ಮಾರುಕಟ್ಟೆ ಬೀಳ್ತಿದೆ, ಖರೀದಿಸುವ ಸಮಯವಾ? ಇದು ಸಾಕಾಗಲ್ಲ, ಇನ್ನೂ ಬೀಳಬೇಕು ಎನ್ನುತ್ತಾರೆ ದೀಪಕ್ ಶೆಣೈ

|

Updated on: Oct 21, 2024 | 6:30 PM

Deepak Shenoy opinion on stock market: ಷೇರುಪೇಟೆಯಲ್ಲಿ ಈಗ ದೊಡ್ಡದಾಗಿ ಮಾರ್ಕೆಟ್ ಕರೆಕ್ಷನ್ ಆಗುತ್ತಿದೆಯಾ? ಕಳೆದ ಮೂರ್ನಾಲ್ಕು ತಿಂಗಳಿಂದ ಷೇರು ಮಾರುಕಟ್ಟೆ ಒಂದಷ್ಟು ಹಿನ್ನಡೆ ಕಂಡಿದೆ. ಆದರೆ, ಕ್ಯಾಪಿಟಲ್ ಮೈಂಡ್ ಸಂಸ್ಥಾಪಕ ದೀಪಕ್ ಶೆಣೈ ಪ್ರಕಾರ ಇಷ್ಟು ಮಾರ್ಕೆಟ್ ಕರೆಕ್ಷನ್ ಸಾಕಾಗಲ್ಲ, ಇನ್ನಷ್ಟು ಕುಸಿಯಬೇಕು. ಆಗ ಷೇರು ಖರೀದಿಸಬಹುದು ಎನ್ನುತ್ತಾರೆ.

ಮಾರುಕಟ್ಟೆ ಬೀಳ್ತಿದೆ, ಖರೀದಿಸುವ ಸಮಯವಾ? ಇದು ಸಾಕಾಗಲ್ಲ, ಇನ್ನೂ ಬೀಳಬೇಕು ಎನ್ನುತ್ತಾರೆ ದೀಪಕ್ ಶೆಣೈ
ದೀಪಕ್ ಶೆಣೈ
Follow us on

ನವದೆಹಲಿ, ಅಕ್ಟೋಬರ್ 21: ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಒಂದು ಸಾಮಾನ್ಯ ಮಂತ್ರ ಚಾಲನೆಯಲ್ಲಿದೆ. ಅದು, ಬಯ್ ಆನ್ ಡಿಪ್. ಅಂದರೆ ಷೇರುಬೆಲೆ ಕುಸಿದರೆ ಅದನ್ನು ಖರೀದಿಸಬೇಕು ಎಂಬುದು. ಒಳ್ಳೆಯ ಕಂಪನಿಗಳ ಷೇರುಗಳನ್ನು ಬಯ್ ಆನ್ ಡಿಪ್ ಆಧಾರದಲ್ಲಿ ಖರೀದಿಸಬೇಕು ಎಂದು ಬಹಳಷ್ಟು ತಜ್ಞರು ಸಲಹೆ ನೀಡುತ್ತಾರೆ. ಆದರೆ, ಭಾರತದಲ್ಲಿ ಈಗ ಮಾರುಕಟ್ಟೆಯ ಬುಲ್ ರನ್ ನಿಂತು ಹೋಗಿ, ಕರಡಿ ಆಟ ಶುರುವಾಗಿದೆ. ಬಹಳಷ್ಟು ಷೇರುಗಳ ಬೆಲೆ ಕುಸಿಯುತ್ತಿದೆ. ಈ ಸಂದರ್ಭದಲ್ಲಿ ಹೂಡಿಕೆದಾರರು ಬಯ್ ಆನ್ ಡಿಪ್ ಎಂದು ಷೇರು ಖರೀದಿಸಬಹುದಾ? ಖ್ಯಾತ ಹೂಡಿಕೆ ತಜ್ಞ ಹಾಗೂ ಕ್ಯಾಪಿಟಲ್ ಮೈಂಡ್ ಸಂಸ್ಥೆಯ ಮುಖ್ಯಸ್ಥ ದೀಪಕ್ ಶೆಣೈ ಪ್ರಕಾರ ಸದ್ಯಕ್ಕೆ ಬಯ್ ಆನ್ ಡಿಪ್ ಮಾಡುವ ಸಮಯವಲ್ಲ.

ಮಾರುಕಟ್ಟೆಯಲ್ಲಿ ಸಾಕಷ್ಟು ಅಲುಗಾಟ ಕಾಣುತ್ತಿಲ್ಲ. ಕೇವಲ ಶೇ. 6ರಷ್ಟು ಕುಸಿತ ಕಾಣುತ್ತಿದೆ. ಕನಿಷ್ಠ ಶೇ. 10ರಷ್ಟು ಕುಸಿತ ಇದ್ದರೆ ತಾವು ಏನಾದರೂ ಮಾಡಬಹುದು. ಗರಿಷ್ಠ ಮಟ್ಟದಿಂದ ಶೇ. 10ರಷ್ಟು ಕುಸಿತವನ್ನು ನಿರೀಕ್ಷಿಸಲು ಆಗುತ್ತಿಲ್ಲ. ಎರಡು ವರ್ಷದಿಂದ ಮಾರುಕಟ್ಟೆಯಲ್ಲಿ ಶೇ. 20ರಷ್ಟು ಕುಸಿತವನ್ನು ನಾವು ನೋಡಿಲ್ಲ. ಈ ವರ್ಷವೂ ಶೇ. 10ರಷ್ಟು ಕುಸಿತ ಆಗಿಲ್ಲ. ಈ ವರ್ಷ ಮತ್ತಷ್ಟು ಹಿನ್ನಡೆ ಆಗುತ್ತದಾ ಎಂಬುದು ಗೊತ್ತಿಲ್ಲ. ಆದರೆ, ಈಗೇನು ಇದೆಯೋ ಈ ಅಲುಗಾಟ, ನಮಗೆ ಇನ್ನಷ್ಟು ಬೇಕು ಎನಿಸುತ್ತದೆ ಎಂದು ದೀಪಕ್ ಶೆಣೈ ಹೇಳುತ್ತಾರೆ.

ಇದನ್ನೂ ಓದಿ: ರೆಗ್ಯುಲರ್ ಆದಾಯ ಕೊಡುವ ಮ್ಯೂಚುವಲ್ ಫಂಡ್ ಎಸ್​ಡಬ್ಲ್ಯುಪಿ ಹೇಗೆ ಕೆಲಸ ಮಾಡುತ್ತೆ ನೋಡಿ

ದೀಪಕ್ ಶೆಣೈ ಅವರ ಒಟ್ಟಾರೆ ಮಾರುಕಟ್ಟೆ ಬಗ್ಗೆ ಹೇಳಿದ ಮಾತಿದು. ಆದರೆ, ವೈಯಕ್ತಿಕ ಸ್ಟಾಕುಗಳಲ್ಲಿ ಕೆಲವುದರಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಆದರೆ, ಅವರು ನಿರೀಕ್ಷಿದಷ್ಟು ಕಡಿಮೆ ಬೆಲೆಗೆ ಷೇರುಗಳು ಕುಸಿದಿಲ್ಲವಂತೆ. ಮಾರುಕಟ್ಟೆಯ ಮೇಲೆ ಪ್ರಭಾವ ಬೀರಬಲ್ಲ ಬಿಕ್ಕಟ್ಟು ಇನ್ನೂ ಸೃಷ್ಟಿಯಾಗಿಲ್ಲ. ಅಂಥದ್ದೊಂದು ಸಂದರ್ಭದಲ್ಲಿ ನಾವು ಪೋರ್ಟ್​ಫೋಲಿಯೋಗೆ ಷೇರುಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಅವರ ಅನಿಸಿಕೆ.

ಸದ್ಯ ಮಾರುಕಟ್ಟೆ ದೀರ್ಘಕಾಲದ ಓಟದಲ್ಲಿದೆ. ಈ ರೀತಿ ಕಿರು ಅವಧಿಯ ಹಿನ್ನಡೆಯು ದೀರ್ಘಾವಧಿ ಹೂಡಿಕೆ ದೃಷ್ಟಿಯಿಂದ ಉತ್ತಮ ಎಂಬುದೂ ದೀಪಕ್ ಶೆಣೈ ಅಭಿಪ್ರಾಯ.

ಎರಡು ತಿಂಗಳ ಬಳಿಕ ಷೇರು ಖರೀದಿಗೆ ಪ್ರಶಸ್ತ ಸಮಯವಾ?

ದೀಪಕ್ ಶೆಣೈ ಪ್ರಕಾರ ಮುಂದಿನ ಎರಡು ತಿಂಗಳು ಒಂದಷ್ಟು ಮಟ್ಟದ ಕುಸಿತ ಮುಂದುವರಿಯಬಹುದು. ಅಮೆರಿಕದ ಚುನಾವಣೆ, ತ್ರೈಮಾಸಿಕ ಲಾಭದಲ್ಲಿ ನಿರಾಸೆ, ರೇಟಿಂಗ್ ಡೌನ್​ಗ್ರೇಡ್ ಆಗಿರುವುದು ಇವೇ ಮೊದಲಾದ ಕಾರಣಕ್ಕೆ ಮಾರುಕಟ್ಟೆ ಕುಸಿಯುವ ಸಾಧ್ಯತೆ ಇದೆ. ಹಾಗೊಂದು ವೇಳೆ ಅದು ಘಟಿಸಿದರೆ ಷೇರುಗಳನ್ನು ಖರೀದಿಸಲು ಸರಿಯಾದ ಸಂದರ್ಭವಾಗಬಹುದು ಎನ್ನುತ್ತಾರೆ.

ಇದನ್ನೂ ಓದಿ: Diwali Muhurat Trading: ದೀಪಾವಳಿಯಂದು ಮುಹೂರ್ತ ವ್ಯಾಪಾರ; ಸಂಜೆ 1 ಗಂಟೆ ಮಾತ್ರವೇ ಟ್ರೇಡಿಂಗ್

ಹಾಗೆಯೇ, ಕಳೆದ ಮೂರು ತ್ರೈಮಾಸಿಕ ಅವಧಿಯಲ್ಲಿ ಷೇರು ಮಾರುಕಟ್ಟೆ ಸರಿಯಾಗಿ ಇಳಿಕೆ ಆಗುತ್ತಿಲ್ಲವೇನೋ ಎನಿಸುತ್ತಿದೆ. ಆ ಇಳಿಕೆಗೋಸ್ಕರ ನಾವು ಕಾಯುತ್ತಿದ್ದೇವೆ ಎಂದೂ ದೀಪಕ್ ಶೆಣೈ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ