
ಬೆಂಗಳೂರು: ಭಾರತದ ಅತಿದೊಡ್ಡ ಐಟಿ ಕಂಪನಿಗಳಲ್ಲೊಂದಾದ ಇನ್ಫೋಸಿಸ್ (Infosys) ಏಪ್ರಿಲ್ 13ರಂದು ತನ್ನ ಕೊನೆಯ ತ್ರೈಮಾಸಿಕ ಅವಧಿಯಲ್ಲಿನ ಲಾಭ ನಷ್ಟದ ವರದಿ ಪ್ರಕಟಿಸಿದೆ. ಅದರಂತೆ ಮಾರ್ಚ್ ಅಂತ್ಯದ ಕೊನೆಯ ಕ್ವಾರ್ಟರ್ನಲ್ಲಿ (Last Quarter of 2022-23) ಇನ್ಫೋಸಿಸ್ ಸಂಸ್ಥೆ 6,128 ಕೋಟಿ ರೂ ಲಾಭ ತೋರಿಸಿದೆ. ಕಳೆದ ವರ್ಷದ ಇದೇ ಕ್ವಾರ್ಟರ್ನಲ್ಲಿ ಗಳಿಸಿದ್ದ ಲಾಭಕ್ಕಿಂತ ಈ ಬಾರಿ ಶೇ. 7.8ರಷ್ಟು ಹೆಚ್ಚಿನ ಲಾಭ ಮಾಡಿರುವುದು ತಿಳಿದುಬರುತ್ತದೆ. ಇನ್ಫೋಸಿಸ್ನ ಆದಾಯವೂ ಇದೇ ಅವಧಿಯಲ್ಲಿ ಶೇ. 16ರಷ್ಟು ಹೆಚ್ಚಿದೆ. ಹಿಂದಿನ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್ನಲ್ಲಿ 32,276 ಕೋಟಿ ರೂ ಆದಾಯ ತೋರಿಸಿದ್ದ ಸಂಸ್ಥೆ 2022-23ರ ಕೊನೆಯ ತ್ರೈಮಾಸಿಕ ಅವಧಿಯಲ್ಲಿ 37,441 ಕೋಟಿ ರೂ ಆದಾಯ ಗಳಿಸಿರುವುದಾಗಿ ಘೋಷಿಸಿದೆ. ಮುಂದಿನ ಹಣಕಾಸು ವರ್ಷ, ಅಂದರೆ 2023-24ರ ವರ್ಷದಲ್ಲಿ ತನ್ನ ಆದಾಯ ಶೇ. 4ರಿಂದ 7ರಷ್ಟು ಹೆಚ್ಚಾಗಬಹುದು ಎಂದೂ ಇದೇ ವೇಳೆ ಇನ್ಫೋಸಿಸ್ ನಿರೀಕ್ಷೆ ಇಟ್ಟುಕೊಂಡಿದೆ.
ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಇನ್ಫೋಸಿಸ್ ಸಂಸ್ಥೆ ತನ್ನ ಷೇರುದಾರರಿಗೆ ಪ್ರತೀ ವರ್ಷವೂ ಡಿವಿಡೆಂಡ್ ಕೊಡುವ ಕೆಲವೇ ಸಂಸ್ಥೆಗಳಲ್ಲಿ ಒಂದು. ಹಿಂದಿನ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ನ ಪ್ರತೀ ಷೇರಿಗೆ 31 ರೂ ಲಾಭಾಂಶ ಕೊಡಲಾಗಿತ್ತು. ಈ ಹಣಕಾಸು ವರ್ಷದಲ್ಲಿ 34 ರೂನಂತೆ ಡಿವಿಡೆಂಡ್ ಕೊಡಲಾಗಿದೆ.
2022 ಅಕ್ಟೋಬರ್ ತಿಂಗಳಲ್ಲಿ ಪ್ರತೀ ಷೇರಿಗೆ 16.50 ರೂ ಮಧ್ಯಂತರ ಲಾಭಾಂಶವನ್ನು ಘೋಷಿಸಲಾಗಿತ್ತು. ಇದೀಗ ಇನ್ನೂ 17.50 ರೂ ಡಿವಿಡೆಂಡ್ ಘೋಷಿಸಲಾಗಿದೆ. ಅಲ್ಲಿಗೆ 2022-23ರ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ ಪ್ರತಿ ಷೇರಿಗೆ ಒಟ್ಟು 34 ರೂ ಡಿವಿಡೆಂಡ್ ಅನ್ನು ತನ್ನ ಷೇರಿಗೆ ಕೊಟ್ಟಂತಾಗುತ್ತದೆ. ಈಗಿನ ಷೇರುಮಾರುಕಟ್ಟೆಯಲ್ಲಿ ಇನ್ಫೋಸಿಸ್ನ ಷೇರುಬೆಲೆ 1,388 ರೂ ಇದೆ. ಇದು ಈ ವರ್ಷದ ಅತ್ಯಂತ ಕಡಿಮೆ ಬೆಲೆಗೆ ಸಮೀಪವೇ ಇದೆ. ಇನ್ಫೋಸಿಸ್ ತನ್ನ ಷೇರುಬೆಲೆಯ ಶೇ. 2ಕ್ಕಿಂತಲೂ ಹೆಚ್ಚು ಮೊತ್ತವನ್ನು ಡಿವಿಡೆಂಡ್ ಆಗಿ ಹೂಡಿಕೆದಾರರಿಗೆ ನೀಡಿರುವುದು ಗಮನಾರ್ಹ.
ಇನ್ಫೋಸಿಸ್ ಸಹ–ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ರ ಪತ್ನಿಯೂ ಹೌದು. ಇವರು ಇನ್ಫೋಸಿಸ್ನಲ್ಲಿ 3.89 ಕೋಟಿ ಷೇರುಗಳನ್ನು ಹೊಂದಿದ್ದಾರೆ. ಅಕ್ಷತಾ ಮೂರ್ತಿ ಈ ಹಣಕಾಸು ವರ್ಷದಲ್ಲಿ ಒಟ್ಟು 132.40 ಕೋಟಿ ರೂ ಮೊತ್ತದಷ್ಟು ಡಿವಿಡೆಂಡ್ ಅನ್ನು ಪಡೆಯಲಿದ್ದಾರೆ.
ಅಂದಹಾಗೆ, ಇನ್ಫೋಸಿಸ್ನಲ್ಲಿ ನಾರಾಯಣಮೂರ್ತಿ ಅವರ ಕುಟುಂಬದ ಷೇರುಪಾಲು ಇರುವುದು ಶೇ. 3.6 ಮಾತ್ರ. ಇದರಲ್ಲಿ ನಾರಾಯಣಮೂರ್ತಿ ಅವರ ಮಗ ರೋಹನ್ ಮೂರ್ತಿ ಬಳಿ ಅತಿ ಹೆಚ್ಚು ಷೇರುಗಳಿವೆ. ಅವರು ಶೇ. 1.45ರಷ್ಟು ಷೇರು ಹೊಂದಿದ್ದಾರೆ. ನಂತರದ ಸ್ಥಾನ ಅಕ್ಷತಾ ಮೂರ್ತಿ ಅವರದ್ದು. ಅವರು ಶೇ. 0.93ರಷ್ಟು ಷೇರು ಹೊಂದಿದ್ದಾರೆ. ಸುಧಾಮೂರ್ತಿ ಅವರು ಶೇ. 0.82 ಮತ್ತು ನಾರಾಯಣಮೂರ್ತಿ ಅವರು ಶೇ. 0.40ರಷ್ಟು ಷೇರುಗಳನ್ನು ಹೊಂದಿದ್ದಾರೆ.
ಮೂರ್ತಿ ಕುಟುಂಬಕ್ಕಿಂತ ಇನ್ಫೋಸಿಸ್ನ ಇತರ ಪ್ರೊಮೋಟರ್ಗಳು ಹೆಚ್ಚು ಷೇರುಗಳನ್ನು ಹೊಂದಿರುವುದು ವಿಶೇಷ. ಪ್ರೊಮೋಟರ್ಗಳ ಪೈಕಿ ಇನ್ಫೋಸಿಸ್ನ ಸಹ–ಸಂಸ್ಥಾಪಕರಲ್ಲೊಬ್ಬರಾದ ನಂದನ್ ನಿಲೇಕಣಿ 10 ಕೋಟಿಗೂ ಅಧಿಕ ಷೇರುಗಳನ್ನು ಹೊಂದಿದ್ದಾರೆ. ಸಲೀಲ್ ಪರೇಖ್, ಮೋಹಿತ್ ಜೋಷಿ, ಇಂದರ್ಜೀತ್ ಸಾವನೀ, ಕೃಷ್ಣಮೂರ್ತಿ ಶಂಕರ್ ಅವರುಗಳೂ ಸಾಕಷ್ಟು ಷೇರುಗಳನ್ನು ಹೊಂದಿದ್ದಾರೆ.
ಇನ್ಫೋಸಿಸ್ನ ಒಟ್ಟು ಷೇರುಗಳು: 418,60,86,843 (418 ಕೋಟಿ)
GDR ಎಂದರೆ ಗ್ಲೋಬಲ್ ಡೆಪಾಸಿಟರಿ ರಿಸಿಪ್ಟ್ಸ್ (Global Depository Receipts). ಒಂದು ದೇಶದ ಸಂಸ್ಥೆ ಬೇರೆ ದೇಶಗಳ ಷೇರು ಮಾರುಕಟ್ಟೆಗಳಲ್ಲಿ ಲಿಸ್ಟ್ ಆಗಲು ಅವಕಾಶ ಕೊಡುವ ಒಂದು ವ್ಯವಸ್ಥೆ ಈ ಜಿಡಿಆರ್. ಇನ್ಫೋಸಿಸ್ ಸಂಸ್ಥೆ ಅಮೆರಿಕದ ನಾಸ್ಡಾಕ್, ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ಗಳಲ್ಲಿ ಜಿಡಿಆರ್ ಮೂಲಕ ಲಿಸ್ಟ್ ಆಗಿದೆ. ಈ ಜಿಡಿಆರ್ ಮೂಲಕ ಇನ್ಫೋಸಿಸ್ ಶೇ. 13ರಷ್ಟು ಷೇರುಗಳನ್ನು ಹಂಚಿದೆ.
Published On - 10:38 am, Fri, 14 April 23