ನವದೆಹಲಿ: ಐಪಿಎಲ್ (IPL 2023) ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟ್ ಟೂರ್ನಿಗಳಲ್ಲಿ ಒಂದು ಎನ್ನುವುದರಲ್ಲಿ ಹೆಚ್ಚು ಅನುಮಾನ ಇಲ್ಲ. ವಿಶ್ವದ ವಿವಿಧ ದೇಶಗಳ ಆಟಗಾರರು ಐಪಿಎಲ್ನಲ್ಲಿ ಆಡುವುದರಿಂದ ಅದರ ಜನಪ್ರಿಯತೆ ಅಗಾಧವಾದುದು. ಆದರೆ, ಈ ಬಾರಿಯ ಐಪಿಎಲ್ನ ಪ್ರಸಾರದಲ್ಲಿ (IPL Broadcasting) ಒಂದು ಇಂಟರೆಸ್ಟಿಂಗ್ ಟ್ರೆಂಡ್ ವ್ಯಕ್ತವಾಗಿದೆ. ಐಪಿಎಲ್ನ ಟಿವಿ ವೀಕ್ಷಕರ ಸಂಖ್ಯೆ (TVR) ಇಳಿಮುಖವಾಗುವುದು ಮುಂದುವರಿದಿದೆ. ಡಿಜಿಟಲ್ ವೀಕ್ಷಕರ ಸಂಖ್ಯೆ ಸಿಕ್ಕಾಪಟ್ಟೆ ಏರಿದೆ. ಇದೆಲ್ಲಾ ಜಿಯೋ ಮ್ಯಾಜಿಕ್. ಜಿಯೋ ಸಿನಿಮಾ ಆ್ಯಪ್ನಲ್ಲಿ (Jio Cinema App) ಐಪಿಎಲ್ ಪ್ರಸಾರ ಆಗುತ್ತಿರುವುದು ಟಿವಿ ವೀಕ್ಷಕರ ಸಂಖ್ಯೆ ಇಳಿಮುಖವಾಗಲು ಕಾರಣವಿದ್ದಿರಲೂ ಬಹುದು. ಮಾಧ್ಯಮಗಳಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಐಪಿಎಲ್ 2023 ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಟಿವಿ ವೀಕ್ಷಕರ ಸಂಖ್ಯೆ ಕಡಿಮೆ ಆಗಿದೆ. ಐಪಿಎಲ್ನ ಅಧಿಕೃತ ಪ್ರಸಾರ ಸಂಸ್ಥೆ ಸ್ಟಾರ್ ಸ್ಪೋರ್ಟ್ಸ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಉದ್ಘಾಟನಾ ಪಂದ್ಯಕ್ಕೆ ಗಳಿಸಿದ ಟಿವಿಆರ್ ಕೇವಲ 7.29 ಮಾತ್ರ. ಇಲ್ಲಿ ಕುತೂಹಲ ಎಂದರೆ ವರ್ಷದಿಂದ ವರ್ಷಕ್ಕೆ ಉದ್ಘಾಟನಾ ಪಂದ್ಯದ ಟಿವಿ ರೇಟಿಂಗ್ ಕಡಿಮೆ ಆಗುತ್ತಾ ಬಂದಿದೆ. 2020ರಲ್ಲಿ 10.36 ಟಿವಿಆರ್ ಇತ್ತು. 2021ರಲ್ಲಿ 8.25 ಟಿವಿಆರ್ ದಾಖಲಾಗಿತ್ತು. ಈಗ 7.29 ಟಿವಿಆರ್ ಮಾತ್ರ ಇದೆ.
ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಓಪನರ್ನಲ್ಲಿ ದಾಖಲಾದ ಟಿವಿಆರ್, ಕಳೆದ 6 ಸೀಸನ್ನಲ್ಲೇ ಎರಡನೇ ಅತಿ ಕಡಿಮೆ ಮಟ್ಟದ್ದೆನ್ನಲಾಗಿದೆ. ಮೊದಲ ಪಂದ್ಯದ ಎಂಗೇಜ್ಮೆಂಟ್ ನಂಬರ್ ಕಡಿಮೆ ಆಗಿದೆ. ಕರ್ಟನ್ ರೈಸರ್ ಕೂಡ ಕಡಿಮೆ ಆಗಿದೆ.
ಐಪಿಎಲ್ 2023ರ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕು ಜಿಯೋಗೆ ಸಿಕ್ಕಿದೆ. ಜಿಯೋ ಸಿನಿಮಾದಲ್ಲಿ ಉಚಿತವಾಗಿ ಐಪಿಎಲ್ ಪ್ರಸಾರ ಮಾಡುವ ಜಿಯೋ ನಿರ್ಧಾರ ಸಖತ್ ಮ್ಯಾಜಿಕ್ ಸೃಷ್ಟಿಸಿದೆ. ಅದರ ಪರಿಣಾಮವಾಗಿ ಈ ಬಾರಿಯ ಐಪಿಎಲ್ನ ಡಿಜಿಟಲ್ ವೀಕ್ಷಕರ ಸಂಖ್ಯೆ ಸಿಕ್ಕಾಪಟ್ಟೆ ಏರಿದೆ. ಹಿಂದಿನ ಸೀಸನ್ಗಳಲ್ಲಿ ಡಿಸ್ನಿ ಹಾಟ್ಸ್ಟಾರ್ ಡಿಜಿಟಲ್ ಪ್ರಸಾರದ ಹಕ್ಕು ಹೊಂದಿತ್ತು. ಇಡೀ ಸೀಸನ್ನಲ್ಲಿ ಅದು ಹೊಂದಿದ್ದ ವೀಕ್ಷಕರ ಸಂಖ್ಯೆಯನ್ನು ಜಿಯೋ ಸಿನಿಮಾ ಮೊದಲ ವಾರದಲ್ಲೇ ದಾಟಿದೆ. ಇನ್ನು ಸವೆಸುವ ಹಾದಿಯೆಲ್ಲಾ ಆನೆ ನಡೆದಂತೆಯೇ.
ಐಪಿಎಲ್ ಮಾದರಿಯಲ್ಲಿ ಪಾಕಿಸ್ತಾನದಲ್ಲೂ ಪಿಎಸ್ಎಲ್ ಟೂರ್ನಿ ನಡೆಯುತ್ತದೆ. ತಮ್ಮದು ವಿಶ್ವದಲ್ಲೇ ಅತ್ಯಂತ ಕಠಿಣ ಕ್ರಿಕೆಟ್ ಲೀಗ್ ಎಂದು ಪಾಕಿಸ್ತಾನಿಗರು ಜಂಭ ಕೊಚ್ಚಿಕೊಳ್ಳುವುದುಂಟು. ಇತ್ತೀಚೆಗೆ ಮುಕ್ತಾಯಗೊಂಡ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯನ್ನು ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ 15 ಕೋಟಿ ಜನರು ನೋಡಿದ್ದಾರೆ ಎಂದು ಪಿಸಿಬಿ ಮುಖಸ್ಥ ನಜಮ್ ಸೇಠಿ ಹೇಳಿಕೊಂಡಿದ್ದರು. ಇದೇ ಹಂತದಲ್ಲಿ ಹಿಂದಿನ ಆವೃತ್ತಿಯ ಐಪಿಎಲ್ನಲ್ಲಿ 13 ಕೋಟಿ ಜನರು ಡಿಜಿಟಲ್ನಲ್ಲಿ ವೀಕ್ಷಣೆ ಮಾಡಿದ್ದರು ಎಂದು ಪಿಸಿಬಿ ಮುಖ್ಯಸ್ಥರು ಹೋಲಿಕೆ ಮಾಡಿ ಪಿಎಸ್ಎಲ್ಗೆ ಶಹಬ್ಬಾಸ್ಗಿರಿ ಕೊಟ್ಟಿದ್ದರು.
ಇದನ್ನೂ ಓದಿ: IPL 2023: ಐಪಿಎಲ್ನಲ್ಲಿ ಸೋಲುಗಳ ಸರದಾರ ಕಿಂಗ್ ಕೊಹ್ಲಿ! ಹೆಚ್ಚು ಗೆಲುವು ಯಾರ ಹೆಸರಲ್ಲಿದೆ ಗೊತ್ತಾ?
ಆದರೆ, ಟಾಟಾ ಐಪಿಎಲ್ನ ಮೊದಲ ಪಂದ್ಯಕ್ಕೆ ಜಿಯೋ ಸಿನಿಮಾದಲ್ಲಿ ಬರೋಬ್ಬರಿ 50 ಕೋಟಿ ವೀಕ್ಷಣೆ ಆಗಿದೆ. ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಉದ್ಘಾಟನಾ ಪಂದ್ಯಕ್ಕೆ ನೇರ ವೀಕ್ಷಣೆ ಸಂಖ್ಯೆ ಒಂದು ಹಂತದಲ್ಲಿ 1.6 ಕೋಟಿವರೆಗೂ ಹೋಗಿತ್ತು. ಆ ಪಂದ್ಯಕ್ಕೆ ಒಟ್ಟು 6 ಕೋಟಿ ಯೂನಿಕ್ ವೀವರ್ಸ್ ಇದ್ದರು. ಅಂದರೆ 6 ಕೋಟಿ ಮಂದಿ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಐಪಿಎಲ್ನ ಮೊದಲ ಪಂದ್ಯ ವೀಕ್ಷಿಸಿದ್ದರು. ಇನ್ನು ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೆ ಲೈವ್ ವೀಕ್ಷಕರ ಸಂಖ್ಯೆ 1.4 ಕೋಟಿವರೆಗೂ ಹೋಗಿತ್ತು.
ಇದೇ ವೇಳೆ, ಐಪಿಎಲ್ ಅನ್ನು ಡಿಜಿಟಲ್ ಆಗಿ ಪ್ರಸಾರ ಮಾಡುವ ಹಕ್ಕು ಜಿಯೋಗೆ ಸಿಕ್ಕಿದೆ. ಹೆಚ್ಚು ಮಂದಿಗೆ ಪರಿಚಯ ಇಲ್ಲದ ಜಿಯೋ ಸಿನಿಮಾ ಆ್ಯಪ್ನಲ್ಲಿ ಐಪಿಎಲ್ ಪಂದ್ಯಗಳ ಉಚಿತ ಪ್ರಸಾರ ಲಭ್ಯ ಇದೆ. ಜಿಯೋದ ಈ ನಡೆ ಸಖತ್ತಾಗಿ ಫಲ ಕೊಟ್ಟಿದೆ. ಐಪಿಎಲ್ ಉದ್ಘಾಟನೆಯ ಮೊದಲ ದಿನವೇ 2.5 ಕೋಟಿ ಜನರು ಜಿಯೋ ಸಿನಿಮಾ ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಒಂದೇ ದಿನದಲ್ಲಿ ಅತಿ ಹೆಚ್ಚು ಡೌನ್ಲೋಡ್ ಆದ ಹೊಸ ದಾಖಲೆಯನ್ನು ಜಿಯೋ ಸಿನಿಮಾ ಬರೆದಿದೆ.
Published On - 6:50 pm, Fri, 7 April 23