India WPI Data October 2022: ಒಂದೂವರೆ ವರ್ಷದ ಬಳಿಕ ಎರಡಂಕಿಯಿಂದ ಇಳಿಕೆಯಾದ ಸಗಟು ಹಣದುಬ್ಬರ
ಸೆಪ್ಟೆಂಬರ್ ತಿಂಗಳಲ್ಲಿ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಶೇಕಡಾ 10.70ರಷ್ಟು ಇತ್ತು. 2021ರ ಮಾರ್ಚ್ ನಂತರ ಇದೇ ಮೊದಲ ಬಾರಿಗೆ ಎರಡಂಕಿಯಿಂದ ಕೆಳಗಿಳಿದಿದ್ದು, ಶೇಕಡಾ 8.39 ಆಗಿದೆ.
ನವದೆಹಲಿ: ಸಗಟು ದರ ಸೂಚ್ಯಂಕ (WPI) ಆಧಾರಿತ ಹಣದುಬ್ಬರ (wholesale inflation) ಅಕ್ಟೋಬರ್ನಲ್ಲಿ ಶೇಕಡಾ 8.39ಕ್ಕೆ ಇಳಿಕೆಯಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಸೋಮವಾರ ತಿಳಿಸಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಶೇಕಡಾ 10.70ರಷ್ಟು ಇತ್ತು. 2021ರ ಮಾರ್ಚ್ ನಂತರ ಇದೇ ಮೊದಲ ಬಾರಿಗೆ ಎರಡಂಕಿಯಿಂದ ಕೆಳಗಿಳಿದಿರುವುದು ದೇಶದ ಆರ್ಥಿಕ ಬೆಳವಣಿಗೆ ನಿಟ್ಟಿನಲ್ಲಿ ಭರವಸೆ ಮೂಡಿಸಿದೆ. 2021ರ ಮಾರ್ಚ್ನಲ್ಲಿ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಶೇಕಡಾ 7.89ರಷ್ಟಿತ್ತು. 2021ರ ಏಪ್ರಿಲ್ ಬಳಿಕ ಸತತ 18 ತಿಂಗಳ ಕಾಲ, ಅಂದರೆ 2022ರ ಸೆಪ್ಟೆಂಬರ್ ವರೆಗೆ ಶೇಕಡಾ 10ಕ್ಕಿಂತ ಮೇಲಿತ್ತು. 2021ರ ಆಗಸ್ಟ್ ತಿಂಗಳಲ್ಲಿ ಶೇಕಡಾ 12.41ರಿಂದ ಶೇಕಡಾ 12.48ಕ್ಕೆ ಏರಿಕೆಯಾಗಿತ್ತು. 2021ರ ಅಕ್ಟೋಬರ್ನಲ್ಲಿ ಗರಿಷ್ಠ ಶೇಕಡಾ 13.83ಕ್ಕೆ ತಲುಪಿತ್ತು.
ಖನಿಜ ತೈಲಗಳು, ಮೂಲ ಲೋಹಗಳು, ಫ್ಯಾಬ್ರಿಕೇಟೆಡ್ ಮೆಟಲ್ ಉತ್ಪನ್ನಗಳು (ಯಂತ್ರೋಪಕರಣಗಳು ಮತ್ತು ಉಪಕರಣಗಳನ್ನು ಹೊರತುಪಡಿಸಿ), ಜವಳಿ ಹಾಗೂ ಇತರ ಉತ್ಪನ್ನಗಳ ಬೆಲೆ ಇಳಿಕೆಯಾಗಿರುವುದರಿಂದ ಹಣದುಬ್ಬರ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಹೇಳಿದೆ.
ಆಹಾರ ಹಣದುಬ್ಬರವೂ ಇಳಿಕೆ
ಆಹಾರ ಹಣದುಬ್ಬರ ಶೇಕಡಾ 11.03ರಿಂದ ಶೇಕಡಾ 8.33ಕ್ಕೆ ಇಳಿಕೆಯಾಗಿದೆ ಎಂದೂ ಸಚಿವಾಲಯ ತಿಳಿಸಿದೆ. ಸೆಪ್ಟೆಂಬರ್ನಲ್ಲಿ ಶೇಕಡಾ 39.66ರಷ್ಟಿದ್ದ ತರಕಾರಿ ಹಣದುಬ್ಬರ ಈ ತಿಂಗಳು ಶೇಕಡಾ 17.61ಕ್ಕೆ ಇಳಿಕೆಯಾಗಿದೆ. ಇಂಧನ, ವಿದ್ಯುತ್ ದರದುಬ್ಬರ ಶೇಕಡಾ 23.17 ಆಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಸಗಟು, ಚಿಲ್ಲರೆ ಹಾಗೂ ಆಹಾರ ಹಣದುಬ್ಬರ ಎಂದರೆ…
ಸಗಟು ಹಣದುಬ್ಬರ ಎಂದರೆ, ವಸ್ತುಗಳ ಸಗಟು ಮಾರಾಟದ (Wholesale) ದರ ಸೂಚ್ಯಂಕವನ್ನು ಆಧಾರವಾಗಿಟ್ಟುಕೊಂಡು ಲೆಕ್ಕ ಹಾಕುವ ಹಣದುಬ್ಬರವಾಗಿದೆ. ಅಂದರೆ, ನಿರ್ದಿಷ್ಟ ಸಗಟು ವಸ್ತುಗಳ ಮಾರಾಟದ ಬೆಲೆಯ ಆಧಾರದಲ್ಲಿ ಹಣದುಬ್ಬರ ಲೆಕ್ಕ ಹಾಕಲಾಗುತ್ತದೆ. ಉದಾಹರಣೆಗೆ; ಭಾರತದಲ್ಲಿ ಸಗಟು ದರ ಸೂಚ್ಯಂಕವನ್ನು ಲೆಕ್ಕ ಹಾಕಲು 1993-94ರನ್ನು ಮೂಲ ವರ್ಷಗಳನ್ನಾಗಿಟ್ಟುಕೊಂಡು 435 ವಸ್ತುಗಳನ್ನು ಸರ್ಕಾರ ಗುರುತಿಸಿತ್ತು. 2011-12ರಲ್ಲಿ ಇದನ್ನು 697 ವಸ್ತುಗಳಿಗೆ ಹೆಚ್ಚಿಸಲಾಗಿದೆ. ಈ ವಸ್ತುಗಳ ಸಗಟು ಮಾರಾಟದ ಬೆಲೆಯನ್ನು ಆಧಾರವಾಗಿಟ್ಟುಕೊಂಡು ಹಣದುಬ್ಬರ ಲೆಕ್ಕಹಾಕಲಾಗುತ್ತದೆ. ಇದೇ ರೀತಿ, ವಸ್ತುಗಳ ಚಿಲ್ಲರೆ (Reatil) ಮಾರಾಟದ ಬೆಲೆಯ ಆಧಾರದಲ್ಲಿ ಚಿಲ್ಲರೆ ಹಣದುಬ್ಬರವನ್ನು ಲೆಕ್ಕ ಹಾಕಲಾಗುತ್ತದೆ. ವಸ್ತುಗಳ ಚಿಲ್ಲರೆ (ರಿಟೇಲ್) ಮಾರಾಟದ ಅಥವಾ ಗ್ರಾಹಕ ದರವನ್ನು ಗಣನೆಗೆ ತೆಗೆದುಕೊಂಡು ಚಿಲ್ಲರೆ ಹಣದುಬ್ಬರವನ್ನು ಲೆಕ್ಕ ಹಾಕಲಾಗುತ್ತದೆ. ನಿರ್ದಿಷ್ಟ ಸರಕು-ಸೇವೆಗಳ ಗ್ರಾಮೀಣ, ನಗರ ಮತ್ತು ಅಖಿಲ ಭಾರತ ಮಟ್ಟದ ಬೆಲೆ ಹಾಗೂ ಈ ಬೆಲೆಯಲ್ಲಿ ಕಾಲಾವಧಿಯಲ್ಲಿ ಆಗುವ ಬದಲಾವಣೆ (ಏರಿಳಿತ) ಗಣನೆಗೆ ತೆಗೆದುಕೊಂಡು ಚಿಲ್ಲರೆ ಹಣದುಬ್ಬರ ಲೆಕ್ಕಾಚಾರ ಹಾಕಲಾಗುತ್ತದೆ. ನಿರ್ದಿಷ್ಟ ಆಹಾರ ವಸ್ತುಗಳ ಬೆಲೆಯ ಆಧಾರದಲ್ಲಿ ಆಹಾರ ಹಣದುಬ್ಬರ ಲೆಕ್ಕಹಾಕಲಾಗುತ್ತದೆ. ಸದ್ಯ 2004-05 ಮತ್ತು 2011-12 ಅನ್ನು ಮೂಲ ವರ್ಷಗಳನ್ನಾಗಿಟ್ಟುಕೊಂಡು ದೇಶದಲ್ಲಿ ಹಣದುಬ್ಬರ ಪ್ರಮಾಣ ಲೆಕ್ಕಹಾಕಲಾಗುತ್ತಿದೆ.
ಚಿಲ್ಲರೆ ಹಣದುಬ್ಬರ ಶೇಕಡಾ 7ರ ಕೆಳಗೆ ನಿರೀಕ್ಷೆ
ಹಣಕಾಸು ನೀತಿಯನ್ನು ರೂಪಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಚಿಲ್ಲರೆ ಹಣದುಬ್ಬರವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಅಕ್ಟೋಬರ್ ತಿಂಗಳ ಚಿಲ್ಲರೆ ಹಣದುಬ್ಬರ ಪ್ರಮಾಣ ಎಷ್ಟಿದೆ ಎಂಬುದನ್ನೂ ಇಂದು (ನವೆಂಬರ್ 14) ಸರ್ಕಾರ ಪ್ರಕಟಿಸುವ ನಿರೀಕ್ಷೆ ಇದೆ. ಅಕ್ಟೋಬರ್ ತಿಂಗಳ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇಕಡಾ 7ಕ್ಕಿಂತ ಕಡಿಮೆ ಇರಬಹುದೆಂದು ನಿರೀಕ್ಷಿಸಲಾಗಿದೆ.
ಚಿಲ್ಲರೆ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಆರ್ಬಿಐ ಮೇ – ಸೆಪ್ಟೆಂಬರ್ ಅವಧಿಯಲ್ಲಿ ರೆಪೊ ದರದಲ್ಲಿ 190 ಮೂಲಾಂಶ ಹೆಚ್ಚಿಸಿ, ಶೇಕಡಾ 5.90ಕ್ಕೆ ನಿಗದಿಪಡಿಸಿತ್ತು. ಸತತ ಮೂರು ತ್ರೈಮಾಸಿಕ ಅವಧಿಯಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 6ಕ್ಕಿಂತ ಕೆಳಗೆ ತರುವಲ್ಲಿ ಆರ್ಬಿಐ ವಿಫಲವಾಗಿತ್ತು. ಇದಕ್ಕಾಗಿ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಬೇಕಾಗಿ ಬಂದಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:40 pm, Mon, 14 November 22