IRCTCಯಿಂದ ಕೋವಿಡ್ 19 ಸನ್ನಿವೇಶಕ್ಕೆ ವರ್ಕ್ ಫ್ರಮ್ ಹೋಟೆಲ್ ಆಫರ್; ಇದೇನು, ಎತ್ತ, ದರ ಎಷ್ಟು ಗೊತ್ತಾ?
ಐಆರ್ಸಿಟಿಸಿಯಿಂದ ವರ್ಕ್ ಫ್ರಮ್ ಹೋಟೆಲ್ ಎಂಬ ಆಫರ್ ನೀಡುತ್ತಿದೆ. ವೃತ್ತಿಪರರಿಗೆ ಆರಾಮದಾಯಕವಾದ ಹೋಟೆಲ್ನಲ್ಲಿ ಭಿನ್ನವಾದ ಅನುಭವದೊಂದಿಗೆ ಕೆಲಸ ಮಾಡುವಂಥ ವಾತಾವರಣ ನಿರ್ಮಿಸಿಕೊಡುವುದೇ ಉದ್ದೇಶ.
ಕೋವಿಡ್- 19 ಎರಡನೇ ಅಲೆ ಕಾರಣಕ್ಕೆ ವರ್ಕ್ ಫ್ರಮ್ ಹೋಮ್ ಇನ್ನಷ್ಟು ಸಮಯ ಮುಂದುವರಿಯುವುದು ನಿಕ್ಕಿ ಆಗಿದೆ. ಇದೀಗ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂನಿಂದ (ಐಆರ್ಸಿಟಿಸಿ) ಹೊಸ ಸೇವೆಯೊಂದನ್ನು ಒದಗಿಸಲಾಗಿದೆ. ಆ ಪ್ರಕಾರ, ಯಾರು ಬದಲಾವಣೆಯನ್ನು ಬಯಸಿ, ನಾಲ್ಕು ಗೋಡೆ ಮಧ್ಯೆಯೇ ಸುರಕ್ಷಿತವಾಗಿ ಕೆಲಸ ಮಾಡಲು ಬಯಸುತ್ತಾರೋ ಅಂಥವರಿಗಾಗಿ ಇರುವ ಸೇವೆ ಇದು. ಭಾರತೀಯ ರೈಲ್ವೆಯ ಅಂಗಸಂಸ್ಥೆಯಾದ ಐಆರ್ಸಿಟಿಸಿ ಈಗ ವಿಶೇಷವಾದ “ವರ್ಕ್ ಫ್ರಮ್ ಹೋಟೆಲ್” ಪ್ಯಾಕೇಜ್ ಒದಗಿಸುತ್ತದೆ. ಈ ಮೂಲಕ ವೃತ್ತಿಪರರಿಗೆ ಹೊಸ ಚೈತನ್ಯ ತುಂಬುವಂಥ ಮತ್ತು ಉಲ್ಲಾಸ ತರುವಂಥ ವಾತಾವರಣವನ್ನು ಕೇರಳದ ಹೋಟೆಲ್ ರೂಮ್ನಲ್ಲಿ ಒದಗಿಸಲಾಗುತ್ತದೆ. ವರ್ಕ್ ಫ್ರಮ್ ಹೋಮ್ ಬದಲಿಗೆ ಪರ್ಯಾಯವಾದ ಮಾರ್ಗ ಇದು.
ಐಆರ್ಸಿಟಿಸಿ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, ಕೋವಿಡ್ ನಂತರದ ಜಗತ್ತಿನಲ್ಲಿ ಆತಿಥ್ಯ ವಲಯದ ಸೇವೆ ಪಡೆಯುವುದಕ್ಕೆ ಗ್ರಾಹಕರ ಆತ್ಮವಿಶ್ವಾಸ ಹೆಚ್ಚಬೇಕು ಎಂದು ಈ ಪ್ರಯತ್ನ ಮಾಡಲಾಗಿದೆ. ದರ ಎಷ್ಟು ಎಂದು ನೋಡುವುದಾದರೆ, ಒಬ್ಬ ವ್ಯಕ್ತಿಗೆ ಇಷ್ಟು ಎಂದು ಪ್ಯಾಕೇಜ್ ನಿಗದಿ ಮಾಡಲಾಗಿದೆ. ದರವು 10,126 ರೂಪಾಯಿ. ಐದು ರಾತ್ರಿಗಳ ವಾಸ್ತವ್ಯದ ಅವಕಾಶ ಇದೆ. ಮೂವರು ವ್ಯಕ್ತಿಗಳು ಒಂದು ಕಡೆ ಉಳಿಯುತ್ತಾರೆ. ಯಾವುದೇ ಸೋಂಕು ಇಲ್ಲದ ಕೋಣೆಯ ವ್ಯವಸ್ಥೆ, ಎಲ್ಲ ಮೂರು ಊಟ, ಎರಡು ಬಾರಿ ಕಾಫೀ/ಟೀ, ಪೂರಕವಾಗಿ ವೈಫೈ, ವಾಹನಗಳ ನಿಲುಗಡೆಗೆ ಸುರಕ್ಷಿತ ಸ್ಥಳ ಮತ್ತು ಟ್ರಾವೆಲ್ ಇನ್ಷೂರೆನ್ಸ್ ದೊರೆಯುತ್ತದೆ.
ಈಗಿನ ಲಾಕ್ಡೌನ್ ಸಂದರ್ಭದಲ್ಲಿ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (ಐಆರ್ಸಿಟಿಸಿ) ವೃತ್ತಿಪರರಿಗೆ ಎಕ್ಸ್ಕ್ಲೂಸಿವ್ ಪ್ಯಾಕೇಜ್ಗಳನ್ನು ಆರಂಭಿಸಿದೆ. ಹೋಟೆಲ್ ರೂಮ್ಗಳ ಆರಾಮದಾಯಕ, ಉಲ್ಲಾಸ ಮತ್ತು ಆಹ್ಲಾದಕರ ವಾತಾವರಣದಲ್ಲಿ ಕೆಲಸ ಮಾಡಬಹುದು. ತಮ್ಮ ದೈನಂದಿನ ಕೆಲಸ- ಕಾರ್ಯಗಳ ಜತೆಗೆ ವಿಶ್ರಾಂತಿ ಪಡೆಯಬಹುದು ಮತ್ತು ಎಂಜಾಯ್ ಮಾಡಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೊರೊನಾ ಸಂದರ್ಭದಲ್ಲಿ ಕಚೇರಿ ವಾತಾವರಣದಿಂದ ದೂರವಾಗಿ ಕೆಲಸ ಮಾಡುವುದು ಸಾಮಾನ್ಯ ವಿದ್ಯಮಾನ ಆಗಿದೆ. ಕೇರಳದಲ್ಲಿ ಯಾವ ಸ್ಥಳಗಳಲ್ಲಿ ವರ್ಕ್ ಫ್ರಮ್ ಹೋಟೆಲ್ ಆಫರ್ ಇದೆಯೋ ಅದನ್ನು ಆರಿಸಿಕೊಳ್ಳಬಹುದು ಎನ್ನಲಾಗಿದೆ.
ಸದ್ಯಕ್ಕೆ ಪ್ಲಾಟ್ಫಾರ್ಮ್ನಿಂದ ಮುನ್ನಾರ್, ತೇಕ್ಕಡಿ, ಕುಮಾರಕೊಂ, ಮರೈ (ಅಲೆಪ್ಪಿ), ಕೋವಲಂ, ವಯನಾಡು ಮತ್ತು ಕೊಚ್ಚಿನ್ನಂಥಲ್ಲಿ ಅವಕಾಶ ನೀಡಲಾಗುತ್ತಿದೆ. ಈ ಪ್ಯಾಕೇಜ್ ಅಡಿಯಲ್ಲಿ ಕನಿಷ್ಠ 5 ರಾತ್ರಿಗಳ ವಾಸ್ತವ್ಯವನ್ನು ಆರಿಸಿಕೊಳ್ಳಬೇಕು. ಆ ನಂತರ ಪ್ರೊರೇಟಾ ದರದಲ್ಲಿ ವಿಸ್ತರಣೆ ಆಗುತ್ತದೆ. ಅದೇ ರೀತಿ ಬೇರೆ ಸ್ಥಳಗಳಲ್ಲೂ ತರಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಕಳೆದ ಎರಡು ವಾರಗಳಲ್ಲಿ 187 ಜಿಲ್ಲೆಗಳಲ್ಲಿ ಕೊರೊನಾವೈರಸ್ ಸೋಂಕು ಪ್ರಕರಣ ಇಳಿಮುಖ: ಕೇಂದ್ರ ಆರೋಗ್ಯ ಸಚಿವಾಲಯ
(IRCTC offering work from hotel. What is the feature, package and other details explained here)