Work From Home: ಇನ್ಫೋಸಿಸ್, ಎಚ್ಸಿಎಲ್ ಟೆಕ್ ಸಿಬ್ಬಂದಿಯನ್ನು ಮರಳಿ ಕಚೇರಿಗೆ ಕರೆತರಲು ಸಿದ್ಧತೆ
ಇನ್ಫೋಸಿಸ್, ಎಚ್ಸಿಎಲ್ ಟೆಕ್ನಂಥ ಕಂಪೆನಿಗಳು ಸಿಬ್ಬಂದಿಯನ್ನು ಮರಳಿ ಕಚೇರಿಗೆ ಕರೆತರಲು ಸಿದ್ಧತೆ ನಡೆಸಿವೆ. ಆ ಬಗ್ಗೆ ವಿವರ ಇಲ್ಲಿದೆ.
ಹಲವು ಕಂಪೆನಿಗಳು ಈಗಾಗಲೇ ಕಚೇರಿಗಳನ್ನು ತೆರೆದು, ಉದ್ಯೋಗಿಗಳು ಅಲ್ಲಿಂದಲೇ ಕೆಲಸ ಆರಂಭಿಸಿದ್ದಾರೆ. ಆದರೆ ಈಗಲೂ ಕೆಲವು ಕಂಪೆನಿಗಳು ಉದ್ಯೋಗಿಗಳನ್ನು ವಾಪಸ್ ಕಚೇರಿಗೆ ಕರೆಸಿಕೊಳ್ಳಬೇಕಿದ್ದು, ಅದಕ್ಕಾಗಿ ಪ್ರೋಟೋಕಾಲ್ ವಿತರಣೆ ಮಾಡುತ್ತಿವೆ. ಇದರ ಹೊರತಾಗಿ ಇನ್ಫೋಸಿಸ್ (Infosys), ಎಚ್ಸಿಎಲ್ ಟೆಕ್ನಾಲಜೀಸ್, ವಿಪ್ರೋ ಮತ್ತು ಟೆಕ್ ಮಹೀಂದ್ರಾದಂಥ ಐಟಿ ಕಂಪೆನಿಗಳ ಕಚೇರಿಗಳಿಗೆ ಉದ್ಯೋಗಿಗಳು ತಾವಾಗಿಯೇ ಬರುತ್ತಿದ್ದಾರೆ. ಇನ್ಫೋಸಿಸ್ನ ಮಾನ ಸಂಪನ್ಮೂಲದ ಮುಖ್ಯಸ್ಥ, ಕಾರ್ಯ ನಿರ್ವಾಹಕ ಉಪಾಧ್ಯಕ್ಷ ರಿಚರ್ಡ್ ಲೋಬೋ ಮಾತನಾಡಿ, ನಮ್ಮ ಸಿಬ್ಬಂದಿಯ ಪೈಕಿ ಶೇ 94ರಷ್ಟು ಮಂದಿ ಈಗಲೂ ದೂರದಿಂದಲೇ (ರಿಮೋಟ್ ವರ್ಕಿಂಗ್) ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಕಚೇರಿ ವ್ಯಾಪ್ತಿಯಲ್ಲಿ ಇರುವವರು ವಾರದಲ್ಲಿ ಒಂದು- ಎರಡು ದಿನ ಬರುತ್ತಿದ್ದಾರೆ. ಈ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ ಎಂದು ಕಂಪೆನಿ ಕಡೆಯಿಂದ ತಿಳಿಸಿರುವುದಾಗಿ ಎಕಾನಮಿಕ್ ಟೈಮ್ಸ್ ವರದಿ ಮಾಡಿದೆ.
ಸಿಬ್ಬಂದಿಯನ್ನು ವಾಪಸ್ ಕಚೇರಿಗೆ ಕರೆಸಿಕೊಳ್ಳುವ ಬಗ್ಗೆ ಇರುವ ಯೋಜನೆಗಳ ಕುರಿತು ಮೂರು ಹಂತದ ಯೋಜನೆ ರೂಪಿಸಿರುವುದಾಗಿ ತಿಳಿಸಿತ್ತು. ಸಿಬ್ಬಂದಿಗಾಗಿ ರೂಪಿಸಿರುವ ಯೋಜನೆ ಬಗ್ಗೆ ಸಿಎಫ್ಒ ನೀಲಾಂಜನ್ ರಾಯ್ ತಿಳಿಸಿದ್ದಾರೆ. ಮೊದಲನೆಯ ಹಂತದಲ್ಲಿ ಹೋಮ್ ಲೊಕೇಷನ್ಗಳಲ್ಲಿ, ಅಂದರೆ ಡೆವಲಪ್ಮೆಂಟ್ ಸೆಂಟರ್ಗಳಲ್ಲಿ ಅಥವಾ ಸೆಂಟರ್ಗಳ ಸಮೀಪದಲ್ಲಿ ಇರುವವರು ಕಚೇರಿಗೆ ಬರುತ್ತಾರೆ. ವಾರದಲ್ಲಿ ಎರಡು ದಿನ ಕಚೇರಿಗೆ ಬರುವುದನ್ನು ಉತ್ತೇಜಿಸುತ್ತೇವೆ ಎಂದು ರಾಯ್ ಹೇಳಿದ್ದಾರೆ. ಎರಡನೇ ಹಂತದಲ್ಲಿ ನಗರದ ಹೊರಗಡೆ ಇರುವವರನ್ನು, ಅಂದರೆ ಎಲ್ಲಿ ಇನ್ಫೋಸಿಸ್ ಡೆಲಿವರಿ ಸೆಂಟರ್ ಎಲ್ಲಿರುವುದಿಲ್ಲವೋ ಅಂಥವರನ್ನು ಕರೆಸಿಕೊಳ್ಳುತ್ತೇವೆ. ಮುಂದಿನ ಕೆಲ ತಿಂಗಳಲ್ಲಿ ಸೆಂಟರ್ಗೆ ಬರುವುದಕ್ಕೆ ಸಿಬ್ಬಂದಿ ಸಿದ್ಧವಾಗಬೇಕು, ಇದು ವೈಯಕ್ತಿಕ ಸನ್ನಿವೇಶದ ಮೇಲೆ ಅವಲಂಬಿತವಾಗುತ್ತದೆ ಎಂದಿದ್ದಾರೆ.
ಈ ಮಧ್ಯೆ, ಮೈಸೂರಿನಲ್ಲಿ ಇರುವ ಇನ್ಫೋಸಿಸ್ ಗ್ಲೋಬಲ್ ಎಜುಕೇಷನ್ ಸೆಂಟರ್ನಿಂದ ಮೊದಲ ಆಫ್ಲೈನ್ ಬ್ಯಾಚ್ 990 ಗ್ರಾಜುಯೆಟ್ ಟ್ರೇನಿಗಳನ್ನು ಏಪ್ರಿಲ್ 25ರಂದು ಸ್ವಾಗತಿಸಲಾಗಿದೆ ಎಂದು ಲೋಬೋ ಹೇಳಿದ್ದಾರೆ. ಸೇರ್ಪಡೆಯಾದ 858 ಗ್ರಾಜುಯೆಟ್ಸ್ ಆನ್ಲೈನ್ ಮತ್ತು ವರ್ಚುವಲ್ ಆನ್ಬೋರ್ಡಿಂಗ್ ಅನುಭವ ಮುಂದುವರಿದಿದೆ. ಈ ಹಂತದಲ್ಲಿ ನಾವು ಆರಾಮದಾಯಕ ಆಗಿದ್ದೇವೆ. ಮತ್ತು ಈ ಧೋರಣೆ ಜುಲೈ ಕೊನೆ ತನಕ ಮುಂದುವರಿಯುತ್ತದೆ. ಕೊರೊನಾ ಸನ್ನಿವೇಶ ನೋಡಿಕೊಂಡು, ಕೆಲಸಕ್ಕೆ ಬರುವವರ ಸಂಖ್ಯೆ ಹೆಚ್ಚಿಸುತ್ತೇವೆ ಎಂದು ಹೇಳಿದ್ದಾರೆ.
ಎಚ್ಸಿಎಲ್ನಲ್ಲಿಯೂ ಉದ್ಯೋಗಿಗಳು ಹಿಂತಿರುಗುತ್ತಾರೆ
ಎಚ್ಸಿಎಲ್ ಟೆಕ್ನಾಲಜೀಸ್‌ನಲ್ಲಿ ಇದೇ ವಿದ್ಯಮಾನ ನಡೆದಿದ್ದು, ಹೈಬ್ರಿಡ್ ಕೆಲಸದ ಮಾದರಿಯು ಮುಂದುವರಿದಾಗಲೂ ಅದರ ಕ್ಯಾಂಪಸ್‌ಗಳಿಗೆ ಬರುವ ಉದ್ಯೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ವರದಿ ಮಾಡಿದೆ. ಮಾರ್ಚ್‌ನಲ್ಲಿ ಕಂಪೆನಿಯು ತನ್ನ ಹೈಬ್ರಿಡ್ ವರ್ಕ್ ಮೋಡ್ ಅನ್ನು ಸದ್ಯಕ್ಕೆ ಮುಂದುವರಿಸುವುದಾಗಿ ಹೇಳಿತ್ತು. ಮೂರನೇ ಅತಿದೊಡ್ಡ ಸಾಫ್ಟ್‌ವೇರ್ ಸೇವಾ ಸಂಸ್ಥೆಯು ಇನ್ನೂ ನಿಗಾ ಹಂತದಲ್ಲಿದೆ.
“ಎಚ್ಸಿಎಲ್ನಲ್ಲಿ ನಮ್ಮ ಉದ್ಯೋಗಿಗಳು ಮತ್ತು ಅವರ ಕುಟುಂಬಗಳ ಸುರಕ್ಷತೆ ಮತ್ತು ಯೋಗಕ್ಷೇಮವು ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ನಮ್ಮ ವ್ಯವಹಾರ ಸಾಮಾನ್ಯವಾಗಿ ನಡೆದುಕೊಂಡು ಹೋಗಲು ಬದ್ಧರಾಗಿದ್ದೇವೆ ಮತ್ತು ನಮ್ಮ ಗ್ರಾಹಕರಿಗೆ ನಿರಂತರ ಸೇವೆಗಳನ್ನು ಖಾತ್ರಿಪಡಿಸಿಕೊಳ್ಳುತ್ತೇವೆ. ಪ್ರಸ್ತುತ ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಹೈಬ್ರಿಡ್ ಮಾದರಿಯಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತೇವೆ,” ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವರ್ಕ್ ಫ್ರಮ್ ಹೋಮ್ ಸಂಕಷ್ಟ; ಮದುವೆಯ ದಿನವೂ ಲ್ಯಾಪ್ ಟಾಪ್, ಫೋನ್ ಹಿಡಿದು ಕುಳಿತ ವಧು
Published On - 6:08 pm, Tue, 31 May 22