Uttar Pradesh; ಉತ್ತರ ಪ್ರದೇಶದಲ್ಲಿ ಹೂಡಿಕೆಗೆ ಕರ್ನಾಟಕದ ಉದ್ದಿಮೆಗಳ ಒಲವು; ಮುಂಚೂಣಿಯಲ್ಲಿ ಇನ್ಫೋಸಿಸ್, ಓಲಾ

|

Updated on: Jan 24, 2023 | 1:28 PM

ಉತ್ತರ ಪ್ರದೇಶದಲ್ಲಿ ಹೂಡಿಕೆ ಮಾಡಲು ಕರ್ನಾಟಕ ಮೂಲದ ಉದ್ಯಮಿಗಳು ಹಾಗೂ ಉದ್ದಿಮೆಗಳು ಹೆಚ್ಚು ಆಸಕ್ತಿ ತೋರಿವೆ. ಈ ಪೈಕಿ ಇನ್ಫೋಸಿಸ್ ಹಾಗೂ ಓಲಾ ಎಲೆಕ್ಟ್ರಿಕ್ ಮುಂಚೂಣಿಯಲ್ಲಿವೆ.

Uttar Pradesh; ಉತ್ತರ ಪ್ರದೇಶದಲ್ಲಿ ಹೂಡಿಕೆಗೆ ಕರ್ನಾಟಕದ ಉದ್ದಿಮೆಗಳ ಒಲವು; ಮುಂಚೂಣಿಯಲ್ಲಿ ಇನ್ಫೋಸಿಸ್, ಓಲಾ
ಸಾಂದರ್ಭಿಕ ಚಿತ್ರ (ಕೃಪೆ; ಉತ್ತರ ಪ್ರದೇಶ ಸರ್ಕಾರದ ವೆಬ್​​ಸೈಟ್)
Follow us on

ಬೆಂಗಳೂರು: ಉತ್ತರ ಪ್ರದೇಶದಲ್ಲಿ (Uttar Pradesh) ಹೂಡಿಕೆ ಮಾಡಲು ಕರ್ನಾಟಕ (Karnataka) ಮೂಲದ ಉದ್ಯಮಿಗಳು ಹಾಗೂ ಉದ್ದಿಮೆಗಳು ಹೆಚ್ಚು ಆಸಕ್ತಿ ತೋರಿವೆ. ಈ ಪೈಕಿ ಇನ್ಫೋಸಿಸ್ (Infosys) ಹಾಗೂ ಓಲಾ ಎಲೆಕ್ಟ್ರಿಕ್ (Ola Electric) ಮುಂಚೂಣಿಯಲ್ಲಿವೆ. ಉತ್ತರ ಪ್ರದೇಶದಲ್ಲಿ ಮುಂದಿನ ತಿಂಗಳು ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ (Uttar Pradesh Global Investors Summit 2023) ಪೂರ್ವಭಾವಿಯಾಗಿ ಸಚಿವರು ಮತ್ತು ಕೆಲವು ಉದ್ಯಮಿಗಳ ನಡುವೆ ಸಭೆ ನಡೆದಿದೆ. ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕದ ಉದ್ಯಮಿಗಳು ಸಹ ಭಾಗಿಯಾಗಿದ್ದಾರೆ. ಇನ್ಫೋಸಿಸ್, ಓಲಾ ಮುಂತಾದ ಉನ್ನತ ಕಾರ್ಪೊರೇಟ್‌ಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. ಇನ್ಫೋಸಿಸ್ ಕಾರ್ಪೊರೇಟ್ ವ್ಯವಹಾರಗಳ ಮುಖ್ಯಸ್ಥ ಸಂತೋಷ್ ಅನಂತಪುರ, ಓಲಾ ಎಲೆಕ್ಟ್ರಿಕ್ ವ್ಯವಸ್ಥಾಪಕ ನಿರ್ದೇಶಕ ಮೋಹಿತ್ ಸೇವಾಕ್ರಮಣಿ ಮತ್ತು ಗ್ರೂಪ್ ಸಿಎಫ್​ಒ ಜಿಆರ್ ಅರುಣ್ ಕುಮಾರ್ ಉಪಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಅವರನ್ನು ಭೇಟಿಯಾಗಿ ಉತ್ತರ ಪ್ರದೇಶದಲ್ಲಿ ಹೂಡಿಕೆಯ ಪ್ರಸ್ತಾವ ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಧ್ಯಕ್ಷ ಬಿ ವಿ ಗೋಪಾಲರೆಡ್ಡಿ, ಕಿಸಾನ್ ಕ್ರಾಫ್ಟ್ ಎಂಡಿ ರವೀಂದ್ರ ಅಗರ್ವಾಲ್ ಬಿ.ಡಿ ಜೊತೆಗೂ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಸಭೆ ನಡೆಸಿದ್ದಾರೆ. ಇದನ್ನು ಹೊರತುಪಡಿಸಿ, ಝೆನ್ಸಾರ್ ಏರೋಸ್ಪೇಸ್ ಮತ್ತು ಇನ್​ಫಾರ್ಮೇಶನ್ ಟೆಕ್ನಾಲಜಿ ಸಿಇಒ ಅರುಣಾಕರ್ ಮಿಶ್ರಾ ಕೂಡ ಉತ್ತರ ಪ್ರದೇಶದಲ್ಲಿ ಏರೋಸ್ಪೇಸ್ ಕ್ಷೇತ್ರದಲ್ಲಿ ಹೂಡಿಕೆಗೆ ಒಲವು ವ್ಯಕ್ತಪಡಿಸಿದ್ದಾರೆ.

ಪ್ರಸಿದ್ಧ ಕಂಪನಿಗಳು ಮಾತ್ರವಲ್ಲದೆ ಯುವ ಉದ್ಯಮಿಗಳು ಕೂಡ ಸಭೆಯಲ್ಲಿ ಭಾಗವಹಿಸಿ. ಉತ್ತರ ಪ್ರದೇಶದಲ್ಲಿ ಹೂಡಿಕೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ತಮ್ಮ ಕಂಪನಿಯು ಉತ್ತರ ಪ್ರದೇಶದಲ್ಲಿ ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಜನರ ಆಲೋಚನೆಯನ್ನು ಬದಲಾಯಿಸಿದ್ದಾರೆ. ಉತ್ತರ ಪ್ರದೇಶವನ್ನು ಬದಲಾಯಿಸಲು ನಮ್ಮ ಕಂಪನಿಯು ಹೂಡಿಕೆ ಮಾಡಲು ಉತ್ಸುಕವಾಗಿದೆ ಎಂದು ಕಿಸಾನ್ ಕ್ರಾಫ್ಟ್ ಲಿಮಿಟೆಡ್‌ನ ಎಂಡಿ ರವೀಂದ್ರ ಅಗರ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ: World’s Richest Person: ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿ; ನಾಲ್ಕನೇ ಸ್ಥಾನಕ್ಕೆ ಕುಸಿದ ಗೌತಮ್ ಅದಾನಿ

ತಮ್ಮ ಕಂಪನಿಯು ಉತ್ತರ ಪ್ರದೇಶದಲ್ಲಿ ಹಾರ್ಡ್‌ವೇರ್ ಉತ್ಪಾದನಾ ಘಟಕ ಮತ್ತು ಸೆಮಿಕಂಡಕ್ಟರ್ ನಿರ್ಮಾಣ ಘಟಕವನ್ನು ಸ್ಥಾಪಿಸಲು ಬಯಸುತ್ತದೆ ಎಂದು ಬೆಂಗಳೂರಿನ ಅರುಬೈಟೊ ಇಂಡಿಯಾ ಪ್ರೈವೆಟ್ ಲಿಮಿಟೆಡ್​ನ ಸಿಎಂಡಿ ಗುರುರಾಜ್ ಆರ್ ಇಟಗಿ ಹೇಳಿದ್ದಾರೆ. ಯೋಗಿ ಆದಿತ್ಯನಾಥ್ ಅಧಿಕಾರಾವಧಿಯಲ್ಲಿ ಉತ್ತರ ಪ್ರದೇಶದಲ್ಲಿ ವಿಶೇಷವಾಗಿ ಮೂಲಸೌಕರ್ಯ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ನಮ್ಮದು ಸೆಮಿಕಂಡಕ್ಟರ್ ತಯಾರಿಕೆಯಲ್ಲಿ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿದೆ. ಅದೇ ರೀತಿ ಸೆಮಿಕಂಡಕ್ಟರ್ ತಯಾರಿಕೆಯ ಪ್ರಮುಖ ಕೇಂದ್ರವಾಗಲು ಉತ್ತರ ಪ್ರದೇಶ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿದೆ ಎಂದು ನಾವು ಭಾವಿಸುತ್ತೇವೆ. ಉತ್ತರ ಪ್ರದೇಶದ ಅಭಿವೃದ್ಧಿಯ ಈ ಪಯಣವು ರಾಜ್ಯದಲ್ಲಿ ಉದ್ಯೋಗವನ್ನು ಹೆಚ್ಚಿಸುವುದಲ್ಲದೆ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶ ಜಾಗತಿಕ ಹೂಡಿಕೆದಾರರ ಸಮಾವೇಶವು 2023ರ ಫೆಬ್ರವರಿ 10ರಿಂದ 12ರ ವರಗೆ ನಡೆಯಲಿದೆ. ಭಾರತದ ವಿವಿಧ ರಾಜ್ಯಗಳ ಉದ್ಯಮಿಗಳು ಮತ್ತು ವಿದೇಶಗಳ ಹೂಡಿಕೆದಾರರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ