
ಅಮೆರಿಕದ 22 ವರ್ಷದ ಹೇಡನ್ ಬೋಲ್ಸ್ (Hayden Bowles) ಜಾಗತಿಕ ವಿಡಿಯೋ ಪ್ಲಾಟ್ಫಾರ್ಮ್ಗಳಲ್ಲಿ ದೊಡ್ಡ ಫ್ಯಾನ್ ಬೇಸ್ ಪಡೆದುಕೊಂಡಿದ್ದಾನೆ. ಈತ ಬಹಳ ಚಿಕ್ಕ ವಯಸ್ಸಿನಲ್ಲೇ ಭರ್ಜರಿ ಹಣ ಸಂಪಾದನೆ ಮಾಡಿ ಎಲ್ಲರ ಗಮನ ಸೆಳೆದಾತ. 17ರ ವಯಸ್ಸಿನಲ್ಲಿ ಸ್ಕೂಲ್ ಡ್ರಾಪೌಟ್ ಆಗಿ ಪೂರ್ಣಪ್ರಮಾಣದಲ್ಲಿ ಹಣ ಸಂಪಾದನೆ ಹಾದಿ ತುಳಿದ ಹೇಡನ್ ಬೌಲ್ಸ್ ಈಗ ಕೋಟಿ ಕೋಟಿ ಹಣದ ಮಾಲೀಕನಾಗಿ ಪೂರ್ಣಾವಧಿ ಕೆಲವನ್ನೇ ಬಿಟ್ಟು ಬಹುತೇಕ ನಿವೃತ್ತ ಬದುಕು ದೂಡುತ್ತಿದ್ದಾನೆ. ಯಾರಿಗಾದರೂ ಇದು ಅಚ್ಚರಿ ಎನಿಸಬಹುದು. 22 ವರ್ಷಕ್ಕೆ ನಿವೃತ್ತಿಯಾಗುವ ಹುಚ್ಚು ಯಾಕೆ ಎಂದು ಕೇಳಬಹುದು. ನಿವೃತ್ತಿ ಎಂದರೆ ನಿವೃತ್ತಿಯೇ ಅಲ್ಲ, ನಮ್ಮ ನಿಮ್ಮ ಹಾಗೆ ಪೂರ್ಣಾವಧಿಯಲ್ಲಿ ಕೆಲಸ ಮಾಡುವುದಿಲ್ಲ. ಇಂತಿಷ್ಟು ಆದಾಯ ತರುವ ಮಾರ್ಗ ಸೃಷ್ಟಿಸಿಕೊಂಡು ಆರಾಮವಾಗಿ ಜೀವನ ನಡೆಸಿಕೊಂಡು ಹೋಗುತ್ತಿದ್ದಾನೆ.
ಈ ಹುಡುಗ ಅಥವಾ ಯುವಕನ ಜೀವನಚರಿತ್ರೆ ಯಾರಿಗಾದರೂ ಬೆಳಕು ತೋರಬಹುದು. 17ರ ವಯಸ್ಸಿಗೆ ಈತ ಆನ್ಲೈನ್ ಕೋರ್ಸ್ ನೀಡುವ ಇಕಾಮ್ಸೀಸನ್ (EcommSeason) ಎಂಬ ಕಂಪನಿ ಸ್ಥಾಪಿಸಿದ್ದ. ಆಗಲೇ ಇದು ಭರ್ಜರಿ ಆದಾಯ ತರತೊಡಗಿತ್ತು. 18ರ ವಯಸ್ಸಿಗೆ ಈತನಿಗೆ ಲ್ಯಾಂಬೋರ್ಗಿನಿ ಕಾರು ಕೊಳ್ಳುವಷ್ಟು ಆದಾಯ ಬರತೊಡಗಿತ್ತು. 19ರ ವಯಸ್ಸಿಗೆ ಈತ ಕೋಟ್ಯಾಧಿಪತಿಯಾಗಿದ್ದ. 2022ರಲ್ಲಿ ಈತನ ಆದಾಯ 15 ಮಿಲಿಯನ್ ಡಾಲರ್ಗೆ ಏರಿತ್ತು. ಇದರ ಜೊತೆಗೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಬಹಳಷ್ಟು ಹೂಡಿಕೆ ಮಾಡಿದ. ಈಗ ಹಣ ಸಂಪಾದನೆಯ ಕಲೆ ಹೇಡನ್ ಬೌಲ್ಸ್ಗೆ ಕರಗತವಾಗಿ ಹೋಗಿದೆ. ಈಗ ಈತ ಟಿಕ್ ಟಾಕ್ ಮತ್ತು ಯೂಟ್ಯೂಬ್ಗಳಲ್ಲಿ ಹಣ ಸಂಪಾದನೆ ಬಗ್ಗೆ ವಿಡಿಯೋಗಳನ್ನು ಮಾಡಿ ಬಹಳ ಮಂದಿಗೆ ಸ್ಫೂರ್ತಿ ಕೂಡ ಆಗುತ್ತಿದ್ದಾನೆ.
17ರ ವಯಸ್ಸಿಗೆ ಶಾಲೆ ಬಿಟ್ಟು ಹಣ ಸಂಪಾದಿಸುವ ಹುಚ್ಚು ಹೇಡನ್ ಬೌಲ್ಸ್ಗೆ ಬಂದಿದ್ದು ಹೇಗೆ ಎಂದನಿಸಬಹುದು. ಅದಕ್ಕೆ ಈತನ ಬಾಲ್ಯದ ಒಂದು ಘಟನೆ ಕಾರಣವಂತೆ. ಹೇಡನ್ ಬೌಲ್ಸ್ ಹೇಳುವ ಪ್ರಕಾರ ಈತ 10 ಅಥವಾ 11ನೇ ವಯಸ್ಸಿನಲ್ಲಿದ್ದಾಗ ಏನೋ ಕೊಳ್ಳಬಯಸಿದ್ದನಂತೆ. ಆದರೆ, ಹಣ ಇಲ್ಲದೇ ಅದು ಸಾಧ್ಯವಾಗಲಿಲ್ಲ. ಈತನ ಅಪ್ಪ ಮತ್ತು ಅಮ್ಮ ಕೂಡ ಅದನ್ನು ಈತನಿಗೆ ಕೊಡಿಸಲಿಲ್ಲ. ಆಗ ಈತನಿಗೆ ತಾನೇ ಖುದ್ದು ಹಣ ಗಳಿಸಬೇಕೆನ್ನುವ ಅರಿವಾಯಿತಂತೆ. ಹಾಗಂತ ಹೇಡನ್ ಬೌಲ್ಸ್ ತನ್ನ ಇನ್ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ಹೇಳಿಕೊಂಡಿದ್ದಾನೆ.
ಹಣ ಸಂಪಾದನೆಯಲ್ಲಿ ಕೋಟ್ಯಾಧಿಪತಿಗಳು ಹೇಗೆ ಯಶಸ್ವಿಯಾಗುತ್ತಾರೆ? ಎರಡು ಅದ್ಭುತ ಓಪನ್ ಸೀಕ್ರೆಟ್ಗಳನ್ನು ಈ ಯುವಕ ಬಿಚ್ಚಿಡುತ್ತಾನೆ. ಈ ಸೂತ್ರ ಕೇಳಿ ನಿಮಗೂ ಅಚ್ಚರಿ ಎನಿಸಬಹುದು.
ಶೇ. 20ರ ಆದಾಯದೊಳಗೆ ಬದುಕಿ: ನಿಮ್ಮ ಸಂಪಾದನೆಯ ಶೇ. 20ರಷ್ಟು ಹಣದಲ್ಲಿ ಜೀವನದ ಅಗತ್ಯತೆಗಳನ್ನು ಪೂರೈಸಿಕೊಳ್ಳುವಂತಿರಬೇಕು. ನೀವದನ್ನು ಮಾಡಲು ಸಾಧ್ಯವಾದರೆ ಬಹಳಷ್ಟು ಹಣ ಉಳಿಸಿ ಅದನ್ನು ಲಾಭದಾಯಕವಾಗಿ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಡನ್ ಬೌಲ್ಸ್ ಹೇಳುತ್ತಾನೆ.
ಹಣದ ಮೇಲೆಯೇ ಹೆಚ್ಚು ಗಮನ ಇರಲಿ: ಜೀವನದಲ್ಲಿ ಎಲ್ಲಕ್ಕಿಂತ ಹೆಚ್ಚು ಗಮನವನ್ನು ನಿಮ್ಮ ಸಂಪಾದನೆಗೆ ಕೊಡಬೇಕು. ಆಗ ಹೆಚ್ಚು ಹಣ ಮಾಡಬಹುದು, ವ್ಯವಹಾರದಲ್ಲಿ ಯಶಸ್ಸು ಕಾಣಬಹುದು ಎನ್ನುತ್ತಾನೆ ಬೌಲ್ಸ್.
Published On - 1:18 pm, Thu, 11 May 23