ಯುವ ನಟನಿಗೆ ವಂಚನೆ, ಬೆದರಿಕೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ಆರೋಪ
Nanda Kishore: ಸುದೀಪ್ ನಟನೆಯ ‘ರನ್ನ’, ‘ವಿಕ್ಟರಿ’, ‘ಅಧ್ಯಕ್ಷ’, ‘ಪೊಗರು’ ಇನ್ನೂ ಕೆಲ ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ನಂದ ಕಿಶೋರ್ ವಿರುದ್ಧ ಯುವ ನಟರೊಬ್ಬರು ಹಣಕಾಸು ವಂಚನೆ ಆರೋಪ ಮಾಡಿದ್ದಾರೆ. ನಿರ್ದೇಶಕ ನಂದ ಕಿಶೋರ್, ತಮ್ಮಿಂದ 22 ಲಕ್ಷ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನಿರ್ದೇಶಕ ನಂದ ಕಿಶೋರ್ (Nanda Kishore) ವಿರುದ್ಧ ಯುವ ನಟ ಶಬರೀಶ್ ಹಣಕಾಸು ವಂಚನೆ ದೂರು ದಾಖಲಿಸಲು ಮುಂದಾಗಿದ್ದಾರೆ. ಟಿವಿ9 ಜೊತೆಗೆ ಮಾತನಾಡಿರುವ ನಟ ಶಬರೀಶ್, ನಂದ ಕಿಶೋರ್ ಅವರು ತಮ್ಮಿಂದ 22 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದು, ಈಗ ಹಣ ಕೊಡದೆ ಸತಾಯಿಸುತ್ತಿದ್ದಾರೆ. ಅಲ್ಲದೆ ಸುದೀಪ್ ಅವರ ಹೆಸರು ಬಳಸಿ ನನಗೆ ಬೆದರಿಕೆ ಸಹ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ. ತಾವು ಫಿಲಂ ಚೇಂಬರ್ಗೆ ಈ ಬಗ್ಗೆ ದೂರು ನೀಡುವುದಾಗಿ ಹೇಳಿದ್ದಾರೆ.
ಕಿಚ್ಚ ಸುದೀಪ್ ಅವರ ಅಭಿಮಾನಿ ಆಗಿರುವ ಶಬರೀಶ್ ಶೆಟ್ಟಿ ಆರೋಪಿಸಿರುವಂತೆ, ನಿರ್ದೇಶಕ ನಂದ ಕಿಶೋರ್ ಸುಮಾರು ಒಂಬತ್ತು ವರ್ಷಗಳ ಹಿಂದೆ ಜಿಮ್ ಒಂದರಲ್ಲಿ ಪರಿಚಯವಾದರಂತೆ. ಪರಿಚಯ ಗೆಳೆತನವಾಗಿ, ನಂದ ಕಿಶೋರ್, ಶರಬೀಶ್ ಅವರನ್ನು ಸಿಸಿಎಲ್ನಲ್ಲಿ ಆಡಿಸುವುದಾಗಿ ಭರವಸೆ ನೀಡಿ, ಶಬರೀಶ್ ಅವರಿಂದ 22 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದರಂತೆ. ‘ನಾನು ಚಿನ್ನ ಅಡವಿಟ್ಟು ಹಣ ಕೊಟ್ಟಿದ್ದೆ’ ಎಂದು ಶಬರೀಶ್ ಹೇಳಿದ್ದಾರೆ.
ಆದರೆ ಈ ವರೆಗೆ ನಂದ ಕಿಶೋರ್ ತಮಗೆ ಹಣ ಮರಳಿಸಿಲ್ಲ ಎಂದು ಶಬರೀಶ್ ಆರೋಪಿಸಿದ್ದಾರೆ. ಹಣ ಮರಳಿಸುವಂತೆ ಕೇಳಿದರೆ ಬೆದರಿಕೆ ಹಾಕುತ್ತಾರೆ. ನಾನು ಹಣ ಕೇಳಿದಾಗೆಲ್ಲ ಸುದೀಪ್ ಸರ್ ಹೆಸರು ಹೇಳಿ ಯಾಮಾರಿಸಿದರು. ಸಿನಿಮಾದಲ್ಲಿ ಅವಕಾಶ ಕೊಡ್ತಿನಿ ಅಂತ ಹೇಳಿ ನನಗೆ, ಮೋಸ ಮಾಡಿದ್ದಾರೆ. ಇತ್ತ, ನಾನು ಕೊಟ್ಟ ಹಣವೂ ವಾಪಸ್ ಕೊಟ್ಟಿಲ್ಲ. ಸಿನಿಮಾದಲ್ಲಿ ಅವಕಾಶವನ್ನು ಕೊಡಲಿಲ್ಲ, ನಾನು ಸಿಸಿಎಲ್ ನಲ್ಲಿ ಆಡವು ಕನಸ್ಸು ಕಟ್ಟಿಕೊಂಡಿದ್ದೆ, ಕೆಸಿಸಿ ಟೂರ್ನಿಯಲ್ಲಿ ನಾನು ಎರಡು ಸೀಸನ್ ಆಡಿದ್ದೇನೆ, ಹಣ ಕೇಳಿದರೆ ನಿನ್ನ ಕೆಸಿಸಿಯಿಂದ ಹೊರ ಹಾಕ್ತಿನಿ ಅಂತ ಬೆದರಿಕೆ ಹಾಕುತ್ತಿದ್ದರು’ ಎಂದು ಶಬರೀಶ್ ಹೇಳಿದ್ದಾರೆ.
ಇದನ್ನೂ ಓದಿ:ಒಂದೊಳ್ಳೆಯ ಕೆಲಸಕ್ಕಾಗಿ ಕಮೆಂಟ್ ಹಾಕಿದ ಕಿಚ್ಚ ಸುದೀಪ್
‘ನಾನು 200 ಗ್ರಾಂ ಚಿನ್ನ ಅಡವಿಟ್ಟು ಅವರಿಗೆ ಹಣ ಕೊಟ್ಟಿದ್ದೆ, ಆ ಚಿನ್ನದ ಲೋನ್ ಕಟ್ಟಿ ಎಂದೆ ಅದನ್ನು ಕಟ್ಟಲಿಲ್ಲ. ನಾನು ಬಡ್ಡಿ ಕಟ್ಟಿದೆ. ಬಡ್ಡಿಯ ಮೇಲೆ ಬಡ್ಡಿ ಬೆಳೆದು ಆ ಚಿನ್ನವನ್ನು ಹರಾಜು ಹಾಕಲಾಯ್ತು. ನನ್ನ ಬಳಿ ಎಲ್ಲದಕ್ಕೂ ದಾಖಲೆ ಇದೆ. ‘ಪೊಗರು’ ಸಿನಿಮಾನಲ್ಲಿ ಅವಕಾಶ ಕೊಡ್ತೀನಿ ಅಂದ್ರು ಕೊಡಲಿಲ್ಲ. ‘ರಾಣಾ’ ಸಿನಿಮಾದಲ್ಲಿ ಅವಕಾಶ ಕೊಡ್ತೀನಿ ಅಂದ್ರು ಕೊಡಲಿಲ್ಲ. ಈಗ ಹಣ ಕೇಳಿದರೆ ಏನು ಮಾಡ್ಕೊತೀಯೋ ಮಾಡ್ಕೊ ಎಂದು ಬೆದರಿಕೆ ಹಾಕಿದ್ದಾರೆ’ ಎಂದಿದ್ದಾರೆ.
‘ನಾನು ಸುದೀಪ್ ಸರ್ ಜೊತೆ ಕ್ರಿಕೆಟ್ ಆಡುವ ಆಸೆಯಿಂದ ಸುಮ್ಮನಾಗ್ತಿದ್ದೆ, ಈಗ ನಾನು ‘ರಾಮಧೂತ’ ಸಿನಿಮಾ ಮಾಡಿದ್ದೇನೆ, ಶೂಟಿಂಗ್ ಪೂರ್ತಿ ಆಗಿದೆ. ಸಿನಿಮಾ ರಿಲೀಸ್ ಮಾಡಲು ನನ್ನ ಬಳಿ ಹಣ ಇಲ್ಲ, ನನ್ನ ಹಣ ವಾಪಸ್ ಕೊಡಿ ಅಂತ ಕೇಳಿದರೆ ಏನು ಮಾಡ್ಕೊತೀಯಾ ಮಾಡ್ಕೊ ಅಂದಿದ್ದಾರೆ. ನಮ್ಮಂತ ಪುಟ್ಟ ಕಲಾವಿದರು ಹೇಗೆ ಬದುಕೊದು ಗೊತ್ತಾಗ್ತಿಲ್ಲ, ನಾನು ಈ ವಿಚಾರವನ್ನು ಸುದೀಪ್ ಸರ್ ಗಮನಕ್ಕೆ ತರಲು ಪ್ರಯತ್ನ ಪಟ್ಟಾಗ ನನ್ನ ತಡೆಯಲಾಯ್ತು. ನನ್ನ ಹಣ ನನಗೆ ಕೊಡದೇ ಇದ್ದರೆ ನಂದ ಕಿಶೋರ್ ವಿರುದ್ದ ಕಾನೂನು ಮೊರೆ ಹೋಗುತ್ತೀನಿ. ಈ ವಿಷಯವನ್ನು ಶಿವಣ್ಣ, ಸುದೀಪ್ ಸರ್ ಗಮನಕ್ಕೆ ತರುತ್ತೇನೆ. ಫಿಲ್ಮ್ ಚೇಂಬರ್ಗೆ ದೂರು ಕೊಡ್ತಿನಿ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:16 pm, Fri, 20 June 25




