Apple In Bengaluru: ಬೆಂಗಳೂರಿನಲ್ಲಿ ಕಚೇರಿ ತೆರೆದ ಆ್ಯಪಲ್; ಮುಂಬೈನ ಆ್ಯಪಲ್ ಸ್ಟೋರ್​ಗಿಂತ 6 ಪಟ್ಟು ಹೆಚ್ಚು ಬಾಡಿಗೆ

|

Updated on: Apr 09, 2023 | 11:33 AM

Apple's Global Capability Center In Bengaluru: ಬೆಂಗಳೂರಿನ ಕಬ್ಬನ್ ರಸ್ತೆಯಲ್ಲಿರುವ ಪ್ರೆಸ್ಟೀಜ್ ಮಿನ್​ಸ್ಕ್ ಸ್ಕ್ವಯರ್ ಕಟ್ಟಡದ ಕೆಲ ಭಾಗವನ್ನು ಆ್ಯಪಲ್ 10 ವರ್ಷ ಲೀಸ್​ಗೆ ಪಡೆದಿದೆ. ಕಳೆದ ವರ್ಷವಷ್ಟೇ 1.17ಲಕ್ಷ ಚದರ ಅಡಿ ವಿಸ್ತೀರ್ಣದ ಈ ಕಟ್ಟಡ ನಿರ್ಮಾಣವಾಗಿತ್ತು. ಮುಂಬೈನ ಅ್ಯಪಲ್ ಸ್ಟೋರ್​ಗಿಂತ ಆರು ಪಟ್ಟು ಹೆಚ್ಚು ಬಾಡಿಗೆಯನ್ನು ಬೆಂಗಳೂರಿನ ಕಚೇರಿಗೆ ಆ್ಯಪಲ್ ಪಾವತಿಸುತ್ತದೆ.

Apple In Bengaluru: ಬೆಂಗಳೂರಿನಲ್ಲಿ ಕಚೇರಿ ತೆರೆದ ಆ್ಯಪಲ್; ಮುಂಬೈನ ಆ್ಯಪಲ್ ಸ್ಟೋರ್​ಗಿಂತ 6 ಪಟ್ಟು ಹೆಚ್ಚು ಬಾಡಿಗೆ
ಆ್ಯಪಲ್ ಕಚೇರಿ
Follow us on

ಬೆಂಗಳೂರು: ಇತ್ತೀಚೆಗೆ ಮುಂಬೈನಲ್ಲಿ ಆ್ಯಪಲ್ ಸ್ಟೋರ್ (Apple Store) ಆರಂಭವಾದ ಬೆನ್ನಲ್ಲೇ ಇದೀಗ ಬೆಂಗಳೂರಿನ ಹೃದಯಭಾಗದಲ್ಲಿ ಆ್ಯಪಲ್ ಸಂಸ್ಥೆ ಕಟ್ಟಡವೊಂದನ್ನು ಬಾಡಿಗೆಗೆ ಪಡೆದಿರುವ ಸಂಗತಿ ಬೆಳಕಿಗೆ ಬಂದಿದೆ. ಕಬ್ಬನ್ ರಸ್ತೆಯ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ ಸಂಕೀರ್ಣದಲ್ಲಿರುವ ಪ್ರೆಸ್ಟೀಜ್ ಮಿನ್​ಸ್ಕ್ ಸ್ಕ್ವಯರ್​ನಲ್ಲಿ (Prestige Minsk Square) ಏಳು ಮಹಡಿಗಳನ್ನು ಆ್ಯಪಲ್ ಲೀಸ್​ಗೆ ಪಡೆದಿದೆ. ಕಳೆದ ವರ್ಷವಷ್ಟೇ 1.17ಲಕ್ಷ ಚದರ ಅಡಿ ವಿಸ್ತೀರ್ಣದ ಈ ಕಟ್ಟಡ ನಿರ್ಮಾಣವಾಗಿತ್ತು. ಈ ಕಟ್ಟಡದ ಏಳು ಮಹಡಿಗಳನ್ನು ಆ್ಯಪಲ್ 10 ವರ್ಷಗಳ ಕಾಲ ಲೀಸ್​ಗೆ ಪಡೆದಿದೆ. ಪ್ರಾಪ್​ಸ್ಟಾಕ್ ಎಂಬ ಡಾಟಾ ಅನಾಲಿಟಿಕ್ಸ್ ಸಂಸ್ಥೆ ಈ ಮಾಹಿತಿಯನ್ನು ಬಹಿರಂಗಪಡಿಸಿರುವುದು ತಿಳಿದುಬಂದಿದೆ. ದಿ ಹಿಂದೂ ಬಿಸಿನೆಸ್​ಲೈನ್ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ 10 ವರ್ಷ ಕಾಲ ಲೀಸ್​ಗೆ ಈ ಕಟ್ಟಡವನ್ನು ಪಡೆಯಲಾಗಿದ್ದರೂ ಪ್ರತೀ ತಿಂಗಳು ಬಾಡಿಗೆ ಪಾವತಿಸಬೇಕು. ಈ ವರ್ಷ ಜುಲೈನಿಂದ ಆ್ಯಪಲ್ ಸಂಸ್ಥೆ ಈ ಕಟ್ಟಡಕ್ಕೆ ಬಾಡಿಗೆ ಕಟ್ಟಬೇಕಾಗುತ್ತದೆ.

ಬೆಂಗಳೂರಿನ ಕಚೇರಿಗೆ ಆ್ಯಪಲ್ ಎಷ್ಟು ಬಾಡಿಗೆ ಕಟ್ಟುತ್ತದೆ? ಈ ಕಚೇರಿ ಯಾವುದಕ್ಕೆ ಬಳಕೆ?

ಪ್ರೆಸ್ಟೀಜ್ ಮಿಂಸ್ಕ್ ಸ್ಕ್ವಯರ್ ಕಟ್ಟಡದ ಕೆಲ ಭಾಗವನ್ನು ಲೀಸ್​ಗೆ ಪಡೆದಿರುವ ಆ್ಯಪಲ್ ಸಂಸ್ಥೆ ಪ್ರತೀ ತಿಂಗಳು 2.44 ಕೋಟಿ ರೂ ಬಾಡಿಗೆ ಪಾವತಿಸಬೇಕು. ಐದು ವರ್ಷದ ಲಾಕ್ಇನ್ ಪೀರಿಯಡ್ ಇರುತ್ತದೆ. ಅಂದರೆ, ಆ್ಯಪಲ್ ಸಂಸ್ಥೆ ಕನಿಷ್ಠ 5 ವರ್ಷದವರೆಗೆ ಈ ಕಟ್ಟಡಕ್ಕೆ ಬಾಡಿಗೆ ಪಾವತಿಸಬೇಕು. ಹಾಗೆಯೇ, ಕಟ್ಟಡ ಮಾಲೀಕರು 5 ವರ್ಷದವರೆಗೆ ಆ್ಯಪಲ್ ಕಚೇರಿಯನ್ನು ತೆರವುಗೊಳಿಸುವಂತಿಲ್ಲ.

ಇದನ್ನೂ ಓದಿKMF vs Amul: ಕೆಎಂಎಫ್ ಎದುರು ಸೆಣಸಿ ಗೆಲ್ಲಲು ಅಮುಲ್​ಗೆ ಆಗುತ್ತಾ? ಎರಡು ದೈತ್ಯ ಹಾಲು ಉತ್ಪಾದಕರ ಮಧ್ಯೆ ಒಂದು ಹೋಲಿಕೆ

ಪ್ರತೀ ಮೂರು ವರ್ಷಗಳಿಗೆ ಬಾಡಿಗೆ ಹಣದಲ್ಲಿ ಶೇ. 15ರಷ್ಟು ಹೆಚ್ಚಳವಾಗಬೇಕೆಂದು ಕರಾರು ಮಾಡಿಕೊಳ್ಳಲಾಗಿದೆ. ಲೀಸ್ ಅವಧಿ ಮುಗಿದ ಬಳಿಕ ಐದು ವರ್ಷ ಹೆಚ್ಚುವರಿ ಅವಧಿಗೆ ಲೀಸ್ ವಿಸ್ತರಿಸಬಹುದು. ಇಂಥ ಮೂರು ಹೆಚ್ಚುವರಿ ಅವಧಿ ವಿಸ್ತರಣೆ ಅವಕಾಶವನ್ನು ಆ್ಯಪಲ್ ಸಂಸ್ಥೆಗೆ ನೀಡಲಾಗಿದೆ.

ತಾವಿರುವ ಕಟ್ಟಡದಲ್ಲಿ ಪ್ರತಿಸ್ಪರ್ಧಿಗಳ ಕಚೇರಿ ಸ್ಥಾಪನೆ ಬೇಡ: ಆ್ಯಪಲ್ ಷರತ್ತು

ಪ್ರೆಸ್ಟೀಜ್ ಮಿಂಸ್ಕ್ ಸ್ಕ್ವಯರ್​ನ ಮಾಲೀಕರಾದ ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ಸ್ ಜೊತೆ ಆ್ಯಪಲ್ ಮಾಡಿಕೊಂಡಿರುವ ಭೋಗ್ಯದ ಕರಾರಿನಲ್ಲಿರುವ ಮಾಹಿತಿ ಪ್ರಕಾರ, ಈ ಕಟ್ಟಡದಲ್ಲಿ ತನ್ನ ಪ್ರತಿಸ್ಪರ್ಧಿಗಳಿಗೆ ಸ್ಥಳಾವಕಾಶ ಕೊಡಬಾರದು ಎಂದು ಆ್ಯಪಲ್ ಷರತ್ತು ಹಾಕಿದೆ. ಪ್ರತಿಸ್ಪರ್ಧಿಗಳು ಯಾರು ಎಂದು ನಿರ್ದಿಷ್ಟವಾಗಿಯೂ ನಮೂದಿಸಲಾಗಿದೆ. ಗೂಗಲ್​ನ ಮಾಲೀಕ ಸಂಸ್ಥೆ ಆಲ್ಫಬೆಟ್, ಮೈಕ್ರೀಸಾಫ್ಟ್, ಸ್ಯಾಮ್​ಸಂಗ್, ಶಿಯೋಮಿ, ಅಮೇಜಾನ್, ಹುಆವೇ, ನೆಟ್​​ಫ್ಲಿಕ್ಸ್, ಫೇಸ್​ಬುಕ್, ಸ್ಪಾಟಿಫೈ, ಬೈಡು, ಟೆನ್ಸೆಂಟ್ ಟೆಕ್ನಾಲಜೀಸ್ ಅನ್ನು ಆ್ಯಪಲ್ ಸಂಸ್ಥೆ ತನ್ನ ಕಾಂಪಿಟೀಟರ್ಸ್ ಎಂದು ಹೆಸರಿಸಿ, ಇವುಗಳಲ್ಲಿನ ಯಾರಿಗೂ ಕೂಡ ತಾನಿರುವ ಕಟ್ಟಡದಲ್ಲಿ ಕಚೆರಿ ತೆರೆಯಲು ಅವಕಾಶ ಕೊಡಬಾರದು ಎಂದು ಸ್ಪಷ್ಟಪಡಿಸಿದೆ.

ಪ್ರೆಸ್ಟೀಜ್ ಮಿಂಸ್ಕ್ ಸ್ಕ್ವಯರ್​ನ ಆ್ಯಪಲ್ ಕಚೇರಿ ಯಾವುದಕ್ಕೆ ಉಪಯೋಗ?

ಆ್ಯಪಲ್ ಸಂಸ್ಥೆ ಬೆಂಗಳೂರಿನ ಪ್ರೆಸ್ಟೀಜ್ ಮಿನ್​ಸ್ಕ್ ಸ್ಕ್ವಯರ್ ಕಟ್ಟಡವನ್ನು ತನ್ನ ಗ್ಲೋಬಲ್ ಕೇಪಬಿಲಿಟಿ ಸೆಂಟರ್ (Global Capability Center) ಆಗಿ ಬಳಕೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಗ್ಲೋಬಲ್ ಕೇಪಬಿಲಿಟಿ ಸೆಂಟರ್ ಎಂದರೆ ಕಂಪನಿಯ ಜಾಗತಿಕ ಕಾರ್ಯಾಚರಣೆಗಳಿಗೆ ವಿವಿಧ ಸ್ತರದಲ್ಲಿ ಬೆಂಬಲ ನೀಡುವ ಕೇಂದ್ರ. ಬ್ಯಾಕ್ ಆಫೀಸ್, ಕಾಂಟ್ಯಾಕ್ಟ್ ಸೆಂಟರ್, ಐಟಿ ಸಪೋರ್ಟ್ ಇತ್ಯಾದಿ ಕೆಲಸಗಳು ಇಲ್ಲಿ ನಡೆಯುತ್ತವೆ.

ಇದನ್ನೂ ಓದಿIPL- ಐಪಿಎಲ್​ಗೆ ಡಿಜಿಟಲ್ ಧಮಾಕ, ಟಿವಿ ವೀಕ್ಷಕರ ಸಂಖ್ಯೆ ಇಳಿಮುಖ; ಜಿಯೋ ವಿಶ್ವದಾಖಲೆ

ಆ್ಯಪಲ್ ಕಂಪನಿಯ ಯಾವುದೇ ಉತ್ಪನ್ನಗಳ ತಯಾರಿಕೆ ಇಲ್ಲಿ ಅಗುವುದಿಲ್ಲ. ತನ್ನ ಉತ್ಪನ್ನಗಳನ್ನು ಆ್ಯಪಲ್ ತಾನೇ ಖುದ್ದಾಗಿ ತಯಾರಿಸುವುದಿಲ್ಲ. ಬೇರೆ ಬೇರೆ ಕಂಪನಿಗಳಿಗೆ ಉತ್ಪಾದನೆಯನ್ನು ಗುತ್ತಿಗೆಗೆ ನೀಡುತ್ತದೆ. ಆ್ಯಪಲ್ ಕಂಪನಿಯ ಪ್ರಮುಖ ಗುತ್ತಿಗೆದಾರ ಸಂಸ್ಥೆಗಳಾದ ಫಾಕ್ಸ್​ಕಾನ್ ಮತ್ತು ವಿಸ್ಟ್ರಾನ್ ಕರ್ನಾಟಕದಲ್ಲಿ ಐಫೋನ್ ತಯಾರಿಸುತ್ತವೆ. ವಿಸ್ಟ್ರಾನ್ ಕೋಲಾರದ ಘಟಕದಲ್ಲಿ ಈಗಾಗಲೇ ಐಫೋನ್ ತಯಾರಿಸುವ ಕೆಲ ವರ್ಷಗಳಿಂದ ಮಾಡುತ್ತಿದೆ. ಫಾಕ್ಸ್​ಕಾನ್ ಸಂಸ್ಥೆ ದೊಡ್ಡಬಳ್ಳಾಪುರದಲ್ಲಿ ಶೀಘ್ರದಲ್ಲೇ ಐಫೋನ್ ಫ್ಯಾಕ್ಟರಿ ತೆರೆಯುವ ಸಾಧ್ಯತೆ ಇದೆ.

ಭಾರತದಲ್ಲಿ ಶೇ. 25ರಷ್ಟು ಐಫೋನ್ ಉತ್ಪಾದಿಸುವ ಗುರಿ

ಆ್ಯಪಲ್ ಕಂಪನಿಯ ಉತ್ಪನ್ನಗಳಲ್ಲಿ ಐಫೋನ್ ಪಾಲು ಹೆಚ್ಚು. ಇದರ ಜೊತೆಗೆ ಆ್ಯಪಲ್ ವಾಚ್, ಏರ್​ಪಾಡ್, ಐಪ್ಯಾಡ್, ಮ್ಯಾಕ್ ಕಂಪ್ಯೂಟರ್​​ಗಳೂ ಇವೆ. ಹೆಚ್ಚಿನ ಉತ್ಪಾದನೆ ಚೀನಾದಲ್ಲೇ ನಡೆಯುತ್ತದೆ. ಕೋವಿಡ್ ನಂತರ ಆ್ಯಪಲ್ ಉತ್ಪನ್ನಗಳ ಸರಬರಾಜು ಸರಪಳಿ ಭಂಗಗೊಂಡ ಬಳಿಕ ಎಚ್ಚೆತ್ತುಕೊಂಡ ಆ್ಯಪಲ್ ಇದೀಗ ಚೀನಾದ ಹೊರಗೆ ಉತ್ಪಾದನೆ ಹೆಚ್ಚಿಸಲು ಆರಂಭಿಸಿದೆ. ಅದರಲ್ಲಿ ಭಾರತ ಪ್ರಮುಖವಾದುದು. ತನ್ನ ಶೇ. 25ರಷ್ಟು ಐಫೋನ್​ಗಳನ್ನು ಭಾರತದಲ್ಲಿ ಉತ್ಪಾದಿಸುವುದು ಆ್ಯಪಲ್​ನ ಗುರಿ. ಸದ್ಯ ಶೇ. 5 ರಷ್ಟು ಮಾತ್ರ ಐಫೋನ್ ಉತ್ಪಾದನೆ ಭಾರತದಲ್ಲಿ ಆಗುತ್ತಿದೆ. ಇದನ್ನು ಶೇ. 25ಕ್ಕೆ ಹೆಚ್ಚಿಸಲು ಗ್ಲೋಬಲ್ ಕೇಬಬಿಲಿಟಿ ಸೆಂಟರ್​ಗಳ ಬೆಂಬಲ ಅಗತ್ಯವಿದೆ. ಬೆಂಗಳೂರಿನಲ್ಲಿ ಆ್ಯಪಲ್ ಲೀಸ್​ಗೆ ಪಡೆದಿರುವುದು ಇದೇ ಕಾರಣಕ್ಕಿರಬಹುದು.

ಇದನ್ನೂ ಓದಿInspirational Story: ಸೈಕಲ್ ರಿಕ್ಷಾ ನೂಕುತ್ತಿದ್ದ ಕುಮಾರ್ ಈಗ ಐಐಟಿ, ಐಐಎಂ ಪದವೀಧರರಿಗೆ ಕೆಲಸ ಕೊಡುವ ಉದ್ಯಮಿ

ಮುಂಬೈನಲ್ಲಿರುವ ಆ್ಯಪಲ್ ಸ್ಟೋರ್ ಬಾಡಿಗೆ ಎಷ್ಟು?

ಇತ್ತೀಚೆಗೆ ಆ್ಯಪಲ್ ಸಂಸ್ಥೆ ಮುಂಬೈನಲ್ಲಿ ತನ್ನ ಉತ್ಪನ್ನಗಳ ಮಳಿಗೆ ತೆರೆಯಿತು. ಭಾರತದಲ್ಲಿ ಆರಂಭವಾದ ಮೊದಲ ಆ್ಯಪಲ್ ಸ್ಟೋರ್ ಅದು. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿರುವ 20,806 ಚದರ ಅಡಿ ಇರುವ 3 ಮಹಡಿ ಜಾಗವನ್ನು ಆ್ಯಪಲ್ ಕಂಪನಿ 11 ವರ್ಷದ ಲೀಸ್​ಗೆ ಪಡೆದಿದೆ. ಬೆಂಗಳೂರಿನ ಮಿನ್​ಸ್ಕ್ ಸ್ಕ್ವಯರ್​ನ ಬಾಡಿಗೆ ತಿಂಗಳಿಗೆ 2.44 ಕೋಟಿ ರೂ ಆದರೆ, ಮುಂಬೈನಲ್ಲಿರುವ ಆ್ಯಪಲ್ ಸ್ಟೋರ್ ಬಾಡಿಗೆ ತಿಂಗಳಿಗೆ 42 ಲಕ್ಷ. ಪ್ರತೀ ಮೂರು ವರ್ಷಕ್ಕೆ ಶೇ. 15ರಷ್ಟು ಬಾಡಿಗೆ ಹೆಚ್ಚಳ ಆಗುತ್ತದೆ.

ಕ್ಯೂಪರ್ಟಿನೋ ಮೂಲದ ಆ್ಯಪಲ್ ಮತ್ತು ಅಮೆರಿಕದ ಸಿಲಿಕಾನ್ ವ್ಯಾಲಿ

ಅಂದಹಾಗೆ ಆ್ಯಪಲ್ ಕಂಪನಿಯ ಮುಖ್ಯ ಕಚೇರಿ ಇರುವುದು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಉತ್ತರ ಭಾಗದಲ್ಲಿನ ಸಿಲಿಕಾನ್ ವ್ಯಾಲಿ ಪ್ರದೇಶದ ಕ್ಯೂಪರ್ಟಿನೋ ಎಂಬ ನಗರದಲ್ಲಿ. ಕ್ಯೂಪರ್ಟಿನೋ ಸಿಟಿ ಖ್ಯಾತವಾಗಿರುವುದೇ ಆ್ಯಪಲ್ ಕಂಪನಿ ಕಾರಣಕ್ಕೆ. ಸಿಲಿಕಾನ್ ವ್ಯಾಲಿ ಜಾಗದಲ್ಲಿ ಅಮೆರಿಕದ ಬಹುತೇಕ ಐಟಿ ಕಂಪನಿಗಳು ಮುಖ್ಯ ಕಚೇರಿ ಹೊಂದಿವೆ. ಇದೇ ಕಾರಣಕ್ಕೆ ಈ ಪ್ರದೇಶಕ್ಕೆ ಸಿಲಿಕಾನ್ ವ್ಯಾಲಿ ಎಂದು ಹೆಸರು ಬಂದಿದ್ದು. ಸ್ಯಾನ್ ಜೋಸ್, ಸನ್ನಿವೇಲ್, ಸಂಟಾ ಕ್ಲಾರಾ, ರೆಡ್​ವುಡ್ ಸಿಟಿ, ಮೌಂಟೇನ್ ವೀವ್, ಪಾಲೋ ಅಲ್ಟೋ, ಕೂಪರ್​ಟಿನೋ, ಮೆನ್ಲೋ ಪಾರ್ಕ್ ಇತ್ಯಾದಿ ನಗರಗಳು ಸಿಲಿಕಾನ್ ವ್ಯಾಲಿ ಪ್ರದೇಶದ ವ್ಯಾಪ್ತಿಗೆ ಬರುತ್ತವೆ. ಸ್ಯಾನ್ ಜೋಸ್ ಮತ್ತು ಸಂಟಾ ಕ್ಲಾರಾ ವ್ಯಾಲಿಯಲ್ಲಿ ಅತಿ ಹೆಚ್ಚು ಟೆಕ್ ಕಂಪನಿಗಳಿವೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:33 am, Sun, 9 April 23