Indian Economy: ಜಾಗತಿಕ ಬಿಕ್ಕಟ್ಟಿನ ನಡುವೆಯೂ ಬೆಳವಣಿಗೆ ಹೊಂದಲಿದೆ ಭಾರತದ ಆರ್ಥಿಕತೆ, ತಗ್ಗಲಿದೆ ಹಣದುಬ್ಬರ
ಜಾಗತಿಕವಾಗಿ ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಯು ಭಾರತದ ರಫ್ತು ವ್ಯವಹಾರದ ಮೇಲೆ ಪರಿಣಾಮ ಬೀರಬಹುದು. ಆದಾಗ್ಯೂ, ಉತ್ತಮ ಹಣಕಾಸು ವ್ಯವಸ್ಥೆ ಮತ್ತು ರಚನಾತ್ಮಕ ಸುಧಾರಣೆಗಳ ಜೊತೆಗೆ ಪುನಶ್ಚೇತನಗೊಂಡಿರುವ ಹೂಡಿಕೆಯು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲಿದೆ ಎಂದು ಸಚಿವಾಲಯ ಹೇಳಿದೆ.
ನವದೆಹಲಿ: ಜಾಗತಿಕ ಹಣಕಾಸಿನ ಬಿಕ್ಕಟ್ಟಿನ ನಡುವೆಯೂ ಭಾರತದ ಆರ್ಥಿಕತೆ (Indian Economy) ಮಧ್ಯಮ ವೇಗದಲ್ಲಿ ಬೆಳವಣಿಗೆ ಹೊಂದಲಿದೆ. ಇದಕ್ಕೆ ಸ್ಥೂಲ ಆರ್ಥಿಕತೆಯಲ್ಲಿನ ಸ್ಥಿರತೆ ಪೂರಕವಾಗಲಿದೆ. ದೇಶದ ಹಣದುಬ್ಬರ (Inflation) ಪ್ರಮಾಣವೂ ತಗ್ಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ (Finance Ministry) ವರದಿ ಗುರುವಾರ ಹೇಳಿದೆ. ಮುಂಬರುವ ತಿಂಗಳುಗಳಲ್ಲಿ ಹಣಕಾಸು ಒತ್ತಡ ಕಡಿಮೆಯಾಗಲಿದೆ. ಮುಂಗಾರು ಅವಧಿಯ ಬೆಳೆಗಳು ಮಾರುಕಟ್ಟೆಗೆ ಬರಲಿವೆ. ಉದ್ಯಮಗಳು ಬೆಳವಣಿಗೆ ಹೊಂದಲಿದ್ದು, ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ ಎಂದು ಸಚಿವಾಲಯ ತಿಳಿಸಿದೆ.
ಅಮೆರಿಕದ ಹಣಕಾಸು ಬಿಕ್ಕಟ್ಟು ಭವಿಷ್ಯದ ಅಪಾಯಗಳಿಗೆ ಕಾರಣವಾಗಬಹುದು. ಪರಿಣಾಮವಾಗಿ ಷೇರುಗಳ ಬೆಲೆಯಲ್ಲಿ ಕುಸಿತವಾಗಬಹುದು. ಕರೆನ್ಸಿ ದುರ್ಬಲವಾಗುವುದು, ಬೋಂಡ್ ಯೀಲ್ಡ್ಗಳು ಹೆಚ್ಚಳ ಕಾಣಬಹುದಾಗಿದೆ. ಜಾಗತಿಕವಾಗಿ ಅನೇಕ ದೇಶಗಳ ಸಾಲದ ವೆಚ್ಚಗಳು ಹೆಚ್ಚುವ ಸಾಧ್ಯತೆ ಇದೆ ಎಂದು ‘ಅಕ್ಟೋಬರ್ ತಿಂಗಳ ಮಾಸಿಕ ಆರ್ಥಿಕ ಪರಾಮರ್ಶೆ’ ವರದಿಯಲ್ಲಿ ಸಚಿವಾಲಯ ಉಲ್ಲೇಖಿಸಿದೆ.
ಜಾಗತಿಕವಾಗಿ ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಯು ಭಾರತದ ರಫ್ತು ವ್ಯವಹಾರದ ಮೇಲೆ ಪರಿಣಾಮ ಬೀರಬಹುದು. ಆದಾಗ್ಯೂ, ಉತ್ತಮ ಹಣಕಾಸು ವ್ಯವಸ್ಥೆ ಮತ್ತು ರಚನಾತ್ಮಕ ಸುಧಾರಣೆಗಳ ಜೊತೆಗೆ ಪುನಶ್ಚೇತನಗೊಂಡಿರುವ ಹೂಡಿಕೆಯು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲಿದೆ. ಬೇಡಿಕೆಯೂ ಸ್ಥಿರವಾಗಿರಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: India WPI Data October 2022: ಒಂದೂವರೆ ವರ್ಷದ ಬಳಿಕ ಎರಡಂಕಿಯಿಂದ ಇಳಿಕೆಯಾದ ಸಗಟು ಹಣದುಬ್ಬರ
‘ಜಾಗತಿಕವಾಗಿ ಹಣಕಾಸು ಪರಿಸ್ಥಿತಿ ಬಿಕ್ಕಟ್ಟು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಉತ್ತಮವಾಗಿರಲಿದೆ. ಸ್ಥೂಲ ಆರ್ಥಿಕತೆಯ ಸ್ಥಿರತೆ ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜ ನೀಡಲಿದೆ’ ಎಂದು ಸಚಿವಾಲಯ ತಿಳಿಸಿದೆ.
ಆಹಾರ ಭದ್ರತೆಯ ಆತಂಕ ದೂರ
ಪ್ರಸಕ್ತ ವರ್ಷದಲ್ಲಿ ಭಾರತದ ಆಹಾರ ಭದ್ರತೆಯ ಆತಂಕ ದೂರವಾಗಿದೆ. ಇನ್ನು ಮುಂದೆಯೂ ಆಹಾರ ಭದ್ರತೆಗೆ ಸರ್ಕಾರ ಆದ್ಯತೆ ನೀಡಲಿದೆ. ಮುಂಗಾರು ಅವಧಿಯ ಬೆಳೆಗಳು ಮಾರುಕಟ್ಟೆಗೆ ಬರಲಿರುವುದು ಹಣದುಬ್ಬರವನ್ನೂ ಕಡಿಮೆ ಮಾಡಲಿದೆ ಎಂದು ಸಚಿವಾಲಯ ಹೇಳಿದೆ.
ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಕ್ಟೋಬರ್ನಲ್ಲಿ ಶೇಕಡಾ 8.39ಕ್ಕೆ ಇಳಿಕೆಯಾಗಿತ್ತು. 2021ರ ಮಾರ್ಚ್ ನಂತರ ಇದೇ ಮೊದಲ ಬಾರಿಗೆ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಎರಡಂಕಿಯಿಂದ ಕೆಳಗಿಳಿದಿತ್ತು. ಆಹಾರ ಹಣದುಬ್ಬರ ಶೇಕಡಾ 11.03ರಿಂದ ಶೇಕಡಾ 8.33ಕ್ಕೆ ಇಳಿಕೆಯಾಗಿತ್ತು. ಗ್ರಾಹಕ ದರ ಸೂಚ್ಯಂಕ ಆಧಾರಿತ ದೇಶದ ಚಿಲ್ಲರೆ ಹಣದುಬ್ಬರ ಪ್ರಮಾಣ ಮೂರು ತಿಂಗಳ ಕನಿಷ್ಠಕ್ಕೆ, ಅಂದರೆ ಶೇಕಡಾ 6.77ಕ್ಕೆ ಇಳಿಕೆಯಾಗಿತ್ತು. ಈ ಬೆಳವಣಿಗೆಗಳು ದೇಶದ ಆರ್ಥಿಕ ಬೆಳವಣಿಗೆ ನಿಟ್ಟಿನಲ್ಲಿ ಭರವಸೆ ಮೂಡಿಸಿದ್ದವು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ