Kingfisher Towers: ಕಿಂಗ್‌ಫಿಷರ್ ಟವರ್ಸ್‌ನಲ್ಲಿ ರೂ. 35.16 ಕೋಟಿಗೆ ಅಪಾರ್ಟ್‌ಮೆಂಟ್ ಖರೀದಿಸಿದ ಮಾಜಿ ಗೃಹ ಸಚಿವರ ಮಗ
ಬೆಂಗಳೂರಿನ ಕಿಂಗ್‌ಫಿಷರ್ ಟವರ್ಸ್‌ನಲ್ಲಿ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ಮಗ ರಾಣಾ ಜಾರ್ಜ್ ಐಷಾರಾಮಿ ಅಪಾರ್ಟ್ಮೆಂಟ್ಸ್ ಖರೀದಿಸಿದ್ದಾರೆ.
ಕರ್ನಾಟಕದ ಮಾಜಿ ಗೃಹ ಸಚಿವ ಕೆ.ಜೆ. ಜಾರ್ಜ್ ಅವರ ಮಗ ರಾಣಾ ಜಾರ್ಜ್ ಬೆಂಗಳೂರಿನ ‘ಕಿಂಗ್‌ಫಿಷರ್ ಟವರ್ಸ್’ನಲ್ಲಿ ಅತ್ಯಂತ ದುಬಾರಿ ವಸತಿ ಯೋಜನೆಗಳಲ್ಲಿ ರೂ. 35.16 ಕೋಟಿಗೆ, ಅಂದರೆ ಪ್ರತಿ ಚದರ ಅಡಿಗೆ ರೂ. 42,262ರಂತೆ ಐಷಾರಾಮಿ ಅಪಾರ್ಟ್‌ಮೆಂಟ್ (Apartment) ಖರೀದಿಸಿದ್ದಾರೆ. 29ನೇ ಮಹಡಿಯಲ್ಲಿ ಇರುವ 8321 ಚದರ ಅಡಿ ಯೂನಿಟ್ ಅನ್ನು ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ರೆಜ್ವಾನ್ ರಜಾಕ್ ಅವರು ಮಾರಾಟ ಮಾಡಿದ್ದಾರೆ. ಮಾರಾಟ ವಹಿವಾಟಿಗೆ ಮೇ 16ರಂದು ಸಹಿ ಹಾಕಲಾಗಿದೆ ಎಂಬುದನ್ನು ಸಾರ್ವಜನಿಕವಾಗಿ ಲಭ್ಯವಿರುವ ಆಸ್ತಿ ನೋಂದಣಿ ಡೇಟಾವನ್ನು ಒಟ್ಟುಗೂಡಿಸುವ Zapkey ಮೂಲಕ ದೊರೆತ ದಾಖಲೆಗಳು ತೋರಿಸಿವೆ.
4.5 ಎಕರೆಯಲ್ಲಿ ನಿರ್ಮಿಸಲಾದ ಕಿಂಗ್‌ಫಿಷರ್ ಟವರ್ಸ್ ಈ ಹಿಂದೆ ಮದ್ಯದ ಉದ್ಯಮಿ ವಿಜಯ್ ಮಲ್ಯ ಅವರ ಪೂರ್ವಜರ ಮನೆಯನ್ನು ಹೊಂದಿತ್ತು. 34 ಅಂತಸ್ತಿನ ಗಗನಚುಂಬಿ ಕಟ್ಟಡವು ಮೂರು ಬ್ಲಾಕ್‌ಗಳಲ್ಲಿ ಸುಮಾರು 81 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ ಮತ್ತು 40,000 ಚದರ ಅಡಿ ಮಹಲು-ಶೈಲಿಯ ಪೆಂಟ್‌ಹೌಸ್ ಅನ್ನು ಮಲ್ಯಗಾಗಿ ರೂಪಿಸಲಾಗಿದೆ. ಈ ಪ್ರಾಜೆಕ್ಟ್ ನಿರ್ಮಿಸಿದ ಯುನೈಟೆಡ್ ಬ್ರೂವರೀಸ್ ಹೋಲ್ಡಿಂಗ್ಸ್ ಲಿಮಿಟೆಡ್ (UBHL) ಮತ್ತು ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ಸ್ ಲಿಮಿಟೆಡ್ ಮಧ್ಯೆ ಜಂಟಿ ಅಭಿವೃದ್ಧಿ ಒಪ್ಪಂದದ ಅಡಿಯಲ್ಲಿ ನಿರ್ಮಿಸಲಾದ ಐಷಾರಾಮಿ ರೀಟೇಲ್ ಮತ್ತು ಕಚೇರಿ ಸ್ಥಳವಾದ UB ಸಿಟಿಯ ವಿಸ್ತರಣೆಯಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಒಂದು ದಶಕದ ಹಿಂದೆ ಈ ಪ್ರಾಜೆಕ್ಟ್ ಪ್ರಾರಂಭಿಸಲಾಯಿತು.
ಅಂದಹಾಗೆ, ಈ ಬಗ್ಗೆ ಪ್ರಶ್ನೆಗಳಿಗೆ ರಜಾಕ್ ಪ್ರತಿಕ್ರಿಯಿಸಲಿಲ್ಲ, ಆದರೆ ರಾಣಾ ಜಾರ್ಜ್ ಅವರನ್ನು ತಕ್ಷಣವೇ ತಲುಪಲು ಸಾಧ್ಯವಾಗಿಲ್ಲ. ಕಿಂಗ್‌ಫಿಷರ್ ಟವರ್ಸ್‌ನಲ್ಲಿ ಎರಡು ವಹಿವಾಟುಗಳು 2018ರಲ್ಲಿ ವರದಿಯಾಗಿದ್ದು, ಎರಡು 8,450 ಚದರ ಅಡಿ ಅಪಾರ್ಟ್‌ಮೆಂಟ್‌ಗಳನ್ನು ಕಂಪೆನಿಯ ಉನ್ನತ ಕಾರ್ಯನಿರ್ವಾಹಕರು ಖರೀದಿಸಿದ್ದಾರೆ. ಆಗ ಅಪಾರ್ಟ್‌ಮೆಂಟ್‌ಗಳನ್ನು ತಲಾ ರೂ. 35 ಕೋಟಿಗೆ ಮರು ಮಾರಾಟ ಮಾಡಲಾಗಿತ್ತು. “ಕೊವಿಡ್ ನಂತರದ ಉನ್ನತ-ಮಟ್ಟದ ಜೀವನಶೈಲಿ, ಸೌಕರ್ಯಗಳು ಮತ್ತು ಕ್ಯುರೇಟೆಡ್ ವಿನ್ಯಾಸಗಳೊಂದಿಗೆ ಐಷಾರಾಮಿ ಅಪಾರ್ಟ್ಮೆಂಟ್ಗಳಿಗೆ ಉತ್ತಮ ಬೇಡಿಕೆ ಇದೆ. ಐಷಾರಾಮಿ ಮನೆಗಳ ಮಾರಾಟವು ಹೆಚ್ಚುತ್ತಿದೆ ಮತ್ತು ಬೇಡಿಕೆಯು ದೃಢವಾಗಿ ಕಾಣುತ್ತದೆ,” ಎಂದು Zapkey ಸಹ-ಸಂಸ್ಥಾಪಕ ಸಂದೀಪ್ ರೆಡ್ಡಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ