Fraud: 9ಲಕ್ಷಕ್ಕೂ ಹೆಚ್ಚು ಹಣದ ಸಿಗುತ್ತೆ ಅಂತ ನಂಬಿದ ಅಜ್ಜಿ ಪಾಲಿಗೆ ಬಂದಿದ್ದು 32,000 ರೂ; ಇನ್ಷೂರೆನ್ಸ್ ಕಂಪನಿಯಿಂದ ಹಣ ಕಕ್ಕಿಸಿದ ಗ್ರಾಹಕ ವೇದಿಕೆ

|

Updated on: Jul 05, 2023 | 12:35 PM

Insurance Company Fined By Consumer Commission: ಈ ಸ್ಕೀಮ್ ಮೇಲೆ ಹಣ ಹೂಡಿಕೆ ಮಾಡಿದರೆ ಡಬಲ್ ಆಗುತ್ತೆ ಅಂತ ಇನ್ಷೂರೆನ್ಸ್ ಏಜೆಂಟ್ ಹೇಳಿದ ಮಾತು ನಂಬಿ ಮಹಿಳೆಯೊಬ್ಬರು 4.6 ಲಕ್ಷ ರೂ ಹೂಡಿಕೆ ಮಾಡಿ 3 ವರ್ಷದಲ್ಲಿ ಕೇವಲ 32,000 ರೂ ಪಡೆದ ಘಟನೆ ನಡೆದಿದೆ.

Fraud: 9ಲಕ್ಷಕ್ಕೂ ಹೆಚ್ಚು ಹಣದ ಸಿಗುತ್ತೆ ಅಂತ ನಂಬಿದ ಅಜ್ಜಿ ಪಾಲಿಗೆ ಬಂದಿದ್ದು 32,000 ರೂ; ಇನ್ಷೂರೆನ್ಸ್ ಕಂಪನಿಯಿಂದ ಹಣ ಕಕ್ಕಿಸಿದ ಗ್ರಾಹಕ ವೇದಿಕೆ
ಕೋರ್ಟ್
Follow us on

ನವದೆಹಲಿ: ಇನ್ಷೂರೆನ್ಸ್ ಪಾಲಿಸಿ (Insurance Policy) ಖರೀದಿಸುವಾಗ ಎಚ್ಚರದಿಂದ ಇರುವುದು ಬಹಳ ಅವಶ್ಯ. ಅದು ಎಲ್​ಐಸಿಯೇ ಆಗಲೀ ಅಥವಾ ಬೇರೆ ಖಾಸಗಿ ಕಂಪನಿಯದ್ದೇ ಆಗಲೀ, ಎಲ್​ಐಸಿ ಪಾಲಿಸಿಯ ವಿವಿಧ ಅಂಶಗಳನ್ನು ಅವಲೋಕಿಸಿ ತಿಳಿದಿರುವುದು ಒಳ್ಳೆಯದು. ಕೇವಲ ಏಜೆಂಟ್ ಹೇಳಿದ ಭರವಸೆಯ ಮಾತುಗಳನ್ನು ನಂಬಿ ಪಾಲಿಸಿ ಪಡೆಯುವುದು ಅಪಾಯಕಾರಿ. ಇನ್ಷೂರೆನ್ಸ್ ಏಜೆಂಟ್​ಗೆ ತನ್ನ ಕಂಪನಿಯಿಂದ ವರ್ಷಕ್ಕೆ ಕನಿಷ್ಠ ಸಂಖ್ಯೆಯಲ್ಲಿ ಪಾಲಿಸಿ ಮಾಡಿಸಬೇಕೆನ್ನುವ ಟಾರ್ಗೆಟ್ ಇರುತ್ತದೆ. ಅಥವಾ ಪಾಲಿಸಿ ಮಾಡಿಸಿದಾಗ ಆತನಿಗೆ ಕಮಿಷನ್ ಸಿಗುತ್ತದೆ. ಹೀಗಾಗಿ, ಅದೆಷ್ಟೋ ಇನ್ಷೂರೆನ್ಸ್ ಏಜೆಂಟ್​ಗಳು ಸುಳ್ಳು ಭರವಸೆಗಳನ್ನು ನೀಡಿಯೋ (Fraud) ಅಥವಾ ಅರ್ಧಸತ್ಯ ಮಾತ್ರ ತಿಳಿಸಿಯೋ ಪಾಲಿಸಿ ಮಾರುವ ಪ್ರಯತ್ನ ಮಾಡುತ್ತಿರುತ್ತಾರೆ. ಹಿಂದೆಲ್ಲಾ ಮಾರ್ಕೆಟ್ ಲಿಂಕ್ಡ್ ಸ್ಕೀಮ್​ಗಳು ಬಂದಾಗ ಅನೇಕ ಇನ್ಷೂರೆನ್ಸ್ ಏಜೆಂಟ್​ಗಳು ಹಣ ಕೆಲವೇ ವರ್ಷದಲ್ಲಿ ಹಲವುಪಟ್ಟು ಹೆಚ್ಚಾಗುತ್ತದೆ ಎಂದೆಲ್ಲಾ ಗ್ರಾಹಕರನ್ನು ನಂಬಿಸಿ ಠೇವಣಿ ಇರಿಸಿದ್ದರು. ಈಗ ಅಂಥಹುದೇ ಒಂದು ಘಟನೆ ಪಂಜಾಬ್​ನ ಮೊಹಾಲಿಯಲ್ಲಿ ನಡೆದಿದೆ.

ಅಮರ್​ಜೀತ್ ಕೌರ್ ಎಂಬ ಪಂಜಾಬೀ ಮಹಿಳೆ 2009ರಲ್ಲಿ ಕೋಟಕ್ ಮಹೀಂದ್ರ ಓಲ್ಡ್ ಮ್ಯೂಚುವಲ್ ಲೈಫ್ ಇನ್ಷೂರೆನ್ಸ್ ಸಂಸ್ಥೆಯಿಂದ ಇನ್ಷೂರೆನ್ಸ್ ಪಾಲಿಸಿಯೊಂದರ ಮೇಲೆ 4.6 ಲಕ್ಷ ರೂನಷ್ಟು ಹಣ ಹೂಡಿಕೆ ಮಾಡಿದ್ದರು. ಆಗ 56 ವರ್ಷ ವಯಸ್ಸಾಗಿದ್ದ ಈ ಮಹಿಳೆ ಅನಕ್ಷರಸ್ಥೆಯಾಗಿದ್ದು ಇನ್ಷೂರೆನ್ಸ್ ಏಜೆಂಟ್ ಹೇಳಿದ ಬಾಯಿಮಾತಿನ ಭರವಸೆ ನಂಬಿ ತನ್ನ ಬಳಿ ಇದ್ದಬದ್ದ ಹಣವನ್ನೆಲ್ಲಾ ಇನ್ಷೂರೆನ್ಸ್ ಪಾಲಿಸಿ ಮೇಲೆ ಹಾಕಿದ್ದರು. 3 ವರ್ಷದಲ್ಲಿ ಹಣ ಡಬಲ್ ಆಗುತ್ತದೆ ಎಂದು ಆ ಏಜೆಂಟ್ ಆಸಾಮಿ ಹೇಳಿಬಿಟ್ಟಿದ್ದ. ಅದು ಬಾಯಿಮಾತಿನ ಭರವಸೆಯಾಗಿತ್ತು. ಪಾಲಿಸಿ ದಾಖಲೆಯಲ್ಲಿ ಅದು ಇರಲಿಲ್ಲ. ಈ ವಿಚಾರವನ್ನು ಆ ಮಹಿಳೆಗೆ ಆತ ತಿಳಿಸಲಿಲ್ಲ. ಪಾಲಿಸಿ ಸರ್ಟಿಫಿಕೇಟ್ ಇಂಗ್ಲೀಷ್​ನಲ್ಲಿ ಇದ್ದದ್ದರಿಂದ ಮಹಿಳೆಯೂ ಓದದೇ ಹೆಬ್ಬೆಟ್ಟು ಒತ್ತಿದ್ದರು.

ಇದನ್ನೂ ಓದಿFD: ಫಿಕ್ಸೆಡ್ ಡೆಪಾಸಿಟ್​ನಿಂದ ಬರೋ ಬಡ್ಡಿಗೆ ಎಷ್ಟು ಟ್ಯಾಕ್ಸ್ ಕಟ್ ಆಗುತ್ತೆ? ಟಿಡಿಎಸ್ ಕಡಿತಗೊಳ್ಳದಿರಲು ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್

3 ವರ್ಷದ ಬಳಿಕ 10 ಲಕ್ಷ ರೂ ಪಡೆಯುವ ನಿರೀಕ್ಷೆಯಲ್ಲಿದ್ದ ಅಮರಜೀತ್ ಕೌರ್ ಅವರಿಗೆ ಸಿಕ್ಕಿದ್ದು ಕೇವಲ 32,000 ರೂ ಮಾತ್ರ. ಆಗ ಇತರ ಕೆಲವರ ಸಲಹೆ ಮೇರೆಗೆ ಈ ಮಹಿಳೆ ಮೊಹಾಲಿ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ಇನ್ಷೂರೆನ್ಸ್ ಕಂಪನಿ ವಿರುದ್ಧ ದೂರು ದಾಖಲಿಸಿದರು. ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡದ್ದಕ್ಕೆ ಇನ್ಷೂರೆನ್ಸ್ ಕಂಪನಿಗೆ ಛೀಮಾರಿ ಬಿದ್ದಿತು. 4.6 ಲಕ್ಷ ರೂ ದಂಡ ಹಾಕಲಾಯಿತು. 4 ವಾರದಲ್ಲಿ ಮಹಿಳೆಗೆ ಹಣ ಮರಳಿಸಬೇಕೆಂದು ಆದೇಶಿಸಿತು.

ನಿಮಗೂ ಇಂಥ ವಂಚನೆಗಳು ಆಗಿದ್ದಲ್ಲಿ ಗ್ರಾಹಕರ ಕೋರ್ಟ್, ಅಥವಾ ವೇದಿಕೆಗಳಿಗೆ ಹೋಗಿ ದೂರು ದಾಖಲಿಸಲು ಅವಕಾಶ ಇದೆ. ಇದನ್ನು ತಪ್ಪದೇ ಉಪಯೋಗಿಸಿ ವಂಚನೆಯಿಂದ ದೂರ ಇರಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ