Cash Back: ಕ್ಯಾಷ್‌ಬ್ಯಾಕ್ ಆಸೆಗೆ ಶಾಪಿಂಗ್ ಮಾಡುವ ಮುನ್ನ ಈ ವಿಚಾರಗಳನ್ನು ತಿಳಿದಿರಿ
ಕ್ಯಾಷ್‌ಬ್ಯಾಕ್ ಲಾಭ ಪಡೆಯುವಾಗ ಯಾವ ಸಂಗತಿಗಳನ್ನು ನೆನಪಿಡಬೇಕು? ಕ್ಯಾಷ್‌ಬ್ಯಾಕ್‌ನ ದುರಾಸೆಗೆ ಬಲಿಯಾಗಿ ಏನು ಮಾಡಬಾರದು ಎಂಬ ಸಲಹೆಗಳನ್ನು ಇಲ್ಲಿ ನೀಡಿದ್ದಾರೆ ವೈಯಕ್ತಿಕ ಹಣಕಾಸು ತಜ್ಞರು.
ಹಬ್ಬಗಳ ಅವಧಿಯಲ್ಲಿ ಹಾಗೂ ಇತರ ಸಂದರ್ಭಗಳಲ್ಲಿ ಅನೇಕ ಬ್ಯಾಂಕ್‌ಗಳು (Banks) ಹಾಗೂ ಪೈನಾನ್ಸ್ ಕಂಪನಿಗಳು (Finance Companies) ಗ್ರಾಹಕರಿಗೆ ವಿವಿಧ ಆಫರ್‌ಗಳನ್ನು ನೀಡುತ್ತವೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ (Debit And Credit Cards) ಮೂಲಕ ಮಾಡುವ ಖರೀದಿಗಳ ಮೇಲೆ ಆಕರ್ಷಕ ಕ್ಯಾಷ್‌ಬ್ಯಾಕ್ (Cash Back) ಕೊಡುಗೆಗಳನ್ನು ಘೋಷಿಸುತ್ತಿರುತ್ತವೆ. ಇಂಥ ಕೊಡುಗೆಗಳು ಮೇಲ್ನೋಟಕ್ಕೆ ಆಕರ್ಷಕವಾಗಿ ಕಂಡರೂ ವಸ್ತುಸ್ಥಿತಿ ಸಂಪೂರ್ಣವಾಗಿ ಬೇರೆಯೇ ಆಗಿರುತ್ತೆ. ಹೀಗಾಗಿ, ಹೆಚ್ಚೆಚ್ಚು ಲಾಭ ಪಡೆಯುವ ದುರಾಸೆಯಿಂದ ಹಣವಿನಿಯೋಗಿಸುವ ಮೊದಲು ಕ್ಯಾಷ್‌ಬ್ಯಾಕ್ ಆಫರ್ಗಳ ಷರತ್ತುಗಳು ಮತ್ತು ನಿಬಂಧನೆಗಳನ್ನು ಸರಿಯಾಗಿ ಗಮನಿಸಿ ಎಂದು ಸಲಹೆ ನೀಡಿದ್ದಾರೆ ವೈಯಕ್ತಿಕ ಹಣಕಾಸು ತಜ್ಞರು.
ಕ್ಯಾಷ್‌ಬ್ಯಾಕ್ ಆಫರ್ಗಳ ಬಗ್ಗೆ ದೊಡ್ಡದಾಗಿ ಜಾಹೀರಾತು ನೀಡುವ ಕಂಪನಿಗಳು ಅದಕ್ಕೆ ಸಂಬಂಧಿಸಿದ ಷರತ್ತುಗಳು ಮತ್ತು ನಿಬಂಧನೆಗಳನ್ನು ಸಣ್ಣದಾಗಿ ಮುದ್ರಿಸಿರುತ್ತವೆ. ಉದಾಹರಣೆಗೆ; ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿ ವಸ್ತುಗಳನ್ನು ಖರೀದಿಸಿದರೆ ಶೇಕಡಾ 10ರಷ್ಟು ಕ್ಯಾಷ್‌ಬ್ಯಾಕ್ ನೀಡಲಾಗುತ್ತದೆ ಎಂದು ಜಾಹೀರಾತಿನಲ್ಲಿ ಉಲ್ಲೇಖಿಸಿದೆ ಎಂದಿಟ್ಟುಕೊಳ್ಳೋಣ. ಇದನ್ನು ನೋಡಿ ನಾವು ಹತ್ತಾರು ಸಾವಿರ ರೂಪಾಯಿಯ ವಸ್ತುಗಳನ್ನು ಖರೀದಿಸಿದರೋ? ನಾವು ಖರ್ಚು ಮಾಡಿದ ಅಷ್ಟೂ ಮೊತ್ತದ ಮೇಲೆ ಶೇಕಡಾ 10ರಷ್ಟು ಕ್ಯಾಷ್‌ಬ್ಯಾಕ್ ದೊರೆಯಬೇಕೆಂದೇನೂ ಇಲ್ಲ. ಯಾಕೆಂದರೆ, ನಾವು ನೋಡಿದ ಆ ಜಾಹೀರಾತಿನಲ್ಲೇ ಸಣ್ಣದಾಗಿ ‘ಒಂದು ಕಾರ್ಡ್ ಮೇಲೆ ಗರಿಷ್ಠ 2,000 ರೂ.ವರೆಗೆ ಮಾತ್ರ’ ಎಂಬ ನಿಬಂಧನೆ ಇರುತ್ತದೆ. ಇದನ್ನು ಗಮನಿಸದೆ ನಾವು ಹತ್ತಾರು ಸಾವಿರಗಳ ಲೆಕ್ಕದಲ್ಲಿ ಶೇಕಡಾ 10ರಷ್ಟು ಸಿಗಲಿದೆ ಎಂದು ಖರ್ಚು ಮಾಡಿದರೆ, ನಮಗೆ ಕೇವಲ 2,000 ರೂ. ಮಾತ್ರ ಸಿಗಬಹುದಷ್ಟೆ. ಆದರೆ, ಅಷ್ಟರಲ್ಲಿ ನಮ್ಮ ಖರ್ಚು ಮಿತಿ ಮೀರಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಲಾರದಷ್ಟು ಆಗಿದ್ದರೆ… ಇಂಥ ಆಫರ್‌ಗಳನ್ನು ನೋಡಿ ಖರೀದಿಗೆ ಮುಂದಾಗುವಾಗ ಎಚ್ಚರವಿರಬೇಕು ಎಂದು ಸಲಹೆ ನೀಡಿದ್ದಾರೆ ವೈಯಕ್ತಿಕ ಹಣಕಾಸು ತಜ್ಞರು.
ಹೀಗೂ ಇರುತ್ತವೆ ಷರತ್ತುಗಳು…
ಕೆಲವು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ಗಳಲ್ಲಿ ನೀಡಲಾಗುವ ಕ್ಯಾಷ್‌ಬ್ಯಾಕ್ ಆಫರ್ಗಳು ಆಯ್ದ ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳಲ್ಲಿ ಹಾಗೂ ಕೆಲ ಆಯ್ದ ಬ್ರಾಂಡ್‌ಗಳ ಮೇಲೆ ಮಾತ್ರ ಸಿಗುತ್ತವೆ. ನಾವು ಇಷ್ಟಪಟ್ಟ ಅಥವಾ ನಮಗೆ ಬೇಕೆನಿಸಿದ ಮಳಿಗೆಗಳಿಂದ ಅಥವಾ ಆನ್ಲೈನ್ ಕಾಮರ್ಸ್ ತಾಣಗಳಿಂದ ವಸ್ತುಗಳನ್ನು ಖರೀದಿಸಿದರೆ ಈ ಕ್ಯಾಷ್‌ಬ್ಯಾಕ್ ಆಫರ್ನ ಪ್ರಯೋಜನಗಳು ನಮಗೆ ಸಿಗಲಾರದು. ಬಹುತೇಕ ಕಂಪನಿಗಳು ಹೆಚ್ಚು ಬೇಡಿಕೆ ಇಲ್ಲದ ವಸ್ತುಗಳ ಮೇಲೆ ಅಥವಾ ಮುಂದೆಂದೋ ಪರಿಚಯಿಸಲ್ಪಡುವ ಪ್ರಾಡಕ್ಟ್‌ಗಳ ಮೇಲೆ ಮಾತ್ರ ಕ್ಯಾಷ್‌ಬ್ಯಾಕ್ ಆಫರ್‌ಗಳನ್ನು ನೀಡುತ್ತವೆ.
ಯಾವ ಕ್ಯಾಷ್‌ಬ್ಯಾಕ್ ಆಫರ್‌ಗಳನ್ನು ಪರಿಗಣಿಸಬಹುದು?
ಫಿನ್‌ಟೆಕ್ ಕಂಪನಿಗಳು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಹಾಗೂ ಟೆಲಿವಿಷನ್‌ಗಳು ಇತ್ಯಾದಿಗಳ ಮೇಲೆ ಒಮ್ಮೆ ಮಾತ್ರ ನೀಡಲಾಗುವ ಕ್ಯಾಷ್‌ಬ್ಯಾಕ್ ಆಫರ್‌ಗಳನ್ನು ನೀಡುತ್ತವೆ. ಇಂಥವನ್ನು ಕೊಳ್ಳುವುದರಲ್ಲಿ ಯಾವುದೇ ಅಪಾಯ ಇರುವುದಿಲ್ಲ. ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಕಂಪನಿ ಕ್ಯಾಷ್‌ಬ್ಯಾಕ್ ಆಫರ್ ನೀಡಿದ್ದರೆ, ಕೆಲವು ಮುಖ್ಯ ಸಂಗತಿಗಳನ್ನು ಪರಿಗಣಿಸಿ ವ್ಯವಹಾರ ಮಾಡಬಹುದು. ಹಾಗೆ ಮಾಡಿದಾಗ, ಮುಂದೆ ಮರುಗಬೇಕಾದ ಸನ್ನಿವೇಶ ಸೃಷ್ಟಿಯಾಗದು.
ಕನಿಷ್ಠ ಮೊತ್ತದ ಮಿತಿಯ ಬಗ್ಗೆ ತಿಳಿದಿರಿ
ಇ-ಕಾಮರ್ಸ್ ಸೈಟ್‌ಗಳಲ್ಲಿ ಶಾಪಿಂಗ್ ಮಾಡಿ ಕ್ಯಾಷ್‌ಬ್ಯಾಕ್ ಪಡೆಯಲು ಬ್ಯಾಂಕ್‌ಗಳು ಕೆಲವೊಮ್ಮೆ ಶಾಪಿಂಗ್‌ನ ಕನಿಷ್ಠ ಮೊತ್ತದ ಮಿತಿಯನ್ನು ನಿಗದಿ ಮಾಡಿರುತ್ತವೆ. ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಎಲ್ಲಾ ಖರೀದಿಗಳಿಗೂ ಕ್ಯಾಷ್‌ಬ್ಯಾಕ್ ಸಿಕ್ಕೇ ಸಿಗಬಹುದು ಎಂದೇನಿಲ್ಲ. ಇಂತಹ ಆಫರ್‌ಗಳಿಗೆ ಒಂದು ಕನಿಷ್ಠ ಮೊತ್ತದ ಹಣವನ್ನು ಪಾವತಿ ಮಾಡಲೇಬೇಕೆಂಬ ನಿಯಮ ಇರುತ್ತದೆ. ಈ ಹಣ ಪಾವತಿಯ ಮಿತಿಯನ್ನು ಬ್ಯಾಂಕ್‌ಗಳು ಅಥವಾ ಕ್ರೆಡಿಟ್ ಕಾರ್ಡ್ ಕಂಪನಿಗಳು ನಿಗದಿ ಮಾಡಿರುತ್ತವೆ. ಸಾಮಾನ್ಯವಾಗಿ ಈ ಮೊತ್ತವು 2,000 ರೂಪಾಯಿಗಳಿಂದ 5,000 ರೂಪಾಯಿಗಳ ನಡುವೆ ಇರುತ್ತದೆ. ಇಂಥ ನಿಬಂಧನೆ ಇರುವ ಸಂದರ್ಭದಲ್ಲಿ ನಾವು ಕಾರ್ಡ್ ಮೂಲಕ 1,800 ರೂಪಾಯಿ ಮೊತ್ತದ ಶಾಪಿಂಗ್ ಮಾಡಿದರೆ, ಆಗ ಕ್ಯಾಷ್‌ಬ್ಯಾಕ್ ಸಿಗಲಾರದು. ಇಂಥ ಸಂದರ್ಭದಲ್ಲಿ ಕ್ಯಾಷ್‌ಬ್ಯಾಕ್ ಸೌಲಭ್ಯ ಸಿಗಬೇಕು ಅಂದ್ರೆ ನಿಗದಿತ ಕನಿಷ್ಠ ಮೊತ್ತದ ಶಾಪಿಂಗ್ ಮಾಡಲೇಬೇಕು.
ಗರಿಷ್ಠ ಮೊತ್ತದ ಮಿತಿಯ ಬಗ್ಗೆಯೂ ಅರಿವಿರಲಿ
ಹೆಚ್ಚಿನ ಸಂಖ್ಯೆಯ ಕಂಪನಿಗಳ ಕ್ಯಾಷ್‌ಬ್ಯಾಕ್ ಆಫರ್‌ಗಳಿಗೆ ಒಂದು ಗರಿಷ್ಠ ಮಿತಿ ಇರುತ್ತದೆ. ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಶಾಪಿಂಗ್ ಮಾಡಿದಾಗ ಬ್ಯಾಂಕ್ ಶೇಕಡಾ 10ರಷ್ಟು ಕ್ಯಾಷ್‌ಬ್ಯಾಕ್ ಕೊಡುತ್ತದೆ ಅಂದುಕೊಳ್ಳೋಣ. ಹಾಗೂ ಕ್ಯಾಷ್‌ಬ್ಯಾಕ್‌ನ ಗರಿಷ್ಠ ಮಿತಿ 2,000 ರೂಪಾಯಿಗಳು ಅಂತ ಇಟ್ಟುಕೊಳ್ಳೋಣ. ಇಂತಹ ಸ್ಥಿತಿಯಲ್ಲಿ, ನೀವು 20,000 ರೂಪಾಯಿಗಳ ಶಾಪಿಂಗ್ ಮಾಡಿ ಗರಿಷ್ಠ ಕ್ಯಾಷ್‌ಬ್ಯಾಕ್, ಅಂದರೆ 2,000 ರೂ. ಪಡೆಯಬಹುದು. ಹಾಗೆಂದು 50,000 ರೂಪಾಯಿಗಳ ಶಾಪಿಂಗ್ ಮಾಡಿದರೆ, ಆಗ ಶೇಕಡಾ 10ರ ಲೆಕ್ಕಾಚಾರದಂತೆ 5,000 ರೂಪಾಯಿಗಳ ಕ್ಯಾಷ್‌ಬ್ಯಾಕ್ ಸಿಗಲಾರದು. ಯಾಕೆಂದರೆ ಇಲ್ಲಿ ಗರಿಷ್ಠ 2,000 ರೂಪಾಯಿವರೆಗೆ ಮಾತ್ರ ಎಂಬ ಷರತ್ತು ಇರುತ್ತದೆ.
ನಿಯಮಗಳು ಅನ್ವಯ ಎಂಬುದು ನೆನಪಿರಲಿ
ಹೆಚ್ಚಿನ ಕಂಪನಿಗಳು ಕ್ಯಾಷ್‌ಬ್ಯಾಕ್ ಆಫರ್‌ಗಳಿಗೆ ಇರುವ ಜಟಿಲ ನಿಯಮಗಳನ್ನು ಜಾಹೀರಾತಿನಲ್ಲಿ ಬಹಳ ಸಣ್ಣ-ಸಣ್ಣ ಅಕ್ಷರಗಳಲ್ಲಿ ಮುದ್ರಿಸಿರುತ್ತವೆ. ಅನೇಕ ಬಾರಿ ಜಾಹಿರಾತುಗಳಲ್ಲಿ ಒಂದು ಸ್ಟಾರ್ ಮಾರ್ಕ್ ಹಾಕಿ ‘ನಿಯಮಗಳು ಅನ್ವಯವಾಗುತ್ತವೆ’ ಎಂಬ ಒಕ್ಕಣೆಯನ್ನೂ ಬರೆದಿರುವುದನ್ನು ಗಮನಿಸಿ.
ವಿಶೇಷ ಒಪ್ಪಂದಗಳ ಬಗ್ಗೆ ತಿಳಿದಿರಿ
ಅನೇಕ ಬಾರಿ ಹಣಕಾಸು ಸಂಸ್ಥೆಗಳು ಅವುಗಳ ಪಾಯಿಂಟ್ ಆಫ್ ಸೇಲ್ ಟರ್ಮಿನಲ್‌ಗಳಲ್ಲಿ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಿದಾಗ ಮಾತ್ರ ಕ್ಯಾಷ್‌ಬ್ಯಾಕ್ ನೀಡುತ್ತವೆ. ಸಾಮಾನ್ಯವಾಗಿ, ಬ್ಯಾಂಕ್‌ಗಳು ಯಾವುದೋ ಒಂದು ವಿಶೇಷ ಬ್ರಾಂಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತವೆ. ಆಗ, ಅದಕ್ಕೆ ತಗಲುವ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಕೌಂಟರ್‌ಗಳಲ್ಲೇ ಕಾರ್ಡ್ ಸ್ವೈಪ್ ಆಗಬೇಕೆಂದು ಅವು ಬಯಸುತ್ತವೆ ಎಂದು ವೈಯಕ್ತಿಕ ಹಣಕಾಸು ತಜ್ಞ ಜಿತೇಂದ್ರ ಸೋಲಂಕಿಯವರು ಹೇಳಿರುವುದಾಗಿ ‘ಮನಿ9 ಡಾಟ್ಕಾಂ’ ಉಲ್ಲೇಖಿಸಿದೆ.
ಉದಾಹರಣೆಗೆ, ಎಚ್‌ಪಿಸಿಎಲ್ ಜೊತೆಗೆ ಐಸಿಐಸಿಐ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ಬಳಕೆಯ ಒಪ್ಪಂದ ಹೊಂದಿದೆ ಎಂದಿಟ್ಟುಕೊಳ್ಳೋಣ. ಎಚ್‌ಪಿಸಿಎಲ್ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ತುಂಬಿಸಿದಾಗ ಶೇಕಡಾ 2.5ರಷ್ಟು ಕ್ಯಾಷ್‌ಬ್ಯಾಕ್ ನೀಡುತ್ತದೆ. ಬದಲಿಗೆ, ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಂಡರೆ ಕ್ಯಾಷ್‌ಬ್ಯಾಕ್ ಸಿಗಲಾರದು.”
ಕ್ಯಾಷ್‌ಬ್ಯಾಕ್ ಆಸೆಗೆ ಬಿದ್ದು ಹೆಚ್ಚೆಚ್ಚು ಶಾಪಿಂಗ್ ಬೇಡ; ತಜ್ಞರು
ಕ್ಯಾಷ್‌ಬ್ಯಾಕ್ ಆಸೆಗೆ ಬಿದ್ದು ಹೆಚ್ಚೆಚ್ಚು ಶಾಪಿಂಗ್ ಮಾಡಬೇಡಿ. ಕ್ಯಾಷ್‌ಬ್ಯಾಕ್‌ಗಾಗಿ ಬಜೆಟ್ ಮೀರಿ ಹಣ ಖರ್ಚು ಮಾಡಿಬಿಟ್ಟರೆ, ನಂತರ ಮರುಪಾವತಿ ಮಾಡುವಾಗ ನಿಮಗೆ ತೊಂದರೆ ಆಗಬಹುದು. ಆದ್ದರಿಂದ, ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳಿಂದ ಕ್ಯಾಷ್‌ಬ್ಯಾಕ್ ಲಾಭ ಪಡೆಯುವ ಮೊದಲು ಸಾಕಷ್ಟು ಯೋಚಿಸಿ. ಕ್ಯಾಷ್‌ಬ್ಯಾಕ್ ಪಡೆಯಲೇಬೇಕು ಅನ್ನೋ ನಿರ್ಧಾರ ಮಾಡಿಬಿದ್ದರೆ, ಆಗ ಅದರ ನಿಯಮ-ನಿಬಂಧನೆಗಳನ್ನು ಸೂಕ್ಷ್ಮವಾಗಿ ಗಮನಿಸಿ. ಈ ವಿಷಯದಲ್ಲಿ ಸ್ವಲ್ಪವೇ ಎಚ್ಚರ ತಪ್ಪಿದರೂ ನಂತರ ಬಹಳ ತೊಂದರೆ ಆಗಬಹುದು ಎಂದು ಜಿತೇಂದ್ರ ಸೋಲಂಕಿಯವರು ಸಲಹೆ ನೀಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ