IPL 2024: ಕಿಂಗ್ ಕೊಹ್ಲಿಯ ವಿಶೇಷ ದಾಖಲೆ ಸರಿಗಟ್ಟಿದ ಎಂಎಸ್ ಧೋನಿ
IPL 2024: ಐಪಿಎಲ್ 2024ರ 29ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮಹೇಂದ್ರ ಸಿಂಗ್ ಧೋನಿ ಆರ್ಸಿಬಿ ಆಟಗಾರ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ 2ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Updated on: Apr 15, 2024 | 9:18 AM

ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 29ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮಹೇಂದ್ರ ಸಿಂಗ್ ಧೋನಿ (MS Dhoni) ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.

ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದರೊಂದಿಗೆ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಪರ 250 ಪಂದ್ಯಗಳನ್ನಾಡಿದ ವಿಶೇಷ ದಾಖಲೆ ಬರೆದರು. ಈ ಮೂಲಕ ಐಪಿಎಲ್ ಫ್ರಾಂಚೈಸಿಯೊಂದರ ಪರ 250 ಪಂದ್ಯಗಳನ್ನಾಡಿದ 2ನೇ ಆಟಗಾರ ಎನಿಸಿಕೊಂಡರು.

ಇದಕ್ಕೂ ಮುನ್ನ ಇಂತಹದೊಂದು ದಾಖಲೆ ನಿರ್ಮಿಸಿದ್ದು ವಿರಾಟ್ ಕೊಹ್ಲಿ. ಆರ್ಸಿಬಿ ಪರ ಇದುವರೆಗೆ 258 ಪಂದ್ಯಗಳನ್ನಾಡುವ ಮೂಲಕ ಕಿಂಗ್ ಕೊಹ್ಲಿ ಐಪಿಎಲ್ ತಂಡವೊಂದರ ಪರ ಅತೀ ಹೆಚ್ಚು ಮ್ಯಾಚ್ಗಳನ್ನಾಡಿದ ವಿಶೇಷ ದಾಖಲೆ ಬರೆದಿದ್ದಾರೆ.

ಇದೀಗ ಸಿಎಸ್ಕೆ ಪರ 250 ಪಂದ್ಯಗಳಲ್ಲಿ ಕಣಕ್ಕಿಳಿಯುವ ಮೂಲಕ ಈ ಸಾಧನೆ ಮಾಡಿದ 2ನೇ ಆಟಗಾರನಾಗಿ ಮಹೇಂದ್ರ ಸಿಂಗ್ ಧೋನಿ ಹೊರಹೊಮ್ಮಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಸಿಎಸ್ಕೆ ತಂಡದ ಮಾಜಿ ನಾಯಕ ಸರಿಟ್ಟಿದ್ದಾರೆ.

ಇನ್ನು 250ನೇ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹೇಂದ್ರ ಸಿಂಗ್ ಧೋನಿ ವಿಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ ಕೊನೆಯ ಓವರ್ನ 4 ಎಸೆತಗಳನ್ನು ಎದುರಿಸಿದ ಎಂಎಸ್ಡಿ 3 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ 20 ರನ್ ಚಚ್ಚಿದರು. ಈ ಭರ್ಜರಿ ಬ್ಯಾಟಿಂಗ್ ಪರಿಣಾಮ ಸಿಎಸ್ಕೆ ತಂಡವು 20 ಓವರ್ 4 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 186 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಸಿಎಸ್ಕೆ ತಂಡವು 20 ರನ್ಗಳ ಜಯ ಸಾಧಿಸಿದೆ.



















