ನವದೆಹಲಿ, ಜನವರಿ 31: ಭಾರತದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಎನಿಸಿರುವ ಇನ್ಫೋಸಿಸ್ಗೆ ಅಮೆರಿಕದ ತೆರಿಗೆ ಪ್ರಾಧಿಕಾರವೊಂದು ದಂಡ ವಿಧಿಸಿದೆ. ಸುಮಾರು ಏಳು ಲಕ್ಷ ಕೋಟಿ ರೂ ಸಮೀಪದಷ್ಟು ಮೌಲ್ಯದ ಇನ್ಫೋಸಿಸ್ ಸಂಸ್ಥೆಗೆ ಅಮೆರಿಕದ ನೆವಾಡ ತೆರಿಗೆ ಇಲಾಖೆ (Nevada department of Taxation) 18,702 ರೂನಷ್ಟು ದಂಡ ವಿಧಿಸಿದೆ. ಶಾರ್ಟ್ ಪೇಮೆಂಟ್ (Short Payment) ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ತೆರಿಗೆ ಅಧಿಕಾರಿಗಳು ಇನ್ಫೋಸಿಸ್ಗೆ ದಂಡ ಹಾಕಿದ್ದಾರೆ. ಜನವರಿ 25ರಂದು ತನಗೆ ನೆವಾಡದ ತೆರಿಗೆ ಸಂಸ್ಥೆಯಿಂದ ನೋಟೀಸ್ ಬಂದಿರುವುದಾಗಿ ಇನ್ಫೋಸಿಸ್ ತನ್ನ ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ತಿಳಿಸಿದೆ.
ಇನ್ಫೋಸಿಸ್ 2021ರ ವರ್ಷದ ನಾಲ್ಕನೇ ಕ್ವಾರ್ಟರ್ನಿಂದ ಹಿಡಿದು 2022ರ ಮೊದಲ ಕ್ವಾರ್ಟರ್ವರೆಗಿನ ಅವಧಿಯಲ್ಲಿ ಶಾರ್ಟ್ ಪೇಮೆಂಟ್ ನಿಯಮ ಉಲ್ಲಂಘಿಸಿರುವ ಆರೋಪ ಇದೆ. ‘ದಂಡದ ಮೊತ್ತ ಸಂಗ್ರಹಕ್ಕೆಂದು ಜನವರಿ 25ರಂದು ನೆವಾಡದ ಟ್ಯಾಕ್ಸೇಶನ್ ಡಿಪಾರ್ಟ್ಮೆಂಟ್ ನೋಟೀಸ್ ಕಳುಹಿಸಿದೆ. 2021ರ ನಾಲ್ಕನೇ ಕ್ವಾರ್ಟರ್ನಿಂದ 2022ರ ಮೊದಲ ಕ್ವಾರ್ಟರ್ಗೆ ಮಾರ್ಪಡಿಸಲಾದ ಬಿಸಿನೆಸ್ ಟ್ಯಾಕ್ಸ್ನಲ್ಲಿ ಶಾರ್ಟ್ ಪೇಮೆಂಟ್ ಮಾಡಿರುವ ಆರೋಪ ಮಾಡಲಾಗಿದೆ.’ ಎಂದು ಇನ್ಫೋಸಿಸ್ ತಿಳಿಸಿದೆ.
ಇದನ್ನೂ ಓದಿ: Import Duty: ಮೊಬೈಲ್ ಫೋನ್ ಬಿಡಿಭಾಗಗಳಿಗೆ ಆಮದು ಸುಂಕ ಕಡಿಮೆ ಮಾಡಿದ ಸರ್ಕಾರ; ಉತ್ಪಾದನಾ ವಲಯಕ್ಕೆ ಖುಷಿ ಸುದ್ದಿ
ಇನ್ವಾಯ್ಸ್ ಆಗಿರುವ ಮೊತ್ತಕ್ಕಿಂತ ಕಡಿಮೆ ಹಣವನ್ನು ಪಾವತಿಸುವುದಕ್ಕೆ ಶಾರ್ಟ್ ಪೇಮೆಂಟ್ ಅನ್ನುವುದು. ಆದರೆ, ಇನ್ಫೋಸಿಸ್ ತೆರಿಗೆ ಪ್ರಾಧಿಕಾರದಿಂದ ನೋಟೀಸ್ ಪಡೆದಿದೆಯಾದರೂ ಶಾರ್ಟ್ ಪೇಮೆಂಟ್ ಆರೋಪವನ್ನು ಒಪ್ಪಿಲ್ಲ. ಲಕ್ಷಾಂತರ ಕೋಟಿ ರೂ ಮೌಲ್ಯದ ಕಂಪನಿಗೆ ಕೆಲವೇ ಸಾವಿರ ರೂ ದಂಡವೇನೂ ದೊಡ್ಡ ವಿಚಾರವಲ್ಲ. ಆದರೆ, ತೆರಿಗೆ ಕಳ್ಳತನವೆಂಬ ಪುಟ್ಟ ಕಳಂಕ ಮೆತ್ತಿಕೊಳ್ಳುವ ಆತಂಕವಂತೂ ಇದೆ.
ಈ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಹೆಜ್ಜೆ ಇಡುವುದಾಗಿ ಇನ್ಫೋಸಿಸ್ ಹೇಳಿದೆ. ಈ ಬೆಳವಣಿಗೆಯಿಂದ ಸಂಸ್ಥೆಯ ಚಟುವಟಿಕೆಯ ಮೇಲೆ ಯಾವ ಪರಿಣಾಮ ಇಲ್ಲ ಎಂದೂ ಸ್ಪಷ್ಪಪಡಿಸಿದೆ.
ಇನ್ಫೋಸಿಸ್ಗೆ ಶಾರ್ಟ್ ಪೇಮೆಂಟ್ ಆರೋಪದಲ್ಲಿ ದಂಡ ವಿಧಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ 2023ರ ಆಗಸ್ಟ್ ತಿಂಗಳಲ್ಲಿ ಅಮೆರಿಕದ ಫ್ಲೋರಿಡಾ ರಾಜ್ಯದ ಕಂದಾಯ ಇಲಾಖೆ ಇನ್ಫೋಸಿಸ್ಗೆ 76.92 ಡಾಲರ್ ಹಣದ ದಂಡ ಹಾಕಿತ್ತು.
ಇದನ್ನೂ ಓದಿ: Finance Commission: 16ನೇ ಫೈನಾನ್ಸ್ ಕಮಿಷನ್ ಸದಸ್ಯರ ನೇಮಕ; ಏನಿರುತ್ತದೆ ಈ ಆಯೋಗದ ಪಾತ್ರ? ಯಾರಿದ್ದಾರೆ ಈ ಆಯೋಗದಲ್ಲಿ?
ಅದೇ ವರ್ಷ (2023) ಅಕ್ಟೋಬರ್ ತಿಂಗಳಲ್ಲಿ ಮಸಾಚುಸೆಟ್ಸ್ನ ಪ್ರಾಧಿಕಾರವೊಂದು 1,101.96 ಡಾಲರ್ ದಂಡ ವಿಧಿಸಿತ್ತು.
ಅಮೆರಿಕದಲ್ಲಿ ಮಾತ್ರವಲ್ಲ ಭಾರತದಲ್ಲೂ ತೆರಿಗೆ ಇಲಾಖೆಯಿಂದ ಇನ್ಫೋಸಿಸ್ಗೆ ದಂಡ ಬಿದ್ದಿರುವುದು ಇದೆ. 2023ರ ಸೆಪ್ಟೆಂಬರ್ ತಿಂಗಳಲ್ಲಿ ವಾಣಿಜ್ಯ ತೆರಿಗೆ ಇಲಾಖೆ 26.5 ಲಕ್ಷ ರೂ ಮೊತ್ತದ ಐಜಿಎಸ್ಟಿ ಹಾಗೂ ದಂಡ ಮತ್ತು ಬಡ್ಡಿಗಾಗಿ ಡಿಮ್ಯಾಂಡ್ ನೋಟೀಸ್ ಕಳುಹಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ