ಇಸ್ರೇಲ್-ಇರಾನ್ ಯುದ್ಧಭೀತಿ: ಭಾರತ ಹಾಗೂ ಜಾಗತಿಕ ಆರ್ಥಿಕತೆ ಮೇಲೇನು ಪರಿಣಾಮ?
Irael Iran War situation: ಇಸ್ರೇಲ್ ಮತ್ತು ಇರಾನ್ ಮಧ್ಯೆ ದಾಳಿ, ಪ್ರತಿದಾಳಿಗಳು ನಡೆದಿವೆ. ಇದು ಪೂರ್ಣಪ್ರಮಾಣದ ಯುದ್ಧಕ್ಕೆ ತಿರುಗುವ ಸಾಧ್ಯತೆ ಇಲ್ಲದಿಲ್ಲ. ಈಗಾಗಲೇ ಉಕ್ರೇನ್ ರಷ್ಯಾ ಯುದ್ಧದಿಂದ ಜರ್ಝರಿತಗೊಂಡಿರುವ ಜಾಗತಿಕ ಆರ್ಥಿಕತೆ ಮತ್ತೊಂದು ಯುದ್ಧವನ್ನು ಸಹಿಸಿಕೊಳ್ಳುವಷ್ಟು ಸಮರ್ಥವಾಗಿಲ್ಲ. ಈ ಬೆಳವಣಿಗೆಯಿಂದ ಜಗತ್ತಿನಾದ್ಯಂತ ಯಾವೆಲ್ಲಾ ಪರಿಣಾಮಗಳಾಗಬಹುದು ಎಂಬ ಒಂದು ಅಂದಾಜು ಇಲ್ಲಿದೆ...
ನವದೆಹಲಿ, ಏಪ್ರಿಲ್ 14: ಇಸ್ರೇಲ್ ದೇಶದ ಮೇಲೆ ಇರಾನ್ ಡ್ರೋನ್ ಮತ್ತು ಮಿಸೈಲ್ಗಳಿಂದ ದಾಳಿ ನಡೆಸಿದೆ. ಸಿರಿಯಾದಲ್ಲಿರುವ ಇರಾನ್ ರಾಜತಾಂತ್ರಿಕ ಕಚೇರಿ ಮೇಲೆ ಇಸ್ರೇಲ್ ನಡೆಸಿದ್ದ ದಾಳಿಗೆ ಪ್ರತೀಕಾರವಾಗಿ ಇರಾನ್ ಈ ಕಾರ್ಯಾಚರಣೆ ನಡೆಸಿದೆ. ಇಸ್ರೇಲ್ ಈಗ ಪ್ರತಿದಾಳಿ (Israel retaliation against Iran) ನಡೆಸಿದ್ದೇ ಆದಲ್ಲಿ ಎರಡೂ ದೇಶಗಳ ಮಧ್ಯೆ ಪೂರ್ಣಪ್ರಮಾಣದ ಯುದ್ಧ ಸಂಭವಿಸುವ ಭೀತಿ ಇದೆ. ಇವತ್ತಿನ ಸೂಕ್ಷ್ಮ ಕಾಲಘಟ್ಟದಲ್ಲಿ ಯುದ್ಧ ಸಾಧ್ಯತೆ (full fledged war) ತಳ್ಳಿಹಾಕಲು ಸಾಧ್ಯವಿಲ್ಲ. ಷೇರು ಮಾರುಕಟ್ಟೆ, ಚಿನ್ನ ಇತ್ಯಾದಿಗಳು ಜಾಗತಿಕ ವಿದ್ಯಮಾನಗಳಿಗೆ ಸ್ಪಂದಿಸುತ್ತವೆ. ಆರ್ಥಿಕವಾಗಿ ಭಾರತವೂ ಒಳಗೊಂಡಂತೆ ವಿವಿಧ ದೇಶಗಳಲ್ಲಿ ಪರಿಣಾಮ (global economic effect) ಬೀರುವ ಅಪಾಯ ಉಂಟು. ಉಕ್ರೇನ್ ರಷ್ಯಾ ಯುದ್ಧದಿಂದ ಈಗಲೂ ಜಗತ್ತು ಸೊರಗುತ್ತಲೇ ಇದೆ.
ಇಸ್ರೇಲ್-ಇರಾನ್ ಯುದ್ಧದಿಂದ ಪೆಟ್ರೋಲ್ ಮೇಲೆ ಪರಿಣಾಮ
ಇಸ್ರೇಲ್-ಇರಾನ್ ಯುದ್ಧದ ಕಾರ್ಮೋಡ ಕವಿದಿರುವುದು ಗಲ್ಫ್ ರಾಷ್ಟ್ರಗಳಲ್ಲಿ. ಇರಾನ್ ಪ್ರಮುಖ ಪೆಟ್ರೋಲಿಯಂ ದೇಶ. ಪೂರ್ಣ ಯುದ್ಧ ಆರಂಭವಾದರೆ ಇತರ ತೈಲ ರಾಷ್ಟ್ರಗಳೂ ಭಾಗಿಯಾಗಬಹುದು. ಅದೇನೇ ಆದರೂ ಕಚ್ಛಾ ತೈಲ ಬೆಲೆ ಬ್ಯಾರಲ್ಗೆ 90 ಡಾಲರ್ ಇದ್ದದ್ದು ಬಹಳ ಶೀಘ್ರದಲ್ಲಿ 100 ಡಾಲರ್ ಗಡಿ ದಾಟುವ ಸಾಧ್ಯತೆ ಹೆಚ್ಚಿದೆ. ಇದಾದರೆ ಪೆಟ್ರೋಲ್, ಡೀಸಲ್ ಬೆಲೆಗಳೂ ಏರಲಿವೆ.
ಹಣದುಬ್ಬರ ಹೆಚ್ಚುವ ಸಾಧ್ಯತೆ
ಪೆಟ್ರೋಲ್ ಬೆಲೆ ಹೆಚ್ಚಾದರೆ ಸಹಜವಾಗಿ ವಿವಿಧ ವಸ್ತುಗಳ ಬೆಲೆ ಏರಿಕೆ ಆಗಬಹುದು. ಅದರ ಪರಿಣಾಮವಾಗಿ ಹಣದುಬ್ಬರ ಹೆಚ್ಚುವ ಸಾಧ್ಯತೆ ಇರುತ್ತದೆ. ಸೆಂಟ್ರಲ್ ಬ್ಯಾಂಕುಗಳು ಬಡ್ಡಿದರ ಹೆಚ್ಚಿಸುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: Israel Iran War: ಇಸ್ರೇಲ್ ಮೇಲೆ ಇರಾನ್ನಿಂದ ಕ್ಷಿಪಣಿ ದಾಳಿ
ಚಿನ್ನದ ಬೆಲೆ ಹೆಚ್ಚುವ ಸಾಧ್ಯತೆ
ಪ್ರಪಂಚದಲ್ಲಿ ಯಾವುದಾದರೂ ವಿಘಟನೆ ನಡೆದಾಗ ಬಹಳಷ್ಟು ಹೂಡಿಕೆದಾರರು ಜಾಗೃತಗೊಳ್ಳುತ್ತಾರೆ. ತಮ್ಮ ಹೂಡಿಕೆ ನಾಶವಾಗದಂತೆ ಸುರಕ್ಷಿತ ಜಾಗದಲ್ಲಿ ಇರಿಸುತ್ತಾರೆ. ಸದ್ಯ ಅತ್ಯಂತ ಸುರಕ್ಷಿತ ಹೂಡಿಕೆಯಾಗಿ ಚಿನ್ನವನ್ನು ಪರಿಗಣಿಸಲಾಗುತ್ತದೆ. ಹೀಗಾಗಿ, ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತದೆ. ಪರಿಣಾಮವಾಗಿ ಈಗಾಗಲೇ ಹೆಚ್ಚಿನ ಮಟ್ಟದಲ್ಲಿರುವ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಾಗಬಹುದು.
ಷೇರು ಮಾರುಕಟ್ಟೆ ಮೇಲೇನು ಪರಿಣಾಮ?
ಇಸ್ರೇಲ್-ಇರಾನ್ ಸಂಘರ್ಷದ ಬಳಿಕ ಅಮೆರಿಕದ ಷೇರು ಮಾರುಕಟ್ಟೆ ಕುಸಿತ ಕಂಡಿದೆ. ಆದರೆ, ಇಸ್ರೇಲ್ನ ಟೆಲ್ ಅವಿವ್ ಷೇರು ಮಾರುಕಟ್ಟೆಯಲ್ಲಿ ಅಷ್ಟೇನೂ ವ್ಯತ್ಯಯವಾಗಿಲ್ಲ. ಅಮೆರಿಕದ ನಡೆ ಏನು ಎಂಬುದರ ಮೇಲೆ ಜಗತ್ತಿನ ಷೇರು ಮಾರುಕಟ್ಟೆಗಳು ವರ್ತನೆ ತೋರಬಹುದು. ಭಾರತದ ಮಾರುಕಟ್ಟೆಯಲ್ಲಿ ಅಷ್ಟೇನೂ ವ್ಯತ್ಯಯವಾಗುವ ಸಾಧ್ಯತೆ ಕಡಿಮೆ.
ಇದನ್ನೂ ಓದಿ: ಭಾರತದ ಹಣದುಬ್ಬರ ಐದು ತಿಂಗಳಲ್ಲೇ ಕನಿಷ್ಠ; ಆದರೂ ಸರ್ಕಾರಕ್ಕೆ ಆತಂಕ ತರಿಸಿದೆ ಇನ್ಫ್ಲೇಶನ್ ಡಾಟಾ
ಭಾರತದ ಮೇಲೇನು ಪರಿಣಾಮ?
ಇಸ್ರೇಲ್-ಇರಾನ್ ಯುದ್ಧದಿಂದ ಭಾರತದ ಮೇಲೆ ಸದ್ಯದ ಮಟ್ಟಿಗೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ಪರಿಣಿತರು ಹೇಳುತ್ತಾರೆ. ಪೆಟ್ರೋಲ್ ದುಬಾರಿಯಾಗಿ ಅದರಿಂದ ಹಣದುಬ್ಬರ ಹೆಚ್ಚಬಹುದು. ಆದರೆ, ಆರ್ಥಿಕತೆಯ ಮುಖ್ಯಭಾಗವು ಆರೋಗ್ಯಯುತವಾಗಿರುವುದರಿಂದ ಸೀಮಿತ ಅವಧಿಯವರೆಗೆ ಭಾರತದ ಆರ್ಥಿಕತೆ ಈ ತಾಪವನ್ನು ತಡೆದುಕೊಳ್ಳಬಲ್ಲುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ