What is OneWeb: ಏನಿದು ಒನ್‌ವೆಬ್ ಯೋಜನೆ?: ಭಾರತದಲ್ಲಿ ಬಿಡುಗಡೆ ಆದರೆ ಏನು ಪ್ರಯೋಜನ?: ಇಲ್ಲಿದೆ ಸಂಪೂರ್ಣ ಮಾಹಿತಿ
ಒನ್ ವೆಬ್ ಎನ್ನುವುದು ಒಂದು ಸಂಸ್ಥೆಯಾಗಿದ್ದು, ಇದು ಲೋ ಅರ್ತ್ ಆರ್ಬಿಟ್ (ಎಲ್ಇಓ) ಉಪಗ್ರಹಗಳ ಮೂಲಕ ಉಪಗ್ರಹ ಸಂವಹನ ವ್ಯವಸ್ಥೆಯನ್ನು ಒದಗಿಸುತ್ತದೆ. ಸುಲಭವಾಗಿ ಹೇಳಬೇಕೆಂದರೆ, ಒನ್‌ವೆಬ್ ಗುಚ್ಛವು ಭೂಮಿಯ ಸುತ್ತ ಸುತ್ತುವ ಉಪಗ್ರಹಗಳ ಒಂದು ಜಾಲ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಭಾನುವಾರ (ಮಾ.26) 36 ಒನ್‌ವೆಬ್ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿ ದಾಖಲೆ ನಿರ್ಮಿಸಿತು. 643 ಟನ್ ತೂಕ ಮತ್ತು 43.5 ಮೀಟರ್ ಉದ್ದದ ಈ ಉಡಾವಣಾ ನೌಕೆ ಲಾಂಚ್ ವೆಹಿಕಲ್ ಮಾರ್ಕ್ 3 (ಎಲ್ವಿಎಂ-3) ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ (ಲೋ ಅರ್ತ್ ಆರ್ಬಿಟ್-ಎಲ್ಇಒ) ಕೊಂಡೊಯ್ಯಿತು. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇದನ್ನು ಉಡಾವಣೆ ಮಾಡಲಾಗಿದೆ. ತನ್ನ ಉಪಗ್ರಹ ಪುಂಜವನ್ನು ಪೂರ್ಣಗೊಳಿಸುವ ಉದ್ದೇಶದಿಂದ ಒನ್‌ವೆಬ್ ಸಂಸ್ಥೆ ಇಸ್ರೋ ಜೊತೆ ಸಹಭಾಗಿತ್ವ ಹೊಂದಿ ಈ ಕಾರ್ಯವನ್ನು ಮಾಡುತ್ತಿದೆ. ಹಾಗಾದರೆ ಏನಿದು ಒನ್‌ವೆಬ್?, ಇದರ ಉದ್ದೇಶವೇನು?, ಭಾರತದಲ್ಲಿ ಬಿಡುಗಡೆ ಆದರೆ ಏನು ಪ್ರಯೋಜನಾ?. ಇಲ್ಲಿದೆ ಮಾಹಿತಿ.
ಏನಿದು ಒನ್‌ವೆಬ್?:
ಒನ್ ವೆಬ್ ಎನ್ನುವುದು ಒಂದು ಸಂಸ್ಥೆಯಾಗಿದ್ದು, ಇದು ಲೋ ಅರ್ತ್ ಆರ್ಬಿಟ್ (ಎಲ್ಇಓ) ಉಪಗ್ರಹಗಳ ಮೂಲಕ ಉಪಗ್ರಹ ಸಂವಹನ ವ್ಯವಸ್ಥೆಯನ್ನು ಒದಗಿಸುತ್ತದೆ. ಸುಲಭವಾಗಿ ಹೇಳಬೇಕೆಂದರೆ, ಒನ್‌ವೆಬ್ ಗುಚ್ಛವು ಭೂಮಿಯ ಸುತ್ತ ಸುತ್ತುವ ಉಪಗ್ರಹಗಳ ಒಂದು ಜಾಲ. ಜಗತ್ತಿನಾದ್ಯಂತ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸುವುದು ಇದರ ಉದ್ದೇಶ. ಈ ಸಂಸ್ಥೆಯು ಭಾನುವಾರ 36 ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಈ ಉಡಾವಣೆಯು ಒನ್ ವೆಬ್ ಸಂಸ್ಥೆಯ 18ನೇ ಉಡಾವಣೆಯಾಗಿದ್ದು, 2023ರಲ್ಲಿ ಮೂರನೇ ಉಡಾವಣೆಯಾಗಿದೆ. ಈ ಉಡಾವಣೆಯ ಮೂಲಕ ಒನ್ವೆಬ್ನ ಮೊದಲ ತಲೆಮಾರಿನ ಎಲ್ಇಓ ಪುಂಜ ಪೂರ್ಣಗೊಂಡಿದ್ದು, ಇದರ ಪರಿಣಾಮವಾಗಿ 2023ರಲ್ಲಿ ಜಾಗತಿಕ ವ್ಯಾಪ್ತಿ ಆರಂಭಿಸಲು ಸಂಸ್ಥೆಗೆ ಸಾಧ್ಯವಾಗಿದೆ.
ಇದರ ಉದ್ದೇಶವೇನು?:
ಪ್ರಪಂಚದಾದ್ಯಂತ ಉತ್ತಮ ಬ್ರಾಡ್‌ಬ್ಯಾಂಡ್ ಸೇವೆಯನ್ನು ಒದಗಿಸುವುದು ಈ ಕಂಪನಿಯ ಮುಖ್ಯ ಗುರಿಯಾಗಿದೆ. ಇದಕ್ಕಾಗಿ ಒಟ್ಟು ಒಂದು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಉಡಾವಣಾ ಶುಲ್ಕ ವಿಧಿಸಲಾಗುತ್ತಿದೆ. ಇದು ಇಸ್ರೋದ ಅತಿ ದೊಡ್ಡ ಆರ್ಡರ್‌ಗಳಲ್ಲಿ ಒಂದು ಎಂದು ಹೇಳಬಹುದು. ಈ ಎಲ್ಲ ಕಾರ್ಯಾಚರಣೆ ಪೂರ್ಣಗೊಂಡ ನಂತರ ಒನ್‌ವೆಬ್ ಜಾಗತಿಕ ವ್ಯಾಪ್ತಿ ಹೊಂದಲು ಸಾಧ್ಯವಾಗುತ್ತದೆ. ಹಂಚಿಕೆದಾರರ ಜೊತೆ ಸಹಯೋಗ ಹೊಂದಿ ಈ ಸಂಸ್ಥೆ ಅತ್ಯಂತ ವೇಗವಾದ ಮತ್ತು ನಂಬಿಕಾರ್ಹವಾದ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುತ್ತದೆ. ಸಾರ್ವಜನಿಕರಿಗೆ, ಉದ್ಯಮಗಳಿಗೆ ಹಾಗೂ ಸರ್ಕಾರಗಳಿಗೆ ಜಾಗತಿಕವಾಗಿ ಉತ್ತಮ ಅಂತರ್ಜಾಲ ಸೌಲಭ್ಯ ಒದಗಿಸುವುದು ಇದರ ಉದ್ದೇಶ.
Tech Tips: ನಿಮ್ಮ ಆಧಾರ್ ಕಾರ್ಡ್ ಮೂಲಕ ಯಾರಾದರು ಸಿಮ್ ಖರೀದಿಸಿದ್ದಾರಾ?: ಹೇಗೆ ತಿಳಿಯುವುದು?
ಭಾರತದಲ್ಲಿ ಬಿಡುಗಡೆ ಆದರೆ ಏನು ಪ್ರಯೋಜನ?:
ಒನ್‌ವೆಬ್ ಜಾಗತಿಕವಾಗಿ ಪ್ರಮುಖ ಪ್ರದೇಶಗಳಲ್ಲಿ ಸಂಪರ್ಕ ವ್ಯವಸ್ಥೆಗಳನ್ನು ಸ್ಥಾಪಿಸಿದ್ದು, ಅಂತರ್ಜಾಲ ಪೂರೈಕೆದಾರ ಸಂಸ್ಥೆಗಳಾದ ವಿಇಒಎನ್, ಆರೆಂಜ್, ಗ್ಯಾಲಾಕ್ಸಿ ಬ್ರಾಡ್‌ಬ್ಯಾಂಡ್, ಪಾರಾಟಸ್, ಟೆಲಿಸ್‌ಪ್ಯಾಸಿಯೋ ಹಾಗೂ ಇತರ ಸಂಸ್ಥೆಗಳೊಡನೆ ಸಹಭಾಗಿತ್ವ ಹೊಂದಿ ತನ್ನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲಿದೆ. ಭಾರತದಲ್ಲಿ ಪ್ರಸಿದ್ಧ ಭಾರ್ತಿ ಏರ್‌ಟೆಲ್ ಕಂಪನಿಯು ಒನ್‌ವೆಬ್ ಅಂತರ್ಜಾಲ ಸೇವೆ ಒದಗಿಸುವ ಹೊಣೆ ವಹಿಸಿಕೊಂಡಿದೆ. ಭಾರ್ತಿ ಗ್ರೂಪ್ ಅತಿದೊಡ್ಡ ಷೇರು ಹೊಂದಿದ್ದು, ಇದರ ವಹಿವಾಟಿನ ಮೌಲ್ಯವು 27,000 ಕೋಟಿಗೂ ಹೆಚ್ಚು ಎಂದು ಹೇಳಲಾಗಿದೆ. ಭಾರತದಲ್ಲಿ ಇದು ಬಿಡುಗಡೆಯಾದರೆ ಉದ್ಯಮಗಳಿಗೆ, ಪಟ್ಟಣಗಳಿಗೆ, ಪ್ರತಿ ಗ್ರಾಮಗಳಿಗೆ, ಶಾಲಾ ಕಾಲೇಜುಗಳಿಗೆ, ಭಾರತದ ಸಂಪರ್ಕ ವ್ಯವಸ್ಥೆ ಇರದ ಹಳ್ಳಿ ಹಳ್ಳಿಗಳಿಗೂ ಸುರಕ್ಷಿತ ಅಂತರ್ಜಾಲ ವ್ಯವಸ್ಥೆ ಸಿಕ್ಕಂತಾಗುತ್ತದೆ.
ಉಪಗ್ರಹದಿಂದ ಇಂಟರ್ನೆಟ್ ಸೇವೆ ಒದಗಿಸುವ ಯೋಜನೆಯಡಿ ಒನ್‌ವೆಬ್ ಕಂಪನಿ ಜಗತ್ತಿನ ಬೇರೆ ಬೇರೆ ದೇಶಗಳಿಂದ 616 ಉಪಗ್ರಹಗಳನ್ನು ಈಗಾಗಲೇ ಬಾಹ್ಯಾಕಾಶಕ್ಕೆ ಕಳುಹಿಸಿದೆ. ಜಗತ್ತಿನಾದ್ಯಂತ ಈ ವರ್ಷಾಂತ್ಯಕ್ಕೆ ಉಪಗ್ರಹ ಇಂಟರ್ನೆಟ್ ಸೇವೆ ಆರಂಭಿಸಲು ಇಷ್ಟು ಉಪಗ್ರಹಗಳು ಸಾಕು ಎಂದು ಕಂಪನಿ ಹೇಳಿಕೊಂಡಿದೆ. ಒನ್‌ವೆಬ್ ಜಾಗತಿಕ ಸಾಮರ್ಥ್ಯವನ್ನು 1.1 TBPS ಹೊಂದಿದ್ದು ಅದರಲ್ಲಿ 11 GBPS ಭಾರತಕ್ಕೆ ಮೀಸಲಾಗಿದೆಯಂತೆ. ಭಾರತಿ ಗ್ರೂಪ್ ಸಂಸ್ಥಾಪಕರು ಭಾರತದಲ್ಲಿ ಸೇವೆಗಳನ್ನು ಪ್ರಾರಂಭಿಸಲು ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಜುಲೈ-ಆಗಸ್ಟ್‌ನಲ್ಲಿ ಅಂತಿಮಗೊಳಿಸಲಿದ್ದಾರೆ. ಕಂಪನಿಯು ನೇರವಾಗಿ ಮಾರಾಟ ಮಾಡುವ ಬದಲು ಪಾಲುದಾರರ ಮೂಲಕ ಸೇವೆಯನ್ನು ಒದಗಿಸಲಿದೆಯಂತೆ.
ಸುನಿಲ್ ಮಿತ್ತಲ್ ಏನು ಹೇಳಿದ್ದಾರೆ?:
ಒನ್‌ವೆಬ್ ಭಾರತೀಯರಿಗೆ ಹೇಗೆ ಸಹಕಾರಿ ಆಗಲಿದೆ ಎಂದು ಸಂಪೂರ್ಣ ಮಾಹಿತಿಯನ್ನು ಉಪಗ್ರಹ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಯ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ತಿಳಿಸಿದ್ದಾರೆ. ಅವರು ಹೇಳುವ ಪ್ರಕಾರ, ”ಒನ್‌ವೆಬ್ ಪಾಶ್ಚಿಮಾತ್ಯ ದೇಶಗಳ ಮೊಬೈಲ್ ಸೇವೆಗಳ ದರಗಳನ್ನು ಸರಿದೂಗಿಸುತ್ತದೆ. ಆದರೆ, ಇದರ ಬೆಲೆಗಳು ಭಾರತದಲ್ಲಿ ಅತ್ಯಂತ ಕಡಿಮೆ ಸುಂಕಕ್ಕೆ ಸಮನಾಗಿರಲು ಸಾಧ್ಯವಿಲ್ಲ. ಒಂದು ಹಳ್ಳಿಯ 30-40 ಮನೆಗಳು ಸೇರಿ ಒಂದು ಕನೆಕ್ಷನ್ ಪಡೆದರೆ ಬೆಲೆ ಅಗ್ಗವಾಗಲಿದೆ. ಆದರೆ ವೈಯಕ್ತಿಕವಾಗಿ ಕೊಂಡುಕೊಳ್ಳುವುದು ದುಬಾರಿ ಆಗಲಿದೆ,” ಎಂದು ಹೇಳಿದ್ದಾರೆ. ”ಭಾರತಕ್ಕೆ ಹೋಲಿಸಿದರೆ ವಿದೇಶಗಳಲ್ಲಿ ಇಂಟರ್ನೆಟ್ ಬೆಲೆ ಹೆಚ್ಚಾಗಿರುವುದರಿಂದ ಅಲ್ಲಿ ಉಪಗ್ರಹ ಇಂಟರ್ನೆಟ್ ಸೇವೆ ಖರೀದಿ ದೊಡ್ಡ ವ್ಯತ್ಯಾಸವೇನು ಕಂಡು ಬರುವುದಿಲ್ಲ,” ಎಂಬುದು ಮಿತ್ತಲ್ ಅಭಿಪ್ರಾಯ.
”ರಷ್ಯಾ-ಉಕ್ರೇನ್ ಯುದ್ಧದಿಂದ ನಮಗೆ ದೊಡ್ಡ ಹಿನ್ನಡೆಯಾಗಿದ್ದು, ಒನ್‌ವೆಬ್ ತನ್ನ ಹಣವನ್ನು ಮರಳಿ ಪಡೆಯಲು ಹೆಣಗಾಡುತ್ತಿದ್ದದ್ದು ಮಾತ್ರವಲ್ಲದೆ, ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ವಿತರಿಸುವ ಮೂರು ಅತ್ಯಮೂಲ್ಯ ವಿತರಕಗಳನ್ನು ಕೂಡ ಕಳೆದುಕೊಂಡಿದೆ. ಪ್ರಧಾನಿ ಮೋದಿ ಈ ಕ್ಷಣವನ್ನು ಗುರುತಿಸಿ, ಭಾರತದ ಸಂಪೂರ್ಣ ಬಾಹ್ಯಾಕಾಶ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸಲು ಮತ್ತು ಒನ್‌ವೆಬ್‌ಗೆ ಎರಡು ರಾಕೆಟ್‌ಗಳನ್ನು ನೀಡಲು ನಿರ್ದೇಶಿಸಿದ್ದಾರೆ. ಇದು ನಮಗೆ ಗೇಮ್ ಚೇಂಜರ್ ಆಗಿದೆ ಎಂದು ನಾನು ಭಾವಿಸುತ್ತೇನೆ,” ಎಂದು ಸುನಿಲ್ ಮಿತ್ತಲ್ ಹೇಳಿದ್ದಾರೆ.
ಹೆಚ್ಚಿನ ಟೆಕ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:50 pm, Mon, 27 March 23