Inspirational Story: ಸೈಕಲ್ ರಿಕ್ಷಾ ನೂಕುತ್ತಿದ್ದ ಕುಮಾರ್ ಈಗ ಐಐಟಿ, ಐಐಎಂ ಪದವೀಧರರಿಗೆ ಕೆಲಸ ಕೊಡುವ ಉದ್ಯಮಿ

Dilkhush Kumar Successful RodBez Startup: ಒಂದು ಕಾಲದಲ್ಲಿ ಜೀವನ ನಡೆಸಲು ನೂಕುಗಾಡಿ ಚಲಾಯಿಸುತ್ತಿದ್ದ ದಿಲ್​ಖುಷ್ ಇವತ್ತು ಕೋಟ್ಯಂತರ ರೂ ಮೌಲ್ಯದ ಕಂಪನಿಯ ಮಾಲೀಕರಾಗಿದ್ದಾರೆ. ಕೇವಲ 12ನೇ ತರಗತಿ ಓದಿರುವ ಅವರು ಇದೀಗ ಐಐಟಿ, ಐಐಎಂನಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕೆಲಸ ಕೊಡುವ ಮಟ್ಟದಲ್ಲಿದ್ದಾರೆ.

Inspirational Story: ಸೈಕಲ್ ರಿಕ್ಷಾ ನೂಕುತ್ತಿದ್ದ ಕುಮಾರ್ ಈಗ ಐಐಟಿ, ಐಐಎಂ ಪದವೀಧರರಿಗೆ ಕೆಲಸ ಕೊಡುವ ಉದ್ಯಮಿ
ದಿಲ್​ಖುಷ್ ಕುಮಾರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 07, 2023 | 11:01 AM

1972ರಲ್ಲಿ ಬಿಡುಗಡೆಯಾದ ವರನಟ ಡಾ|| ರಾಜಕುಮಾರ್ (Dr. Rajkumar) ಅಭಿನಯದ ‘ಬಂಗಾರದ ಮನುಷ್ಯ’ (Bangarada Manushya) ನಮ್ಮ ಸ್ಯಾಂಡಲ್ವುಡ್​ನ ಎವರ್​ಗ್ರೀನ್ ಸಿನಿಮಾ. ಅದರಲ್ಲಿ ಪಿ.ಬಿ. ಶ್ರೀನಿವಾಸ್ ಸಿರಿಕಂಠದಲ್ಲಿ ‘ಆಗದು ಎಂದು ಕೈಲಾಗದು ಎಂದು…’ ಎಂಬ ಹಾಡು ಕೇಳಿರುತ್ತೀರಿ. ಆರ್.ಎನ್. ಜಯಗೋಪಾಲ್ ಬರೆದ ಈ ಹಾಡಿನ ಪ್ರತಿಯೊಂದು ಸಾಲೂ ಕೂಡ ಜೀವನಸ್ಫೂರ್ತಿ ತುಂಬುವ ಪದಗಳೇ. ಬಿಹಾರದ ದಿಲ್​ಖುಷ್ ಕುಮಾರ್ (Dilkhush Kumar) ಎಂಬ ಉದ್ಯಮಿಯ ಕಥೆ ಕೇಳಿದಾಗ ಬಂಗಾರದ ಮನುಷ್ಯನ ಈ ಹಾಡು ನೆನಪಿಗೆ ಬರುತ್ತದೆ. ನಮ್ಮ ಹಣೆಬರಹವೇ ಇಷ್ಟು ಎಂದು ದಿಲ್​ಖುಷ್ ಕೈಕಟ್ಟಿ ಕೂತಿದ್ದರೆ ಇಂದು ರಾಡ್​ಬೇಜ್ (Rodbez) ಎಂಬ ಸ್ಟಾರ್ಟಪ್​ಗೆ ಸಿಇಒ ಆಗುತ್ತಿರಲಿಲ್ಲ. ಮನಸೊಂದಿದ್ದರೆ ಮಾರ್ಗವು ಉಂಟು ಎಂಬುದಕ್ಕೆ ದಿಲ್​ಖುಷ್ ಜೀವಂತ ಉದಾಹರಣೆ ಆಗಿದ್ದಾರೆ.

ಒಂದು ಕಾಲದಲ್ಲಿ ಜೀವನ ನಡೆಸಲು ನೂಕುಗಾಡಿ ಚಲಾಯಿಸುತ್ತಿದ್ದ ದಿಲ್​ಖುಷ್ ಇವತ್ತು ಕೋಟ್ಯಂತರ ರೂ ಮೌಲ್ಯದ ಕಂಪನಿಯ ಮಾಲೀಕರಾಗಿದ್ದಾರೆ. ಕೇವಲ 12ನೇ ತರಗತಿ ಓದಿರುವ ಅವರು ಇದೀಗ ಐಐಟಿ, ಐಐಎಂನಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕೆಲಸ ಕೊಡುವ ಮಟ್ಟದಲ್ಲಿದ್ದಾರೆ. ಟ್ಯಾಕ್ಸಿ ಡ್ರೈವರ್​ಗಳಿಗೆ ತಿಂಗಳಿಗೆ 55ರಿಂದ 60 ಸಾವಿರ ರೂ ಸಂಬಳ ಕೊಡುವ ಕಂಪನಿಯ ಸಿಇಒ ಆಗಿದ್ದಾರೆ ದಿಲ್​ಖುಷ್ ಕುಮಾರ್.

ಟ್ಯಾಕ್ಸಿ ಸರದಾರ ದಿಲ್​ಖುಷ್ ಕುಮಾರ

ದಿಲ್​ಖುಷ್ ಕುಮಾರ್ ಅವರು ರಾಡ್​ಬೇಜ್ ಎಂಬ ಸ್ಟಾರ್ಟಪ್ ಕಂಪನಿ ನಡೆಸುತ್ತಿದ್ದಾರೆ. ಇದು ಸದ್ಯ ಬಿಹಾರ ರಾಜಧಾನಿ ಪಾಟ್ನಾದಲ್ಲಿ ಮಾತ್ರ ಕಾರ್ಯಾಚರಿಸುತ್ತಿದೆ. ಪಾಟ್ನಾ ನಗರದಿಂದ ಸುತ್ತಲಿನ ಪ್ರತಿಯೊಂದು ಹಳ್ಳಿಗೂ ರಾಡ್​ಬೇಜ್ ಟ್ಯಾಕ್ಸಿ ಸಂಪರ್ಕ ಕಲ್ಪಿಸುತ್ತದೆ. ಎರಡನೇ ಹಂತದಲ್ಲಿ ಬಿಹಾರದ ವಿವಿಧ ನಗರಗಳಿಗೆ ಟ್ಯಾಕ್ಸಿ ಸೇವೆ ಕೊಡುವ ಗುರಿ ಇದೆ. ಮುಂದಿನ ದಿನಗಳಲ್ಲಿ ಬಿಹಾರದ ಪ್ರತಿಯೊಂದು ಗ್ರಾಮವನ್ನೂ ರಾಡ್​ಬೇಜ್ ಟ್ಯಾಕ್ಸಿ ಮೂಲಕ ಸಂಪರ್ಕ ಕಲ್ಪಿಸುವುದು ದಿಲ್​ಖುಷ್ ಕುಮಾರ್ ಕನಸು. ಬಿಹಾರದಲ್ಲಿ ಈ ಪ್ರಯೋಗ ಯಶಸ್ವಿಯಾದರೆ ಮತ್ತು ಬಂಡವಾಳ ಹರಿದುಬಂದರೆ ದೇಶಾದ್ಯಂತ ರಾಡ್​ಬೇಜ್ ಟ್ಯಾಕ್ಸಿ ಸೇವೆ ವಿಸ್ತರಣೆ ಮಾಡುವ ಉತ್ಸಾಹದಲ್ಲಿ ದಿಲ್​ಖುಷ್ ಕುಮಾರ್ ಇದ್ದಾರೆ.

ಇದನ್ನೂ ಓದಿWhat is OneWeb: ಏನಿದು ಒನ್​ವೆಬ್ ಯೋಜನೆ?: ಭಾರತದಲ್ಲಿ ಬಿಡುಗಡೆ ಆದರೆ ಏನು ಪ್ರಯೋಜನ?: ಇಲ್ಲಿದೆ ಸಂಪೂರ್ಣ ಮಾಹಿತಿ

ಓಲಾ, ಊಬರ್​ಗಿಂತ ಭಿನ್ನ ರಾಡ್​ಬೇಜ್

ಇವತ್ತು ಓಲಾ ಮತ್ತು ಊಬರ್ ಟ್ಯಾಕ್ಸಿ ಮೂಲಕ ನಗರದ ಮೂಲೆಮೂಲೆಗೂ ತಲುಪಬಹುದು. ಇದೇ ತಂತ್ರ ಮತ್ತು ಕಾರ್ಯವಿಧಾನವವನ್ನು ರಾಡ್​ಬೇಜ್ ಅನುಸರಿಸುತ್ತಿರಬಹುದು ಎನಿಸಬಹುದು. ಆದರೆ, ಓಲಾ, ಊಬರ್​ಗಿಂತ ಇದು ತುಸು ಭಿನ್ನ. 50 ಕಿಮೀಗೂ ಹೆಚ್ಚು ದೂರದ ಸ್ಥಳಗಳಿಗೆ ಹೋಗಬೇಕೆನ್ನುವ ಗ್ರಾಹಕರಿಗೆ ಟ್ಯಾಕ್ಸಿ ಡ್ರೈವರ್ ಮತ್ತು ವಾಹನದ ವ್ಯವಸ್ಥೆ ಮಾಡುವ ಒಂದು ಡಾಟಾಬೇಸ್ ಕಂಪನಿ ರಾಡ್​ಬೇಜ್.

Dilkhush Kumar with his Rodbez Team

ದಿಲ್​ಖುಷ್ ಕುಮಾರ್ ತಮ್ಮ ರಾಡ್​ಬೇಜ್ ತಂಡದೊಂದಿಗೆ

ಅಂದಹಾಗೆ ರಾಡ್​ಬೇಜ್ ಎಂಬ ಹೆಸರಿನ ಅರ್ಥ ಏನು ಎಂದು ಕೇಳಿದರೆ ಅಚ್ಚರಿಯ ಉತ್ತರ ಸಿಗುತ್ತದೆ. ಇಂಗ್ಲೀಷ್​ನ ರೋಡ್​ವೇಸ್ ಪದದ ಅಪಭ್ರಂಶ ಪದ ರಾಡ್​ಬೇಜ್. ಗ್ರಾಮ್ಯ ಸೊಗಡಿನ ಉಚ್ಛಾರಣೆ ಅದು. ರೋಡ್​ವೇಸ್ (Roadways) ಪದವನ್ನು ಸಾಮಾನ್ಯ ಬಿಹಾರಿಗರು ರಾಡ್​ಬೇಜ್ ಎಂದೇ ಉಲಿಯುತ್ತಾರೆ. ಅದೇ ಪದವನ್ನು ದಿಲ್​ಖುಷ್ ಕುಮಾರ್ ತಮ್ಮ ಕಂಪನಿಗೆ ಇಟ್ಟಿದ್ದಾರೆ.

ಕೈಗಾಡಿ ನೂಕುತ್ತಿದ್ದ ಕಾಲದಿಂದ ರಾಡ್​ಬೇಜ್​ವರೆಗೆ ದಿಲ್​ಖುಷ್ ಪ್ರಯಾಣ ಹೀಗಿತ್ತು….

ದಿಲ್​ಖುಷ್ ಕುಮಾರ್ ಬಿಹಾರದ ಸಹರಸಾ ಜಿಲ್ಲೆಯ ಬನಗಾಂವ್ ಎಂಬ ಊರಿನವರು. ಓದಿದ್ದು ಕೇವಲ 12ನೇ ತರಗತಿ ಮಾತ್ರ. ರಾಷ್ಟ್ರರಾಜಧಾನಿ ದಿಲ್ಲಿಯಲ್ಲಿ ರಿಕ್ಷಾ ಗಾಡಿ ನೂಕುತ್ತಾ ಜೀವನ ಸಾಗಿಸುತ್ತಿದ್ದ ಕಾಲವೊಂದಿತ್ತು. ಬಿಹಾರದ ಪಾಟ್ನಾದಲ್ಲಿ ತರಕಾರಿ ಮಾರುತ್ತಿದ್ದರು.

ಇದನ್ನೂ ಓದಿಅಪಾಯದಲ್ಲಿದೆ ಡಾಲರ್ ಭವಿಷ್ಯ: ನಮಗೆ ತಿಳಿದಿರಬೇಕಾದ ಅಂಶಗಳು

ದಿಲ್​ಖುಷ್ ತಂದೆ ಬಸ್ ಡ್ರೈವರ್ ಆಗಿದ್ದರು. ಅವರಿಂದ ವಾಹನ ಚಲಾಯಿಸುವುದನ್ನು ಕಲಿತರು. ಇದೇ ಅವರ ಜೀವನಕ್ಕೆ ತಿರುವು ತಂದುಕೊಟ್ಟಿದ್ದು. ಡ್ರೈವರ್ ವೃತ್ತಿಯಲ್ಲಿ ಅವರು ಮುಂದುವರಿದರು. ಈ ಹಂತದಲ್ಲೇ ದಿಲ್​ಖುಷ್ ಕುಮಾರ್ ಅವರಿಗೆ ರಾಡ್​ಬೇಜ್ ಕಂಪನಿಯ ಕನಸು ಹತ್ತಿದ್ದು. ತಮ್ಮ ಸ್ನೇಹಿತರ ಜೊತೆ ಸೇರಿ ರಾಡ್​ಬೇಜ್ ಟ್ಯಾಕ್ಸಿ ಸೇವೆ ಆರಂಭಿಸಿದರು. ಅವರ ಬಳಿ ಇದ್ದ ಸೆಕೆಂಡ್ ಹ್ಯಾಂಡ್ ಟಾಟಾ ನ್ಯಾನೋ ಕಾರಿನಿಂದ ರಾಡ್​ಬೇಜ್ ಸೇವೆ ಆರಂಭವಾಯಿತು. ಆರೇಳು ತಿಂಗಳಲ್ಲೇ ಅವರು 4 ಕೋಟಿ ರೂ ಬಂಡವಾಳ ಶೇಖರಿಸುವಲ್ಲಿ ಯಶಸ್ವಿಯಾದರು. ಇವತ್ತು ರಾಡ್​ಬೇಜ್ ಜೊತೆ ಜೋಡಿಸಿಕೊಂಡಿರುವ ಡ್ರೈವರ್​ಗಳಿಗೆ ತಿಂಗಳಿಗೆ 60,000 ರೂನಷ್ಟು ಸಂಬಳ ಕೊಡಲಾಗುತ್ತಿದೆ.

ವಾಚ್​ಮ್ಯಾನ್ ಕೆಲಸಕ್ಕೂ ನಾಲಾಯಕ್ಕು ಎನಿಸಿಕೊಂಡಿದ್ದ ದಿಲ್​ಖುಷ್ ಕುಮಾರ್….

ಯಾವುದೇ ಬೆನ್ನೆಲುಬು ಇಲ್ಲದೇ ಸ್ವಂತವಾಗಿ ಬೆಳೆಯುವ ವ್ಯಕ್ತಿಯ ಜೀವನದ ವಿವಿಧ ಹಂತಗಳಲ್ಲಿ ಹಲವಾರು ರೀತಿಯ ಅವಮಾನ, ಸೋಲು, ಕಷ್ಟಕೋಟಲೆಗಳು, ಅಡ್ಡಿ ಆತಂಕಗಳು ತೊಡರುಗಾಲಿನಂತೆ ಬರುತ್ತವೆ. ದಿಲ್​ಖುಷ್ ಕುಮಾರ್ ಜೀವನವೂ ಇದರಿಂದ ಹೊರತಾಗಿರಲಿಲ್ಲ. ಒಮ್ಮೆ ದಿಲ್​ಖುಷ್ ಕುಮಾರ್ ಅವರು ಗಾರ್ಡ್ ಕೆಲಸಕ್ಕಾಗಿ ಇಂಟರ್​ವ್ಯೂಗೆ ಹೋಗಿದ್ದರಂತೆ. ಸರಿಯಾಗಿ ಓದಿಲ್ಲ ಮತ್ತು ನಯನಾಜೂಕು ಇಲ್ಲ ಎಂಬ ಕಾರಣ ಹೇಳಿ ದಿಲ್​ಖುಷ್ ಕುಮಾರ್​ಗೆ ಕೆಲಸ ನಿರಾಕರಿಸಲಾಗಿತ್ತು.

Dilkhush Kumar with his Rodbez Team

ದಿಲ್​ಖುಷ್ ಮತ್ತವರ ತಂಡ

ಕುತೂಹಲವೆಂದರೆ ಒಮ್ಮೆ ಸಂದರ್ಶನವೊಂದರಲ್ಲಿ ಅವರನ್ನು ಐಫೋನ್​ನಲ್ಲಿರುವ ಲೋಗೋವನ್ನು ಗುರುತಿಸುವಂತೆ ಕೇಳಲಾಯಿತಂತೆ. ದಿಲ್​ಖುಷ್ ಕುಮಾರ್ ಅದೇ ಮೊದಲ ಬಾರಿಗೆ ಐಫೋನ್ ನೋಡಿದ್ದು. ಅವರಿಗೆ ಲೋಗೋ ಕಂಡುಹಿಡಿಯಲಾಗಲಿಲ್ಲ.

ಇದನ್ನೂ ಓದಿPanipuri Business: ಈಕೆ ಬುಲೆಟ್ ರಾಣಿ; ಓದಿದ್ದು ಎಂಜಿನಿಯರಿಂಗ್, ಮಾರೋದು ಪಾನಿಪುರಿ

ಅಂಥ ಹಂತದಲ್ಲಿದ್ದ ದಿಲ್​ಖುಷ್ ಕುಮಾರ್ ಬಳಿ ಇದೀಗ ಐಐಟಿ, ಐಐಎಂ ಇತ್ಯಾದಿ ಇನ್ಸ್​ಟಿಟ್ಯೂಷನ್​ಗಳ ಪದವೀಧರರು ಕೆಲಸ ಮಾಡುತ್ತಿದ್ದಾರೆ. ಗುವಾಹಟಿಯ ಐಐಟಿ ಪದವೀಧರರನ್ನು ತಮ್ಮ ಸ್ಟಾರ್ಟಪ್​ಗೆ ಸೇರಿಸಿಕೊಂಡಿರುವುದಾಗಿ ದಿಲ್​ಖುಷ್ ಹೇಳಿಕೊಂಡಿದ್ದಾರೆ. ಹಾಗೆಯೇ ಐಐಎಂನ ಕೆಲ ವಿದ್ಯಾರ್ಥಿಗಳು ಪಾರ್ಟ್ ಟೈಮ್ ಅಗಿ ತಮ್ಮ ಕಂಪನಿಯಲ್ಲಿ ತೊಡಗಿಸಿಕೊಂಡಿದ್ದಾರೆಂದೂ ಮಾಧ್ಯಮಗಳಿಗೆ ದಿಲ್​ಖುಷ್ ಮಾಹಿತಿ ನೀಡಿದ್ದಾರೆ.

ಅದೇನೇ ಇರಲಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾದ ಒಂದು ಡೈಲಾಗ್ ನೆನಪಿಗೆ ಬರುತ್ತದೆ: ‘ಕನಸು ಕಾಣಲು ರಾತ್ರಿ ಮಲಗಬೇಕು. ಆ ಕನಸು ನನಸು ಮಾಡಲು ಬೆಳಗ್ಗೆ ಏಳಬೇಕು’. ದಿಲ್​ಖುಷ್ ರೀತಿಯ ನವೋದ್ದಿಮೆದಾರರು ದೇಶಾದ್ಯಂತ ಮೈಕೊಡವಿ ನಿಲ್ಲಬೇಕಾದ ಅವಶ್ಯಕತೆ ಇದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:01 am, Fri, 7 April 23