ಪ್ರತಿ ಆಟಗಾರರ ಜಾತಕ ತಿಳಿದಿರುವ ನೀವು ಐಪಿಎಲ್ ಸೂಪರ್​ಫ್ಯಾನ್ಸಾ? ನಿಮಗೆಷ್ಟು ಬ್ರ್ಯಾಂಡ್ ನೆನಪಿದೆ? ಯಾವ ತಂಡಕ್ಕೆ ಎಷ್ಟು ಫ್ಯಾನ್ಸ್?

|

Updated on: Apr 15, 2024 | 10:32 AM

IPL 2024 survey details: ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದಲ್ಲಿ ಅತ್ಯಂತ ಜನಪ್ರಿಯವಾಗಿರುವ ಕ್ರಿಕೆಟ್ ಲೀಗ್. ಬಿಗ್ ಬ್ಯಾಷ್​ಗಿಂತಲೂ ಐಪಿಎಲ್​ಗೆ ವೀಕ್ಷಕರ ಬಳಗ ಹೆಚ್ಚು. ಇಲ್ಲಿ ಐಪಿಎಲ್ ತಂಡಗಳಿಗೆ ಕ್ರಿಕೆಟ್ ಪ್ರೇಮಿಗಳು ಭಾನವಾತ್ಮಕವಾಗಿ ಬೆಸೆದುಕೊಂಡಿರುತ್ತಾರೆ. ಪ್ರತೀ ಆಟವನ್ನೂ ತನ್ಮಯತೆಯಿಂದ ನೋಡುತ್ತಾರೆ. ಅಂತೆಯೇ ಇವರ ಗಮನ ಸೆಳೆಯಲು ಪ್ರಾಯೋಜಕರು, ಜಾಹೀರಾತುದಾರರು ಕಸರತ್ತು ನಡೆಸುತ್ತಾರೆ. ಸಮೀಕ್ಷೆಯೊಂದರ ಪ್ರಕಾರ ಒಂದು ಕ್ರಿಕೆಟ್ ಪಂದ್ಯವಾಗಿ ಮರುದಿನ ಒಬ್ಬ ವೀಕ್ಷಕ ಸರಾಸರಿಯಾಗಿ ಮೂರರಿಂದ ಐದು ಬ್ರ್ಯಾಂಡ್​ಗಳನ್ನು ನೆನಪಿಸಿಕೊಳ್ಳಬಲ್ಲುನಂತೆ.

ಪ್ರತಿ ಆಟಗಾರರ ಜಾತಕ ತಿಳಿದಿರುವ ನೀವು ಐಪಿಎಲ್ ಸೂಪರ್​ಫ್ಯಾನ್ಸಾ? ನಿಮಗೆಷ್ಟು ಬ್ರ್ಯಾಂಡ್ ನೆನಪಿದೆ? ಯಾವ ತಂಡಕ್ಕೆ ಎಷ್ಟು ಫ್ಯಾನ್ಸ್?
ಹಾರ್ದಿಕ್ ಪಾಂಡ್ಯ
Follow us on

ನವದೆಹಲಿ, ಏಪ್ರಿಲ್ 15: ಐಪಿಎಲ್​ನಲ್ಲಿ ಬಹಳಷ್ಟು ಕ್ರಿಕೆಟ್ ಪ್ರೇಮಿಗಳಿಗೆ ಎಲ್ಲಾ ಆಟಗಾರರ ಬಗ್ಗೆ ಅವರ ಬಲಾಬಲ ಸಮೇತ ಮಾಹಿತಿ ತಿಳಿದಿರುತ್ತೆ. ಪ್ಲೇಯಿಂಗ್ ಇಲವೆನ್​ನಲ್ಲಿ ಯಾರನ್ನು ಡ್ರಾಪ್ ಮಾಡಬೇಕು, ಯಾರನ್ನು ಸೇರಿಸಿಕೊಳ್ಳಬೇಕು ಎಂದು ಕೋಚ್ ಮತ್ತು ಕ್ಯಾಪ್ಟನ್ ರೀತಿ ಸಲಹೆ ಕೊಡಬಲ್ಲುರು. ಅಷ್ಟರ ಮಟ್ಟಿಗೆ ಕ್ರಿಕೆಟ್ ಜ್ವರ ಭಾರತವನ್ನು ಆವರಿಸಿರುತ್ತದೆ. ಕ್ರಿಕೆಟ್ ಕ್ರೇಜ್ ಇರುವ ಭಾರತದಲ್ಲಿ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆಯಲು ಸಾಕಷ್ಟು ಪ್ರಾಯೋಜಕ ಕಂಪನಿಗಳು (IPL sponsors) ಕಸರತ್ತು ನಡೆಸುತ್ತವೆ. ಐಪಿಎಲ್ ಪಂದ್ಯದ ಸಂದರ್ಭದಲ್ಲಿ ಓವರ್ ಮುಗಿದಾಗ, ವಿಕೆಟ್ ಬಿದ್ದಾಗ ಹೀಗೆ ಬೇರೆ ಬೇರೆ ಬ್ರೇಕ್ ಸಂದರ್ಭದಲ್ಲಿ ಜಾಹೀರಾತುಗಳು ಪ್ರಸಾರವಾಗುತ್ತವೆ. ಆಟಗಾರರ ಚುಟುಕು ಲೈವ್ ಇಂಟರ್ವ್ಯೂ ವೇಳೆ ಬ್ರ್ಯಾಂಡಿಂಗ್ ಇರುತ್ತೆ. ಇಡೀ ಐಪಿಎಲ್ ಪಂದ್ಯದಲ್ಲಿ (IPL 2024) ನೀವು ಎಷ್ಟು ಬ್ರ್ಯಾಂಡ್​ಗಳನ್ನು ನೆನಪಿಸಿಕೊಳ್ಳಬಲ್ಲಿರಿ? ಈ ಬಗ್ಗೆ ಸ್ವಾರಸ್ಯಕರ ಮತ್ತು ಕುತೂಹಲಕರ ಸಂಗತಿಗಳಿವೆ.

ಕ್ಯಾಡನ್ಸ್ ಇಂಟರ್ನ್ಯಾಷನಲ್ ಮತ್ತು ಕ್ರಿಸ್ಪ್ ಇನ್ಸೈಟ್ಸ್ ಎಂಬ ಎರಡು ಸಂಸ್ಥೆಗಳು ಜಂಟಿಯಾಗಿ ನಡೆಸಿದ ಅಧ್ಯಯನದ ಪ್ರಕಾರ, ಒಂದು ಐಪಿಎಲ್ ಪಂದ್ಯದ ಬಳಿಕ ಒಬ್ಬ ಸಾಮಾನ್ಯ ವೀಕ್ಷಕ ಅಥವಾ ವೀಕ್ಷಕಿ 3ರಿಂದ 5 ಬ್ರ್ಯಾಂಡ್​ಗಳನ್ನು ನೆನಪಿಸಿಕೊಳ್ಳಬಹುದು. ಈ ಸಮೀಕ್ಷೆ ಪ್ರಕಾರ ಡ್ರೀಮ್11, ಟಾಟಾ ಗ್ರೂಪ್, ಜಿಯೋ, ಮೈ ಇಲವೆನ್ ಸರ್ಕಲ್, ರುಪೇ, ಸಿಯಟ್ ಅತಿ ಹೆಚ್ಚು ಸ್ಮರಣೆಯಲ್ಲಿರುವ ಬ್ರ್ಯಾಂಡ್​ಗಳಾಗಿವೆಯಂತೆ.

ಇದನ್ನೂ ಓದಿ: IPL 2024: ಕಿಂಗ್ ಕೊಹ್ಲಿಯ ವಿಶೇಷ ದಾಖಲೆ ಸರಿಗಟ್ಟಿದ ಎಂಎಸ್ ಧೋನಿ

ಐಪಿಎಲ್ ಟೂರ್ನಿಯಲ್ಲಿ ಆಡುತ್ತಿರುವ 10 ತಂಡಗಳಿಗೆ ಸಂಬಂಧಿಸಿದ ಪ್ರಮುಖ ನಗರಗಳ 15ರಿಂದ 65 ವರ್ಷ ವಯೋಮಾನದ ಪುರುಷ ಮತ್ತು ಮಹಿಳೆಯರನ್ನು ಸಮೀಕ್ಷೆಯಲ್ಲಿ ಒಳಗೊಳ್ಳಲಾಗಿದೆ. ಪಂದ್ಯವಾಗಿ ಮರುದಿನ ಫೋನ್ ಮೂಲಕ ಈ ಜನರನ್ನು ಸಂದರ್ಶಿಸಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.

ಸೂಪರ್ ಫ್ಯಾನ್ಸ್ ನೀವಾಗಿದ್ರೆ ಹೆಚ್ಚು ನೆನಪಿರುತ್ತೆ

ಐಪಿಎಲ್​ನಲ್ಲಿ ಪ್ರತಿಯೊಂದು ಪಂದ್ಯವನ್ನೂ ನೋಡಲು ತವಕಿಸುವವರನ್ನು ಸೂಪರ್​ಫ್ಯಾನ್ಸ್ ಎಂದು ಪರಿಗಣಿಸಲಾಗುತ್ತದೆ. ಐಪಿಎಲ್ ಟೂರ್ನಿ ಬಗ್ಗೆ ಅವರು ಭಾವನಾತ್ಮಕವಾಗಿ ಬೆಸೆದುಕೊಂಡಿರುತ್ತಾರೆ.

ಸಮೀಕ್ಷೆಗೊಳಪಟ್ಟವ ಪ್ರತೀ ಐವರಲ್ಲಿ ಒಬ್ಬರು ಸೂಪರ್​ಫ್ಯಾನ್ ಆಗಿದ್ದಾರೆ. ಒಂದು ಐಪಿಎಲ್ ಆಟದಲ್ಲಿ ಶೇ. 40ರಷ್ಟು ವೀಕ್ಷಕರು ಸೂಪರ್​ಫ್ಯಾನ್ಸ್ ಆಗಿರುತ್ತಾರೆ. ತನ್ಮಯಚಿತ್ತದಿಂದ ಪಂದ್ಯ ವೀಕ್ಷಿಸುವ ಈ ಸೂಪರ್​​ಫ್ಯಾನ್ಸ್ ಹೆಚ್ಚು ಬ್ರ್ಯಾಂಡ್​ಗಳನ್ನು ಸ್ಮರಿಸಿಕೊಳ್ಳಬಲ್ಲುರು. ಆಟದ ಜೊತೆಗೆ ಜಾಹೀರಾತುಗಳೂ ಕೂಡ ಈ ಸೂಪರ್ ಫ್ಯಾನ್ಸ್ ಗಮನ ಸೆಳೆಯಬಲ್ಲುವು ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿಂದು ಆರ್​​ಸಿಬಿ, ಎಸ್​ಆರ್​ಎಚ್ ಪಂದ್ಯ; ಎಲ್ಲೆಲ್ಲಿ ಪಾರ್ಕಿಂಗ್? ಇಲ್ಲಿದೆ ಮಾಹಿತಿ

ಸಿಎಸ್​ಕೆಗೆ ಹೆಚ್ಚು ಫ್ಯಾನ್ಸ್; ಆರ್​ಸಿಬಿಗೆ ಹಾರ್ಡ್​ಕೋರ್ ಫ್ಯಾನ್ಸ್

ಐಪಿಎಲ್ ವೀಕ್ಷಕರಲ್ಲಿ ಅರ್ಧದಷ್ಟು ಮಂದಿಗೆ ನೆಚ್ಚಿನ ತಂಡ ಎಂದು ಇರುವುದಿಲ್ಲ. ಉಳಿದ ಅರ್ಧದಷ್ಟು ವೀಕ್ಷಕರಲ್ಲಿ ಶೇ. 86ರಷ್ಟು ಚೆನ್ನೈ ಸೂಪರ್ ಕಿಂಗ್ಸ್, ಆರ್​ಸಿಬಿ, ಕೆಕೆಆರ್ ಮತ್ತು ಮುಂಬೈ ಇಂಡಿಯನ್ಸ್​ನ ಫ್ಯಾನ್ಸ್​ಗಳಿದ್ದಾರೆ. ಇವುಗಳಲ್ಲಿ ಸಿಎಸ್​ಕೆ ಫ್ಯಾನ್ಸ್ ಹೆಚ್ಚು. ದೆಹಲಿಯಲ್ಲಿರುವ ಜನರು ಡೆಲ್ಲಿ ಕ್ಯಾಪಿಟಲ್ಸ್​ಗಿಂತ ಸಿಎಸ್​ಕೆಗೆ ಹೆಚ್ಚು ಬೆಂಬಲ ನೀಡುತ್ತಾರೆ.

ಈ ಸಲ ಕಪ್ ನಮ್ದೇ ಎಂದು ಕಳೆದ ಹಲವು ವರ್ಷಗಳಿಂದಲೂ ಸತತವಾಗಿ ಭರವಸೆ ಇಟ್ಟುಕೊಳ್ಳುತ್ತಾ ಬಂದಿರುವ ಆರ್​ಸಿಬಿ ಫ್ಯಾನ್ಸ್ ನಿಷ್ಠೆ ಬಹಳ ಗಟ್ಟಿ. ಅದರಲ್ಲೂ ಬೆಂಗಳೂರಿನಲ್ಲಿರುವ ಕ್ರಿಕೆಟ್ ಫ್ಯಾನ್ಸ್​ಗಳಲ್ಲಿ ಶೇ. 84ರಷ್ಟು ಜನರು ಆರ್​ಸಿಬಿಗೆ ಬೆಂಬಲ ನೀಡುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ