Insurance On Deposits: ಬ್ಯಾಂಕ್​ಗಳ ಹಣಕಾಸು ನಿರ್ಬಂಧ, ವಂಚನೆಯಾದಲ್ಲಿ 90 ದಿನದೊಳಗೆ 5 ಲಕ್ಷ ರೂ. ಇನ್ಷೂರೆನ್ಸ್

| Updated By: Srinivas Mata

Updated on: Jul 28, 2021 | 6:38 PM

ಆರ್​ಬಿಐ ನಿರ್ಬಂಧ ಹೇರಿದ ಬ್ಯಾಂಕ್​ಗಳಿಂದ ಇನ್ನು ಮುಂದೆ 90 ದಿನದೊಳಗಾಗಿ ಗ್ರಾಹಕರಿಗೆ 5 ಲಕ್ಷ ರೂ. ಇನ್ಷೂರೆನ್ಸ್ ಬರುವಂಥ ತಿದ್ದುಪಡಿಗೆ ಸಂಪುಟ ಒಪ್ಪಿಕೊಂಡಿದೆ.

Insurance On Deposits: ಬ್ಯಾಂಕ್​ಗಳ ಹಣಕಾಸು ನಿರ್ಬಂಧ, ವಂಚನೆಯಾದಲ್ಲಿ 90 ದಿನದೊಳಗೆ 5 ಲಕ್ಷ ರೂ. ಇನ್ಷೂರೆನ್ಸ್
ಪ್ರಾತಿನಿಧಿಕ ಚಿತ್ರ
Follow us on

ಬ್ಯಾಂಕ್​ಗಳ ಠೇವಣಿದಾರರಿಗೆ (Depositors) ದೊಡ್ಡ ಸಮಾಧಾನವೊಂದು ದೊರೆತಿದೆ. ಹಣಕಾಸು ವಂಚನೆಗೆ ಗುರಿಯಾದ ಅಥವಾ ಸಂಕಷ್ಟಕ್ಕೆ ಈಡಾದ ಬ್ಯಾಂಕ್​ಗಳ ಠೇವಣಿದಾರರಿಗೆ ಇದರಿಂದ ನಿರಾಳ ದೊರೆಯಲಿದೆ. ಡೆಪಾಸಿಟ್ ಇನ್ಷೂರೆನ್ಸ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್​ (DICGC) ಕಾಯ್ದೆಗೆ ತಿದ್ದುಪಡಿಯನ್ನು ಬುಧವಾರ ಕೇಂದ್ರ ಸಂಪುಟವು ಅಂಗೀಕಾರ ಮಾಡಿದೆ. ಈ ಮೂಲಕವಾಗಿ ಠೇವಣಿದಾರರು ಇಟ್ಟಂಥ ಒಟ್ಟು ಮೊತ್ತದ ಪೈಕಿ ಇನ್ಷೂರೆನ್ಸ್ ಹಣವಾದ 5 ಲಕ್ಷ ರೂಪಾಯಿಯನ್ನು ಸಮಸ್ಯೆಗೆ ಈಡಾದ ಬ್ಯಾಂಕ್​ ಮೇಲೆ ನಿರ್ಬಂಧ ಹೇರಿದ 90 ದಿನದ ಒಳಗಾಗಿ ಪಡೆಯುತ್ತಾರೆ. “ಆರ್​ಬಿಐನಿಂದ ಬ್ಯಾಂಕ್​ ಮೇಲೆ ನಿರ್ಬಂಧ ಹೇರಿದ ನಂತರ ಕಷ್ಟಕ್ಕೆ ಎದುರಾದ ಜನರಿಗೆ ಸಹಾಯ ಒದಗಿಸುವ ಉದ್ದೇಶದಿಂದ ಡೆಪಾಸಿಟ್ ಇನ್ಷೂರೆನ್ಸ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಸೃಷ್ಟಿಸಲಾಗಿದೆ. ಸಂಪುಟ ಸಭೆಯ ವೇಳೆ ತೀರ್ಮಾನಿಸಿದಂತೆ 90 ದಿನದೊಳಗಾಗಿ ತಮ್ಮ ಹಣದ 5 ಲಕ್ಷ ರೂಪಾಯಿ ಠೇವಣಿದಾರರಿಗೆ ದೊರೆಯಲಿದೆ,” ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದಂತೆ, ಕಾನೂನಿನ ಅಡಿಯಲ್ಲಿ ಶೇ 98.3ರಷ್ಟು ಬ್ಯಾಂಕ್​ ಖಾತೆಗಳು ಸಂಪೂರ್ಣ ಸುರಕ್ಷಿತವಾಗಿರಲಿದೆ. ಅಂದಹಾಗೆ ಡಿಐಸಿಜಿಸಿ ಎಂಬುದು ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾದ ಅಂಗ ಸಂಸ್ಥೆ. ಇದು ಬ್ಯಾಂಕ್ ಠೇವಣಿಗೆ ಇನ್ಷೂರೆನ್ಸ್ ಒದಗಿಸುತ್ತದೆ. ಡಿಐಸಿಜಿಸಿ ಕಾಯ್ದೆಯು ಪಿಎಂಸಿ ಅಥವಾ ಯೆಸ್​ ಬ್ಯಾಂಕ್​ನಂಥ ಸಮಸ್ಯೆಗೆ ಸಿಲುಕಿದ ಬ್ಯಾಂಕ್​ಗಳ ಠೇವಣಿದಾರರಿಗೆ ಆತಂಕವನ್ನು ಕಡಿಮೆ ಮಾಡುತ್ತದೆ. ಇನ್ನು ಈ ಡೆಪಾಸಿಟ್ ಇನ್ಷೂರೆನ್ಸ್ ವ್ಯವಸ್ಥೆಯು ಭಾರತದಲ್ಲಿನ ಎಲ್ಲ ಸಾರ್ವಜನಿಕ, ಖಾಸಗಿ, ಕೋ ಆಪರೇಟಿವ್ ಹಾಗೂ ವಿದೇಶೀ ಬ್ಯಾಂಕ್​ಗಳನ್ನು ಕವರ್ ಮಾಡುತ್ತದೆ. ಆದರೆ ಕೆಲವು ಡೆಪಾಸಿಟ್​ಗಳು ಇದರಿಂದ ಹೊರತಾಗಿವೆ.

ಇಲ್ಲಿಯ ತನಕ ಹೇಗಿದೆ ಅಂದರೆ, ಯಾವುದಾದರೂ ಬ್ಯಾಂಕ್​ನಲ್ಲಿ ಹಣಕಾಸು ಅವ್ಯವಹಾರ ಅಥವಾ ಸಮಸ್ಯೆಗಳ ಬಗ್ಗೆ ದೂರುಗಳು ಬಂದಲ್ಲಿ ಅಥವಾ ಕಂಡುಬಂದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನಿರ್ಬಂಧ ಹೇರಲಾಗುತ್ತದೆ. ಠೇವಣಿದಾರರು ಆ ಅವಧಿಯಲ್ಲಿ ತಮ್ಮ ಹಣವನ್ನು ಪಡೆದುಕೊಳ್ಳುವುದು ಕಷ್ಟವಾಗುತ್ತದೆ. ಆರ್​ಬಿಐನಿಂದ ನಿರ್ಬಂಧವನ್ನು ತೆರವುಗೊಳಿಸುವ ತನಕ ಠೇವಣಿದಾರರಿಗೆ ವಿಪರೀತ ಸಮಸ್ಯೆ ಉಂಟಾಗುತ್ತದೆ. ಈಗ ಕೇಂದ್ರ ಸಂಪುಟದಲ್ಲಿ ಅಂಗೀಕಾರವಾಗಿರುವ ತಿದ್ದುಪಡಿ ಜಾರಿಗೆ ಬಂದ ಮೇಲೆ ಆರ್​ಬಿಐ ನಿರ್ಬಂಧ ಹೇರಿದ 90 ದಿನದೊಳಗಾಗಿ ಇನ್ಷೂರೆನ್ಸ್ ವಿಲೇವಾರಿ ಆಗಬೇಕಾಗುತ್ತದೆ. ಹೀಗೆ ಕಾಲಮಿತಿ ವಿಧಿಸಿರುವುದು ಒಳ್ಳೆಯ ಬೆಳವಣಿಗೆ ಆಗಿದೆ.

ಇದನ್ನೂ ಓದಿ: Bank deposit insurance: ಬ್ಯಾಂಕ್​ ಠೇವಣಿ ಮೇಲೆ ಗರಿಷ್ಠ ಇನ್ಷೂರೆನ್ಸ್ 5 ಲಕ್ಷ ರೂ.; ಅದಕ್ಕೂ ಹೆಚ್ಚು ಮೊತ್ತಕ್ಕೆ ಕವರೇಜ್ ಹೇಗೆ?

(Insurance On Bank Deposit Rs 5 Lakhs Settle To Customers In 90 Days Of RBI Moratorium Amendment Accepted By Cabinet)