
ನವದೆಹಲಿ, ಜೂನ್ 15: ಆರ್ಥಿಕತೆಯ ಅಸ್ಥಿರತೆ, ಜಾಗತಿಕ ಅಡೆತಡೆ ಮತ್ತು ಉದ್ವಿಗ್ನತೆಗಳ ನಡುವೆಯೂ ಭಾರತೀಯ ಷೇರು ಮಾರುಕಟ್ಟೆಗಳು ತ್ವರಿತ ಚೇತರಿಕೆ ಕಂಡಿವೆ. ಲಾರ್ಜ್ ಕ್ಯಾಪ್ಗಳಲ್ಲಿ ಹೂಡಿಕೆ ಹೆಚ್ಚುವುದು ಸರ್ವೇಸಾಮಾನ್ಯ. ಆದರೆ, ಸ್ಮಾಲ್ ಕ್ಯಾಪ್ ಷೇರುಗಳು (small-cap stocks) ಈಗ ಚುರುಕುಗೊಳ್ಳುತ್ತಿವೆ. ಈ ಸೆಗ್ಮೆಂಟ್ ಷೇರುಗಳು ಈಗ ದೀರ್ಘಾವಧಿ ಹೂಡಿಕೆಗೆ ಹೇಳಿ ಮಾಡಿಸಿದ್ದಾಗಿವೆ ಎಂದು ಬಜಾಜ್ ಫಿನ್ಸರ್ವ್ ಎಎಂಸಿ ಸಂಸ್ಥೆಯ ಈಕ್ವಿಟಿ ವಿಭಾಗದ ಫಂಡ್ ಮ್ಯಾನೇಜರ್ ಶೋರ್ಭ್ ಗುಪ್ತಾ (Bajaj FinServ AMC’s Sorbh Gupta) ಹೇಳಿದ್ದಾರೆ.
ಹಣಕಾಸು ವರ್ಷ ಮುಗಿಯುತ್ತಿರುವಂತೆಯೇ ಸ್ಮಾಲ್ಕ್ಯಾಪ್ ಸೆಕ್ಟರ್ನಲ್ಲಿ ಹೂಡಿಕೆ ಅವಕಾಶ ಹೆಚ್ಚುತ್ತಿದೆ. ಪ್ರಮುಖ 250 ಸ್ಮಾಲ್ಕ್ಯಾಪ್ ಕಂಪನಿಗಳ ಪೈಕಿ ಶೇ. 74ರಷ್ಟು ಷೇರುಗಳ ಆರ್ಒಸಿಇ (RoCE- Return of Capital) ರಿಟರ್ನ್ ಎರಡಂಕಿ ಪ್ರತಿಶತಕ್ಕಿಂತ ಹೆಚ್ಚು ಲಾಭ ಮಾಡಿದೆ. ಕೆಲ ವಿಶೇಷ ವಲಯಗಳಲ್ಲಿ ಹಲವು ಸ್ಮಾಲ್ಕ್ಯಾಪ್ ಷೇರುಗಳು ಕಡಿಮೆ ಬೆಲೆ ಹೊಂದಿವೆ. ಇವುಗಳಲ್ಲಿ ಉನ್ನತ ಗುಣಮಟ್ಟದ ಷೇರುಗಳನ್ನು ಗಮನಿಸಿ, ಹೂಡಿಕೆ ಮಾಡುವ ಅಪೂರ್ವ ಅವಕಾಶ ಇದೆ ಎಂದೆನ್ನುತ್ತಾರೆ ಶೋರ್ಭ್ ಗುಪ್ತ.
ಇದನ್ನೂ ಓದಿ: ಚೀನಾದಲ್ಲಿ ಐಫೋನ್ ಮತ್ತೆ ನಂ. 1; ವಿವೋ, ಶವೋಮಿ, ಓಪ್ಪೋವನ್ನು ಹಿಂದಿಕ್ಕಿದ ಆ್ಯಪಲ್
ಸ್ಮಾಲ್ ಕ್ಯಾಪ್ ಷೇರುಗಳನ್ನು ಹೈರಿಸ್ಕ್ ಇನ್ವೆಸ್ಟ್ಮೆಂಟ್ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಮಾರುಕಟ್ಟೆ ಶಾಂತಗೊಂಡಂತೆ ಹೂಡಿಕೆದಾರರು ಸ್ಮಾಲ್ಕ್ಯಾಪ್ ಸ್ಟಾಕ್ಗಳತ್ತ ನೋಡತೊಡಗಿದ್ದಾರೆ. ಇದಕ್ಕೆ ಕನ್ನಡಿ ಇಡುವಂತೆ ಕಳೆದ ತಿಂಗಳು ನಿಫ್ಟಿ ಸ್ಮಾಲ್ಕ್ಯಾಪ್ ಶೇ. 14.7ರಷ್ಟು ಲಾಭ ಕೊಟ್ಟಿದೆ. ಇದಕ್ಕೆ ಹೋಲಿಸಿದರೆ ನಿಫ್ಟಿ50 ಕೊಟ್ಟ ಲಾಭ ಶೇ. 2.6ರಷ್ಟು ಮಾತ್ರ ಎಂದು ಬಜಾಜ್ ಫಿನ್ಸರ್ವ್ ಎಎಂಸಿಯ ಫಂಡ್ ಮ್ಯಾನೇಜರ್ ಹೇಳಿದ್ದಾರೆ.
ಯಾವುದೇ ಸ್ಟಾಕ್ಗಳ ಕಾರ್ಯಸಾಧನೆಯನ್ನು ಅದರ ದೀರ್ಘಾವಧಿ ರಿಟರ್ನ್ನಿಂದ ಅಳೆಯಬಹುದು. ಈ ವಿಚಾರದಲ್ಲೂ ಸ್ಮಾಲ್ಕ್ಯಾಪ್ ಸೆಕ್ಟರ್ ಉತ್ತಮ ಲಾಭ ನೀಡಿದೆ. ಕಳೆದ ಏಳಕ್ಕೂ ಹೆಚ್ಚು ವರ್ಷಗಳಿಂದ ಈ ವಲಯದ ಷೇರುಗಳು ಶೇ. 27.6 ಸಿಎಜಿಆರ್ನಲ್ಲಿ ಬೆಳವಣಿಗೆ ತೋರಿವೆ ಎಂದು ಹೇಳಿದ ಶೋರ್ಭ್ ಗುಪ್ತಾ, ಇತ್ತೀಚೆಗಿನ ಆರ್‌ಬಿಐ ಬಡ್ಡಿದರ ಕಡಿತವು ಹಲವು ಸ್ಮಾಲ್ಕ್ಯಾಪ್ ಷೇರುಗಳಿಗೆ ಹೂಡಿಕೆ ಬರಲು ಅನುಕೂಲವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಜಾಗತಿಕ ಮಾರುಕಟ್ಟೆಯಲ್ಲಿ ಆ್ಯಪಲ್ ಅನ್ನು ಹಿಂದಿಕ್ಕಿದ ಸ್ಯಾಮ್ಸುಂಗ್; ಎಐ ಶಕ್ತ ಪರಿಕರಗಳೇ ಈ ಮುನ್ನಡೆಗೆ ಕಾರಣ
ಜಾಗತಿಕ ಆಮದು ಸುಂಕ ಕಗ್ಗಂಟು ಕಾರಣಕ್ಕೆ ಹಲವು ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಸರಬರಾಜು ವ್ಯವಸ್ಥೆಯನ್ನು ಭಾರತಕ್ಕೆ ವರ್ಗಾಯಿಸುತ್ತಿವೆ. ಇದರಿಂದ ಭಾರತದಲ್ಲಿ ತಯಾರಿಕಾ ಕ್ಷೇತ್ರ ಬಹಳ ಬೆಳೆಯುವ ನಿರೀಕ್ಷೆ ಇದೆ. ಸಣ್ಣ ಸಣ್ಣ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳಿಗೆ ಹೆಚ್ಚು ಬ್ಯುಸಿನೆಸ್ ಸಿಗಲಿದೆ. ಹೀಗಾಗಿ, ಇಂಥ ಸ್ಮಾಲ್ಕ್ಯಾಪ್ ಕಂಪನಿಗಳ ಷೇರುಗಳು ಉತ್ತಮವಾಗಿ ಬೆಳೆಯುವ ವಾತಾವರಣ ನಿರ್ಮಾಣವಾಗಿದೆ ಎಂದು ಬಜಾಜ್ ಫಿನ್ಸರ್ವ್ ಎಎಂಸಿ ಈಕ್ವಿಟಿ ವಿಭಾಗದ ಮುಖ್ಯಸ್ಥ ಸೋರಭ್ ಗುಪ್ತಾ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ