IRCTC Cruise Tourism: ಐಆರ್ಸಿಟಿಸಿಯಿಂದ ಕ್ರೂಸ್ ಪ್ರವಾಸೋದ್ಯಮ; ಪ್ರವಾಸಿ ತಾಣಗಳು ಮತ್ತಿತರ ವಿವರ ಇಲ್ಲಿದೆ
ಐಆರ್ಸಿಟಿಸಿಯಿಂದ ಭಾರತದಲ್ಲಿ ಮೊದಲ ಬಾರಿಗೆ ದೇಶೀಯ ಕ್ರೂಸ್ ಪ್ರವಾಸೋದ್ಯಮವನ್ನು ಆರಂಭಿಸಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.
ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (IRCTC)ನಿಂದ ಖಾಸಗಿ ಕಂಪೆನಿಯಾದ ಕಾರ್ಡೆಲಿಯಾ ಕ್ರೂಸಸ್ ಸಹಯೋಗದಲ್ಲಿ ದೇಶದ ಮೊದಲ ದೇಶೀಯ ಕ್ರೂಸ್ ಅನ್ನು ಶನಿವಾರ ಆರಂಭಿಸಲಿದೆ. ಕೊವಿಡ್-19 ಪರಿಸ್ಥಿತಿ ತಿಳಿಯಾಗಿ, ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಕ್ರೂಸ್ಗಳು ಸಹಜವಾದ ಕಾರ್ಯಾಚರಣೆ ಆರಂಭಿಸಲಿದೆ. ಶೀಘ್ರದಲ್ಲೇ ಐಆರ್ಸಿಟಿಸಿ ವೆಬ್ ಪೋರ್ಟಲ್ ಮೂಲಕವಾಗಿ ಬುಕ್ಕಿಂಗ್ ಮಾಡಬಹುದು ಎಂದು ಪಿಟಿಐ ಸುದ್ದಿ ಸಂಸ್ಥೆಯು ತಿಳಿಸಿದೆ. ಈ ವಿಲಾಸಿ ಪ್ರಯಾಣದ ಅನುಭವದಲ್ಲಿ ದೇಶೀಯ ಕ್ರೂಸ್ ಬಳಸಲಾಗುತ್ತದೆ. ಅತಿಥಿಗಳನ್ನು ಭಾರತೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಖ್ಯಾತ ಪ್ರವಾಸಿ ತಾಣಗಳಿಗೆ ಕರೆದೊಯ್ಯಲಾಗುತ್ತದೆ. ಗೋವಾ, ಡಿಯು, ಕೊಚ್ಚಿ, ಲಕ್ಷದ್ವೀಪ ಮತ್ತು ಶ್ರೀಲಂಕಾದಂಥ ಪ್ರವಾಸಿ ತಾಣಗಳಿಗೆ ಕರೆದೊಯ್ಯಲಾಗುತ್ತದೆ. ಅಂದಹಾಗೆ ಕಾರ್ಡೆಲಿಯಾ ಕ್ರೂಸಸ್ ಎಂಬುದು ಭಾರತದ ಪ್ರೀಮಿಯಂ ಕ್ರೂಸ್ ಲೈನರ್ಗಳಾಗಿದ್ದು, ಭಾರತದಲ್ಲಿ ಕ್ರೂಸ್ ಪ್ರವಾಸ ಸಂಸ್ಕೃತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಸ್ಟೈಲಿಷ್, ವಿಲಾಸಿ ಮತ್ತು ಅವೆಲ್ಲಕ್ಕೂ ಮುಖ್ಯವಾಗಿ ಭಾರತೀಯತೆಯ ಅನುಭವವು ಪ್ರವಾಸಿಗರಿಗೆ ದೊರೆಯಬೇಕು ಎಂಬ ಗುರಿಯನ್ನು ಕಾರ್ಡೆಲಿಯಾ ಹೊಂದಿದೆ. ಈ ತಿಂಗಳ ಆರಂಭದಲ್ಲಿ ಐಆರ್ಸಿಟಿಸಿಯಿಂದ ಈ ಬಗ್ಗೆ ಹೇಳಿಕೆ ನೀಡಿದ್ದು, ದೇಶೀಯವಾದ ವಿಲಾಸಿ ಕ್ರೂಸ್ ಜಲ ಪ್ರವಾಸೋದ್ಯಮವನ್ನು ಮಾರ್ಕೆಟಿಂಗ್ ಹಾಗೂ ಉತ್ತೇಜನ ನೀಡಲು ಕಾರ್ಡೆಲಿಯಾ ಜತೆ ಕೈಜೋಡಿಸಿ, ಒಪ್ಪಂದಕ್ಕೆ ಸಹಿ ಮಾಡಲಾಗಿದೆ ಎಂದಿತ್ತು. ಐಆರ್ಸಿಟಿಸಿ ಅಡಿಯಲ್ಲಿ ಸಾರ್ವಜನಿಕರಿಗೆ ಒದಗಿಸುತ್ತಿರುವ ಮತ್ತೊಂದು ವೈಶಿಷ್ಟ್ಯಪೂರ್ಣ ವಿಲಾಸಿ ಪ್ರವಾಸದ ಆಫರಿಂಗ್ ಇದು ಎಂದು ಹೇಳಲಾಗಿದೆ.
ಪ್ರವಾಸಿ ತಾಣಗಳು ಕಾರ್ಡೆಲಿಯಾ ಕ್ರೂಸಸ್ನವರ ಕೆಲವು ಜನಪ್ರಿಯ ತಾಣಗಳಿವು: – ಮುಂಬೈ- ಗೋವಾ- ಮುಂಬೈ (ಎರಡು ರಾತ್ರಿ) – ಮುಂಬೈ- ಡಿಯು- ಮುಂಬೈ (ಎರಡು ರಾತ್ರಿ) – ಮುಂಬೈ- ಸಮುದ್ರದಲ್ಲಿ- ಮುಂಬೈ (ಎರಡು ರಾತ್ರಿ) – ಕೊಚ್ಚಿ- ಲಕ್ಷದ್ವೀಪ್- ಸಮುದ್ರದಲ್ಲಿ- ಮುಂಬೈ (4 ರಾತ್ರಿ) – ಮುಂಬೈ-ಸಮುದ್ರದಲ್ಲಿ-ಲಕ್ಷದ್ವೀಪ್-ಸಮುದ್ರದಲ್ಲಿ-ಮುಂಬೈ (4 ರಾತ್ರಿ) – ಗೋವಾ-ಮುಂಬೈ-ಸಮುದ್ರದಲ್ಲಿ-ಲಕ್ಷದ್ವೀಪ-ಸಮುದ್ರದಲ್ಲಿ-ಗೋವಾ (5 ರಾತ್ರಿ) -ಚೆನ್ನೈ- ಸಮುದ್ರದಲ್ಲಿ- ಕೊಲೊಂಬೋ (ಎರಡು ರಾತ್ರಿ) – ಚೆನ್ನೈ-ಜಾಫ್ನಾ-ಚೆನ್ನೈ (ಎರಡು ರಾತ್ರಿ) – ಚೆನ್ನೈ-ಸಮುದ್ರದಲ್ಲಿ-ಕೊಲೊಂಬೊ-ಗಾಲೆ-ಟ್ರಂಕಾಮಲಿ-ಚೆನ್ನೈ (5 ರಾತ್ರಿ)
ಕಾರ್ಡೆಲಿಯಾ ಕ್ರೂಸಸ್ನಿಂದ ಹಲವು ವಿಶ್ರಾಂತಿ ಹಾಗೂ ಮನರಂಜನಾತ್ಮಕ ಚಟುವಟಿಕೆಗಳನ್ನು ನೀಡಲಾಗುತ್ತದೆ. ಉದಾಹರಣೆಗೆ, ರೆಸ್ಟೋರೆಂಟ್, ಈಜುಕೊಳ, ಬಾರ್, ಓಪನ್ ಸಿನಿಮಾ, ಥೇಟರ್, ಮಕ್ಕಳ ಪ್ರದೇಶ, ಜಿಮ್ನಾಶಿಯಂ ಮುಂತಾದವು. ಅಂತರರಾಷ್ಟ್ರೀಯ ಕ್ರೂಸ್ ಲೈನರ್ಸ್ನಲ್ಲಿ ಏನೆಲ್ಲ ಸೌಕರ್ಯ, ಸವಲತ್ತು, ಗುಣಮಟ್ಟ ಇರುತ್ತದೋ ಅದಕ್ಕೆ ಸಮವಾಗಿ ಈ ಕ್ರೂಸ್ನಲ್ಲೂ ಇರುತ್ತದೆ.
ಐಆರ್ಸಿಟಿಸಿ ಕ್ರೂಸ್ ಲೈನರ್ಗಳು ಗೋವಾ, ಡಿಯು, ಲಕ್ಷದ್ವೀಪ, ಕೊಚ್ಚಿ ಮತ್ತು ಶ್ರೀಲಂಕಾಗೆ ಪ್ರಯಾಣಿಸುವಂಥದ್ದು ಮೊದಲಿಗೆ ಅತಿಥಿಗಳು ಭಾರತೀಯ ಸ್ಥಳಗಳಲ್ಲಿ ಸುತ್ತಾಡಲು ಅನುವು ಮಾಡಿಕೊಡುತ್ತವೆ. ಮೂಲ ಸ್ಥಳ ಮುಂಬೈ ಆಗಿರುತ್ತದೆ. ಎರಡನೇ ಹಂತದಲ್ಲಿ, 2022ರ ಮೇ ತಿಂಗಳಿಂದ ಕ್ರೂಸ್ ಚೆನ್ನೈಗೆ ಸ್ಥಳಾಂತರ ಆಗುತ್ತದೆ. ಆಗ ಶ್ರೀಲಂಕಾದ ಸ್ಥಳಗಳಾದ ಕೊಲೊಂಬೊ, ಗಾಲೆ, ಟ್ರಂಕಾಮಲಿ ಮತ್ತು ಜಾಫ್ನಾಕ್ಕೆ ಸಂಚರಿಸುತ್ತವೆ.
ಇದನ್ನೂ ಓದಿ: IRCTC: ಎರಡು ವರ್ಷದಲ್ಲಿ ಹತ್ತು ಪಟ್ಟಿಗೂ ಹೆಚ್ಚಿನ ರಿಟರ್ನ್ಸ್ ನೀಡಿದ ಸರ್ಕಾರಿ ಸ್ವಾಮ್ಯದ ಈ ಷೇರು
IRCTC Tourism ಆಗಸ್ಟ್ 29ರಿಂದ ಮಧುರೈನಿಂದ ಸಂಚರಿಸಲಿದೆ ಭಾರತ್ ದರ್ಶನ್ ವಿಶೇಷ ರೈಲು; ಇಲ್ಲಿವೆ ವಿವರಗಳು
(IRCTC Launched India’s First Indigenous Luxury Cruise Package With Collaboration Of Cordelia Cruise )