Work From Home: ‘ಸಂಬಳ ಕಟ್ ಮಾಡಿ, ಮನೆಯಿಂದ ಕೆಲಸ ಮಾಡಲು ಬಿಡಿ’- ಗೋಗರೆಯುತ್ತಿರುವ ಅಮೆರಿಕನ್ನರು ಎಷ್ಟು ಸಂಬಳ ಬಿಟ್ಟುಕೊಡಲು ಸಿದ್ಧ ಗೊತ್ತಾ?
Robert Half Survey In USA: ರಾಬರ್ಟ್ ಹಾಫ್ ಎಂಬ ರೆಕ್ರುಟಿಂಗ್ ಕಂಪನಿ ಅಮೆರಿಕದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಕೆಲ ಕುತೂಹಲಕಾರಿ ಸಂಗತಿಗಳು ವ್ಯಕ್ತವಾಗಿವೆ. ಬಹುತೇಕ ಅಮೆರಿಕನ್ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡಲು ಇಚ್ಛಿಸಿದರೆ, ಅಲ್ಲಿಯ ಕಂಪನಿಗಳು ವರ್ಕ್ ಫ್ರಂ ಹೋಮ್ ಅನ್ನೇ ನಿಲ್ಲಿಸುವ ಯೋಜನೆಯಲ್ಲಿವೆ.
ಮೂರು ವರ್ಷಗಳ ಹಿಂದೆ ಕೋವಿಡ್ ಎಂಬ ಮಹಾ ಸಾಂಕ್ರಾಮಿಕ ರೋಗ (Covid Pandemic) ದಾಳಿ ಮಾಡಿದ ಬಳಿಕ ಜಗತ್ತಿನಾದ್ಯಂತ ಜನರ ಜೀವನಶೈಲಿಯೇ (Lifestyle) ಬದಲಾಗಿ ಹೋಗಿದೆ. ಮನೆಯಿಂದ ಹೇಗಪ್ಪಾ ಕೆಲಸ ಮಾಡುತ್ತಾರೆ ಎನ್ನುತ್ತಿದ್ದವರೆಲ್ಲಾ ಲಾಕ್ ಡೌನ್ (Lockdown) ಕಾರಣದಿಂದ ಮನೆಯಿಂದಲೇ ಕೆಲಸ ಮಾಡಬೇಕಾಯಿತು. ಮನೆಯಲ್ಲಿ ಅಪ್ತರ ಸನ್ನಿಧಿಯಲ್ಲಿ ಇದ್ದುಕೊಂಡ ಹಾಗೂ ಆಯ್ತು, ಕೆಲಸ ಮಾಡಿದಂಗೂ ಆಯ್ತು ಎಂಬ ರುಚಿಯನ್ನ ವರ್ಕ್ ಫ್ರಂ ಹೋಮ್ (Work From Home) ತೋರಿಸಿಕೊಟ್ಟಿತು. ಜನರು ವರ್ಕ್ ಫ್ರಂ ಹೋಂಗೆ ಒಗ್ಗಿಹೋಗಿದ್ದರು. ಚಿಪ್ಪಿನೊಳಗೆ ಸೇರಿದ ಆಮೆಯಂತೆ ಜನರಿಗೆ ವರ್ಕ್ ಫ್ರಂ ಹೋಂ ಒಂದು ರೀತಿಯಲ್ಲಿ ಸುಭದ್ರ ಭಾವನೆಯ ಅನುಭವ ಕೊಟ್ಟಿದ್ದು ಹೌದು. ಇದು ಹೀಗಾದರೆ, ಕಂಪನಿಗಳ ಕಥೆ ಇನ್ನೊಂದು ಸ್ತರದ್ದು. ಕೋವಿಡ್ ಮತ್ತು ಲಾಕ್ಡೌನ್ಗಳ ಕಾರಣದಿಂದ ಕಂಪನಿಗಳು ಅನಿವಾರ್ಯವಾಗಿ ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಿಸಬೇಕಿತ್ತು. ಕೋವಿಡ್ ಸಂಕಷ್ಟವೆಲ್ಲಾ ಬಹುತೇಕ ಕಳೆದ ಬಳಿಕ ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಕರೆಸುವಾಗ ಆದ ಅನುಭವ ಕಂಪನಿಗಳಿಗೆ ಇರಿಸು ಮುರುಸು ತರುತ್ತಿರುವುದು ಹೌದು. ಮನೆಯಿಂದ ಕೆಲಸ ಬೇಡ, ಕಚೇರಿಗೆ ಬಂದು ಕೆಲಸ ಮಾಡಿ ಎಂದು ಕಂಪನಿಗಳು ಸಾಮ ದಾನ ಭೇದದ ವಿವಿಧ ಪ್ರಯತ್ನಗಳನ್ನು ಮಾಡುತ್ತಲೇ ಇವೆ. ಈಗಲೂ ಕೂಡ ಹಲವು ಉದ್ಯೋಗಿಗಳು ಕೆಲಸಕ್ಕೆ ಕಚೇರಿಗೆ ಹೋಗಿ ಮೂರು ವರ್ಷಗಳೇ ಆಗಿವೆ. ಆದರೂ ಕಂಪನಿಗಳು ಮಾತ್ರ ತಮ್ಮ ಪ್ರಯತ್ನ ಮುಂದುವರಿಸುತ್ತಲೇ ಇವೆ.
ಇದೊಂದು ರೀತಿ, ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎಂಬಂತಹ ಸ್ಥಿತಿ ಎಂದೆನ್ನಲು ಅಡ್ಡಿ ಇಲ್ಲ. ಈ ಮೇಲಿನ ವರ್ಕ್ ಫ್ರಂ ಹೋಂ ವಿಚಾರ ಬರೆಯಲು ಕಾರಣವಾಗಿದ್ದು ಅಮೆರಿಕದ ಒಂದು ಸರ್ವೆ. ಇದರಲ್ಲಿ ಅಮೆರಿಕದ ಶೇ. 90ರಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಚೇರಿಯಿಂದಲೇ ಕೆಲಸ ಮಾಡಲು ಬಯಸುತ್ತವಂತೆ. ಹಾಗಂತ ರಾಬರ್ಟ್ ಹಾಫ್ ಎಂಬ ನೇಮಕಾತಿ ಕಂಪನಿ (Recruiting firm Robert Half) ನಡೆಸಿದ ಸರ್ವೆ ರಿಪೋರ್ಟ್ ಹೇಳುತ್ತಿದೆ. ಇದರ ಸಮೀಕ್ಷೆ ಪ್ರಕಾರ ಅಮೆರಿಕದ ಕಂಪನಿಗಳ ಧೋರಣೆಗೆ ತದ್ವಿರುದ್ಧವಾಗಿ ಉದ್ಯೋಗಿಗಳು ಕಚೇರಿ ಬದಲು ಮನೆಯಿಂದಲೇ ಕೆಲಸ ಮಾಡಲು ಇಚ್ಛಿಸುತ್ತಾರೆ ಎಂದಿದೆ. ಅಮೆರಿಕದಲ್ಲಿ ಸ್ಥಿತಿ ಯಾವ ಹಂತಕ್ಕೆ ಹೋಗಿದೆ ಎಂದರೆ ಅಲ್ಲಿ ಕಚೇರಿಯಿಂದ ಕೆಲಸ ಮಾಡಲು ಮುಂದಾಗುವ ಉದ್ಯೋಗಿಗಳು ಸಿಗುವುದೇ ದುಸ್ತರ ಆಗಿದೆ.
ರಾಬರ್ಟ್ ಹಾಫ್ ಸಂಸ್ಥೆ ಅಮೆರಿಕದಲ್ಲಿ 2,500 ಉದ್ಯೋಗಿಗಳು ಮತ್ತು 2,100 ನೇಮಕಾತಿ ಮ್ಯಾನೇಜರ್ಗಳ ಸಮೀಕ್ಷೆ ನಡೆಸಿದೆ. ಕಚೇರಿಗೆ ಬಂದು ಕೆಲಸ ಮಾಡುವ ಬಹುತೇಕ ಉದ್ಯೋಗಿಗಳು ವರ್ಕ್ ಫ್ರಂ ಹೋಂ ಮಾಡುವ ತವಕದಲ್ಲಿದ್ದಾರೆ. ವಾರಕ್ಕೆ ಒಂದು ದಿನ ಮಾತ್ರ ಕಚೇರಿಗೆ ಬಂದು ಹೋಗುವ ಉದ್ಯೋಗಿಗಳೂ ಕೂಡ ಸಂಪೂರ್ಣವಾಗಿ ಮನೆಯಿಂದಲೇ ಕೆಲಸ ಮಾಡಬೇಕೆನ್ನುವ ಧಾವಂತದಲ್ಲಿದ್ದಾರೆ. ಪ್ರತೀ ಮೂರು ಉದ್ಯೋಗಿಗಳಲ್ಲಿ ಒಬ್ಬರು ಇಂಥವರಿದ್ದಾರೆ. ಸರ್ವೆಯಲ್ಲಿ ವ್ಯಕ್ತವಾಗಿರುವ ಕುತೂಹಲದ ಒಂದು ಸಂಗತಿ ಎಂದರೆ ವರ್ಕ್ ಫ್ರಂ ಹೋಂಗೋಸ್ಕರ ಉದ್ಯೋಗಿಗಳು ತಮ್ಮ ಸಂಬಳ ಕಡಿತಕ್ಕೂ ರೆಡಿ ಇದ್ದಾರೆ. ಶೇ. 18ರಷ್ಟರವರೆಗೂ ಸಂಬಳ ಬಿಟ್ಟುಕೊಡಲು ಈ ಅಮೆರಿಕನ್ ಉದ್ಯೋಗಿಗಳು ಸಿದ್ಧವಿದ್ದಾರೆನ್ನಲಾಗಿದೆ.
ಕಂಪನಿಗಳು ಯಾಕೆ ವರ್ಕ್ ಫ್ರಂ ಹೋಂ ಕೊಡಲು ಹಿಂದೇಟು ಹಾಕುತ್ತಿವೆ?
ಬೆಂಗಳೂರಿನಂಥ ನಗರಗಳಲ್ಲಿ ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಂ ಸವಲತ್ತು ಅವಕಾಶ ಕಡಿಮೆ ಮಾಡಿವೆ. ಅಮೆರಿಕದಲ್ಲಿ ಈಗಲೂ ಹಲವು ಕಂಪನಿಗಳ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅಲ್ಲಿನ ಕಂಪನಿಗಳು ವರ್ಕ್ ಫ್ರಂ ಹೋಂಗೆ ಫುಲ್ ಸ್ಟಾಪ್ ಹಾಕಲು ಯೋಜಿಸುತ್ತಿವೆ. ಕಚೇರಿಗೆ ಬಂದು ಕೆಲಸ ಮಾಡಿದಾಗ ಸಹೋದ್ಯೋಗಿಗಳ ಜೊತೆ ನೇರ ಸಂವಾದ ಸಾಧ್ಯವಾಗುತ್ತದೆ. ಮ್ಯಾನೇಜರ್ ಮತ್ತು ಉದ್ಯೋಗಿಗಳ ಮಧ್ಯೆ ಸಂವಹನ ಸುಗಮವಾಗಿರುತ್ತದೆ. ಕಂಪನಿಯ ವರ್ಕಿಂಗ್ ಪಾಲಿಸಿ ಸರಿಯಾದ ರೀತಿಯಲ್ಲಿ ಆಗುತ್ತಿದೆಯಾ ಎಂಬುದನ್ನು ದೃಢಪಡಿಸಿಕೊಳ್ಳಬಹುದು. ಇದು ಕಂಪನಿಗಳ ಮ್ಯಾನೇಜರುಗಳ ಮತ್ತು ಉನ್ನತ ಅಧಿಕಾರಿಗಳ ವಾದ.
ಇದನ್ನೂ ಓದಿ: SEBI: ಹುಷಾರಾಗಿರಿ..! ಅನಧಿಕೃತ ಹೂಡಿಕೆ ಸಲಹೆ: ಷೇರುಪೇಟೆ ವ್ಯವಹಾರದಿಂದ 3 ಸಂಸ್ಥೆಗಳ ನಿಷೇಧ
ಬೆಂಗಳೂರಿನ ಹಲವು ಕಂಪನಿಗಳು ಹೈಬ್ರಿಡ್ ವರ್ಕಿಂಗ್ ವ್ಯವಸ್ಥೆ ರೂಪಿಸಿವೆ. ಅಗತ್ಯ ಇದ್ದವರು ಮನೆಯಿಂದ ಕೆಲಸ ಮಾಡಬಹುದು. ಕಚೇರಿಗೆ ಬಂದೂ ಕೆಲಸ ಮಾಡಬಹುದು. ಅಥವಾ ದೂರದ ಊರಿನವರಾಗಿದ್ದರೆ ಅವರ ಊರಿಗೆ ಸಮೀಪ ಕಂಪನಿಯ ಯಾವುದಾದರೂ ಕಚೇರಿ ಇದ್ದರೆ ಅಲ್ಲಿಗೆ ಹೋಗಿಯೂ ಕೆಲಸ ಮಾಡಬಹುದು. ಮುಂದೆ ಕೋವಿಡ್ ರೀತಿಯ ಸ್ಥಿತಿ ಮತ್ತೊಮ್ಮೆ ಉದ್ಭವವಾದಲ್ಲಿ ಅದನ್ನು ಎದುರಿಸಲು ಕಾರ್ಪೊರೇಟ್ ಕಂಪನಿಗಳು ಮತ್ತು ಉದ್ಯೋಗಿಗಳು ಸಿದ್ಧವಿರಬೇಕು. ಅದರಲ್ಲಿ ವರ್ಕ್ ಫ್ರಂ ಹೋಂ ಒಂದು ಅನಿವಾರ್ಯ ಆಯ್ಕೆ.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:14 pm, Fri, 7 April 23