ನವದೆಹಲಿ: ಶೀಘ್ರದಲ್ಲೇ ಸುಮಾರು 200 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ (Layoffs) ಚಿಪ್ ತಯಾರಿಕಾ ಕಂಪನಿ ಇಂಟೆಲ್ (Intel) ತಿಳಿಸಿರುವುದಾಗಿ ವರದಿಯಾಗಿದೆ. ಅಮೆರಿಕದ ಕಂಪ್ಯೂಟರ್ ನಿಯತಕಾಲಿಕೆ ‘ಸಿಆರ್ಎನ್’ ವರದಿಯ ಪ್ರಕಾರ, ಜನವರಿ 31ರಿಂದ ಇಂಟೆಲ್ ವಜಾ ಪ್ರಕ್ರಿಯೆ ಆರಂಭಿಸಲಿದೆ. ಮಾರಾಟದಲ್ಲಿ ಕುಸಿತ ಕಂಡುಬಂದಿರುವುದೇ ಉದ್ಯೋಗಿಗಳ ವಜಾಕ್ಕೆ ಕಾರಣ ಎನ್ನಲಾಗಿದೆ.
ವೆಚ್ಚ ಕಡಿತ ಯೋಜನೆಯ ಅಡಿಯಲ್ಲಿ ಕನಿಷ್ಠ 201 ಮಂದಿಯನ್ನು ಇಂಟೆಲ್ ವಜಾಗೊಳಿಸಲಿದೆ. ಇಂಟೆಲ್ನ ಕ್ಯಾಲಿಫೋರ್ನಿಯಾದ ಫಾಲ್ಸೊಮ್ ಕಚೇರಿಯಿಂದ 111 ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ. 90 ಮಂದಿ ಉದ್ಯೋಗಿಗಳನ್ನು ಸಾಂತಾ ಕ್ಲಾರಾ ಪ್ರದೇಶದಲ್ಲಿರುವ ಇಂಟೆಲ್ ಪ್ರಧಾನ ಕಚೇರಿಗೆ ವರ್ಗಾಯಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: Layoffs: ನೂರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿರುವ ಸ್ವಿಗ್ಗಿ, ವೇದಾಂತು, ಅಡೋಬ್
ಜಾಗತಿಕವಾಗಿ ಇಂಟೆಲ್ನ ಸಾವಿರಾರು ಕಾರ್ಖಾನೆ ಕೆಲಸಗಾರರಿಗೆ ಮೂರು ತಿಂಗಳ ವೇತನ ರಹಿತ ರಜೆ ಆಫರ್ ನೀಡಲಾಗಿದೆ ಎಂದು ‘ಒರೆಗೋನಿಯನ್ ಲೈವ್’ ವರದಿ ಮಾಡಿದೆ. ಉತ್ಪಾದನಾ ಕ್ಷೇತ್ರದ ಪ್ರತಿಭೆಗಳನ್ನು ಉಳಿಸಿಕೊಳ್ಳುವುದು ದೀರ್ಘಾವಧಿಯ ಬೆಳವಣಿಗೆ ದೃಷ್ಟಿಯಿಂದ ನಮಗೆ ಬಹು ಮುಖ್ಯವಾಗಿದೆ. ಸ್ವಯಂಪ್ರೇರಿತ ರಜೆ ಯೋಜನೆಯಿಂದ ಉತ್ಪಾದನಾ ಕ್ಷೇತ್ರದ ಕೆಲಸಗಾರರನ್ನು ಉಳಿಸಿಕೊಳ್ಳುವುದು ನಮಗೆ ಸುಲಭವಾಗಲಿದೆ. ಜತೆಗೆ, ಅಲ್ಪಾವಧಿಯ ವೆಚ್ಚ ಕಡಿಮೆ ಮಾಡಲೂ ಸಾಧ್ಯವಾಗಲಿದೆ ಎಂದು ಇಂಟೆಲ್ ತಿಳಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಐರ್ಲೆಂಡ್ನಲ್ಲಿ ಇಂಟೆಲ್ ಕಾರ್ಖಾನೆ ಕೆಲಸಗಾರರಿಗೆ ಮೂರು ತಿಂಗಳ ವೇತನರಹಿತ ರಜೆ ಆಫರ್ ನೀಡಿತ್ತು ಎಂದು ಇತ್ತೀಚೆಗೆ ‘ಟೈಮ್ಸ್’ ವರದಿ ಮಾಡಿತ್ತು.
ಸ್ವಿಗ್ಗಿ, ವೇದಾಂತು ಹಾಗೂ ಅಡೋಬ್ ಕೂಡ ನೂರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗದುಹಾಕಲು ಮುಂದಾಗಿವೆ ಎಂದು ಗುರುವಾರ ವರದಿಯಾಗಿತ್ತು. ಸ್ವಿಗ್ಗಿ ಸುಮಾರು 250 ಉದ್ಯೋಗಿಗಳನ್ನು ಕೆಲಸದಿಂದ ತೆಗದುಹಾಕಲು ಚಿಂತನೆ ನಡೆಸಿದೆ. ಎಜುಟೆಕ್ ಕಂಪನಿ ವೇದಾಂತು ಇತ್ತೀಚೆಗೆ ಸುಮಾರು 385 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕೆಲವು ದಿನಗಳ ಹಿಂದಷ್ಟೇ ಅಡೋಬ್ ಕಂಪನಿ ಕೂಡ ಸುಮಾರು 100 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವಿವಿಧ ಮಾಧ್ಯಮ ವರದಿಗಳು ತಿಳಿಸಿದ್ದವು. ಈ ಮಧ್ಯೆ, ಜಾಗತಿಕವಾಗಿ ಸುಮಾರು 16 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಅಮೆಜಾನ್, 20,000 ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಹಿಂದೆ ಅಮೆಜಾನ್ 10,000 ಉದ್ಯೋಗಿಗಳ ವಜಾಕ್ಕೆ ಮುಂದಾಗಿದೆ ಎಂದು ವರದಿಯಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ