ರಷ್ಯಾ ಉಕ್ರೇನ್ ಯುದ್ಧದಿಂದ ಇಡೀ ಜಗತ್ತು ಬಾಧೆ ಪಡುತ್ತಿರುವುದು ಇನ್ನೂ ನಿಂತೇ ಇಲ್ಲ. ಈಗ ಮತ್ತೊಂದು ಭೀಕರ ಯುದ್ಧವನ್ನು ಈ ಜಗತ್ತು ನೋಡುತ್ತಿದೆ. ಇಸ್ರೇಲ್ ಮತ್ತು ಹಮಾಸ್ ಉಗ್ರರ ಮಧ್ಯೆ ಸುದೀರ್ಘ ಯುದ್ಧ (Israel and Hamas war) ನಡೆಯುವ ಸಾಧ್ಯತೆ ದಟ್ಟವಾಗಿದೆ. ಮೊದಲೇ ಆರ್ಥಿಕ ಹಿನ್ನಡೆಯಿಂದ ನಲುಗುತ್ತಿರುವ ಅನೇಕ ರಾಷ್ಟ್ರಗಳಿಗೆ ಈಗ ಈ ಬೆಳವಣಿಗೆ ಇನ್ನಷ್ಟು ಉತ್ಸಾಹ ತಗ್ಗಿಸಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಸಮರದಿಂದ ಯಾವೆಲ್ಲಾ ತೊಂದರೆಗಳು ಆಗಬಹುದು, ಭಾರತಕ್ಕೆ ಏನು ಹಿನ್ನಡೆ ಆಗಬಹುದು ಎಂಬ ಬಗ್ಗೆ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ…
ಇದನ್ನೂ ಓದಿ: ಬೆರಳೆಣಿಕೆಯ ಕಂಪನಿಗಳು ಭಾರತದ ಅಭಿವೃದ್ಧಿಯ ಹಣೆಬರಹ ಬರೆಯುವಂತಾಗಬಾರದು: ಉದಯ್ ಕೋಟಕ್
ಇಸ್ರೇಲ್ ಮತ್ತು ಹಮಾಸ್ ಯುದ್ಧ ಜಾಗತಿಕ ಭೌಗೋಳಿಕ ರಾಜಕೀಯ ಬಿಕ್ಕಟ್ಟಾಗಿ ಪರಿಣಮಿಸಬಹುದು. ಷೇರುಮಾರುಕಟ್ಟೆಗಳಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಬಹಳಷ್ಟು ಹೂಡಿಕೆದಾರರು ಚಿನ್ನ ಖರೀದಿಗೆ ಮುಗಿಬೀಳಬಹುದು. ಬಿಕ್ಕಟ್ಟು ಬಂದಾಗೆಲ್ಲಾ ಚಿನ್ನದ ಮೇಲಿನ ಹೂಡಿಕೆ ಹೆಚ್ಚುವುದನ್ನು ಗಮನಿಸಿರಬಹುದು. ಇದರ ಪರಿಣಾಮವಾಗಿ, ಕಳೆದೆರಡು ವಾರದಿಂದ ಕುಸಿಯುತ್ತಾ ಬರುತ್ತಿದ್ದ ಚಿನ್ನದ ಬೆಲೆ ಮತ್ತೆ ಏರುಗತಿಗೆ ಬರುವ ಸಾಧ್ಯತೆ ಇದೆ.
ಹಾಗೆಯೇ, ಅಮೆರಿಕದ ಡಾಲರ್ ಕರೆನ್ಸಿಗೂ ಬೇಡಿಕೆ ಬರಲಿದೆ. ಚಿನ್ನದಂತೆ ಡಾಲರ್ ಕೂಡ ಬಿಕ್ಕಟ್ಟಿನ ಸಂದರ್ಭದಲ್ಲಿ ಹೆಚ್ಚು ಬೇಡಿಕೆ ಪಡೆಯುತ್ತದೆ. ಹೀಗಾಗಿ, ಭಾರತದ ರುಪಾಯಿ ಕರೆನ್ಸಿ ಮತ್ತಷ್ಟು ಹಿನ್ನಡೆ ಕಾಣಬಹುದು. ಈಗಾಗಲೇ ಡಾಲರ್ ಎದುರು ಸತತವಾಗಿ ಇಳಿಮುಖವಾಗುತ್ತಿದ್ದ ರುಪಾಯಿಗೆ ಕೆಟ್ಟಕಾಲ ಇನ್ನಷ್ಟು ಹೆಚ್ಚಾಗಬಹುದು. ರುಪಾಯಿ ಕುಸಿತ ತಡೆಗಟ್ಟಲು ಫಾರೆಕ್ಸ್ ನಿಧಿಯಿಂದ ಒಂದಷ್ಟು ಡಾಲರ್ ಅನ್ನು ಆರ್ಬಿಐ ಮಾರಾಟ ಮಾಡಬಹುದು.
ಇದನ್ನೂ ಓದಿ: ಧೀರೂಭಾಯ್ ಅಂಬಾನಿ ಮೊಮ್ಮಗ ವಿಕ್ರಮ್ ಸಲ್ಗಾಂವ್ಕರ್; ಮುಕೇಶ್ ಅಂಬಾನಿ ಮಕ್ಕಳಷ್ಟು ಪ್ರಚಾರ ಗಿಟ್ಟಿಸದ ವಿಕ್ರಮ್ ಏನ್ ಮಾಡ್ತಾರೆ?
ಇನ್ನು, ಜಾಗತಿಕ ರಾಜಕೀಯ ಅನಿಶ್ಚಿತತೆಯಿಂದಾಗಿ ಆರ್ಥಿಕತೆಯ ಬಗ್ಗೆಯೂ ಸಂಶಯ ಬಂದು ಹೂಡಿಕೆದಾರರು ಷೇರುಗಳನ್ನು ಬಿಟ್ಟು ಚಿನ್ನ, ಡಾಲರ್ ಬೆಂಬತ್ತಿ ಹೋಗಬಹುದು. ಇದರಿಂದಾಗಿ ಭಾರತದ ಷೇರು ಮಾರುಕಟ್ಟೆ ಹಿನ್ನಡೆ ಕಂಡರೂ ಕಂಡೀತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ