ನವದೆಹಲಿ, ಸೆಪ್ಟೆಂಬರ್ 21: ಕೇಯ್ನೆಸ್ ಟೆಕ್ನಾಲಜಿ ಇಂಡಿಯಾದ ಅಂಗಸಂಸ್ಥೆಯಾದ ಕೇಯ್ನ್ಸ್ ಸೆಮಿಕಾನ್ (Kaynes Semicon) ಭಾರತದ ಸೆಮಿಕಂಡಕ್ಟರ್ ಉದ್ಯಮದ ಎಲ್ಲವೂ ಆಗುವ ಗುರಿ ಇಟ್ಟಿದೆ. ಫ್ಯಾಬ್ರಿಕೇಶನ್ ಯೂನಿಟ್, ಕಾಂಪೌಂಡ್ ಫ್ಯಾಬ್, ಡಿಸೈನ್ ಲ್ಯಾಬ್, ಜಿಪಿಯು ಅಭಿವೃದ್ಧಿ ಹೇಗೆ ಹಲವು ಕಾರ್ಯಗಳನ್ನು ತಾನೇ ಸ್ವಂತವಾಗಿ ಮಾಡಲು ಹೊರಟಿದೆ. ಇದಕ್ಕಾಗಿ ಆರ್ ಅಂಡ್ ಡಿ ಸ್ಥಾಪನೆ, ಹಣಕಾಸು ವ್ಯವಸ್ಥೆ ಇವೆಲ್ಲವನ್ನೂ ಮಾಡುತ್ತಿದೆ.
2025-26ರಲ್ಲಿ ಆರ್ ಅಂಡ್ ಡಿ ಕಾರ್ಯಕ್ಕೆ 20 ಮಿಲಿಯನ್ ಡಾಲರ್ ಹೂಡಿಕೆ ಮಾಡುವ ಯೋಜನೆ ಹಾಕಿಕೊಂಡಿದೆ. ಈ ವೇಳೆ 100 ಕೋಟಿ ರೂ ಆದಾಯ ಗಳಿಸುವ ಗುರಿಯನ್ನೂ ಇಟ್ಟಿದೆ. ಕೇಯ್ನ್ಸ್ ಸೆಮಿಕಾನ್ ಕಂಪನಿಯ ಸಿಇಒ ರಘು ಪನಿಕರ್ ಈ ವಿಚಾರ ತಿಳಿಸಿದ್ದಾರೆ.
‘ಮುಂದಿನ ಮೂರು ವರ್ಷದಲ್ಲಿ ಒಂದು ಫ್ಯಾಬ್ ಯೂನಿಟ್ ಅಥವಾ ಕಾಂಪೌಂಡ್ ಫ್ಯಾಬ್ ಯೂನಿಟ್ ಸ್ಥಾಪಿಸುತ್ತೇವೆ. ಜೊತೆಗೆ ಡಿಸೈನ್ ಲ್ಯಾಬ್ ಸ್ಥಾಪಿಸುತ್ತೇವೆ. ಸಿಲಿಕಾನ್ ಫೋಟೋನಿಕ್ಸ್ನಂತಹ ಹೊಸ ತಂತ್ರಜ್ಞಾನದಲ್ಲಿ ಮುಂದಿನ ಒಂದು ವರ್ಷದಲ್ಲಿ 150 ಮಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದ್ದೇವೆ. ಮುಂದಿನ ಎರಡು ವರ್ಷದೊಳಗೆ ಸ್ವಂತವಾಗಿ ಜಿಪಿಯು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ. ಮುಂದಿನ ಮೂರು ವರ್ಷದಲ್ಲಿ ಐಪಿಒ ಅನ್ನೂ ಪ್ರವೇಶಿಸುವ ಉದ್ದೇಶ ಇದೆ’ ಎಂದು ಸಿಇಒ ರಘು ಪನಿಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ಈ ವಿದೇಶೀ ಕಂಪನಿಗಳಿಗೆ ಭಾರತ ಕೊಡೋ ದುಡ್ಡು ಅದರ ಡಿಫೆನ್ಸ್ ಬಜೆಟ್ಗೆ ಸಮ?
ಕೇಯ್ನೆಸ್ ಸೆಮಿಕಾನ್ ಕಂಪನಿ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ ಘಟಕವನ್ನು ಗುಜರಾತ್ನ ಸಾನಂದ್ನಲ್ಲಿ ಸ್ಥಾಪಿಸಿದೆ. ವಿದ್ಯುತ್ ಕ್ಷೇತ್ರಕ್ಕೆ ಬೇಕಾದ ಚಿಪ್ ತಯಾರಿಸುತ್ತದೆ. ಮುಂದಿನ ತಿಂಗಳು (ಅಕ್ಟೋಬರ್) ಮೊದಲ ಕಮರ್ಷಿಯಲ್ ಚಿಪ್ ಹೊರಬರಲಿದೆ. ಈ ಕಂಪನಿಯು ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ಒಡಿಎಂ (ಮೂಲ ವಿನ್ಯಾಸ ತಯಾರಕ) ಕಂಪನಿಯಾಗುವ ಮಹತ್ವಾಕಾಂಕ್ಷೆ ಹೊಂದಿದೆ.
ಚಿಪ್ ಇಕೋಸಿಸ್ಟಂನಲ್ಲಿ ಎಲ್ಲವನ್ನೂ ಸರಬರಾಜು ಮಾಡುವ ಕಂಪನಿಯಾಗುವುದು ಕೇಯ್ನೆಸ್ನ ಗುರಿ. ‘ಎಟಿಎಂಪಿ, ಆರ್ ಅಂಡ್ ಡಿ, ರಿಲಯಬಿಲಿಟಿ, ಫೈಲ್ಯೂರ್ ಅನಾಲಿಸಿಸ್, ಸಿಸ್ಟಂ ಸಲ್ಯೂಶನ್ ಗ್ರೂಪ್, ಒಡಿಎಂ, ಹೀಗೆ ಸಿಂಗಲ್ ಸಪ್ಲೈಯರ್ ಆಗಬೇಕೆಂದಿದ್ದೇವೆ’ ಎಂದು ಕೇಯ್ನೆಸ್ ಸೆಮಿಕಾನ್ನ ಸಿಇಒ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಜಿಎಸ್ಟಿ ಬಗ್ಗೆ ಹೇಳುವಾಗ ಪ್ರಧಾನಿ ಮೋದಿ ಬೆಂಗಳೂರನ್ನು ಪ್ರಸ್ತಾಪಿಸಿದ್ದು ಯಾಕೆ? ಇಲ್ಲಿದೆ ಅದರ ಹಿನ್ನೆಲೆ
ಈ ಕಂಪನಿಯು ವಿದ್ಯುತ್ ಕ್ಷೇತ್ರಕ್ಕೆ ಚಿಪ್ಗಳನ್ನು ತಯಾರಿಸುತ್ತಿದೆ. ಕನ್ಸೂಮರ್ ಕ್ಷೇತ್ರದ ಅಗತ್ಯಗಳಿಗೂ ಚಿಪ್ ತಯಾರಿಸಲಿದೆ. ಸಿಲಿಕಾನ್ ಮೈಕ್ರೋಫೋನ್, ಫಿಂಗರ್ ಪ್ರಿಂಟ್ ಸೆನ್ಸರ್ ಇತ್ಯಾದಿ ತಯಾರಿಸಲು ಗಮನ ಹರಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ