Inflation: ನವೆಂಬರ್ನಲ್ಲಿ 9 ತಿಂಗಳ ಕನಿಷ್ಠ ಮಟ್ಟಕ್ಕೆ ಹಣದುಬ್ಬರ, ಸಮೀಕ್ಷಾ ವರದಿ
ಸಮೀಕ್ಷಾ ವರದಿಯಲ್ಲಿ ಹೇಳಿರುವ ಮುನ್ಸೂಚನೆಯು ನಿಜವಾದಲ್ಲಿ ಹಣದುಬ್ಬರ ಪ್ರಮಾಣವು ಫೆಬ್ರವರಿಯಲ್ಲಿ ರಷ್ಯಾ - ಉಕ್ರೇನ್ ಯುದ್ಧ ಆರಂಭವಾಗುವುದಕ್ಕೂ ಮೊದಲಿನ ಮಟ್ಟಕ್ಕೆ ಇಳಿಕೆಯಾಗಲಿದೆ.
ನವದೆಹಲಿ: ದೇಶದ ಗ್ರಾಹಕ ದರ ಸೂಚ್ಯಂಕ (CPI) ಆಧಾರಿತ ಹಣದುಬ್ಬರ (Inflation) ನವೆಂಬರ್ನಲ್ಲಿ 9 ತಿಂಗಳ ಕನಿಷ್ಠ ಮಟ್ಟಕ್ಕೆ, ಅಂದರೆ ಶೇಕಡಾ 6.40ಕ್ಕೆ ಇಳಿಕೆಯಾಗಿದೆ ಎಂದು ‘ರಾಯಿಟರ್ಸ್’ ಸುದ್ದಿ ಸಂಸ್ಥೆಯ ಸಮೀಕ್ಷಾ ವರದಿ ತಿಳಿಸಿದೆ. ಅರ್ಥಶಾಸ್ತ್ರಜ್ಞರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಹಣದುಬ್ಬರವು ಇಡೀ ವರ್ಷದಿಂದ ಆರ್ಬಿಐನ ಸಹನೆಯ ಮಟ್ಟವಾದ ಶೇಕಡಾ 2 – 6ಕ್ಕಿಂತ ಮೇಲ್ಮಟ್ಟದಲ್ಲಿ ಇದೆ. ಹೀಗಾಗಿ ಆರ್ಬಿಐ ಮೇ ತಿಂಗಳ ಬಳಿಕ ರೆಪೊ ದರದಲ್ಲಿ ಒಟ್ಟಾರೆಯಾಗಿ 225 ಮೂಲಾಂಶ ಹೆಚ್ಚಳ ಮಾಡಿದ್ದು, ಶೇಕಡಾ 6.25ಕ್ಕೆ ನಿಗದಿಪಡಿಸಿದೆ.
ಸಮೀಕ್ಷಾ ವರದಿಯಲ್ಲಿ ಹೇಳಿರುವ ಮುನ್ಸೂಚನೆಯು ನಿಜವಾದಲ್ಲಿ ಹಣದುಬ್ಬರ ಪ್ರಮಾಣವು ಫೆಬ್ರವರಿಯಲ್ಲಿ ರಷ್ಯಾ – ಉಕ್ರೇನ್ ಯುದ್ಧ ಆರಂಭವಾಗುವುದಕ್ಕೂ ಮೊದಲಿನ ಮಟ್ಟಕ್ಕೆ ಇಳಿಕೆಯಾಗಲಿದೆ. ಯುದ್ಧ ಆರಂಭವಾದ ಬಳಿಕ ಜಾಗತಿಕ ಮಟ್ಟದಲ್ಲಿ ಆಹಾರ ಮತ್ತು ಸರಕುಗಳ ಬೆಲೆ ಹೆಚ್ಚಳವಾಗಿತ್ತು.
ಇದನ್ನೂ ಓದಿ: RBI Repo Rate Hike: ಆರ್ಬಿಐ ರೆಪೊ ದರ 35 ಮೂಲಾಂಶ ಹೆಚ್ಚಳ; ದುಬಾರಿಯಾಗಲಿದೆ ವಾಹನ, ಗೃಹ ಸಾಲದ ಇಎಂಐ
ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತದ ಗ್ರಾಹಕ ದರ ಸೂಚ್ಯಂಕದಲ್ಲಿ ಶೇಕಡಾ 40ರಷ್ಟು ಪಾಲು ಆಹಾರ ಬೆಲೆಯದ್ದೇ ಇದೆ. ಡಿಸೆಂಬರ್ 5ರಿಂದ 8ರ ನಡುವೆ ಸಮೀಕ್ಷೆ ನಡೆಸಲಾಗಿದ್ದು, ಸಮೀಕ್ಷೆಯಲ್ಲಿ ಭಾಗಿಯಾಗಿದ್ದ 45 ಅರ್ಥಶಾಸ್ತ್ರಜ್ಞರು, ಅಕ್ಟೋಬರ್ನಲ್ಲಿ ಶೇಕಡಾ 6.77 ಇದ್ದ ಹಣದುಬ್ಬರ 6.40ಕ್ಕೆ ಇಳಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆಯಾಗಿ ಮುಂದಿನ ದಿನಗಳಲ್ಲಿ ಹಣದುಬ್ಬರ ಪ್ರಮಾಣ ಶೇಕಡಾ 6ರಿಂದ 7.2 ರಷ್ಟಿರಬಹುದು ಎಂದು ಅಂದಾಜಿಸಲಾಗಿದೆ.
‘ಹಣದುಬ್ಬರ ಪ್ರಮಾಣ ಇಳಿಕೆಯಾಗುವುದನ್ನು ಕಾಣಲಿದ್ದೇವೆ. ಆಹಾರ ದರ, ವಿಶೇಷವಾಗಿ ತರಕಾರಿ ದರ ಇಳಿಕೆಯಾಗಲಿದೆ. ಇಂಧನ ಹಾಗೂ ಗ್ಯಾಸೋಲಿನ್ ದರ ಸ್ಥಿರವಾಗಿರಲಿದ್ದು, ಇದರ ಜತೆಗೆ ರೆಪೊ ದರ ಹೆಚ್ಚಳವೂ ಭಾರತದ ಹಣದುಬ್ಬರ ಪ್ರಮಾಣ ಇಳಿಕೆಗೆ ನೆರವಾಗಲಿದೆ’ ಎಂದು ಐಎನ್ಜಿಯ ಏಷ್ಯಾ ಪೆಸಿಫಿಕ್ ಸಂಶೋಧನಾ ವಿಭಾಗದ ಮುಖ್ಯಸ್ಥ ರಾಬರ್ಟ್ ಕಾರ್ನೆಲ್ ತಿಳಿಸಿದ್ದಾರೆ.
ಆರ್ಬಿಐ ಬುಧವಾರ ರೆಪೊ ದರದಲ್ಲಿ 35 ಮೂಲಾಂಶ ಹೆಚ್ಚಳ ಮಾಡಿದ್ದು, ದರ ಹೆಚ್ಚಳದ ವೇಗ ಕಡಿತಗೊಳಿಸುವ ಸೂಚನೆ ನೀಡಿತ್ತು. ಅಲ್ಲದೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರ ಪ್ರಮಾಣ ಶೇಕಡಾ 6.7ರ ಮಟ್ಟದಲ್ಲಿರಲಿದೆ ಎಂದು ಮುನ್ಸೂಚನೆ ನೀಡಿತ್ತು. ಆದರೆ ಹಣದುಬ್ಬರ ಇದೇ ಮಟ್ಟದಲ್ಲಿ ಇರಲಿದೆ ಎಂಬುದನ್ನು ‘ರಾಯಿಟರ್ಸ್’ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಅರ್ಥಶಾಸ್ತ್ರಜ್ಞರು ಒಪ್ಪಿಲ್ಲ.
‘ಗ್ರಾಹಕ ದರ ಸೂಚ್ಯಂಕ ಇನ್ನೂ ಜಟಿಲವಾಗಿರುವುದರಿಂದ ಹಣಕಾಸು ನೀತಿ ಸಮಿತಿ ಸದಸ್ಯರು ಹೆಚ್ಚು ಜಾಗರೂಕ ನಡೆ ಅನುಸರಿಸಬೇಕಾದದ್ದು ನಿಜ. ಆದರೆ, ನಮ್ಮ ಲೆಕ್ಕಾಚಾರದ ಪ್ರಕಾರ 2022ರ ಅಕ್ಟೋಬರ್ನಿಂದ 2023ರ ಮಾರ್ಚ್ ಅವಧಿಯಲ್ಲಿ ಹಣದುಬ್ಬರ ಶೇಕಡಾ 6.5ರ ಪ್ರಮಾಣದಲ್ಲಿ ಇರಬಹುದು’ ಎಂದು ಅರ್ಥಶಾಸ್ತ್ರಜ್ಞ ಜೆ.ಪಿ. ಮಾರ್ಗನ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ