ಮ ಬಾಲ್ಯದ ದಿನಗಳು ನೆನಪಾಗುತ್ತವೆ. ಆಗ ಸಾಕಷ್ಟು ಆಹಾರ ಸಿಗುತ್ತಿರಲಿಲ್ಲ. ಹಸಿವಿನ ಚಿಂತೆ ಯಾವಾಗಲೂ ಇರುತ್ತಿತ್ತು. ಆದರೆ ಅವರ ಮೊಮ್ಮಗನಿಗೆ ಹಾಗಲ್ಲ ಎಲ್ಲಾ ಸೌಕರ್ಯಗಳೂ ಇವೆ ಇಂಥಾ ಸಮಸ್ಯೆಗಳೇನೂ ಇಲ್ಲ.  ಆದರೂ ಚಿಕ್ಕ ವಯಸ್ಸಿನಲ್ಲೇ ಮಧುಮೇಹ, ಇದನ್ನು ಕೇಳಿ ಅಜ್ಜಿಗೆ ಆಶ್ಚರ್ಯವಾಗುತ್ತದೆ. ಇದು ಭಾರತದ ಆರೋಗ್ಯದ ಇಂದಿನ ಚಿತ್ರ. ಒಂದೆಡೆ ಆಹಾರದ ಕೊರತೆ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ಬೊಜ್ಜು ಮತ್ತು ಮಧುಮೇಹದಂತಹ ಸಮಸ್ಯೆಗಳು ಹೆಚ್ಚುತ್ತಿವೆ. ಒಂದೇ ಕುಟುಂಬದಲ್ಲಿ ಈ ಎರಡೂ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ಭಾರತದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಪ್ರಮಾಣ ಕಡಿಮೆಯಾಗಿದೆ. 2019–21ರಲ್ಲಿ ಇದು ಶೇ. 35.5ರಷ್ಟಿತ್ತು. 2023–24ರ ವೇಳೆಗೆ ಶೇ. 29.3ಕ್ಕೆ ಇಳಿದಿದೆ. ಅಂದರೆ, ಮಕ್ಕಳಲ್ಲಿ ದೀರ್ಘಕಾಲದ ಅಪೌಷ್ಟಿಕತೆ ಕಡಿಮೆಯಾಗುತ್ತಿದೆ. ತಾಯಂದಿರಿಗೆ ಉತ್ತಮ ಆಹಾರ ಸಿಗುವುದು, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಸರ್ಕಾರಿ ಯೋಜನೆಗಳು, ಸ್ವಚ್ಛತೆ ಮತ್ತು ಆರೋಗ್ಯ ಸೇವೆಗಳು ಹೆಚ್ಚಾಗುವುದು ಈ ಸುಧಾರಣೆಗೆ ಕಾರಣವಾಗಿವೆ.

ಆದರೆ ಇದೇ ಸಮಯದಲ್ಲಿ ಮತ್ತೊಂದು ಸಮಸ್ಯೆ ಹೆಚ್ಚುತ್ತಿದೆ. ಭಾರತದಲ್ಲಿ ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಮಹಿಳೆಯರ ಪ್ರಮಾಣ ಏರಿಕೆಯಾಗಿದೆ. 2005–06ರಲ್ಲಿ ಇದು ಶೇ. 12.6ರಷ್ಟಿದ್ದರೆ, 2023–24ರಲ್ಲಿ ಶೇ. 30.7ಕ್ಕೆ ತಲುಪಿದೆ. ಮಹಿಳೆಯರಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವೂ ಹೆಚ್ಚಾಗಿದೆ. ಪುರುಷರಲ್ಲಿಯೂ ಈ ಏರಿಕೆ ಕಂಡುಬಂದಿದೆ.

‘‘ಆಹಾರದ ಕೊರತೆ ಮತ್ತು ಅತಿಯಾದ ತೂಕ’’ ಈ ಎರಡೂ ಸಮಸ್ಯೆಗಳು ಒಂದೇ ದೇಶದಲ್ಲಿ ಕಾಣಿಸಿಕೊಳ್ಳುವುದನ್ನು ಆರೋಗ್ಯ ತಜ್ಞರು ‘ಪೌಷ್ಟಿಕಾಂಶದ ಎರಡು ರೀತಿಯ ಸಮಸ್ಯೆ’ ಎಂದು ಕರೆಯುತ್ತಾರೆ. ಕೆಲ ಕುಟುಂಬಗಳಲ್ಲಿ ಒಬ್ಬರಿಗೆ ಸಾಕಷ್ಟು ಆಹಾರ ಸಿಗದೆ ಇರಬಹುದು, ಮತ್ತೊಬ್ಬರಿಗೆ ಅತಿಯಾದ ತೂಕ ಅಥವಾ ಮಧುಮೇಹದ ಅಪಾಯ ಇರಬಹುದು.

ಇದನ್ನೂ ಓದಿ: ಸರ್ಕಾರ ಉಚಿತ ಆರೋಗ್ಯ ವಿಮಾ ಸೌಲಭ್ಯ ನೀಡಿದರೂ ಜನರು ಯಾಕೆ ಉಪಯೋಗಿಸುತ್ತಿಲ್ಲ? ಯೋಜನೆ ಬಗ್ಗೆ ಅರಿವಿರುವುದು ಮುಖ್ಯ

ಆರ್ಥಿಕ ಬೆಳವಣಿಗೆಯಿಂದ ಆಹಾರ ಮತ್ತು ಆರೋಗ್ಯ ಸೇವೆಗಳು ಸುಧಾರಿಸುತ್ತವೆ. ಇದರಿಂದ ಅಪೌಷ್ಟಿಕತೆ ಕಡಿಮೆಯಾಗಬಹುದು. ಆದರೆ ಜನರ ದಿನನಿತ್ಯದ ಜೀವನವೂ ಬದಲಾಗುತ್ತಿದೆ. ಹಲವರು ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುತ್ತಾರೆ, ವಾಹನಗಳಲ್ಲಿ ಪ್ರಯಾಣಿಸುತ್ತಾರೆ ಮತ್ತು ದೈಹಿಕ ಚಟುವಟಿಕೆ ಕಡಿಮೆ ಮಾಡುತ್ತಾರೆ. ಜೊತೆಗೆ ಹೆಚ್ಚು ಕ್ಯಾಲೊರಿ ಇರುವ ಸಂಸ್ಕರಿಸಿದ ಆಹಾರಗಳು ಸುಲಭವಾಗಿ ಸಿಗುತ್ತಿವೆ. ಇವು ಬೊಜ್ಜು ಮತ್ತು ಮಧುಮೇಹ ಹೆಚ್ಚಲು ಕಾರಣವಾಗಬಹುದು.

ಹೀಗಾಗಿ, ಭಾರತದಲ್ಲಿ ಆರೋಗ್ಯದ ಸಮಸ್ಯೆಗಳು ಸಂಪೂರ್ಣವಾಗಿ ಕಡಿಮೆಯಾಗಿವೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಹಳೆಯ ಸಮಸ್ಯೆಗಳು ಕಡಿಮೆಯಾಗುತ್ತಿದ್ದರೆ, ಹೊಸ ಸಮಸ್ಯೆಗಳು ಹೆಚ್ಚುತ್ತಿವೆ.

ಇದನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ವ್ಯವಸ್ಥೆಯು ಅಪೌಷ್ಟಿಕತೆಯನ್ನು ತಡೆಯುವುದರ ಜೊತೆಗೆ ಮಧುಮೇಹ, ಹೃದಯ ಕಾಯಿಲೆ ಮತ್ತು ಬೊಜ್ಜನ್ನು ತಡೆಯುವ ಕೆಲಸವನ್ನೂ ಮಾಡಬೇಕಾಗಿದೆ. ಒಂದೇ ಕುಟುಂಬದಲ್ಲಿ ಬೇರೆ ಬೇರೆ ವಯಸ್ಸಿನವರಿಗೆ ಬೇರೆ ರೀತಿಯ ಆರೋಗ್ಯದ ಅಪಾಯಗಳಿರಬಹುದು.

ಮುಂದಿನ ಬಾರಿ ನಿಮ್ಮ ಕುಟುಂಬದಲ್ಲಿ ಹಿರಿಯರು ಮತ್ತು ಕಿರಿಯರ ಆರೋಗ್ಯದ ಬಗ್ಗೆ ಹೋಲಿಕೆ ಮಾಡುವಾಗ, ಒಂದು ತಲೆಮಾರಿನ ಸಮಸ್ಯೆ ಮತ್ತೊಂದು ತಲೆಮಾರಿನಲ್ಲಿ ಸಂಪೂರ್ಣವಾಗಿ ಮಾಯವಾಗಿದೆ ಎಂದು ನಿರ್ಧರಿಸಬೇಡಿ. ಬದಲಿಗೆ, ಪ್ರತಿಯೊಬ್ಬರೂ ಯಾವ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಮತ್ತು ಅದನ್ನು ಸರಿಯಾಗಿ ಗಮನಿಸಲಾಗುತ್ತಿದೆಯೇ ಎಂದು ಯೋಚಿಸಿ.
ಮೂಲ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS), ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಎಸ್​ಬಿಐ ರಿಸರ್ಚ್ ಮತ್ತು UNICEF ಇಂಡಿಯಾ ವರದಿಗಳು.

 

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Santosh Nair

Santosh Nair is Editor (Network Coordination), TV9 Network. With over two decades in media, he has played pivotal roles in some of the best newsrooms in the country. He is an avid reader who pens his thoughts after deep-diving into the subject matter.

Read More
Loading...
Unable to load recommendations.
Follow Us