ಟ್ಯಾಕ್ಸ್ ಪಾವತಿಯಿಂದ ಹಿಡಿದು ದಾಖಲೆಗಳವರೆಗೆ, ಪಿತ್ರಾರ್ಜಿತ ಆಸ್ತಿ ವರ್ಗಾವಣೆಗೆ ಅಗತ್ಯವಾದವುಗಳು

Inheritance property and the tax rules for heirs in India: ಪಿತ್ರಾರ್ಜಿತ ಆಸ್ತಿಯನ್ನು ಪಡೆಯುವಾಗ ಮತ್ತು ನಂತರ ಕೆಲ ನಿಯಮಗಳನ್ನು ಪಾಲಿಸಬೇಕಾದ್ದು ಅಗತ್ಯ. ನೀವು ಆಸ್ತಿ ಪಡೆಯಲಿರುವ ಮೃತರ ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದು ನಿಮ್ಮ ಜವಾಬ್ದಾರಿ. ಅವರ ಟ್ಯಾಕ್ಸ್ ಬಾಧ್ಯತೆಗಳಿದ್ದರೆ ತೀರಿಸಬೇಕು. ಮೃತರು ಯಾವುದಾದರೂ ಸಾಲ ಬಾಧ್ಯತೆ ಹೊಂದಿದ್ದರೆ ಅದನ್ನೂ ತೀರಿಸಬೇಕು.

ಟ್ಯಾಕ್ಸ್ ಪಾವತಿಯಿಂದ ಹಿಡಿದು ದಾಖಲೆಗಳವರೆಗೆ, ಪಿತ್ರಾರ್ಜಿತ ಆಸ್ತಿ ವರ್ಗಾವಣೆಗೆ ಅಗತ್ಯವಾದವುಗಳು
ಆಸ್ತಿ ವರ್ಗಾವಣೆ

Updated on: Feb 15, 2026 | 3:13 PM

ನಿಮ್ಮ ತಂದೆ ಮತ್ತು ತಾಯಿ ನಿಧನದ ನಂತರ, ಅವರ ವಾರಸುದಾರರಾದ ನೀವು ಅವರ ಆಸ್ತಿಪಾಸ್ತಿ ಪಡೆಯಲು ಅರ್ಹರಿರುತ್ತೀರಿ. ಈ ಪಿತ್ರಾರ್ಜಿತ ಆಸ್ತಿ (Inherited property) ಹಲವರಿಗೆ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಬಹುದು. ಪಿತ್ರಾರ್ಜಿತ ಆಸ್ತಿ ವರ್ಗಾವಣೆ ಮಾಡಿಕೊಳ್ಳುವ ಮುನ್ನ ಅನುಸರಿಸಬೇಕಾದ ಕೆಲ ವಿಧಾನಗಳು ಮತ್ತು ಬಾಧ್ಯತೆಗಳು ಇವೆ. ಮೃತರ ಟ್ಯಾಕ್ಸ್ ರಿಟರ್ನ್ ಸಲ್ಲಿಕೆಯಿಂದ ಹಿಡಿದು ಆಸ್ತಿಯ ಲಾಭ ಗಳಿಕೆ ಟ್ಯಾಕ್ಸ್​ವರೆಗೂ ನೀವು ತೆಗೆದುಕೊಳ್ಳಬೇಕಾದ ಕ್ರಮಗಳ ವಿವರ ಇಲ್ಲಿದೆ.

ಮೃತರ ಐಟಿ ರಿಟರ್ನ್ ಸಲ್ಲಿಕೆ

ಮೃತರು ನಿಧನವಾದ ವರ್ಷಕ್ಕೆ ಅವರ ಐಟಿ ರಿಟರ್ನ್ ಸಲ್ಲಿಕೆ ಮಾಡಬೇಕು. ಆ ವರ್ಷದ ಅವರ ಯಾವುದೇ ಆದಾಯವಿದ್ದರೂ ಅದನ್ನು ತೋರಿಸಿ, ಅದಕ್ಕೆ ತೆರಿಗೆ ಕಟ್ಟುವುದಿದ್ದರೆ ಕಟ್ಟಬೇಕು.

ಪಿತ್ರಾರ್ಜಿತ ಆಸ್ತಿಗೆ ಟ್ಯಾಕ್ಸ್ ಇರುವುದಿಲ್ಲ, ಆದರೆ ಇದು ಇರುತ್ತೆ…

ಅಮೆರಿಕದಲ್ಲಿರುವಂತೆ ಪಿತ್ರಾರ್ಜಿತ ಆಸ್ತಿಗೆ ಎಸ್ಟೇಟ್ ಟ್ಯಾಕ್ಸ್ ಎಂಬುದು ಭಾರತದಲ್ಲಿ ಇರುವುದಿಲ್ಲ. ನೀವು ಟ್ಯಾಕ್ಸ್ ರಹಿತವಾಗಿ ಆಸ್ತಿ ವರ್ಗಾವಣೆ ಮಾಡಿಕೊಳ್ಳಬಹುದು. ಆದರೆ, ಮುಂದೆ ಆ ಆಸ್ತಿಯಿಂದ ಆದಾಯ ಗಳಿಸತೊಡಗಿದರೆ ಅದಕ್ಕೆ ಟ್ಯಾಕ್ಸ್ ಅನ್ವಯ ಆಗುತ್ತದೆ.

ಇದನ್ನೂ ಓದಿ: ನಗರಗಳೇ ಅಭಿವೃದ್ಧಿ ಯಂತ್ರಗಳು; ಸರ್ಕಾರದಿಂದ 1 ಲಕ್ಷ ಕೋಟಿ ರೂ ಅರ್ಬನ್ ಚಾಲೆಂಜ್ ಫಂಡ್

ನಿಮ್ಮ ಇನ್ಕಮ್ ಟ್ಯಾಕ್ಸ್​ಗೆ ರಿಟರ್ನ್ ಸಲ್ಲಿಸುವಾಗ ಪಿತ್ರಾರ್ಜಿತ ಆಸ್ತಿ ಹಾಗೂ ಅದರಿಂದ ಸೃಷ್ಟಿಯಾಗುವ ಆದಾಯದ ಮಾಹಿತಿ ಇರಬೇಕು. ಪಿತ್ರಾರ್ಜಿತ ಆಸ್ತಿಯಾಗಿ ಬಂದ ಮನೆಯ ಬಾಡಿಗೆ ಆದಾಯವನ್ನು ‘ಇನ್ಕಮ್ ಫ್ರಂ ಹೌಸ್ ಪ್ರಾಪರ್ಟಿ’ ಎಂದು ತೋರಿಸಬೇಕು. ಬಡ್ಡಿ, ಡಿವಿಡೆಂಡ್ ಆದಾಯ ಇದ್ದರೆ ‘ಇನ್ಕಮ್ ಫ್ರಂ ಅದರ ಸೋರ್ಸಸ್’ ಎಂದು ತೋರಿಸಬೇಕು.

ಕ್ಯಾಪಿಟಲ್ ಗೇನ್ ಟ್ಯಾಕ್ಸ್

ನೀವು ಪಿತ್ರಾರ್ಜಿತವಾಗಿ ಪಡೆದ ಆಸ್ತಿಯನ್ನು ಮಾರಿದಾಗ ಅದಕ್ಕೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕಟ್ಟಬೇಕು. ಆ ಆಸ್ತಿಯನ್ನು ನಿಮ್ಮ ತಂದೆ ಅಥವಾ ತಾಯಿ ಖರೀದಿಸಿದಾಗ ಯಾವ ದರ ಇತ್ತು, ಮತ್ತು ಈಗ ದರಕ್ಕೆ ಮಾರಲಾಗಿದೆ, ಅದರಿಂದ ಬಂದಿರುವ ಲಾಭಕ್ಕೆ ಟ್ಯಾಕ್ಸ್ ಕಟ್ಟಬೇಕು. ಪಿತ್ರಾರ್ಜಿತವಾಗಿ ಪಡೆದ ಆಸ್ತಿಯನ್ನು ಎರಡಕ್ಕೂ ಹೆಚ್ಚು ವರ್ಷದ ಬಳಿಕ ಮಾರಿದಾಗ ಎಲ್​ಟಿಸಿಜಿ ಟ್ಯಾಕ್ಸ್ ಅನ್ವಯ ಆಗುತ್ತದೆ. ಇಲ್ಲದಿದ್ದರೆ ಎಸ್​​ಟಿಸಿಜಿ ಟ್ಯಾಕ್ಸ್ ಅನ್ವಯ ಆಗುತ್ತದೆ.

ಸಾಲ ಬಾಧ್ಯತೆ ಉಳಿದಿದ್ದರೆ ಕಟ್ಟಿರಿ…

ಮೃತರು ಯಾವುದಾದರೂ ಸಾಲ ಬಾಧ್ಯತೆ ಉಳಿಸಿಕೊಂಡಿದ್ದರೆ ಅದನ್ನು ತೀರಿಸುವುದು ವಾರಸುದಾರರ ಕರ್ತವ್ಯ. ಅದರಲ್ಲೂ ಆಸ್ತಿಯನ್ನು ಅಡಮಾನ ಇಟ್ಟು ಪಡೆದ ಸಾಲವನ್ನು ತೀರಿಸಿದರೆ ಮಾತ್ರವೇ ಆಸ್ತಿ ವರ್ಗಾವಣೆ ಸಾಧ್ಯ.

ಇದನ್ನೂ ಓದಿ: ಆಂಟ್ರೋಪಿಕ್ ಹಾಗೂ ಇತರ 13 ಎಐ ಕಂಪನಿಗಳೊಂದಿಗೆ ಮುಕೇಶ್ ಅಂಬಾನಿ ಅವರ ಜಿಯೋ ಮೈತ್ರಿ

ಸರಿಯಾದ ದಾಖಲೆಗಳು ಜೊತೆಗಿರಲಿ…

ನೀವು ಪಿತ್ರಾರ್ಜಿತವಾಗಿ ಆಸ್ತಿ ಪಡೆಯಲು ಹಕ್ಕುದಾರರಾಗಿದ್ದರೆ ಸರಿಯಾದ ದಾಖಲೆಗಳನ್ನು ಹೊಂದಿರಬೇಕು. ಉಯಿಲು ಇದ್ದರೆ ಅದು ಇರಬೇಕು. ಸಕ್ಸಶನ್ ಸರ್ಟಿಫಿಕೇಟ್, ಡೆತ್ ಸರ್ಟಿಫಿಕೇಟ್​ಗಳು ಇರಬೇಕು. ಆಸ್ತಿ ಮೌಲ್ಯಮಾಪನ ಮಾಡುವ ವ್ಯಾಲ್ಯುಯೇಶನ್ ರಿಪೋರ್ಟ್ ಇರಬೇಕು. ಆಸ್ತಿ ವರ್ಗಾವಣೆ ವೇಳೆ ಇದನ್ನು ಕೇಳಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ